ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆವಿಲ್ಸ್‌–ಇಂಡಿಯನ್ಸ್ ಪೈಪೋಟಿ

ಜಯದ ವಿಶ್ವಾಸದಲ್ಲಿ ಜಹೀರ್ –ರೋಹಿತ್
Last Updated 22 ಏಪ್ರಿಲ್ 2016, 19:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಶತಕ ದಾಖಲಿ ಸಿರುವ ಏಕೈಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್  ಇದೀಗ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ  ವೀರಾವೇಷ ಮೆರೆಯಲು ಸಿದ್ಧರಾಗಿದ್ದಾರೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು  ಸೋಲಿಸಿದ್ದ ಡೆಲ್ಲಿ ಡೇರ್‌ಡೆವಿಲ್ಸ್‌ ಶನಿವಾರ  ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಟೂರ್ನಿಯಲ್ಲಿ ಮೂರು ಪಂದ್ಯಗಳನ್ನು ಆಡಿರುವ ಜಹೀರ್ ಖಾನ್ ನಾಯಕತ್ವದ ಡೆಲ್ಲಿ ತಂಡವು ಎರಡರಲ್ಲಿ ಗೆದ್ದಿದೆ. ಒಂದರಲ್ಲಿ ಸೋತಿದೆ.   ಮುಂಬೈ  ಐದು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. 

ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ತಂಡದ ಆತ್ಮವಿಶ್ವಾಸ ಉತ್ತುಂಗದಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮತೋಲ ನ ಕಾಯ್ದುಕೊಂಡಿದೆ.  ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಬಲ ಹೆಚ್ಚಿಸಿದೆ.  ಕರ್ನಾಟಕದ ಕರುಣ್ ನಾಯರ್ ಕೂಡ ಆರ್‌ಸಿಬಿ ಎದುರಿನ ಪಂದ್ಯದಲ್ಲಿ  ಅಜೇಯ ಅರ್ಧಶತಕ ಗಳಿಸಿದ್ದರು. ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಜೆ.ಪಿ. ಡುಮಿನಿ, ವಿಂಡೀಸ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್    ಫಾರ್ಮ್ ಕಂಡುಕೊಂಡರೆ ಡೆಲ್ಲಿ ಬ್ಯಾಟಿಂಗ್ ಮತ್ತಷ್ಟು ಬಲಶಾಲಿಯಾಗುತ್ತದೆ.

ಅನುಭವಿ ಎಡಗೈ ವೇಗಿ ಜಹೀರ್ ಖಾನ್ ಸಾರಥ್ಯದಲ್ಲಿ ಬೌಲಿಂಗ್ ಪಡೆಯು ಎದುರಾಳಿಗಳ ವಿಕೆಟ್‌ಗಳನ್ನು ಪಡೆಯುವಲ್ಲಿ ಸಮರ್ಥವಾಗಿದೆ. ಆದರೆ ರನ್‌ಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ.  ಕಳೆದ ಪಂದ್ಯದಲ್ಲಿ ಜಹೀರ್ ಖಾನ್ ಅವರೇ (4–0–50–1)  ಹೆಚ್ಚು ರನ್‌ ಕೊಟ್ಟಿದ್ದರು.  ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿದ್ದ ಮೊಹಮ್ಮದ್ ಶಮಿ ಎರಡು ವಿಕೆಟ್ ಕಬಳಿಸಿದ್ದರು. ಎಡಗೈ ಸ್ಪಿನ್ನರ್ ಪವನ್ ನೇಗಿ, ಅಮಿತ್ ಮಿಶ್ರಾ, ವೇಗಿ ಕ್ರಿಸ್ ಮೊರಿಸ್ ಇನ್ನೂ ಪರಿಣಾಮಕಾರಿ ದಾಳಿ ನಡೆಸುವ ಅವಶ್ಯಕತೆ ಇದೆ. ಏಕೆಂದರೆ ಮುಂಬೈ ತಂಡದ ಬ್ಯಾಟಿಂಗ್‌ ಪಡೆ ಕೂಡ ಶಕ್ತಿಶಾಲಿಯಾಗಿದೆ.

ಆರ್‌ಸಿಬಿಯನ್ನು ಸೋಲಿಸಿದ ನಂತರ ಮುಂಬೈ ಇದೀಗ ಡೆಲ್ಲಿ ತಂಡವನ್ನು ಎದುರಿಸಲಿದೆ.  ಫಾರ್ಮ್‌ಗೆ ಮರಳಿರುವ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು  ಮೆರೆದಿದ್ದರು. ರೋಹಿತ್ ಶರ್ಮಾ ಬಳಗ ಕೂಡ ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಮಣಿಸಿತ್ತು.  ರೋಹಿತ್ ಅಬ್ಬರದ ಬ್ಯಾಟಿಂಗ್ ಮಾಡಿದ್ದರು. ಪಾರ್ಥೀವ್ ಪಟೇಲ್ ಮಿಂಚಿರಲಿಲ್ಲ. ಆದರೆ, ಅಂಬಟಿ ರಾಯುಡು, ಜೋಸ್ ಬಟ್ಲರ್, ಕೀರನ್ ಪೊಲಾರ್ಡ್ ತಮ್ಮ ತೋಳ್ಬಲ ವನ್ನು ನಿರಂತರವಾಗಿ ತೋರಿಸುತ್ತಿದ್ದಾರೆ. ಅವರಲ್ಲದೇ ಆಲ್‌ರೌಂಡರ್‌ ಸಹೋದರ ರಾದ ಕೃಣಾಲ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಸಮರ್ಥರು.

ಮುಂಬೈ ತಂಡದ ಬೌಲಿಂಗ್ ವಿಭಾಗವು ಬಲಿಷ್ಠವಾಗಿದೆ. ವೇಗಿ ಟಿಮ್ ಸೌಥಿ,  ಜಸ್‌ಪ್ರೀತ್ ಬೂಮ್ರಾ ಮೆಕ್‌ ಲೆಂಗಾನ್  ಉತ್ತಮವಾಗಿ ಆಡುತ್ತಿದ್ದಾರೆ. ಸ್ಪಿನ್ನರ್‌ಗಳಾದ ಹರಭಜನ್ ಸಿಂಗ್ ಮತ್ತು ಕೃಣಾಲ್  ಅವರು ಕೂಡ ಪ್ರಮುಖ ಘಟ್ಟದಲ್ಲಿ ವಿಕೆಟ್ ಪಡೆದು ತಂಡದ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ.     
ಐಪಿಎಲ್ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಮುಂಬೈ ತಂಡವು ಎರಡು ಬಾರಿ ಚಾಂಪಿಯನ್ ಆಗಿದೆ. ಅದರೆ, ಡೇರ್‌ಡೆವಿಲ್ಸ್‌ ತಂಡವು 2008 ಮತ್ತು 2009ರಲ್ಲಿ ಸೆಮಿಫೈನಲ್  ಮತ್ತು 2012ರಲ್ಲಿ ಪ್ಲೇ ಆಫ್‌ ಹಂತವನ್ನು ತಲುಪಿತ್ತು.

ಇನ್ನುಳಿದ ಟೂರ್ನಿಗಳಲ್ಲಿ ಲೀಗ್‌ ಹಂತದಲ್ಲಿಯೇ ನಿರ್ಗಮಿಸಿತ್ತು. ಆದರೆ, ಈ ಬಾರಿ ಉತ್ತಮವಾಗಿ ಆಡುತ್ತಿರುವ ಡೇರ್‌ಡೆವಿಲ್ಸ್ ತಂಡವು ಹೊಸ ಆಟಗಾರರೊಂದಿಗೆ ಭರವಸೆ ಮೂಡಿಸಿದೆ. ಆದ್ದರಿಂದ ಎರಡೂ ತಂಡಗಳ ನಡುವೆ  ಹೋರಾಟ ನಡೆಯುವ ನಿರೀಕ್ಷೆಯಲ್ಲಿ ರಾಜಧಾನಿಯ ಕ್ರಿಕೆಟ್‌ಪ್ರೇಮಿಗಳು ಇದ್ದಾರೆ.
ಪಂದ್ಯ ಆರಂಭ: ಸಂಜೆ 4ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT