ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದಡಿ ಬ್ಯಾಂಕಿಂಗ್‌ ಸೇವೆ

Last Updated 29 ಜುಲೈ 2014, 19:30 IST
ಅಕ್ಷರ ಗಾತ್ರ

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತಂತ್ರಜ್ಞಾನ ಕಾಲಿಟ್ಟು ಬಹಳ ದಿನಗಳೇ ಕಳೆದಿವೆ.  ಮುಖ್ಯವಾಗಿ ಕಂಪ್ಯೂಟರ್‌್ ಅಳವಡಿಕೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು. ನಂತರದ ದಿನಗಳಲ್ಲಿ ಆನ್‌ಲೈನ್‌ ಬ್ಯಾಂಕಿಂಗ್‌ ಉದ್ಯಮದ ಬೆಳವಣಿಗೆಗೆ ಮತ್ತಷ್ಟು ಬೆಂಬಲ ನೀಡಿತು. ಗ್ರಾಹಕರು ಸುಲಭವಾಗಿ ಬ್ಯಾಂಕಿಂಗ್‌ ವಹಿವಾಟು ನಡೆಸುವಂತಾಯಿತು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್ ಸೇವೆಗಳೆಡೆಗೆ  ಗ್ರಾಹಕರ ಒಲವು ಹೆಚ್ಚುತ್ತಿದೆ. ಇದೇ ಕಾರಣವಾಗಿ ಬ್ಯಾಂಕಿಂಗ್‌ ಕ್ಷೇತ್ರವೂ ಸಹ ತಂತ್ರಜ್ಞಾನವನ್ನೇ ಆಧರಿಸಿದ ಹೊಸ  ಹೊಸ ಸೇವೆಗಳನ್ನು ಗ್ರಾಹಕರಿಗೆ ಒದಗಿಸುವತ್ತ ಕಾರ್ಯನಿರತವಾಗಿವೆ.
‘ಗ್ರಾಹಕ ಸ್ನೇಹಿ’ ಸೇವೆ ಒದಗಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಆಧರಿತ ಹೊಸ ಸೇವಗಳನ್ನು ಆರಂಭಿಸುತ್ತಿವೆ. ಈ ಉದ್ದೇಶದಿಂದಲೇ ಕೆನರಾ ಬ್ಯಾಂಕ್‌ ಎಂ–ವಾಲೆಟ್‌, ಈಸಿ ಕ್ಯಾಶ್‌ ಮತ್ತು ಪಿ–ಸರ್ವ್‌ ಸೇವೆಗಳನ್ನು ಹೊಸದಾಗಿ ಆರಂಭಿಸಿದೆ.

ಕೆನರಾ ಎಂ–ವಾಲೆಟ್‌: ಅಂದರೆ ಮೊಬೈಲ್‌ ವಾಲೆಟ್‌. ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳ ಅಗತ್ಯವೇ ಇಲ್ಲದೇ ಮತ್ತು ನಗದು ಬಳಸದೇ ಮೊಬೈಲ್‌ ಮೂಲಕ ಸುರಕ್ಷಿತ ವಹಿವಾಟು ನಡೆಸಲು ಇದು ಹೆಚ್ಚು ಸೂಕ್ತ ಎನ್ನುವುದು ಬ್ಯಾಂಕಿನ ಪ್ರತಿಪಾದನೆ. ಎಂ–ವಾಲೆಟ್‌ ಸೇವೆ ಬಳಸಲು ಇಚ್ಛಿಸುವವರು ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು. ಅಲ್ಲದೆ ತಮ್ಮ ಮೊಬೈಲ್‌ ಫೋನ್‌ ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸಿರಬೇಕು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಎಂ–ವಾಲೆಟ್‌ ಆ್ಯಪ್‌ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಬ್ಯಾಂಕಿನ ಶಾಖೆಯಿಂದ ಯೂಸರ್‌ ಐಡಿ ಪಡೆದುಕೊಂಡು ‘ಎಂ ವಾಲೆಟ್‌’ ಮೂಲಕ ತಮಗೆ ಅಗತ್ಯವಾದ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದು.

ಈ ಸೇವೆಯನ್ನು ಬಳಸಿಕೊಳ್ಳಬೇಕೆಂದರೆ ‘ಎಂ ವಾಲೆಟ್‌’ ಖಾತೆಯಲ್ಲಿ ಕನಿಷ್ಠ ₨100 ಇರಬೇಕು. ಈಗಾಗಲೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವವರು ಎಂ ವಾಲೆಟ್‌ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಎಂ ವಾಲೆಟ್‌ ಐಡಿ ಸೃಷ್ಟಿಸಿಕೊಳ್ಳುತ್ತಿದ್ದಂತೆಯೇ ಗ್ರಾಹಕರ ಉಳಿತಾಯ ಖಾತೆಯಿಂದ ₨100 ಎಂ ವಾಲೆಟ್‌ ಖಾತೆಗೆ ಸ್ವಯಂ ಚಾಲಿತವಾಗಿ ವರ್ಗಾವಣೆ ಆಗುತ್ತದೆ. ಉಳಿದಂತೆ ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಹಣವನ್ನು ವಾಲೆಟ್‌ ಖಾತೆಗೆ ವರ್ಗಾಯಿಸಿಕೊಳ್ಳಬಹುದು. ಎಂ–ವಾಲೆಟ್‌ ಇರುವ ಎರಡು ಮೊಬೈಲ್‌ಗಳ ನಡುವೆ ಹಣ ವರ್ಗಾವಣೆ, ಮೊಬೈಲ್‌ ರೀಚಾರ್ಜ್‌, ಆನ್‌ಲೈನ್‌ ಷಾಪಿಂಗ್‌, ಯುಟಿಲಿಟಿ ಬಿಲ್‌ ಪಾವತಿ ಸೇವೆಗಳು ಎಂ ವಾಲೆಟ್‌ನಲ್ಲಿ ಲಭ್ಯವಿವೆ.

ಈಸಿ ಕ್ಯಾಶ್‌: ಯಾವುದೇ ಬ್ಯಾಂಕ್‌ನಲ್ಲಿಯೂ ಒಂದಾದರೂ ಖಾತೆಯನ್ನು  ಹೊಂದಿಲ್ಲದೇ ಇರುವವರಿಗೆಂದೇ ಈ ವಿಶಿಷ್ಟ ಸೇವೆಯನ್ನು ಪರಿಚಯಿಸಲಾಗಿದೆ. ಆದರೆ, ಹಣ ಕಳುಹಿಸುವವರು ಮಾತ್ರ ಬ್ಯಾಂಕ್‌ ಖಾತೆ ಹೊಂದಿರಬೇಕು. ಉದಾಹರಣೆಗೆ ದೂರದ ಊರಿನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿರುವ ತಮ್ಮ ಮಕ್ಕಳಿಗೆ ಹಣ ಕಳುಹಿಸಿಕೊಡಲು ಈ ಸೇವೆ ಉಪಯೋಗಕ್ಕೆ ಬರಲಿದೆ ಎನ್ನುತ್ತಾರೆ ಬ್ಯಾಂಕಿನ ಅಧಿಕಾರಿಗಳು.

ಇದು ತಕ್ಷಣವೇ ಹಣ ವರ್ಗಾವಣೆ (ಇನ್‌ಸ್ಟಂಟ್‌ ಮನಿ ಟ್ರಾನ್ಸ್‌ಫರ್‌) ಸೇವೆಯಾಗಿದೆ. ಬ್ಯಾಂಕಿನ ಖಾತೆ ಹೊಂದಿರುವವರು ತಮ್ಮ ಮಗ/ಮಗಳಿಗೆ ಹಣ ಕಳುಹಿಸಬೇಕು ಎಂದುಕೊಳ್ಳೋಣ. ಕೆನರಾ ಬ್ಯಾಂಕ್‌ ‘ಎಟಿಎಂ’ನಲ್ಲಿ ತಮ್ಮ ಎಟಿಎಂ ಪಿನ್‌ ಹಾಗೂ ಎಷ್ಟು ಹಣ ರವಾನಿಸಬೇಕು ಎಂಬುದರ ಜತೆಗೇ ಮಗನ/ಮಗಳ ಮೊಬೈಲ್‌ ಸಂಖ್ಯೆಯನ್ನೂ ನಮೂದಿಸಬೇಕು. ತಕ್ಷಣ  ಆ ಮೊಬೈಲ್‌ ಸಂಖ್ಯೆಗೆ ‘ಎಸ್‌ಎಂಎಸ್’ ಮೂಲಕ (ಒನ್‌ ಟೈಮ್‌) ಪಾಸ್‌ವರ್ಡ್‌ ರವಾನೆಯಾಗುತ್ತದೆ. ಹಣ ಪಡೆಯಬೇಕಾದವರು ಹತ್ತಿರದಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂಗೆ ತೆರಳಿ ಬ್ಯಾಂಕಿನಿಂದ ಬಂದ ಪಾಸ್‌ವರ್ಡ್‌ ಮತ್ತು ಪಾವತಿದಾರರು ಕಳುಹಿಸಿದ ಪಿನ್‌ ಹಾಗೂ ತಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಹಣ ಪಡೆದುಕೊಳ್ಳಬಹುದು.

ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಬಳಸದೆ, ದೇಶದಲ್ಲಿ ಎಲ್ಲಿ ಬೇಕಿದ್ದರೂ ಯಾವುದೇ ಸಮಯದಲ್ಲಿ ಹಣ ಕಳುಹಿಸಲು ಮತ್ತು ಪಡೆಯಲು ಈ ಸೇವೆ ಬಳಸಿಕೊಳ್ಳಬಹುದು. 

ಪಿ–ಸರ್ವ್‌: ಕೆನರಾ ಬ್ಯಾಂಕಿನ ಇ–ಲಾಂಜ್‌ನಲ್ಲಿ ಈ ಸೇವೆ ಲಭ್ಯವಿದೆ. ಕಿಯೋಸ್ಕ್‌ ಯಂತ್ರದ ಮೂಲಕ ಈ ಸೇವೆ ಪಡೆಯಬಹುದು.
ಪಿ–ಸರ್ವ್‌ನಲ್ಲಿ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಪಡೆಯಲು, ಚೆಕ್‌ ಬುಕ್‌ಗೆ ಕೋರಿಕೆ ಸಲ್ಲಿಸಬಹುದು. ಉಳಿತಾಯ ಖಾತೆ, ರಿಕರಿಂಗ್‌ ಡಿಪಾಜಿಟ್‌ ಮತ್ತು ಪಿಪಿಎಫ್‌ ಖಾತೆ ಆರಂಭಿಸಬಹುದು. ಸಾಲಕ್ಕಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿ ಅದರ ವಿಲೇವಾರಿ ಹಂತಗಳನ್ನು ತಿಳಿಯಬಹುದು. ಮ್ಯೂಚುವಲ್‌ ಫಂಡ್‌, ಆನ್‌ಲೈನ್‌ ಷಾಪಿಂಗ್‌ ಸೇವೆಗಳನ್ನೂ ಪಡೆದುಕೊಳ್ಳಬಹುದು.

ಅಲ್ಲದೆ, ಗ್ರಾಹಕ ಸೇವಾ ಅಧಿಕಾರಿಗಳ ಮೂಲಕ ತಜ್ಞರ ಜತೆ ವಿಡಿಯೊ ಚಾಟ್‌ ನಡೆಸಿ ವಿವಿಧ ಯೋಜನೆಗಳ ಮೇಲೆ ಸಾರ್ವಜನಿಕರ ಹೂಡಿಕೆಗೆ ಸಂಬಂಧಿಸಿದಂತೆ ಮತ್ತು ಸಾಲ ಪಡೆಯಲು ಅಗತ್ಯವಾದ ಸಲಹೆ ಸೂಚನೆಗಳನ್ನು ಪಡೆಯಲು ಪಿ–ಸರ್ವ ಅನುವು ಮಾಡಿಕೊಡಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT