ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಟ್ಟೆ–ಬಟ್ಟೆ ಎಲ್ಲವೂ ಕೊಚ್ಚಿ ಹೋದವು

ಸಮವಸ್ತ್ರಗಳದ್ದೇ ಚಿಂತೆ: ಕೊಳೆಗೇರಿ ನಿವಾಸಿ ಅಳಲು
Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾಪೂರ’ದಂಥ ಪ್ರವಾಹ ಕೋಡಿಚಿಕ್ಕನ ಹಳ್ಳಿಯ ಕೊಳೆಗೇರಿ ನಿವಾಸಿಗಳನ್ನು ಅಕ್ಷರಶಃ ಅಲುಗಾಡಿಸಿದೆ.

ಮಂಜುನಾಥ್ ಪ್ರಾವಿಜನ್ ಸ್ಟೋರ್‌ನಲ್ಲಿ ಬಾಳೆಹಣ್ಣು, ಬ್ರೆಡ್ಡು ಕೊಳ್ಳುತ್ತಿದ್ದ ಜರೀನಾ ಶೇಖ್‌, ಪ್ರವಾಹದಿಂದಾದ ನಷ್ಟದ ಕುರಿತು ಪರಿಚಿತರೊಂದಿಗೆ ಹೇಳಿಕೊಳ್ಳುತ್ತಿದ್ದರು.

ಅವರನ್ನು ‘ಪ್ರಜಾವಾಣಿ’ ಮಾತಿಗೆ ಎಳೆದಾಗ ಹಿಂದಿನ ರಾತ್ರಿಯ ಬವಣೆಯನ್ನು ಬಿಚ್ಚಿಟ್ಟರು.

‘ನಮ್ಮದು ಪುಟ್ಟ ಮನೆ. ಬಾಡಿಗೆ ಜಾಗದಲ್ಲಿ ಶೆಡ್‌ ನಿರ್ಮಿಸಿಕೊಂಡಿದ್ದೆವೆ. ಮನೆಯಲ್ಲಿ ಏಳು ಜನರಿದ್ದೇವೆ. ನೀರು ಬಂದು ಎಲ್ಲವೂ ಕೊಚ್ಚಿಕೊಂಡು ಹೋಗಿದೆ’ ಎಂದರು. ‘ಬನ್ನಿ, ನೋಡುವಿರಂತೆ’ ಎಂದು ಅವರು ಕರೆದೊಯ್ದರು.

ಅವರನ್ನು ಹಿಂಬಾಲಿಸಿದಾಗ, ‘ನನ್ನ ಪತಿ ಕಳೆದ ವಾರವಷ್ಟೇ ₹2 ಸಾವಿರ ರೂಪಾಯಿ ರೇಷನ್‌ ತಂದಿದ್ದರು. ಅದೆಲ್ಲವೂ ಬಹುತೇಕ ಹಾಳಾಗಿದೆ. ಎರಡು ತಿಂಗಳ ಹಿಂದೆ ಹೊಟ್ಟೆ ಕಟ್ಟಿ ಸಾವಿರ–ಸಾವಿರ ಕೊಟ್ಟು ಮಕ್ಕಳಿಗೆ ಹೊಸ  ಶಾಲಾ ಸಮವಸ್ತ್ರ ತಂದಿದ್ದೆವು. ಅವುಗಳನ್ನು ಮಕ್ಕಳು ಸ್ಟೂಲ್‌ ಮೇಲೆ ಇಟ್ಟಿದ್ದರು. ಆದರೆ, ಅವು  ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ನಮಗೆ ಸದ್ಯ ಅವುಗಳದ್ದೇ ಚಿಂತೆ’ ಎಂದು ಜರೀನಾ ಮಂಕಾದರು.

‘ನಾನು ಇನ್ನೊಬ್ಬರಲ್ಲಿ ಮನೆಗೆಲಸ ಮಾಡುತ್ತೇನೆ. ಅವರೇ ನಮಗೆ ಅನ್ನ, ಚಪಾತಿ, ಊಟ ಎಲ್ಲವೂ ಕೊಟ್ಟರು’ ಎಂದು ಅವರು ಹೇಳಿದರು. ಬಳಿಕ ಅವರು ರೂಬಿನಾ  ಶೇಖ್ ಎಂಬುವರನ್ನು ಪರಿಚಯಿಸಿದರು.

‘ಆಹಾರ ಸಾಮಗ್ರಿ, ಬಟ್ಟೆಗಳು ಎಲ್ಲವೂ ಕೊಚ್ಚಿ ಹೋಗಿವೆ. ಅವುಗಳನ್ನು ಹಿಡಿಯಲು ಹೋಗಲು ಕೂಡ ಭಯವಾಯ್ತು. ಇದೀಗ ಉಟ್ಟ ಬಟ್ಟೆ ಬಿಟ್ಟರೇ ಬೇರೆ ಇಲ್ಲ. ಇದೀಗ ಮಕ್ಕಳನ್ನು ಕರೆದುಕೊಂಡು ಬೇರೆಯವರ ಮನೆಯಲ್ಲಿ ಇದ್ದೇವೆ’ ಎಂದು ಅವರು ತಿಳಿಸಿದರು. ಈ ನಡುವೆ ಮಾತನಾಡಿದ ಮತ್ತೊಬ್ಬ ಮಹಿಳೆ ಅಪ್ಸಾನಾ ಇದ್ರೀಸ್‌, ‘ನಾವೆಲ್ಲ ದುಡಿದು ತಿನ್ನುವ ಜನರು.  ಟಿ.ವಿ, ಬಟ್ಟೆ–ಬರೆ, ಪಾತ್ರೆ–ಪಗಡಿ ಬಿಟ್ಟರೇ ಬೇರೇನೂ ಇಲ್ಲ. ಅವುಗಳೇ ಕೊಚ್ಚಿ ಹೋಗಿವೆ. ಏನು ಮಾಡುವುದು’ ಎಂದರು.

ಅಷ್ಟೇ ನೋಡಿ ಉಳಿದಿದ್ದು...! ‘ಸೊಂಟ ಮಟ್ಟದ ನೀರು ಹರಿದು ಎಲ್ಲವೂ ಕೊಚ್ಚಿ ಹೋಗಿವೆ. ಮೇಲೆ ಎತ್ತಿಟ್ಟ ಪಾತ್ರೆ ಬಿಟ್ಟು,  ತಟ್ಟೆಗಳು ಸೇರಿದಂತೆ ಪಾತ್ರೆಗಳು, ಬಟ್ಟೆಗಳು ನೀರು ಪಾಲಾಗಿವೆ. ಇದೋ ನೋಡಿ ನನ್ನ  ಮಗಳು ಮತ್ತೊಬ್ಬರ ಬಟ್ಟೆ ಧರಿಸಿದೆ. ನಾನು ತೊಟ್ಟಿದ್ದೂ ಕೂಡ ಬೇರೆಯವರು ಕೊಟ್ಟಿದ್ದು. ಅವಷ್ಟೇ ನೋಡಿ ಉಳಿದ ಸಾಮಗ್ರಿ..’ ಎನ್ನುತ್ತ ಅಳಿದುಳಿದ ವಸ್ತುಗಳತ್ತ ಕೈತೋರಿದರು ರೂಪ.

‘ಟಿ.ವಿ ಕೊಚ್ಚಿಕೊಂಡು ಹೋಯ್ತು. ಫ್ರಿಡ್ಜ್‌, ಫ್ಯಾನ್‌ ಹಾಳಾಗಿರಬಹುದು. ವಿದ್ಯುತ್‌ ಬಂದ ಬಳಿಕ ತಿಳಿಯುತ್ತದೆ’ ಎಂದು ಅವರು ಸೇರಿಸಿದರು. ‘ನನ್ನೆಲ್ಲ ಪುಸ್ತಕ ಕೊಚ್ಚಿಕೊಂಡು ಹೋಗಿ, ಎರಡು ಮಾತ್ರ ಉಳಿದಿವೆ’ ಎಂದು ಎರಡನೇ ತರಗತಿಯಲ್ಲಿರುವ ಅವರ ಮಗ ತೊದಲುತ್ತ ಹೇಳಿದ.

ಕತ್ತಲಲ್ಲಿ ಪ್ರವಾಹಪೀಡಿತ ಪ್ರದೇಶ
ಮಳೆಯಿಂದಾಗಿ ದಕ್ಷಿಣ ಭಾಗದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.  ಕೆಲವು ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ ಹೋದ ಕರೆಂಟ್‌ ಶನಿವಾರ ಸಂಜೆಯ ವರೆಗೂ ಬಂದಿರಲಿಲ್ಲ.

ಬೆಳ್ಳಂದೂರು, ಅಕ್ಷಯನಗರದ ಜಾಹ್ನವಿ ಅಪಾರ್ಟ್‌ಮೆಂಟ್‌, ಬಿಟಿಎಂ ಎರಡನೇ ಹಂತ, ಕೋಡಿಚಿಕ್ಕನಹಳ್ಳಿ ಮತ್ತಿತರ ಕಡೆಗಳಲ್ಲಿ ವಿದ್ಯುತ್‌ ಇಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ. ದಕ್ಷಿಣ ಭಾಗದಲ್ಲಿ 500 ಕೆ.ವಿ.ಯ 2 ಹಾಗೂ 250 ಕೆ.ವಿ.ಯ 12 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ.

13 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್‌ ಕಡಿತ ಮಾಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ‘ಮುಂದಿನ ಕೆಲವು ದಿನ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರಜೆ ಪಡೆಯದೆ ಕಾರ್ಯನಿರ್ವಹಿಸಬೇಕು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT