ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡೆಗೋಡೆ: ಶೀಘ್ರ ಹಣ ಬಿಡುಗಡೆಗೆ ಯತ್ನ

ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಭೇಟಿ
Last Updated 2 ಜುಲೈ 2016, 5:14 IST
ಅಕ್ಷರ ಗಾತ್ರ

ಉಳ್ಳಾಲ: ಸೋಮೇಶ್ವರ ಉಚ್ಚಿಲ ಭಾಗದಲ್ಲಿ  ಕಡಲ್ಕೊರೆತ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಶಾಶ್ವತ ತಡೆಗೋಡೆ ಯೋಜನೆಗೆ ₹ 32 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಒತ್ತಡ ತಂದು ಬಿಡುಗಡೆಗೊಳಿಸುವ ಪ್ರಯತ್ನ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಅವರು ಉಚ್ಚಿಲದಿಂದ ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಸಂತ್ರಸ್ತರಲ್ಲಿ ಮಾತನಾಡಿದರು. ಕರಾವಳಿ ಭಾಗದಲ್ಲಿ ಉಳ್ಳಾಲದಿಂದ ತಲಪಾಡಿವರೆಗೆ ಕಡಲ್ಕೊರೆತದ ಗಂಭೀರ ಸಮಸ್ಯೆ ಹಲವು ವರ್ಷಗಳಿಂದ ಇದೆ. ಈ ಬಗ್ಗೆ ಸರ್ಕಾರದ ಮುಂದೆ ಶಾಶ್ವತ ಪರಿಹಾರಕ್ಕೆ ಇಟ್ಟಂತಹ ₹ 900 ಕೋಟಿ ಪ್ರಸ್ತಾವನೆಯಲ್ಲಿ ₹ 123 ಕೋಟಿ ಈಗಾಗಲೇ ಬಿಡುಗಡೆ ಆಗಿದೆ. ಮೂರು ಹಂತದಲ್ಲಿ ಆರಂಭವಾದ ಕಾಮಗಾರಿ ಉಳ್ಳಾಲದಲ್ಲಿ ನಡೆಯುತ್ತಿದೆ. ಬಮ್ರ್ಸ್, ರೂಫ್ ಹಾಗೂ ಬ್ರೇಕ್ ವಾಟರ್  ತಂತ್ರಜ್ಞಾನದ ಮೂಲಕ ಶಾಶ್ವತ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಸೋಮೇಶ್ವರ-ಉಚ್ಚಿಲ ಭಾಗದಲ್ಲಿ  ಈ ಬಾರಿ ತೀವ್ರ ಕಡಲ್ಕೊರೆತ ಉಂಟಾಗಿದೆ. ಹಲವು ಮನೆಗಳು ನಾಶವಾಗಿದ್ದು, ತಾತ್ಕಾಲಿಕವಾಗಿ ಕಲ್ಲು ಹಾಕುವ ಪ್ರಯತ್ನ ಆಗುತ್ತಿದೆ.ಮುಂದಿನ ವಾರ ಜಿಲ್ಲಾಧಿ ಕಾರಿಗಳ  ಉಪಸ್ಥಿತಿಯಲ್ಲಿ ಸಭೆ ಕರೆದು ಸಂತ್ರಸ್ತರ ಪರಿಹಾರದ ಬಗ್ಗೆ ಚರ್ಚಿಸಲಾಗುವುದು ಎಂದರು.

ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರ  ಮಾಡುವಂತೆ ಹಾಗೂ ಅಲ್ಲಿರುವ ಮಂದಿಗೆ ಪ್ರತ್ಯೇಕ ವಸತಿ ಕಲ್ಪಿಸಿ ಪರಿಹಾರ ನೀಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಅವರು ಭರವಸೆ ನೀಡಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ  ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್,  ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಹಾಸ್ ಉಚ್ಚಿಲ್,  ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ  ಕೆ. ರವೀಂದ್ರಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯೆ  ಧನಲಕ್ಷ್ಮೀ ಗಟ್ಟಿ,  ಕ್ಷೇತ್ರ ಕಾರ್ಯದರ್ಶಿಗಳಾದ ಮೋಹನ ರಾಜ್ ಕೆ.ಆರ್, ಮನೋಜ್ ಆಚಾರ್ಯ,  ತಾಲೂಕು ಪಂಚಾಯಿತಿ ಸದಸ್ಯ ರವಿ ಶಂಕರ್, ಸೋಮೇಶ್ವರ ಗ್ರಾಮ ಪಂಚಾ ಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್,  ಜಿಲ್ಲಾ ವಕ್ಫ್ ಮಾಜಿ ಉಪಾಧ್ಯಕ್ಷ ಮುನೀರ್ ಬಾವಾ ಇತರರು ಇದ್ದರು.

‘ಕಲ್ಲಿಗೆ ಹಾಕುವ ಹಣ ನಮಗೆ ನೀಡಿ’
ಎರಡು ವರ್ಷಗಳಿಂದ ಕಲ್ಲು ಹಾಕುತ್ತಲೇ ಇದ್ದಾರೆ. ಅದಕ್ಕೆ ಸಂದಾಯವಾಗುವ ಹಣವನ್ನು ಸಂತ್ರಸ್ತರಾದ ನಮ್ಮಲ್ಲಿ ನೀಡಿದಲ್ಲಿ  ಬೇರೆಡೆ ಹೋಗಿ ಮನೆಯನ್ನಾದರೂ ನಿರ್ಮಿಸುತ್ತೇವೆ.  ಒಂದು ಲಕ್ಷದ ಕಲ್ಲಿಗೆ ಹತ್ತು ಲಕ್ಷ ಬಿಲ್ ಮಾಡುತ್ತಾರೆ. ಆದರೂ ಮನೆಗಳನ್ನು ಉಳಿಸಲು ಸಾಧ್ಯವಾಗಿಲ್ಲ.

ಮೀನುಗಾರರು ಯಾವತ್ತೂ ಸಮುದ್ರದ ಕಿನಾರೆಯಲ್ಲೇ ಬದುಕುವವರು. ಅವರನ್ನೂ ಸಮುದ್ರವೇ ಇಲ್ಲದ ಮಂಜನಾಡಿ ಕಡೆಗೆ  ಹೋಗಲು ಹೇಳಿದರೆ ಜೀವನ ಕಳೆಯಲು ಹೇಗೆ ಸಾಧ್ಯ?.  ಸಮುದ್ರದ ಹತ್ತಿರದಲ್ಲೇ  ಸ್ಥಳ ಗುರುತಿಸಿ ನೀಡಿದಲ್ಲಿ  ಜೀವನ ನಡೆಸಲು ಸಾಧ್ಯ ಎಂದು ಸ್ಥಳೀಯ ಮೀನುಗಾರ ಸಂಸದರಿಗೆ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT