ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದ, ತಾತ್ವಿಕತೆ ಮತ್ತು ಸಂಗ್ರಹ ಯೋಜನೆ

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ಹಮ್ಮಿಕೊಂಡಿರುವ ಸಮಗ್ರ ತತ್ವಪದ ಸಂಗ್ರಹ ಯೋಜನೆಯ ಪ್ರಸ್ತು­ತತೆಯನ್ನು, ಅದರ  ಹಿಂದಿರುವ ಜೀವಪರ ಕಾಳಜಿಯನ್ನು ನಾಡಿನ ಅನೇಕ ಚಿಂತಕರು ಗುರು­ತಿಸಿದ್ದಾರೆ. ಸುಮಾರು ಐವತ್ತು ಸಂಪುಟಗಳಷ್ಟು ತತ್ವಪದಗಳ ಸಂಗ್ರಹ ಆಗಬಹುದೆಂಬ ಒಂದು ಅಂದಾಜಿನೊಂದಿಗೆ ಈ ಯೋಜನೆ ಆರಂಭ­ವಾಗಿದೆ.

ತತ್ವಪದಗಳ ತಾತ್ವಿಕತೆ, ರಾಚನಿಕ ಸ್ವರೂಪ, ಕಾಲಘಟ್ಟ, ಭಾಷಾ ರೂಪ ಇತ್ಯಾದಿಗಳ ಬಗೆಗೆ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಇದನ್ನು, ತತ್ವ­ಪದಗಳ ಸಂಪಾದನೆ, ಪ್ರಕಟಣೆಗಳನ್ನು ಮಾಡಿ­ರುವ ಅನೇಕ ಸಂಸ್ಥೆಗಳು ಗುರುತಿಸುವ ಪ್ರಯತ್ನ ಮಾಡಿವೆ. ಇಂತಹ ಪ್ರಕಟಣೆಗಳಲ್ಲಿ ಅನೇಕ ತಾತ್ವಿಕ, ಸಾಂಸ್ಕೃತಿಕ ನಿಲುವಿನ ಪ್ರತಿಪಾದನೆಗಳಿವೆ. ತತ್ವಪದಗಳ ಹಲವಾರು ಜನಪ್ರಿಯ ಆವೃತ್ತಿಗಳು, ಅವುಗಳ ತಾತ್ವಿಕತೆಯನ್ನು ಕುರಿತಾದ ಅನೇಕ ಲೇಖ­ನಗಳು ಬಂದಿವೆ. ವಿದ್ವಾಂಸರ ಇಂತಹ ಲೇಖನ­ಗ­ಳನ್ನು ಸಂಗ್ರಹಿಸಿ, ತತ್ವಪದಗಳ ಸಮಗ್ರ ತಾತ್ವಿಕ ಸ್ವರೂಪವನ್ನು ಸವಿಸ್ತಾರವಾಗಿ ನಿರೂಪಿಸುವ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸುವುದೂ ಈ ಯೋಜನೆಯ ಒಂದು ಭಾಗವಾಗಿದ್ದು, ಅದು ಪ್ರಕ-­ಟಣೆಗೆ ಸಿದ್ಧವಾಗುತ್ತಿದೆ. ತತ್ವಪದಗಳು ಕನ್ನಡದ ಬದುಕಿನ ಕೇಂದ್ರ ತಾತ್ವಿಕತೆಯನ್ನು ಮುಂದಿಡುವ ಒಂದು ಆಕರ. ಅದರ ಸಮಗ್ರ ತತ್ವಸ್ವರೂಪವನ್ನು ಸ್ಪಷ್ಟಪಡಿಸಿಕೊಂಡು ಸಂಪಾದಕ ಮಂಡಳಿ ಈ ಕಾರ್ಯದಲ್ಲಿ ತೊಡಗಿದೆ. ತತ್ವಪದಗಳ ತಾತ್ವಿ­ಕತೆಯ ಸ್ಥೂಲ ರೂಪ ಮತ್ತು ಈ ಸಮಗ್ರ ತತ್ವ­ಪದಗಳ ಸಂಗ್ರಹ ಯೋಜನೆಯ ಪ್ರಸ್ತುತತೆಯನ್ನು ಹೀಗೆ ಗುರುತಿಸಬಹುದು.

*ವಿಸ್ತಾರವಾದ ಕನ್ನಡ ಜನಸಮೂಹದ ಬದು­ಕಿನ ನಿಜ ಚಹರೆಗಳನ್ನು, ಕೇಂದ್ರ ತಾತ್ವಿಕತೆ­ಯನ್ನು ಕಟ್ಟಿಕೊಡುವ ಅಭಿವ್ಯಕ್ತಿಯಾಗಿವೆ.  

*ಇವು ಈವರೆಗೆ ದಕ್ಕಿರುವ ಸುಮಾರು ಒಂದು ಸಾವಿರ ವರುಷಗಳ ಕನ್ನಡ ಸಾಹಿತ್ಯ ಪರಂಪರೆಯ ಅತ್ಯಂತ ವಿಸ್ತಾರವಾದ ಭಾಗ.

*ಶೈಕ್ಷಣಿಕ ಸಂಸ್ಥೆಗಳು ತತ್ವಪದಗಳನ್ನು ಹೇಗಾ­ದರೂ ನಡೆಸಿಕೊಂಡಿರಲಿ, ಕನ್ನಡ ನಾಡಿನ ಉದ್ದ­ಗಲಕ್ಕೂ ಇಂದಿಗೂ ಮನೆ ಮನೆಯಂಗಳ­ದಲ್ಲಿ ಜೀವಂತವಾಗಿರುವ ಸಾಹಿತ್ಯಕ ಮತ್ತು ತಾತ್ವಿಕ ಪರಂಪರೆಯೆಂದರೆ ತತ್ವಪದಗಳೇ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಗ­ಗಳಲ್ಲಿ ಢಾಳಾ­ಗಿಯೂ  ಸಮೃದ್ಧ­ವಾಗಿಯೂ ತತ್ವಪದ ಪರಂಪರೆ ಇದೆ. ಕರಾವಳಿ ಭಾಗ­ದಲ್ಲಿ ಇದೆಯೇ ಎಂದು ಶೋಧಿಸ­ಬೇಕಾಗಿದೆ.

*ಈ ಪರಂಪರೆಗೆ ಜಾತಿ, ಧರ್ಮ, ಭಾಷೆಯ ಗಡಿಗಳಿಲ್ಲ. ಕನ್ನಡ ನಾಡಿನ ಎಲ್ಲ ಭಾಷಿಕ ಭಿನ್ನತೆಗಳ ಅಭಿವ್ಯಕ್ತಿಯ ಜೊತೆಗೆ ಕನ್ನಡವು ಒಡನಾಡುವ ಉರ್ದು,   ತೆಲುಗು, ಮರಾಠಿ, ತಮಿಳು ಭಾಷೆಯ ತತ್ವಪದಗಳೂ ಭೌಗೋ­ಳಿಕವಾಗಿ ನಾಡಿನ ಒಳಗೂ-ಹೊರಗೂ ಇವೆ.

*ತತ್ವಪದಗಳು ಕೇವಲ ಹಾಡುಗಳಲ್ಲ. ಅದೊಂದು ಜೀವನ ಕ್ರಮ. ವಿಶೇಷವಾಗಿ  ಪಾರಲೌಕಿಕ ವ್ಯಾಮೋಹವನ್ನು ತಗ್ಗಿಸಿ ಕುಟುಂಬ ಜೀವನವನ್ನು ಗೌರವಿಸುವ ಮತ್ತು ಸಮೂಹದ ಜೀವನದ ಒಳಿತಿಗಾಗಿ ಬದುಕುವ ಪ್ರಜಾಪ್ರಭುತ್ವ ಪರ ಜೀವನಶೈಲಿ.

*ಇದೊಂದು ಗುರುಪಂಥ. ಗುರು ಮಂಗಲ ಸ್ವರೂಪಿಯಾದವನು. ಅರಿವಿನ ಮೂರ್ತ­ರೂಪ. ವ್ಯಕ್ತಿರೂಪದ ಗುರು ಸಂಕೇತಮಾತ್ರ, ನಿಜವಾಗಿ ಅರಿವೇ ಗುರು.

*ಇದೊಂದು ಸಾಧನಾ ಪರಂಪರೆ. ಹುಟ್ಟಿನಿಂದ ಬರುವುದಲ್ಲ.  ಒಮ್ಮೆ ಈ ಸಂಪ್ರದಾಯಕ್ಕೆ ಬಂದರೆ ಜಾತಿ, ಧರ್ಮ, ಲಿಂಗ ಭೇದಗಳೆಲ್ಲ ಕಳಚಿಹಾಕುವ  ಇದು ಗುರುಭಕ್ತಿ ಪರಂಪರೆ.

*ಇದು ಭಾರತದ ಅನೇಕ ತಾತ್ವಿಕ ಪ್ರಸ್ಥಾನಗಳ ಸಂಗಮಭೂಮಿ. ಇಲ್ಲಿ ವಚನ, ಶೈವ, ವೈಷ್ಣವ, ಸೂಫಿ, ಶಾಕ್ತ, ಸಿದ್ಧ, ಬೌದ್ಧ, ಅಮನಸ್ಕ, ಅಚಲಿಗ, ಅದ್ವಯ, ಶೂನ್ಯ, ಯೋಗ ಮುಂತಾದ ಅನೇಕ ತಾತ್ವಿಕ ಧಾರೆಗಳಿವೆ.

*ಇದೊಂದು ಜೀವಂತ ಪರಂಪರೆ. ಕರ್ನಾ­ಟಕದ ಉದ್ದಗಲಕ್ಕೂ ಮತ್ತು ಗಡಿಯಾಚೆಗೂ ತತ್ವಪದಗಳು ಕನ್ನಡದ ಬದುಕಿನ ಭಾಗವಾಗಿವೆ. ತತ್ವರಚನೆ ಮತ್ತು ಆಚರಣೆ ಎರಡೂ ನಮ್ಮ ನಡುವೆ ನಡೆಯುತ್ತಿವೆ.

*ತತ್ವಪದಗಳು ಸಂಗೀತ ರಚನೆಗಳು. ಕೆಲವು ತತ್ವಪದಗಳಿಗೆ ನಿರ್ದಿಷ್ಟ ರಾಗ-ತಾಳಗಳ ಸೂಚನೆ­ಯಿರುತ್ತದೆ. ಒಂದೇ ಹಾಡಿಗೆ ಅನೇಕ ಪಠ್ಯಗಳಿರ­ಬಹುದು. ಸಾಮಾನ್ಯವಾಗಿ ತತ್ವ­ಪದಗಳಿಗೆ ಅಂಕಿ­ತವಿರುತ್ತದೆ.  ತತ್ವಪದ­ಗಳು ಅವರ ಸಾಧ­ನೆಯ ಹಾದಿಯ ಉಪ- ಉತ್ಪನ್ನ­ಗಳು ಮಾತ್ರ. ಮೊದಲು ನಡೆ ನಂತರ ನುಡಿ. ಇಡೀ ಪರಂಪರೆಗೆ ಸಾಮೂ­ಹಿಕ ಚಹರೆ ಇದೆ. ವೈಯಕ್ತಿಕ ಮುಕ್ತಿ ಈ ಪಂಥಕ್ಕೆ ಮುಖ್ಯವಲ್ಲ. ಕುಟುಂಬ ಸಮೇತ, ಇಂದ್ರಿಯ ಸಮೇತ ಬಾಳುವ ಮನುಷ್ಯನ ಬಿಡುಗಡೆಯ ಮಾರ್ಗಕ್ಕಾಗಿ ಹಂಬಲಿಸುವ ಪಂಥ ಇದು.

*ಇದು ಜ್ಞಾನ ಮತ್ತು ಸಾಧನೆ ಎರಡೂ ಏಕೀಭವಿಸಿದ ಯಾನ.  ನಡೆ ಮತ್ತು ನುಡಿ ಒಂದಾಗದ ಜ್ಞಾನ ಜ್ಞಾನವಲ್ಲ. ಸಾಧನೆಗೆ ದೇಹವನ್ನೆ ಬಳಸಿ ಅದರ ಹಂಗಿನಿಂದ ಹೊರ­ಬರುತ್ತಾರೆ.  ತತ್ವಪದಗಳ ಅತಿ ಹೆಚ್ಚು ಭಾಗ ಯೋಗದ ಪರಿಭಾಷೆಯಲ್ಲಿ ರೂಪ ತಳೆದಿದೆ. 

*ತತ್ವಪದಗಳನ್ನು ಏಕತಾರಿಯ ಜೊತೆ ಹಾಡು­ತ್ತಾರೆ.  ಸಮೂಹದಲ್ಲಿ ಹಳ್ಳಿಗಳ ಹಾಳು ಮಂಟಪಗಳಲ್ಲಿ, ಮಠ, ಗುಡ್ಡಬೆಟ್ಟಗಳಲ್ಲಿ ಹಾಡು­ವಾಗ ಕಂಜರಿ ಅಥವಾ ದಮ್ಮಡಿ ಅಥವಾ ಇನ್ಯಾವುದಾದರೂ ತಾಳವಾದ್ಯಗಳು ಇರುತ್ತವೆ. ಇವೆರಡು ಇದ್ದರೆ ಸಾಕು ತತ್ವಪದದ ನದಿ ತುಂಬಿ ಹರಿಯುತ್ತದೆ.

*ಇದೊಂದು ರೀತಿಯ ಗುಪ್ತಪಂಥ. ಪ್ರಚಾರ­ದಿಂದ ದೂರವಿರಲು ಬಯಸುವುದರಿಂದ ಅಜ್ಞಾತವಾಗಿ ಉಳಿದಿದೆ. 

*ತತ್ವಪದಕಾರರು ಮುಕ್ತಿಯ ಬಾಗಿಲನ್ನು ಎಲ್ಲರಿಗೂ ತೆರೆದಿದ್ದಾರೆ.  ಜ್ಞಾನಮಾರ್ಗ­ದಿಂದ ಮಾತ್ರ ಮುಕ್ತಿ ಸಾಧ್ಯ ಎಂಬುದು ಅವರ ನಂಬುಗೆ.

ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ, ನಿಜಗುಣ ಶಿವಯೋಗಿ, ಘನಮಠ ಶಿವಯೋಗಿ, ಹಾಗಲವಾಡಿ ಮುದ್ದುವೀರಸ್ವಾಮಿ, ಕೆಸ್ತೂರ­ದೇವ, ಶಂಕರಾನಂದಯೋಗಿ, ಬಕ್ಕಪ್ಪ, ಹಾರ­ಕೂಡ ಚೆನ್ನಬಸವ, ಹೇರೂರ ವಿರುಪನಗೌಡ, ಶಂಕರದೇವ, ಶಂಕರಾನಂದ (ಶಿವರಾಮಶಾಸ್ತ್ರಿ), ಯೆರ್ರಿತಾತ, ಭಂಭಂಸ್ವಾಮಿ, ನೀರಲಕೇರಿ ಬಸವ­ಲಿಂಗ­ಶರಣ, ಹುಚ್ಚೀರಜ್ಜ, ಬಕ್ಕಪ್ಪಯ್ಯ, ಕೊಳ್ಳೂರ ಹುಸನಾಸಾಬ, ಆಲಭೈರಿ, ಖಾಕಿಪೀರ, ಮಹಿಪತಿ­ದಾಸ, ನಾಗಲಿಂಗಯೋಗಿ, ಚೆನ್ನೂರ ಜಲಾಲ್ ಸಾಬ,  ಕೈವಾರ ನಾರಾ­ಯ­ಣಪ್ಪ, ಗಟ್ಟಹಳ್ಳಿ ಅಂಜನಪ್ಪ, ಮುಪ್ಪಿನ ಷಡಕ್ಷರಿ, ತೆಲಗ­­ಬಾಳ ರೇವಪ್ಪ, ಕಡ್ಲಿವಾಡ ಸಿದ್ದಪ್ಪ, ಖೈನೂರ ಕೃಷ್ಣಪ್ಪ ಮುಂತಾದ ನೂರಾರು  ತತ್ವ­ಪದ­ಕಾರರ ಸಾವಿ­ರಾರು ತತ್ವಪದ­ಗಳು ತತ್ವ­ಸಾಧ­ಕರ ತವನಿಧಿ­ಯಾಗಿ ಮೌಖಿಕ ಪರಂಪರೆಯಲ್ಲಿ ಬೆಳೆದು ಬಂದಿವೆ.  ಈವರೆಗಿನ ಪರಿಚಿತ ಮತ್ತು ಅಜ್ಞಾತ ತತ್ವಪದ­ಕಾರರ ಸಮಗ್ರ ತತ್ವಪದಗಳನ್ನು ಸಂಗ್ರ­ಹಿಸಿ, ಪ್ರಕ­ಟಿಸುವುದು ಈ ಯೋಜನೆಯ ಉದ್ದೇಶ. ನಾಡಿನ ಉದ್ದಗಲಕ್ಕೂ ಚೆಲ್ಲಿ ಹೋಗಿರುವ ತತ್ವ­ಪದಗಳನ್ನು ಒಟ್ಟುಮಾಡಿ ಕೊಡುವ ಈ ಮಹ­ತ್ವದ ಯೋಜ­ನೆಗೆ ನಾಡಿನ  ವಿದ್ವಾಂಸರ, ಸಂಸ್ಥೆಗಳ, ಸಾಧಕರ, ಸಾಹಿತ್ಯ–ತತ್ವ ಪ್ರೀತಿಯ ಎಲ್ಲರ ಸಹಕಾರ  ಅತ್ಯಗತ್ಯ. ಅಜ್ಞಾತರಾಗಿಯೇ ಉಳಿದಿ­ರುವ ತತ್ವ­ಪದ­­ಕಾರರ ಮಾಹಿತಿಯನ್ನು, ತತ್ವಪದ­ಗಳನ್ನು ಗುರುತಿ­ಸುವುದು ಮುಖ್ಯ. ತತ್ವ­ಪದಗಳು ಪ್ರಮು­ಖ­ವಾಗಿ ಮೌಖಿಕ ಪರಂಪರೆ­ಯಲ್ಲಿದ್ದರೂ, ಸಾಮಾ­­ನ್ಯ­ವಾಗಿ ಸಾಧಕರು ತತ್ವ­ಪದಗಳನ್ನು ಹಸ್ತ­ಪ್ರತಿ ರೂಪದಲ್ಲಿಯೂ ಸಿದ್ಧಪಡಿ­ಸಿಟ್ಟು ಕೊಂಡಿರು­ತ್ತಾರೆ.  ಈ ಮಾಹಿತಿಗಳು ಅಮೂಲ್ಯ­. ಆಯಾ  ಪ್ರದೇ­ಶ­ಗಳಲ್ಲಿ ನಡೆಯುವ ತತ್ವ­ಜಾತ್ರೆ, ಭಜನಾ ಸಪ್ತಾಹ ಮುಂತಾದುವು ನಡೆ­ಯುವ ಸ್ಥಳಗಳ ಮಾಹಿ­ತಿಗಳೂ ಹೊಸ ಒಳ­ನೋಟ ನೀಡು­ವಂತ­ಹ­ದ್ದಾಗಿರಬಹುದು. ತತ್ವ­ಪದಗಳ ಹಾಗೂ ತತ್ವಪದ­ಕಾರರ ಬಗೆಗಿನ ಪ್ರಕಟಿತ ಪುಸ್ತಕಗಳು ಅಮೂಲ್ಯ ಆಕರಗಳು. ತತ್ವಪದ ರಚಿಸಿಲ್ಲದ ಆರೂಢ, ಅವ­ಧೂತ, ಅನು­ಭಾವಿಗಳ ಪಟ್ಟಿ, ತತ್ವ­ಪದಕಾರರ ಹೆಸರಿ­ನಲ್ಲಿ ನಡೆ­ಯುವ ಆರಾಧನೆ, ಜಾತ್ರೆಗಳ ಮಾಹಿತಿ, ತತ್ವಪದ ಪರಂಪರೆ, ತತ್ವ­ಪದಕಾರರು, ಅವಧೂತರು, ಆರೂ­ಢರ ಬಗೆಗೆ ಬಂದಿರುವ ಪುಸ್ತಕ, ಸಂಶೋ­ಧನೆ,  ಲೇಖನಗಳ ಪ್ರತಿಗಳೂ ಹೊಸ ಹೊಳಹು­ಗಳನ್ನು ನೀಡ­ಬಹುದು. ಇಂತಹ ಮಾಹಿತಿಗಳಿದ್ದಲ್ಲಿ ಅವನ್ನು ಪ್ರಧಾನ ಸಂಪಾದ­ಕರು, ಕರ್ನಾಟಕ ಸಮಗ್ರ ತತ್ವ­ಪದ ಸಂಗ್ರಹ ಯೋಜನೆ, ಕನಕದಾಸ ಅಧ್ಯಯನ ಕೇಂದ್ರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-–೫೬೦೦೦೬ ಇಲ್ಲಿಗೆ ಕಳುಹಿಸ­ಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT