ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನೇಷನ್ ಪಡೆದರೆ ಶಿಸ್ತುಕ್ರಮ: ಎಚ್ಚರಿಕೆ

Last Updated 22 ಮೇ 2015, 10:16 IST
ಅಕ್ಷರ ಗಾತ್ರ

ಚಿಂತಾಮಣಿ: ಅನುದಾನರಹಿತ ಖಾಸಗಿ ಶಾಲೆಗಳು ಸರ್ಕಾರ ರೂಪಿಸಿರುವ ನಿಯಮಗಳ ಅನುಸಾರ ನಿಗದಿತ ಶುಲ್ಕವನ್ನು ಮಾತ್ರ ಸ್ವೀಕರಿಸಬೇಕು. ಅನಧಿಕೃತವಾಗಿ ದೇಣಿಗೆ ಪಡೆಯುವುದು ಕಂಡು ಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬಿಇಒ ಮೊಹಮದ್‌ ಖಲೀಲ್‌ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದರು.

ಸರ್ಕಾರ ನೀತಿ ನಿಯಮಗಳನ್ನು ಪಾಲಿಸಬೇಕು. ಶಾಲೆಗಳಲ್ಲಿ ಸಮವಸ್ತ್ರ, ನೋಟ್‌ಪುಸ್ತಕ, ಬ್ಯಾಗ್‌ ಇತ್ಯಾದಿಗಳನ್ನು ಮಾರುವಂತಿಲ್ಲ. ಸರ್ಕಾರ ಸೂಚಿಸಿರುವ ಪಠ್ಯಪುಸ್ತಕಗಳನ್ನು ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾಲ್ಲೂಕಿನಲ್ಲಿ ನಗರದ ಕಿಶೋರವಿದ್ಯಾಭವನ ಮತ್ತು ಬಟ್ಲಹಳ್ಳಿಯ ವಿವಿಎಸ್‌ ಶಾಲೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲು ಅನುಮತಿ ಪಡೆದಿವೆ. ಉಳಿದ ಎಲ್ಲ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಮಾತ್ರ ಬೋಧನೆಗೆ ಅನುಮತಿ ಪಡೆದಿವೆ ಎಂದು ನುಡಿದರು.

ಶಾಲೆಗಳ ಮುಂದೆ ಮಾನ್ಯತೆ ಸಂಖ್ಯೆಯನ್ನು ಪ್ರಕಟಿಸಬೇಕು. ಪೋಷಕರು ಮಕ್ಕಳನ್ನು ದಾಖಲಿಸುವಾಗ ಶಾಲೆ ಅಧಿಕೃತವೇ ಅಥವಾ ಅನಧಿಕೃತವೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಹೆಚ್ಚುವರಿ ಶುಲ್ಕ ಅಥವಾ ದೇಣಿಗೆಗೆ ಒತ್ತಾಯಿಸಿದರೆ ಇಲಾಖೆಗೆ ದೂರು ನೀಡಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗಿರುವ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯಬಾರದು. ತಾರತಮ್ಯ ಮಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

28ರಿಂದ ಶಾಲೆ ಆರಂಭ: ಮೇ 28ರಂದು ಶಾಲೆಗಳು ಆರಂಭವಾಗಲಿವೆ. ಅಂದು ಸ್ವಚ್ಛತಾ ಕೆಲಸ ಪೂರ್ಣಗೊಳಿಸಬೇಕು. ಮೇ 29ರಂದು ಶಾಲೆಗಳಲ್ಲಿ ಹಬ್ಬದ ವಾತಾವರಣ ರೂಪಿಸಿ, ಪಾಠ ಆರಂಭಿಸಬೇಕು. ಪಠ್ಯಪುಸ್ತಕಗಳನ್ನು ಈಗಾಗಲೇ ಎಲ್ಲ ಶಾಲೆಗಳಿಗೆ ತಲುಪಿಸಲಾಗಿದೆ. ಸಮವಸ್ತ್ರಗಳು ಇನ್ನೂ ಸರಬರಾಜಾಗಿಲ್ಲ ಎಂದರು. ಶಿಕ್ಷಣ ಸಂಯೋಜಕ ಬಿ.ಜನಾರ್ದನರೆಡ್ಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT