ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ಬಿಡಲು ಹಲವು ದಾರಿ

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಮೇಡಮ್, ನೀವು ಹೇಳಿದ ಹಾಗೆ ಸಿಗರೇಟ್ ಬಿಡೋದಿಕ್ಕೆ ಪ್ಲಾನ್ ಹಾಕಿಕೊಂಡು ನಿಮಗೆ ಪ್ಲಾನ್ ಕೂಡ ತೋರಿಸಿದ್ದೀನಿ. ಅದರಂತೆ ನಡೆದುಕೊಳ್ಳಲು ನನ್ನ ಮನಸ್ಸು ಹೇಳಿದರೂ ಈ ಸಿಗರೇಟ್ ನನ್ನ ಬಿಡೊ ಹಾಗೆ ಕಾಣ್ತಿಲ್ಲ. ನೀವು ಹೇಳಿದೀರಾ ಅಂತ ಸಿಗರೇಟ್ ಪ್ಯಾಕ್ ಮನೇಲಿ ಎಲ್ಲೂ ನನ್ನ ಕೈಗೆ ಸಿಗಬಾರದು ಅಂತ ಎಲ್ಲಾ ಎಸೆದೆ. ಆದರೆ ಏನ್ ಮಾದೋದು ಮೇಡಮ್, ಸಿಗರೇಟ್ ಸೇದದೆ ಅರ್ಧ ದಿನ ಕಳೆಯೋ ಅಷ್ಟರಲ್ಲಿ ನಂಗೆ ತಲೆ ತಿರುಗೋ ಹಾಗಾಯ್ತು. ಮೊದಲು ಅಂಗಡಿಗೆ ಹೋಗಿ ಒಂದು ಪ್ಯಾಕ್ ಸಿಗರೇಟ್ ತಗಂಡೆ. ಒಂದು ಪಫ್ ತಗೊಂಡೆ ನೋಡಿ, ಆಗ ಮನಸ್ಸು ನಿರಾಳ ಆಯ್ತು’’.

‘ಡಾಕ್ಟ್ರೆ, ನನ್ನ ಗಂಡ ತಂಬಾಕು ಜಗಿಯೋದು ಬಿಡಬೇಕು. ಹೇಗೆ ಅಂತ ಗೊತ್ತಾಗ್ತಾ ಇಲ್ಲ. ಕಡ್ಡಿ ಪುಡಿ ಇಲ್ಲದೆ ಬೆಳಿಗ್ಗೆ ದಿನಾನೆ ಶುರು ಆಗಲ್ಲ ಇವರಿಗೆ. ಇವರನ್ನು ನೋಡಿ ನನ್ನ ಮಗಾನೂ ಕಲಿತೀನಿ ಅಂತಾನೆ. ನನಗೆ ಗಾಬರಿ ಆಗತ್ತೆ’.

‘ಅವ್ವಾ, ನೋಡಿ ಬೀಡಿ ಸೇದೋದನ್ನ ಕಷ್ಟ ಪಟ್ಟು 6 ತಿಂಗಳು ಬಿಟ್ಟಿದ್ದೆ. ಆದರೆ ಈಗ ಮತ್ತೆ ಶುರು ಹಚ್ಕೊಂಡಿದಿನಿ. ನಾವೆಲ್ಲಾ ಗಾರೆ ಕೆಲಸ ಮಾಡೋರು ಬೀಡಿ ಸೇದದೆ ಇರಾಕೆ ಆಯ್ತದಾ ತಾಯಿ. ಎಲ್ಲಾರು ಸೇದ್ಬೇಕಾದ್ರೆ ನಂದೇನು ವಿಶೇಷ ಅಂತಿನಿ. ಹಂಗೆ ಮತ್ತೆ ಶುರು ಹಚ್ಕೊಂಡ್ಬುಟ್ಟೆ ನೋಡಿ’.

ನಮ್ಮಲ್ಲಿ ತಂಬಾಕು ಸೇವನೆಯ ಚಟದಿಂದ ಬಿಡುಗಡೆಗಾಗಿ ಆಪ್ತಸಮಾಲೋಚನೆಗೆ ಬರುವ ರೋಗಿಗಳು ಸಾಮಾನ್ಯವಾಗಿ ಹೀಗೆ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಕೆಲವೊಮ್ಮೆ ರೋಗಿಯ ಮನೆಯವರು ತಂಬಾಕಿನಿ ಚಟದಿಂದ ಬಳಲುತ್ತಿರುವ ತನ್ನ ಗಂಡನನ್ನೋ, ತಮ್ಮನನ್ನೋ, ಮಗನನ್ನೊ ಕರೆತಂದಿರುತ್ತಾರೆ.  ಒಬ್ಬ ವ್ಯಕ್ತಿಯ ಮೇಲೆ ತಂಬಾಕು ತೀವ್ರವಾದ ಹಿಡಿತ ಹೊಂದಿರುತ್ತದೆ. ಈ ಚಟದಿಂದ ಬಿಡುಗಡೆ ಹೊಂದುವುದು ಅಷ್ಟು ಸುಲಭದ ಮಾತಲ್ಲ. ತಂಬಾಕಿನ ಹಿಡಿತದಿಂದ ಯಶಸ್ವಿಯಾಗಿ ಆಚೆ ಬಂದಿರುವವರು ಈ ಮಾತನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಒಪ್ಪುತ್ತಾರೆ.

ಮೇ 31 ವಿಶ್ವ ತಂಬಾಕು ರಹಿತ ದಿನವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ವಿಶ್ವದೆಲ್ಲೆಡೆ ಈ ಒಂದು ದಿನವನ್ನು ತಂಬಾಕು ಸೇವನೆ ಮಾಡದೆ ಆಚರಿಸಬೇಕೆಂಬ ಆಶಯ ವಿಶ್ವಸಂಸ್ಥೆಯದ್ದಾಗಿದೆ. ಈ ದಿನವು ಸಾಂಕೇತಿಕವಾಗಿ ವಿಶ್ವದೆಲ್ಲೆಡೆ ತಂಬಾಕನ್ನು ತ್ಯಜಿಸಲು ಪ್ರೇರೇಪಿಸಲಿ ಎಂಬುದೇ ಇದರ ಉದ್ದೇಶ.

ತಂಬಾಕು ಸೇವನೆಯಲ್ಲಿ ವಿಶ್ವದಲ್ಲೇ ನಮ್ಮ ದೇಶ ಮುಂಚೂಣಿಯಲ್ಲಿದೆ. ಸುಮಾರು 27 ಕೋಟಿ ಭಾರತೀಯರು ತಂಬಾಕು ಸೇವನೆಯ ಹಿಡಿತದಲ್ಲಿ ಇರುವ ಅಂಕಿ ಅಂಶ ನಮ್ಮ ಕಣ್ಣ ಮುಂದೆ ಇದೆ. ಭಾರತದಲ್ಲಿ ಪ್ರತಿ ವರ್ಷ ತಂಬಾಕು ಸೇವನೆಯಿಂದ ಆಗುತ್ತಿರುವ ಸಾವಿನ ಸಂಖ್ಯೆ 10 ಲಕ್ಷ. ಪ್ರತಿ ದಿನಕ್ಕೆ ಸುಮಾರು 2200 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿ ತಂಬಾಕು ಸೇವನೆಯಿಂದ ಸಾವುಗಳಾಗುತ್ತಿವೆ. ತಂಬಾಕಿನಿಂದಾಗುತ್ತಿರುವ ಸಾವು ಮಲೇರಿಯಾ, ಏಡ್ಸ್ ಮತ್ತು ಟುಬರ್ಕ್ಯೂಲೋಸಿಸ್ ಕಾರಣದಿಂದ ಆಗುವ ಸಾವಿನ ಸಂಖ್ಯೆಗಿಂತಲೂ ಹೆಚ್ಚು.

ನೂರರಲ್ಲಿ ಸುಮಾರು 40 ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಸೇವನೆಯೇ ಕಾರಣವಾಗಿದೆ.  ಅದರಲ್ಲೂ ಶೇಕಡ 95ರಷ್ಟು ಬಾಯಿಯ ಕ್ಯಾನ್ಸರ್‌ಗಳು ತಂಬಾಕು ಸೇವನೆಯಿಂದಲೇ ಪರಿಣಮಿಸುವುದಾಗಿ ದಾಖಲಾಗಿದೆ. ಇದಲ್ಲದೆ ತಂಬಾಕು ಸೇವನೆ ಹೃದಯ ಸಂಬಂಧೀ ಕಾಯಿಲೆಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು, ದೃಷ್ಟಿಹೀನತೆ ಇನ್ನೂ ಮುಂತಾದ ಆರೋಗ್ಯದ ಏರುಪೇರುಗಳಿಗೆ ಕಾರಣವಾಗಿದೆ. ಈ ಅಂಕಿ ಅಂಶಗಳನ್ನು ವೈಜ್ನಾನಿಕ ಸಂಶೋಧನೆಗಳ ಆಧಾರದ ಮೇಲೆ ಪರಿಗಣಿಸಲಾಗಿದೆ. ಆದ್ದರಿಂದ ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲವೆಂಬುದು ಸ್ಪಷ್ಟ.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ತಿಳಿವಳಿಕೆ ಬಹುಪಾಲು ವಿದ್ಯಾವಂತರಿಗೆ ಇದ್ದರೂ ತಂಬಾಕು ಒಂದು ಚಟವಾಗಿ ಪರಿಣಮಿಸುವುದರಿಂದ ಅದರ ಹಿಡಿತದಿಂದ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇನ್ನು ಅನಕ್ಷರಸ್ಥರಿಗೆ ಅರಿವಿನ ಅಭಾವವೂ ಇರುತ್ತದೆ. ಇದರ ಜೊತೆಗೆ ಸುತ್ತಲಿನ ಪರಿಸರವೂ ತಂಬಾಕು ಸೇವನೆಗೆ ಪ್ರೇರೇಪಿಸುವಂತಿರುತ್ತದೆ. ತನ್ನ ಕುಟುಂಬದ ಸದಸ್ಯರೇ ತಂಬಾಕು ಸೇವಿಸುತ್ತಿದ್ದರಂತೂ ತಂಬಾಕಿನ ಚಟ ಹತ್ತಿಸಿಕೊಳ್ಳುವುದು ಸುಲಭ. ಹಲವಾರು ಬಾರಿ ತಂಬಾಕಿನ ಸೇವನೆ ಬಾಲ್ಯದಲ್ಲೇ ಶುರುವಾಗುವುದನ್ನು ನಾವು ಸಾಮಾಜಿಕ ಸಂಶೋಧನೆಗಳ ಮೂಲಕ ತಿಳಿದುಕೊಂಡಿದ್ದೇವೆ. ಇದಕ್ಕೆ ಹಲವಾರು ಸಾಮಾಜಿಕ ಕಾರಣಗಳಿವೆ.

ಉದಾಹರಣೆಗೆ ಬಡತನ, ಅನಕ್ಷರತೆ, ಕುಟುಂಬದ ವ್ಯಕ್ತಿಗಳ ಸೇವನೆ, ಸ್ನೇಹಿತರ ಅಥವಾ ಸಹೋದ್ಯೋಗಿಗಳ ಪ್ರೇರೇಪಣೆ, ಸಿನಿಮಾ ಮತ್ತು ಕ್ರಿಡಾ ತಾರೆಯರ ಅನುಕರಣೆ ಮುಂತಾದವು ಕಾರಣಗಳಾಗಿರಬಹುದು. ಸಾಮಾಜಿಕ ಕಾರಣಗಳಲ್ಲದೆ ವೈಯಕ್ತಿಕ ಕಾರಣಗಳೂ ಸೇರಿಕೊಳ್ಳುತ್ತವೆ. ಮಾನಸಿಕ ಆರೋಗ್ಯದ ಏರುಪೇರು, ಖಿನ್ನತೆ, ಕೀಳರಿಮೆ ಕೂಡ ತಂಬಾಕು ಸೇವನೆಯ ಗುಲಾಮರನ್ನಾಗಿ ಮಾಡಬಹುದು. ಹಾಗೆಯೇ ಸಾಮಾಜಿಕ ಕಾರಣಗಳು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ ವೈಯಕ್ತಿಕ ಮತ್ತು ಸಾಮಾಜಿಕ ಪರಿಸರದ ಕಾರಣಗಳು ಒಟ್ಟಿಗೆ ಕೆಲಸ ಮಾಡಿರುತ್ತವೆ. 

ತಂಬಾಕು ಸೇವನೆಯ ಚಟ ಅಂಟಿಕೊಳ್ಳಲು ಇಷ್ಟೆಲ್ಲಾ ಕ್ಲಿಷ್ಟವಾದ ಮಾನಸಿಕ, ಸಾಮಾಜಿಕ ಮತ್ತು ಪರಿಸರದ ಪ್ರಭಾವಗಳು ಪರಸ್ಪರ ಕೆಲಸ ಮಾಡಿರುತ್ತವೆ. ಆದ್ದರಿಂದ ಈ ಚಟದಿಂದ ಬಿಡಿಸಿಕೊಳ್ಳಲು ಶ್ರಮ ವಹಿಸಬೇಕಾಗುತ್ತದೆ. ತಂಬಾಕು ಸೇವನೆಯಿಂದ ಬಿಡುಗಡೆ ಹೊಂದಬೇಕು ಎಂಬ ಆಲೋಚನೆಯೇ ಒಂದು ವ್ಯಕ್ತಿಯ ತಂಬಾಕು ಚಟದಿಂದ ಬಿಡುಗಡೆ ಹೊಂದುವ ಪ್ರಕ್ರಿಯೆಯ ಮೊದಲ ಹೆಜ್ಜೆ.

ಆಪ್ತಸಮಾಲೋಚನೆಗೆ ಬರುವ ಹಲವಾರು ರೋಗಿಗಳಲ್ಲಿ ಯಾರಿಗೆ ಸ್ವಪ್ರೇರಣೆಯಿರುತ್ತದೆಯೋ ಅವರಲ್ಲಿ ತಂಬಾಕು ಸೇವನೆಯ ಚಟ ಬಿಡುವ ಕ್ರಿಯೆ ಯಶಸ್ವಿಯಾಗುವ ಸಂಭವ ಹೆಚ್ಚು. ಮಾನಸಿಕ ಖಿನ್ನತೆಯಿಂದ ಅಥವಾ ಕೀಳರಿಮೆಯಿಂದ ಬಳಲುತ್ತಿರುವವರಿಗೆ ಕೇವಲ ಆಪ್ತಸಮಾಲೋಚನೆ ಸಾಕಾಗದೆ ನಿಕೋಟಿನ್ ರೀಪ್ಲೇಸ್‌ಮೆಂಟ್ ಥೆರಪಿ ಬೇಕಾಗುತ್ತದೆ. ಇಂತಹ ರೋಗಿಗೆ ತಜ್ಞರ ಚಿಕಿತ್ಸೆಯ ಜೊತೆಗೆ ಮನೆಯವರ, ಸ್ನೇಹಿತರ ಮತ್ತು ಸಹೋದ್ಯೋಗಿಗಳ ಸಹಕಾರ ಹೆಚ್ಚಾಗಿ ಬೇಕಾಗಿರುತ್ತದೆ.

ನಮ್ಮ ಮನೆಯ ಸದಸ್ಯರು ತಂಬಾಕು ಸೇವನೆಯ ಚಟದಿಂದ ಬಳಲುತ್ತಿದ್ದರೆ ಅವರಿಗೆ ಮನೆಯವರೆಲ್ಲರ ಪ್ರೋತ್ಸಾಹ ಮತ್ತು ಸಹಾಯ ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಮನೆಯಲ್ಲಿ ಎಲ್ಲೂ ರೋಗಿಗೆ ತಂಬಾಕು ಸಿಗದ ಹಾಗೆ ನೋಡಿಕೊಳ್ಳಬೇಕು. ಸಿಗರೇಟು, ಬೀಡಿ ಸೇದುತ್ತಿದ್ದರೆ ಅವು ಕೈಗೆ ಸಿಗದಂತೆ ತೆರವುಗೊಳಿಸಿ. ಹೆಚ್ಚು ನೀರು ಕುಡಿಯಲು ಪ್ರೇರೇಪಿಸಿ. ಸಿಗರೇಟು ಅಥವಾ ತಂಬಾಕು ಜಗಿಯುವುದರ ಬದಲಾಗಿ ಚ್ಯೂಯಿಂಗ್ ಗಮ್ ಅಗಿಯಲು ಕೊಡಿ. ನಿಕೊಟಿನ್‌ಯುಕ್ತ ಚ್ಯೂಯಿಂಗ್ ಗಮ್ ತಜ್ಞರ ಸೂಚನೆಯಂತೆ ಬಳಸಲು ಪ್ರೇರೇಪಿಸಿ.

ಒಂದೇ ಬಾರಿಗೆ ಸಿಗರೇಟ್ ಅಥವಾ ಇನ್ನ್ಯಾವುದೇ ತಂಬಾಕಿನ ಸೇವನೆಯನ್ನು ತ್ಯಜಿಸಲು ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ ನಿಧಾನವಾಗಿ ತಂಬಾಕಿನ ಸೇವನೆಯ ಪ್ರಮಾಣವನ್ನು ಕಡಿಮೆಯಾಗುವಂತೆ ನೋಡಿಕೊಳ್ಳಿ. ಒತ್ತಾಯ ಮಾಡಬೇಡಿ. ಮನಸ್ಸನ್ನು ಪ್ರಫುಲ್ಲವಾಗಿರಿಸಿಕೊಳ್ಳಲು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಅನುವುಮಾಡಿಕೊಡಿ. ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿ.

ಹದಿಹರಯದ ಮಕ್ಕಳು ಅತಿ ಹೆಚ್ಚು ತಂಬಾಕಿನ ದುಷ್ಚಟಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ತಂಬಾಕು ಸೇವನೆಯಿಂದಾಗುವ ಅನಾಹುತಗಳ ಬಗ್ಗೆ ಮತ್ತು ಆ ದುಶ್ಚಟಕ್ಕೆ ಬಲಿಯಾಗದಿರಲು ಬೇಕಾಗುವ ಜೀವನ ಕೌಶಲಗಳ ಬಗ್ಗೆ ತರಬೇತಿ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ತಂಬಾಕು ಸೇವನೆಗೆ ಬಲಿಯಾಗದಂತೆ ಮಕ್ಕಳನ್ನು ಸಬಲಗೊಳಿಸಲು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಕರೂ ಇದರಲ್ಲಿ ತರಬೇತಿ ಪಡೆದು ಮಕ್ಕಳಿಗೆ ಬೇಕಾಗುವ ನಿರಂತರ ಆಪ್ತಸಮಾಲೋಚನೆಗೆ ತಯಾರಾಗಬೇಕು. 

ನಮ್ಮ ಸ್ನೇಹಿತರು ಅಥವಾ ಸಹೋದ್ಯೋಗಿಗಳು ತಂಬಾಕನ್ನು ತ್ಯಜಿಸಲು ಮನಸ್ಸು ಮಾಡಿದ್ದರೆ ಅವರ ಪ್ರಯತ್ನವನ್ನು ಶ್ಲಾಘಿಸಿ. ಯಾವುದೇ ಕಾರಣಕ್ಕೂ ಅವರಿಗೆ ಮತ್ತೆ ಸಿಗರೇಟ್ ಸೇದುವಂತೆ ಆಸೆ ತೋರಿಸಬೇಡಿ. ಅವರ ಈ ನಡೆಯಿಂದ ನೀವೂ ಪ್ರೇರಣೆ ತೆಗೆದುಕೊಂಡು ತಂಬಾಕು ಸೇವನೆಯಿಂದ ಮುಕ್ತರಾಗಲು ಪ್ರಯತ್ನಿಸಿ. ಎಷ್ಟೋ ಸಂದರ್ಭಗಳಲ್ಲಿ ಚಟದಿಂದ ಬಿಡುಗಡೆ ಹೊಂದಲು ಸಂಗಾತಿಯ ಅಗತ್ಯವಿರುತ್ತದೆ. ಒಬ್ಬರೇ ಶ್ರಮಪಡುವ ಬದಲು ಇಬ್ಬರು ಒಟ್ಟಿಗೆ ಪರಸ್ಪರ ಪ್ರೇರೇಪಿಸಿಕೊಳ್ಳುತ್ತಾ ಚಟದಿಂದ ಬಿಡುಗಡೆಹೊಂದುವುದು ಸುಲಭವೆಂದು ಸಂಶೋಧನೆಗಳೇ ತೋರಿಸಿವೆ. ಕೆಲಸ ಮಾಡುವ ಸ್ಥಳಗಳಲ್ಲಿ ತಂಬಾಕು ಸೇವನೆ ನಿಷಿದ್ಧಗೊಳಿಸಿರುವ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಿದರೆ ಉತ್ತಮ. ಚಹಾ ಕುಡಿಯುವುದರ ಜೊತೆಗೆ ಸಿಗರೇಟ್ ಬೇಕೆನ್ನುವ ನಿಮ್ಮ ಆಲೋಚನೆಯಿಂದ ಹೊರಬನ್ನಿ.

ಕೆಲಸದ ಒತ್ತಡದಿಂದ ಬಿಡುಗಡೆ ಹೊಂದಲು ಒಳ್ಳೆಯ ಸಂಗೀತ ಕೇಳುವುದು, ಪುಸ್ತಕ ಓದುವುದು, ಚಾರಣ ಮಾಡುವುದು, ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಗಿಡಗಳನ್ನು ಬೆಳೆಸುವುದು ಇನ್ನೂ ಹತ್ತು ಹಲವು ದಾರಿಗಳು ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತವೆ. ನಮ್ಮ ಮನಸ್ಸಿನ ಕಣ್ಣನ್ನು ಒಮ್ಮೆ ತೆರೆದು ನೋಡುವ ಸಾಹಸ ಮಾಡಬೇಕು ಅಷ್ಟೇ. ಆಗ ಪ್ರತಿಕ್ಷಣವೂ ಈ ಜಗತ್ತು ಎಷ್ಟು ವಿಸ್ಮಯದಿಂದ ಕೂಡಿದೆ ಎಂದು ಆಸ್ವಾದಿಸುವ ಘಳಿಗೆ ನಮ್ಮದಾಗುತ್ತದೆ. ತಂಬಾಕಿನ ಮಾಯೆ ಇದರ ಮುಂದೆ ಎಷ್ಟು ಕ್ಷುಲ್ಲಕವೆಂದು ತಿಳಿಯುತ್ತದೆ. ತಂಬಾಕು ಸೇವನೆಯಿಂದ ಹಣದ ಪೋಲಾಗುತ್ತಿರುವುದನ್ನು ತಪ್ಪಿಸುವುದಲ್ಲದೆ ಮುಂದೆ ಅನುಭವಿಸಬೇಕಾಗುವ ಅನಾರೋಗ್ಯದ ಚಿಕಿತ್ಸೆಗೆ ವ್ಯಯಿಸಬೇಕಾದ ದುಬಾರಿ ಖರ್ಚನ್ನೂ ಉಳಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT