ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞರ ಕನ್ನಡದಂಗಿ

Last Updated 17 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನವೆಂಬರ್ ತಿಂಗಳು ಬಂದರೆ ಕನ್ನಡ ರಾಜ್ಯೋತ್ಸವದ ಸಂಭ್ರಮ. ಗಲ್ಲಿ ಗಲ್ಲಿಗಳಲ್ಲಿ ಕನ್ನಡದ ಹಳದಿ ಮತ್ತು ಕೆಂಪು ಧ್ವಜ. ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು...’, ‘ಕನ್ನಡವೇ ನಮ್ಮೊಮ್ಮ ಅವಳಿಗೆ ಕೈ ಮುಗಿಯಮ್ಮ’ ಹಾಡುಗಳ ಗುಂಗು. ಈಗ ಕನ್ನಡಾಭಿಮಾನಕ್ಕೆ ಫ್ಯಾಷನ್ ಸ್ಪರ್ಶ ಸಿಕ್ಕಿದ್ದು, ಟಿ–ಶರ್ಟ್‌ಗಳು ಕನ್ನಡದಲ್ಲಿ ಅರಳುತ್ತಿವೆ.

ಎದೆಯ ಮೇಲೆ ಕನ್ನಡಾಭಿಮಾನ ಹೊತ್ತು ಯುವಕರು ಸಂಭ್ರಮಿಸುತ್ತಾರೆ. ಕನ್ನಡ ಧ್ವಜದ ಬಣ್ಣದ ಅಂಗಿಗಳೂ ಬಂದಿವೆ. ಆದರೆ ಬಹುತೇಕ ಟಿ–ಶರ್ಟ್‌ಗಳ ಸಂಭ್ರಮ ನವೆಂಬರ್‌ಗೆ ಮಾತ್ರ ಸೀಮಿತ. ಕನ್ನಡದ ಗಮನ ಸೆಳೆಯುವ ಸಾಲುಗಳುಳ್ಳ ಟಿ–ಶರ್ಟ್‌ಗಳಿಗೆ ಫ್ಯಾಷನ್ ಸ್ಪರ್ಶ ಸಿಕ್ಕರೆ? ಟೆಕ್ಕಿಗಳಾದ ಸುಧೀಂದ್ರ ಮತ್ತು ಗೋಕುಲ್, ಕಾರ್ತಿಕ್ ಭಟ್ ಇದೇ ಪರಿಕಲ್ಪನೆಯೊಂದಿಗೆ ಕಾರ್ಯೋನ್ಮುಖರಾದರು. ಯುವ ತಲೆಮಾರಿನ ನಾಡಿ ಮಿಡಿತ ಅರ್ಥಮಾಡಿಕೊಂಡಿರುವ ಈ ಕನ್ನಡಾಭಿಮಾನಿ ಟೆಕ್ಕಿಗಳು ಎಲ್ಲ ಸಂದರ್ಭಗಳಲ್ಲೂ ಬಳಸುವಂಥ ಕನ್ನಡ ಟಿ–ಶರ್ಟ್‌ಗಳನ್ನು ಸಿದ್ಧಪಡಿಸಿದ್ದಾರೆ. 

ಕಾಲೇಜಿನಲ್ಲಿ ಕನ್ನಡ ಪ್ರೀತಿ
ಸುಧೀಂದ್ರ ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನವರು. ಗೋಕುಲ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣೆ ತಾಲ್ಲೂಕಿನವರು. ಈ ಇಬ್ಬರು ಗಡಿನಾಡ ಕನ್ನಡಿಗರನ್ನು ಒಗ್ಗೂಡಿಸಿದ್ದು ನಗರದ ಎಂ.ಎಸ್. ರಾಮಯ್ಯ ಕಾಲೇಜಿನ ಅಂಗಳ. ಎಂಜಿನಿಯರಿಂಗ್ ಕಲಿಕೆಗೆ ಬಂದ ಈ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲೂ ಜತೆಗಿದ್ದವರು.

ಸಹಜವಾಗಿ ಎಲ್ಲ ಕಾಲೇಜುಗಳಂತೆಯೇ ರಾಮಯ್ಯ ಕಾಲೇಜಿನಲ್ಲೂ ಕನ್ನಡ ರಾಜ್ಯೋತ್ಸವದ ಸಂಭ್ರಮ ನವೆಂಬರ್ 1ರಂದು ಕಳೆಗಟ್ಟುತ್ತಿತ್ತು. ಆಗ ಇಂಗ್ಲಿಷ್ ಅಕ್ಷರದ ಕನ್ನಡ ಪದಗಳ ಟಿ–ಶರ್ಟ್‌ಗಳು ರಾಜಾಜಿಸುತ್ತಿದ್ದವು. ಎಲ್ಲರೂ ತಮ್ಮ ಎದೆಯ ಮೇಲೆ ಕಂಗ್ಲಿಷಿನ ಅಕ್ಷರ ಹೊತ್ತು ಕನ್ನಡದ ಧ್ವಜವನ್ನು ಹಾರಿಸುತ್ತಿದ್ದರು. ಕನ್ನಡ ಡಿಂಡಿಮ ಬಾರಿಸುತ್ತಿದ್ದರು. ಈ ಸಂದರ್ಭವೇ ಇವರಿಬ್ಬರಲ್ಲಿ ಹೊಸ ಆಲೋಚನೆಗೆ ಮುನ್ನುಡಿ ಬರೆದಿದ್ದು.

AZITEEZ ಹುಟ್ಟು


ನವೆಂಬರ್‌ಗೆ ಮಾತ್ರ ಈ ಕನ್ನಡಾಭಿಮಾನ ಸೀಮಿತಗೊಳ್ಳದೆ ಎಲ್ಲ ಕಾಲಕ್ಕೂ ಈ ಟಿ–ಶರ್ಟ್‌ಗಳನ್ನು ಧರಿಸುವಂತಾಗಬೇಕು ಎಂದುಕೊಂಡ ಸುಧೀಂದ್ರ ಮತ್ತು ಗೋಕುಲ್, 2011ರ ನವೆಂಬರ್ 1ರಂದು ‘AZITEEZ’ ರೂಪಿಸಿದರು. ಇದೇ ಕನ್ನಡ ಟಿ–ಶರ್ಟ್‌ಗಳ ಮಾರಾಟದ ಅಂಗಡಿ.

‘ನಮ್ಮ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಮಾತ್ರ ಕನ್ನಡ ಟಿ–ಶರ್ಟ್‌ ಧರಿಸುತ್ತಿದ್ದೆವು. ಇದನ್ನು ವರುಷ ಪೂರ್ತಿ ಧರಿಸುವಂತೆ ಮಾಡಲು ಮತ್ತು ವಿಸ್ತಾರಗೊಳಿಸಲು ಯೋಜನೆ ರೂಪಿಸಿದೆವು. ಆಗ ನಮಗೆ ಕಂಡಿದ್ದು ಫೇಸ್‌ಬುಕ್‌. ಹೊಸ ಹೊಸ ಕನ್ನಡ ಟಿ–ಶರ್ಟ್‌ಗಳನ್ನು ರೂಪಿಸಿ ಅವುಗಳ ಚಿತ್ರಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದೆವು. ಜನರಿಂದ ಉತ್ತಮ ಅಭಿಪ್ರಾಯ, ಪ್ರಶಂಸೆ ವ್ಯಕ್ತವಾಯಿತು. ಸಣ್ಣ ಮಟ್ಟದ ಮಾರುಕಟ್ಟೆಯೂ ಸಿಕ್ಕಿತು. ಆನಂತರ ಆನ್‌ಲೈನ್‌ ಮಾರಾಟ ಆರಂಭಿಸಿದೆವು’ ಎಂದು AZITEEZ ಕಾರ್ಯಗಳ ಬಗ್ಗೆ ಮಾಹಿತಿ ನೀಡುವರು ಸುಧೀಂದ್ರ.

ಹೊಸ ಟ್ರೆಂಡ್‌
ಸಾಮಾನ್ಯವಾಗಿ ಕನ್ನಡ ಟಿ–ಶರ್ಟ್‌ಗಳಿಗೆ ನವೆಂಬರ್‌ನಲ್ಲಿ ಮಾತ್ರ ಮಾರುಕಟ್ಟೆ ಇರುತ್ತದೆ. ಇದನ್ನು ದಾಟುವ ಬಗೆಯಲ್ಲಿ ಇವರಿಗೆ ಕಂಡಿದ್ದು ಹೊಸ ಹೊಸ ವಿನ್ಯಾಸಗಳು. ಪ್ರತಿ ತಿಂಗಳು ಬಗೆ ಬಗೆಯ ವಿನ್ಯಾಸದ ಟಿ–ಶರ್ಟ್‌ಗಳನ್ನು ರೂಪಿಸಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದರು.

‘ನಾನು ಕನ್ನಡಿಗ’ ಸೇರಿದಂತೆ ಸದ್ಯ 20ಕ್ಕೂ ಹೆಚ್ಚು ಬಗೆಯ ವಿನ್ಯಾಸದ ಅಂಗಿಗಳು ಇಲ್ಲಿವೆ. ಕುವೆಂಪು, ಬೇಂದ್ರೆ, ಕಾರಂತರು, ಅನಂತಮೂರ್ತಿ, ಅಡಿಗರು ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳ ಪದ್ಯಗಳು, ಹೇಳಿಕೆಗಳನ್ನು ಇಲ್ಲಿನ ಟಿ–ಶರ್ಟ್‌ಗಳಲ್ಲಿ ಬಳಸಿಕೊಳ್ಳಲಾಗಿದೆ. ಗೋಪಾಲಕೃಷ್ಣ ಅಡಿಗರ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನ’ ಎಂಬ ಸಾಲುಗಳನ್ನು ‘ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎನ್ನುವ ಕಳಗುಳಿಯ ಪ್ರಯೋಗವೂ ಇಲ್ಲಿ ನಡೆದಿದೆ.

ಕನಕದಾಸರ ‘ನೀ ಮಾಯೆಯೋ ನಿನ್ನೊಳಗು ಮಾಯೆಯೋ’, ಡಿ.ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’, ಕುವೆಂಪು ಅವರ ‘ಕನ್ನಡ ಎನೆ ಕುಣಿದಾಡುವುದು’, ಅಲ್ಲದೆ ‘ನೋಡಿಸ್ವಾಮಿ ನಾವಿರೋದೇ ಹೀಗೆ’, ‘ಕನ್ನಡದೊಳ್ ಸುಧೆಯುಂಟು’ ಮತ್ತಿತರ ಅಕ್ಷರಗಳನ್ನು, ನುಡಿಗಟ್ಟುಗಳನ್ನು ತತ್ವಪದಗಳನ್ನೂ ಬಳಸಿಕೊಳ್ಳಲಾಗಿದೆ. ‘AZITEEZ’ ಗಮನ ಸೆಳೆಯುವುದು ವಿಭಿನ್ನ ಉಡುಗೆಗಳ ಮೂಲಕ. ಅಧುನಿಕ ಸಂದರ್ಭಕ್ಕೆ ತಕ್ಕಂತೆ ಟಿ–ಶರ್ಟ್‌ಗಳನ್ನು ವಿನ್ಯಾಸಗೊಳಿಸಲಾಗಿದ್ದು ಪಾರ್ಟಿಗಳು, ಮದುವೆ ಸಮಾರಂಭ ಇತ್ಯಾದಿ ಕಾರ್ಯಕ್ರಮಗಳಲ್ಲೂ ತೊಡಬಹುದು.

ಸುಮಾರು 250 ರೂಪಾಯಿಯಿಂದ ಬೆಲೆಯಿಂದ ಟಿ–ಶರ್ಟ್‌ಗಳು ಆರಂಭವಾಗುತ್ತವೆ. ಆನ್‌ಲೈನಲ್ಲಿ ನೋಂದಾಯಿಸಿಕೊಂಡು ನೇರವಾಗಿ ಮನೆಬಾಗಿಲಿಗೂ ಈ ಶರ್ಟ್‌ಗಳನ್ನು ತರಿಸಿಕೊಳ್ಳಬಹುದು. ‘ರಾಜ್ಯದ ಬಹುತೇಕ ಭಾಗಗಳಲ್ಲಿ ಬೇಡಿಕೆ ಬಂದಿದ್ದು ಆಸ್ಟ್ರೇಲಿಯಾ, ದುಬೈ, ಯು.ಕೆ., ಜರ್ಮನಿ ಮತ್ತಿತರ ದೇಶಗಳಿಗೂ ರಫ್ತು ಮಾಡುತ್ತಿದ್ದೇವೆ. ಕರ್ನಾಟದಲ್ಲಿ ಕೊಂಕಣಿ, ಮರಾಠಿ ಸೇರಿದಂತೆ ಸಾಮಾಜಿಕ ಉಪಭಾಷೆಗಳು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಲ್ಲಿನ ಸೊಗಡಿಗೆ ಅನುಗುಣವಾಗಿ ಕನ್ನಡ ಟಿ–ಶರ್ಟ್‌ಗಳನ್ನು ರೂಪಿಸುವ ಕನಸು ಇದೆ’ ಎನ್ನುತ್ತಾರೆ ಸುಧೀಂದ್ರ.

ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಎಂಜಿನಿಯರ್‌ಗಳು ಶನಿವಾರ ಮತ್ತು ಭಾನುವಾರ ತಮ್ಮ ಸಮಯವನ್ನು ಇದಕ್ಕೆ ಮೀಸಲಿಡುತ್ತಾರೆ. ಮಾರುಕಟ್ಟೆ, ಎಂಬ್ರಾಯಿಡರಿ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸಲು ನಾಲ್ಕು ಮಂದಿಗೆ ಕೆಲಸ ಕೊಟ್ಟಿದ್ದಾರೆ.

‘ಪೈಪೋಟಿಯ ಈ ಸಂದರ್ಭದಲ್ಲಿ ಅಡ್ಡಿ–ಕಷ್ಟಗಳೂ ಇವೆ. ಮಾರುಕಟ್ಟೆ ವಿಸ್ತರಿಸಿಕೊಳ್ಳಬೇಕಾದ ಜರೂರು ಇದೆ. ಫೇಸ್‌ಬುಕ್‌ ಮಾತ್ರವೇ ನಮ್ಮ ಮಾರುಕಟ್ಟೆಗೆ ಮೂಲಾಧಾರ. ಬಸ್ಸುಗಳಲ್ಲಿ ಸ್ಟಿಕ್ಕರ್ ಅಂಟಿಸುವ ಮೂಲಕ ಪ್ರಚುರಪಡಿಸುವ ಯತ್ನ ಮಾಡುವ ಯೋಜನೆ ಇದೆ’ ಎಂದು ಕನ್ನಡ ಕೆಲಸದ ಹಾದಿಯಲ್ಲಿನ ಕಷ್ಟಗಳನ್ನು ವಿವರಿಸುವರು ಸುಧೀಂದ್ರ.  

ಇಲ್ಲಿಯವರೆಗೂ ರೂಪುಗೊಂಡಿರುವುದು ದೊಡ್ಡವರ ಅಂಗಿಗಳು. ಶೀಘ್ರದಲ್ಲಿಯೇ ಮಕ್ಕಳಿಗೆ ಟಿ–ಶರ್ಟ್‌ಗಳನ್ನು ರೂಪಿಸಲೂ ಚಿಂತಿಸಿದ್ದಾರೆ. ‘ಬಣ್ಣದ ತಗಡಿನ ತುತ್ತೂರಿ’ ಸೇರಿದಂತೆ ಮಕ್ಕಳ ಪದ್ಯಗಳನ್ನು ಇಲ್ಲಿ ಬಳಸಿಕೊಳ್ಳುವ ಉದ್ದೇಶ ಅವರಿಗಿದೆ.  

ನಗರದ ನಂ. 857, ಪುನಶ್ಚೇತನ, 51ನೇ ಮೆನ್‌, 25ನೇ ಕ್ರಾಸ್, ಕುಮಾರಸ್ವಾಮಿ ಬಡಾವಣೆ, ಬೆಂಗಳೂರು ಇಲ್ಲಿ aziteez ಮಳಿಗೆ ಇದ್ದು, ವಾರದ ಎಲ್ಲ ದಿನ ಬೆಳಿಗ್ಗೆ ಹತ್ತು ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ತೆರೆದಿರುತ್ತದೆ. ಮಾಹಿತಿಗೆ www.aziteez.com ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT