ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾದರೂ ಸ್ವಾಗತಾರ್ಹ

Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

214 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ರದ್ದು ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಕಾರ್ಪೊರೇಟ್‌ ವಲಯಕ್ಕೆ ಸುಪ್ರೀಂಕೋರ್ಟ್‌ ಸರಿಯಾಗಿಯೇ ಚಾಟಿ ಬೀಸಿದೆ. 1993ರಿಂದ 2010ರ ಅವಧಿಯ ಸರ್ಕಾರ­ಗಳು ಕಲ್ಲಿದ್ದಲಿನಂಥ ನೈಸರ್ಗಿಕ ಮತ್ತು ರಾಷ್ಟ್ರೀಯ ಸಂಪತ್ತನ್ನು ಮನಸೋ ಇಚ್ಛೆ ಹಂಚಿಕೆ ಮಾಡಿದ್ದವು.

ಈ ಅವಧಿಯಲ್ಲಿನ ನಾಲ್ಕು ನಿಕ್ಷೇಪಗಳನ್ನು ಬಿಟ್ಟು ಉಳಿದೆಲ್ಲವೂ ಈಗ ರದ್ದಾಗಿವೆ. ಅಲ್ಲದೆ ಈಗಾಗಲೇ ಕಾರ್ಯ ನಿರ್ವ­ಹಿ­ಸುತ್ತಿರುವ 42 ನಿಕ್ಷೇಪಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್‌ ಅವಕಾಶ ನೀಡಿದೆ. ‘ನಿಕ್ಷೇಪ ಹಂಚಿಕೆಯ ನಂತರ ಈ ಕಂಪೆನಿಗಳು  ₨ 2.87 ಲಕ್ಷ ಕೋಟಿ ಬಂಡವಾಳವನ್ನು ಗಣಿಗಾರಿಕೆಯಲ್ಲಿ ತೊಡಗಿಸಿವೆ, ₨ 4 ಲಕ್ಷ ಕೋಟಿ  ಬಂಡವಾಳದ ಉದ್ಯಮಗಳು ಇವನ್ನೇ ಅವಲಂಬಿಸಿವೆ’ ಎಂಬ ಸರ್ಕಾರದ ವಾದವನ್ನು ಅದು ಮಾನ್ಯ ಮಾಡಿಲ್ಲ.

ದೇಶದ ಸಂಪತ್ತನ್ನು ಅಕ್ರಮ­ವಾಗಿ ಕೊಳ್ಳೆ ಹೊಡೆದ ಕಂಪೆನಿಗಳು ‘ಮಾಡಿದ ತಪ್ಪಿಗೆ ಶಾಸ್ತಿ ಅನು­ಭ­ವಿಸಲೇಬೇಕು, ಅವು ಯಾವುದೇ ಅನುಕಂಪಕ್ಕೆ ಅರ್ಹವಲ್ಲ’ ಎಂದು ಕೋರ್ಟ್‌ ಹೇಳಿರುವುದು ಗಮನಾರ್ಹ. ಏಕೆಂದರೆ ಸಿಎಜಿ ಲೆಕ್ಕಹಾಕಿದ ಪ್ರಕಾರ ಕಲ್ಲಿದ್ದಲು ಅಕ್ರಮದಿಂದ ಬೊಕ್ಕಸಕ್ಕೆ ಆದ ನಷ್ಟದ ಮೊತ್ತವೇ ಸುಮಾರು

₨ 1.86 ಲಕ್ಷ ಕೋಟಿ. ಇದೆಲ್ಲ ಏನೇ ಇದ್ದರೂ, ನ್ಯಾಯಾಲಯದ ತೀರ್ಪು ಇನ್ನೂ ಬೇಗ ಬರಬೇಕಾಗಿತ್ತು. ಆಗ, ಅಕ್ರಮ ವಿಧಾನಗಳ ಮೂಲಕ ಪಡೆದು­ಕೊಂಡ ಕಲ್ಲಿದ್ದಲು ನಿಕ್ಷೇಪಗಳನ್ನು ಎರಡು ದಶಕಗಳಿಂದ ಲೂಟಿ ಮಾಡು­ತ್ತಿದ್ದ­ವರಿಗೆ ಮತ್ತಷ್ಟು ಮೊದಲೇ ಕಡಿವಾಣ ಬೀಳುತ್ತಿತ್ತು. ರಾಷ್ಟ್ರೀಯ ಸಂಪ­ತ್ತಿನ ರಕ್ಷಣೆಯೂ ಆಗುತ್ತಿತ್ತು. ತೀರ್ಪಿನ ಇನ್ನೊಂದು ಮಹತ್ವದ ಪರಿಣಾಮ ಎಂದರೆ 172 ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಹಾಕಲು ಕೇಂದ್ರಕ್ಕೆ ಅವ­ಕಾಶ ದೊರೆತಿದೆ.

ರದ್ದಾದ ನಿಕ್ಷೇಪಗಳಲ್ಲಿ ಗಣಿಗಾರಿಕೆಯನ್ನು ಕಂಪೆನಿಗಳು ಮುಂದಿನ ಮಾರ್ಚ್‌ 31ರ ಒಳಗೆ ಸಂಪೂರ್ಣವಾಗಿ ನಿಲ್ಲಿಸಿ ಜಾಗ ಖಾಲಿ ಮಾಡಬೇಕಾಗುತ್ತದೆ. ನಂತರ ಈ ನಿಕ್ಷೇಪಗಳನ್ನೂ ಕೇಂದ್ರ ಸರ್ಕಾರ ಒಂದೋ ಹರಾಜು ಹಾಕಬೇಕು ಅಥವಾ ತನ್ನದೇ ಅಧೀನದ ಕೋಲ್ ಇಂಡಿಯಾಗೆ ಕೊಡಬೇಕು. ಈಗಾಗಲೇ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳು ಟನ್‌ಗೆ ಹೆಚ್ಚುವರಿಯಾಗಿ ₨ 295  ಶುಲ್ಕ ತೆರಬೇಕಾಗುತ್ತದೆ. ನಿಕ್ಷೇಪ ಮಂಜೂರು ಮಾಡಿಕೊಂಡು ಗಣಿಗಾರಿಕೆಯನ್ನೇ ಪ್ರಾರಂಭಿಸದ ಕಂಪೆನಿಗಳು ಬೊಕ್ಕಸಕ್ಕೆ ಆದ ಹಾನಿ ತುಂಬಿಕೊಡಬೇಕಾಗುತ್ತದೆ.

ಈ ಕ್ರಮಗಳೆಲ್ಲವೂ ರಾಷ್ಟ್ರೀಯ ಸಂಪತ್ತಿನ ಲೂಟಿ ತಡೆಯುವ ನ್ಯಾಯಾ­ಲಯದ ಕಳಕಳಿಗೆ ನಿದರ್ಶನ. ಹಂಚಿಕೆ ರದ್ದು ಮಾಡಿದರೆ ಉದ್ಭವಿಸುವ ಸಾಮಾ­ಜಿಕ,- ಆರ್ಥಿಕ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿರುವುದಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಳೆದ ದೃಢ ನಿಲುವು ಕೂಡ ಪ್ರಶಂಸ­ನೀಯ. ಆದರೆ ಕಲ್ಲಿದ್ದಲು ಅಭಾವ ಮತ್ತು ಬೆಲೆ ಏರಿಕೆಯಿಂದ ಶಾಖೋತ್ಪನ್ನ ವಿದ್ಯುತ್‌ ಘಟಕಗಳು ಪೂರೈಸುವ ವಿದ್ಯುತ್‌ ದರ ಹೆಚ್ಚಬಹುದು. ಗ್ರಾಹಕರ ಮೇಲೆ ಹೊರೆಯಾಗಬಹುದು.

ಅದನ್ನು ನಿಭಾಯಿಸಲು ಈಗಿನಿಂದಲೇ ಎಚ್ಚರ ವಹಿಸಬೇಕು. ಇನ್ನೆಂದೂ ನೈಸರ್ಗಿಕ ಸಂಪತ್ತು ದೋಚಲು ಅವಕಾಶ ಕೊಡ­ಬಾರದು. ಅವುಗಳ ಹಂಚಿಕೆ, ದರ ನಿಗದಿಯಲ್ಲಿ  ಪಾರದರ್ಶಕತೆ ತರ­ಬೇಕು. ನಿಯಮಗಳನ್ನು ಬಿಗಿ ಮಾಡಬೇಕು. ಎಲ್ಲಕ್ಕೂ ಮಿಗಿಲಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನೆಯಿಂದ, ಹಿತಮಿತವಾಗಿ ಬಳಸುವ ಸಂಸ್ಕೃತಿ ರೂಢಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT