ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟದ ಕಲ್ಲು ಕರಗಿದಾಗ...

Last Updated 27 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಹಸಿರ ಸಿರಿಯೊಳು ಆತ್ಮ ವಿಹರಿಸೆ ಮನದ ಬೇಸರ ನೀಗಿದೆ’ ಎಂಬ ಕವಿವಾಣಿಯಂತೆ ನಿಸರ್ಗ ರಮಣೀಯ ತಾಣದ ನಡುವೆ ನೀರ ಝರಿಯ ಸೊಬಗಲ್ಲಿ, ಕೈಬೀಸಿ ಕರೆಯುತಿರುವ ಭದ್ರೆಯ ಮಡಿಲಲ್ಲಿ ಇರುವ ಕಲ್ಲುಗಳ ರಾಶಿ ಕೌತುಕಗಳ ಬೀಡು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಕಳಸ ಪಟ್ಟಣದಿಂದ ಹೊರನಾಡಿಗೆ ತೆರಳುವ ಮಾರ್ಗ ಮಧ್ಯೆ ಇರುವ ಭದ್ರೆಯ ಬುಡದಲ್ಲಿ ಅಬ್ಬಾ ! ಒಂದೊಂದು ಬಂಡೆಯೂ ಒಂದೊಂದು ಕಾವ್ಯ ಅದ್ಭುತ.

ಚಿತ್ರವಿಚಿತ್ರ ಚಿತ್ತಾರಗಳ ಸಾಗರ. ಕ್ಯಾಮೆರಾ ಕಣ್ಣುಗಳಿಗೆ ರಸಪಾಕ. ಇಲ್ಲಿರುವ ಈ ಬಂಡೆಗಳನ್ನು ಯಾವ ಶಿಲ್ಪಿ ಕಡೆದು ಹೀಗೆ ಆಕೃತಿ ಮೂಡಿಸಿದ್ದಾನೋ ಎನ್ನುವ ಪ್ರಶ್ನೆ ಮೂಡಿಸುತ್ತದೆ. ಭದ್ರೆಯ ನೀರಿನಿಂದ ಮೇಲೆದ್ದ ಕಲ್ಲುಬಂಡೆಗಳು ನೀರಿನ ರಭಸಕ್ಕೆ ವಿಚಿತ್ರಾಕೃತಿಗಳನ್ನು ಪಡೆದು ನಿಂತಿವೆ. ಒಂದೊಂದರಲ್ಲಿಯೂ ಒಂದೊಂದು ನೋಟ, ನೋಡುಗನ ಕಲ್ಪನೆಗೆ ಬುತ್ತಿ ಬಿಚ್ಚಿಕೊಂಡರೆ ವೈವಿಧ್ಯಮಯ ದೃಶ್ಯಾವಳಿಗಳು ಅಲ್ಲಿ ಬಿಂಬಿತಗೊಳ್ಳುತ್ತವೆ.

ಬಂಡೆಗಳ ನಡುವೆ ಅನೇಕ ಕಡೆಗಳಲ್ಲಿ ಭೋರ್ಗರೆವ ನೀರ ರಾಶಿ ಜಲಧಾರೆಯನ್ನು ನೆನಪಿಸುತ್ತದೆ, ಪ್ರವಾಸಿಗರ ಮನ ಗೆಲ್ಲುತ್ತವೆ. ಒಂದಕ್ಕಿಂತ ಒಂದು ಚೆನ್ನ. ನೋಡಲು ಕಣ್ಣುಗಳೆರಡು ಸಾಲದು. ಅಂಬಾತೀರ್ಥ ಎಂದು ಕರೆಯಲಾಗುವ ಈ ಸ್ಥಳ ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ದೊಡ್ಡ ಬಂಡೆ ಇದ್ದು ಇದರ ಮೇಲೆ ಚೌಕಾಕಾರದ ಕಲ್ಲು ಸಮನಾಂತರವಾಗಿ ನಿಂತಿದೆ. ಇದನ್ನು ಭೀಮನ ಕಲ್ಲು, ದ್ವೈತ ಸಿದ್ಧಾಂತ ಪ್ರತಿಪಾದಕ ಮಧ್ವಾಚಾರ್ಯರ ಬಂಡೆ ಎಂದೂ ಕರೆಯುತ್ತಾರೆ.

ಕಲ್ಲುಗಳಲ್ಲಿ ಮೂಡಿರುವ ಕಲೆಯ ಮೆರುಗನ್ನು ಸವಿದು ನದಿಯಲ್ಲಿ ಸಾಕಷ್ಟು ಬಿಂದು ಮನೆಯತ್ತ ಹೊರಟರೆ ಮತ್ತೆ ಮನಸ್ಸು ಕಲ್ಲುಗಳತ್ತಲೇ ಸರಿಯುತ್ತದೆ. ಶಿಲ್ಪ ಸೌಂದರ್ಯ ನೆನಪಾಗಿ ಕಾಡುತ್ತದೆ. ಕಲೆಯಲ್ಲಿ ಮೂಡಿದ ಶಿಲ್ಪರಾಶಿ ಕೈಬೀಸಿ ಕರೆಯುತ್ತದೆ. ಕಳಸ ಪಟ್ಟಣದಿಂದ ಹೊರನಾಡಿಗೆ ತೆರಳುವ ಮಾರ್ಗ ಮಧ್ಯೆ ಎರಡು ಕಿ.ಮೀ ಕ್ರಮಿಸಿದಾಗ ಸ್ಥಳೀಯ ವಸ್ತುಗಳ ಮಾರಾಟ ಮಳಿಗೆ ಸಿಗುತ್ತದೆ.

ಅಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ದೂರ ತೆರಳಿ ಮತ್ತೆ ಬಲಕ್ಕೆ ತಿರುಗಿ ಕಡಿದಾದ ರಸ್ತೆಯಲ್ಲಿ ಇಳಿದರೆ ಭದ್ರಾ ನದಿ ಎದುರಾಗುತ್ತದೆ. ಆನೆ ಮಲಗಿದಂತೆ ಕಾಣುವ ಗುಡ್ಡ. ಜುಳುಜುಳು ಹರಿವ ನೀರು. ಹಕ್ಕಿಗಳ ಕಲರವಗಳ ಸೊಬಗಿನ ನಡುವೆ ಈ ಶಿಲ್ಪಕಲೆ ಮನಸೂರೆಗೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT