ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ಬಂದ ‘ಮೇಸ್ತ್ರಿ’

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಈ ಮೊದಲು ‘ಅನು’ ಚಿತ್ರದ ಮೂಲಕ ಪರಿಚಯವಾಗಿದ್ದ ಎಚ್.ಜೆ. ಬಾಲಕೃಷ್ಣ ಅವರು ‘ಮೇಸ್ತ್ರಿ’ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬಾಲಕೃಷ್ಣ ಅವರೇ ‘ಮೇಸ್ತ್ರಿ’ಯ ನಾಯಕ ಮತ್ತು ನಿರ್ಮಾಪಕ.

ಮೇಸ್ತ್ರಿಯ ಚಿತ್ರೀಕರಣ ಶುರು ಮಾಡಿ ಸುಮಾರು ಎರಡೂವರೆ ವರ್ಷಗಳೇ ಕಳೆದಿದ್ದವು. ಮರೆತೇ ಹೋಗಿದ್ದ ಚಿತ್ರದ ಬಗ್ಗೆ ನೆನಪಿಸಲೆಂದೇ ಇತ್ತೀಚೆಗೆ ಚಿತ್ರೀಕರಣ ಮುಗಿದಿರುವುದಾಗಿ ತಿಳಿಸಲು ಚಿತ್ರತಂಡ ಸುದ್ದಿಗೋಷ್ಠಿಯನ್ನು ಕರೆದಿತ್ತು. ಈ ವಿಚಾರವನ್ನು ಪ್ರಸ್ತಾಪಿಸಿದ ಬಾಲಕೃಷ್ಣ, ‘ಚಿತ್ರ ನಿರ್ಮಾಣ ತುಂಬ ನಿಧಾನವಾಗಿದೆ. ಅಡಿಪಾಯವನ್ನು ಗಟ್ಟಿಮುಟ್ಟಾಗಿಸುವ ಪ್ರಕ್ರಿಯೆಯಲ್ಲಿ ಮನೆ ಕಟ್ಟುವುದು ತಡವಾಯಿತು’ ಎಂಬ ರೂಪಕದೊಂದಿಗೇ ವಿಳಂಬವನ್ನು ಸಮರ್ಥಿಸಿಕೊಂಡರು. ‘ನೈಜ ಘಟನೆ ಆಧರಿತ ಚಿತ್ರವಿದು.

ಇಂದಿನ ಪರಿಸ್ಥಿತಿಯಲ್ಲಿ ಜನ ಮಾನವೀಯತೆ ಮರೆತು, ನಾನು- ನನ್ನದು ಎಂಬ ಸ್ವಾರ್ಥದಲ್ಲಿ ಬದುಕುತ್ತಿದ್ದಾರೆ. ಈ ಮನೋಭಾವವನ್ನು ತೊಡೆದು ತಮ್ಮ ಸುತ್ತಲಿನವರಿಗೆ ಒಳಿತು ಮಾಡುವಂತಾಗಬೇಕು ಎಂಬುದೇ ಚಿತ್ರದ ಸಂದೇಶ’ ಎಂದು ಚಿತ್ರದ ಒನ್ ಲೈನ್ ಸ್ಟೋರಿ ಹೇಳಿದರು.

‘ಜಿಂಕೆಮರೀನಾ’ ಎಂಬ ಜನಪ್ರಿಯ ಹಾಡು ಬರೆದ ಎಸ್.ರಾಜ್‌ಕಿರಣ್ ‘ಮೇಸ್ತ್ರಿ’ಗೆ ಆ್ಯಕ್ಷನ್– ಕಟ್ ಹೇಳಿದ್ದಾರೆ. ‘ಚಿತ್ರದಲ್ಲಿ ಪಾರಿವಾಳವು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದೆ. ಹೀಗಾಗಿ ಚಿತ್ರಕ್ಕೆ ‘ಪಾತಕ ಲೋಕದಲ್ಲಿ ಪಾರಿವಾಳ’ ಎಂದು ಅಡಿಬರಹ ನೀಡಲಾಗಿದೆ’ ಎನ್ನುತ್ತಾರೆ ಅವರು.

‘ನೈಜ ಘಟನೆಯನ್ನು ಚಿತ್ರ ಮಾಡಲು ಹೊರಟಾಗ ಕೆಲವು ತೊಡಕುಗಳು ಎದುರಾದವು. ಮೂಲ ಘಟನೆಗೆ ಸಂಬಂಧಿಸಿದವರ ಜತೆ ಚರ್ಚಿಸಿ ಕಥೆಯ ಅಂಶಗಳನ್ನು ಬದಲಾಯಿಸಬೇಕಾಯಿತು. ತನ್ನ ಸಮಾಜಕ್ಕೆ ಒಳಿತು ಮಾಡುವ ಚಿತ್ರದ ನಾಯಕ ಬಡಗಿ ಕುಟುಂಬದವನಾಗಿರುತ್ತಾನೆ. ಹೀಗಾಗಿ ಚಿತ್ರದ ಹೆಸರು ಮೇಸ್ತ್ರಿ’ ಎಂದು ವಿವರಿಸಿದರು ನಿರ್ದೇಶಕ ರಾಜ್‌ಕಿರಣ್.

ಇನ್ನು, ‘ಚಿತ್ರದಲ್ಲಿ ಕಥೆಯಷ್ಟೇ ಮುಖ್ಯ ಪಾತ್ರವನ್ನು ಹಾಡುಗಳೂ ವಹಿಸಿವೆ’ ಎಂದರು ಸಂಗೀತ ನಿರ್ದೇಶಕ ಜಿ.ಆರ್. ಶಂಕರ್. ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರದ ಹಾಡುಗಳ ಹಕ್ಕು ಪಡೆದ ಯೂನಿನಾರ್ ಸಂಸ್ಥೆಯ ವಿಕ್ಟರ್ ಅವರು, ‘ನಾವು ಕನ್ನಡಕ್ಕೆ ಪದಾರ್ಪಣೆ ಮಾಡಲು ಕಾಯುತ್ತಿದ್ದೆವು. ಸರಿಯಾದ ಸಂದರ್ಭಕ್ಕೆ ‘ಮೇಸ್ತ್ರಿ’ ಸಿಕ್ಕಿದ’ ಎಂದರು. ಮಲೆಯಾಳಂ ಕಲಾವಿದ ಚಂಬಲ್ ಎಂಬುವವರು ಖಳನಟನ ಪಾತ್ರದಲ್ಲಿ ಬಣ್ಣ ಹಚ್ಚಿರುವುದು ಚಿತ್ರದ ಆಕರ್ಷಣೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT