ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದ ಸಾಹಿತ್ಯ ಸಂಪಾದನೆಯ ಪ್ರಸ್ತುತತೆ

Last Updated 15 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

೧೮-–೧೯ನೇ ಶತಮಾನದ ತತ್ವಪದಕಾರರ ಕಾಲ­ವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ಕತ್ತಲೆಯ ಯುಗ’ ಎಂದು ಗುರುತಿಸಲಾಯಿತು. ಇದಕ್ಕೆ ಕಾರಣ- ವಸಾಹತುಶಾಹಿ ಚರಿತ್ರೆ, ಸಾಹಿತ್ಯ  ಚರಿತ್ರೆಗಳ ಮತೀಯ ವಿಭಜಕ ಕಣ್ಣುಪಟ್ಟಿ ಹಾಗೂ ದೇಶಿ ವಿದ್ವಾಂಸರ ವೈದಿಕ-ಪರ ಮತೀಯ ದೃಷ್ಟಿ­ಕೋನ. ಪ್ರಾಚೀನ ಕಾಲದಲ್ಲಿ ಅವೈದಿಕ ಭೌತ­ವಾದಿ ದರ್ಶನಗಳನ್ನು ಅದುಮಿಡಲಾಯಿತು. ಮಧ್ಯ ಯುಗದಲ್ಲಿ ನಾಥ ಮೊದಲಾದ ಅನು­ಭಾವಿ ಪಂಥಗಳನ್ನು ರಾಕ್ಷಸೀಕರಿಸಲಾಯಿತು. ಅದರ ಮುಂದುವರಿಕೆಯಾಗಿ ತತ್ವಪದಗಳ ಕಾಲ­ವನ್ನು ಕತ್ತಲೆಗೆ ತಳ್ಳಲಾಯಿತು. ಈ ಎಲ್ಲಕ್ಕೂ ಮುಖ್ಯ ಕಾರಣ ಸ್ಥಾಪಿತ ಧರ್ಮಗಳ ವಿರುದ್ಧ ಅವು ಪ್ರಕಟಿಸಿದ ಬಂಡುಕೋರತನ. ಭಾರತದ  ಚರಿತ್ರೆ­ಯನ್ನು ಹಾಗೂ ಜನಾಂಗಗಳನ್ನು ಧರ್ಮವನ್ನಾ­ಧರಿಸಿ ವಿಭಾಗಿಸಿದ ವಸಾಹತುಶಾಹಿ ವಿದ್ವಾಂಸರೇ ಕನ್ನಡ ಸಾಹಿತ್ಯ ಚರಿತ್ರೆಯನ್ನು ಧರ್ಮಾಧಾರಿತ­ವಾ­ಗಿಯೂ ವಿಂಗಡಿಸಿದರು. ಹೀಗಾಗಿ ಧರ್ಮಾ­ತೀ­ತವೂ ಧರ್ಮವಿರೋಧಿಯೂ ಆದ ತತ್ವಪದ ಸಾಹಿತ್ಯ­ವನ್ನು ಸಂಪಾದಿಸುವ, ಸಾಹಿತ್ಯ ಪ್ರಕಾರ­ವೆಂದು ಚರ್ಚಿಸುವ ಅಗತ್ಯ ಅವರಿಗೆ ಕಂಡು­ಬರಲಿಲ್ಲ.

ಭಾರತೀಯ ಸಮಾಜದಲ್ಲಿ ಬೌದ್ಧ, ಜೈನ ಧರ್ಮಗಳು ವೈದಿಕೀಕರಣಕ್ಕೊಳಗಾಗಿ ಶಕ್ತಿ ಕಳೆದು­ಕೊಂಡಾಗ ಅವುಗಳ ಮೂಲ ಆಶಯ­ಗಳನ್ನು ಮುಂದು­ವರಿಸುತ್ತ ಭಕ್ತಿ  ಚಳವಳಿಗಳು ಉಗಮ­ವಾ­ದವು. ಬೌದ್ಧ ಧರ್ಮದ ಮಹಾ­ಯಾನ ಶಾಖೆಯ ಕವಲು ವಜ್ರಯಾನ ಹಾಗೂ ಕಾಪಾ­ಲಿಕ ಪಂಥಗಳ ಪ್ರೇರಣೆಯಿಂದ ಮಧ್ಯ­ಯುಗ­ದಲ್ಲಿ ನಾಥಪಂಥ ಹುಟ್ಟಿತು. ಅರಬ್ ವ್ಯಾಪಾರಿಗಳ ಜತೆ­ಯಲ್ಲಿಯೇ ಸೂಫಿಪಂಥದ ಒಂದು ಝರಿ ಭಾರತವನ್ನು ಪ್ರವೇಶಿಸಿತ್ತಾದರೂ ಚಿಸ್ತಿಯಾ, ಖಾದ್ರಿಯಾ, ನಕ್ಷಬಂದಿಯಾ ಹಾಗೂ ಇನ್ನಿತರ ಸಿಲ್‌ಸಿಲಾಗಳು ಮಧ್ಯಕಾಲದಲ್ಲಿ ವ್ಯಾಪಕ­ವಾಗಿ ಪ್ರಸಾರವಾದವು. ಭಾವನಾವಾದಿ ದರ್ಶನ­ಗಳು ಹಾಗೂ ಅವುಗಳನ್ನಾಧರಿಸಿ ರೂಪಿತವಾದ ಧರ್ಮಗಳ ವಿರುದ್ಧ ಬಂಡೆದ್ದ ನಾಥಪಂಥ ಹಾಗೂ ಮುಸ್ಲಿಂ ಧರ್ಮದ ಪುರೋಹಿತಶಾಹಿ ಮತ್ತು ನಿರಂಕುಶ ಪ್ರಭುತ್ವದ ವಿರುದ್ಧ ಬಂಡೆದ್ದ ಸೂಫಿ ಪಂಥಗಳ ಸಾಮರಸ್ಯ ಅನುಸಂಧಾನಗಳಿಂದ ಭಾರತ­ದಾದ್ಯಂತ ಅಸಂಖ್ಯ ಭಕ್ತಿ ಚಳವಳಿಗಳು ಹುಟ್ಟಿಕೊಂಡವು. ಬಂಗಾಳದಲ್ಲಿ ಚೈತನ್ಯ, ಮಹಾ­ರಾಷ್ಟ್ರ­ದಲ್ಲಿ ವಾರಕರಿ, ಮಹಾನುಭಾವ, ದತ್ತ ಪಂಥಗಳು, ಅಸ್ಸಾಂನಲ್ಲಿ ಶಂಕರದೇವ, ಉತ್ತರ ಭಾರತದಲ್ಲಿ ಕಬೀರ, ನಾನಕ ಪಂಥಗಳು ರೂಪ ತಾಳಿ­ದವು. ಆಳುವ ವರ್ಗ ಹಾಗೂ ಶಿಷ್ಟ ಧರ್ಮ­ಗಳ ನೈಚ್ಯಾನುಸಂಧಾನದಿಂದ ಎಲ್ಲ ಬಗೆಯ ಅಸ­ಮಾ­ನತೆ ಹಾಗೂ ಹಿಂಸೆಗೆ ತುತ್ತಾದ ಶೋಷಿತ ಕೆಳ­ವರ್ಗಗಳ ಹಾಗೂ ದುಡಿಯುವ ಸಮುದಾಯ­ಗಳ ಬದುಕಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿ­ಸಿ­ದವು. ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯ ಜಾಗೃತಿಯನ್ನು ಹುಟ್ಟಿ­ಸಿದವು. ಕನ್ನಡದ ತತ್ವಪದ ಸಾಹಿತ್ಯ ಈ ಬಗೆಯ ಆನು­ಭಾವಿಕ ನೆಲೆಯ ಹೋರಾಟ ಹಾಗೂ ಜಾಗೃತಿಯ ಮುಂದುವರಿಕೆಯಾಗಿದೆ.

ಅನುಭಾವಿ ನೆಲೆಯ ಮುಖ್ಯ ಲಕ್ಷಣ ಧಾರ್ಮಿಕ ಬಂಡಾಯ. ಧರ್ಮವೆನ್ನುವುದು ಕೇವಲ ಆಚರ­ಣೆಯ ವಿಧಾನ ಮಾತ್ರವಾಗಿರದೇ ವರ್ಗ, ಜಾತಿ ಆಧಾರಿತ  ಅಸಮಾನ ಸಮಾಜದ ಮುಂದುವ­ರಿ­ಕೆಗೆ ಮಧ್ಯವರ್ತಿಯಾದಾಗ ಅಂಥ ಸಾಂಸ್ಥಿಕ ಧರ್ಮ­­ಗಳನ್ನು ಅನುಭಾವ ಪ್ರತಿರೋಧಿಸಿತು. ಸಾಂಸ್ಥಿ­ಕತೆ, ಅರಮನೆ, ಮಠಗಳ ಹಂಗಿನಲ್ಲಿ ಅನು­ಭಾವ ಅರಳುವುದಿಲ್ಲ. ಹೀಗಾಗಿ ಸೂಫಿ, ಶರಣ, ದಾಸ, ಶಿವಯೋಗಿಗಳು ಧಾರ್ಮಿಕ ಬಂಡಾ­ಯ­ಗಾ­ರರೇ ಆಗಿದ್ದಾರೆ. ತತ್ವಪದಕಾರರು ಕೂಡ ಧಾರ್ಮಿಕ ಬಂಡಾಯಗಾರರು. ಇದರ ಎರಡ­ನೆಯ ಮುಖ್ಯ ಲಕ್ಷಣವೆಂದರೆ ಜಾತಿಗಳಿಗೆ ಅತೀತ­ವಾದ ಬದುಕಿನ ಅನ್ವೇಷಣೆ. ಇದು ಮೂಲತಃ ಗುರು­ಮಾರ್ಗವಾಗಿದ್ದು, ಗುರುಶಿಷ್ಯ ಸಂಬಂಧ­ದಲ್ಲಿ ಜಾತಿ ಧರ್ಮಗಳ ಕಟ್ಟಳೆಗಳಿರುವು­ದಿಲ್ಲ. ಗೋವಿಂದಭಟ್ಟ–-ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ-–ಚೆನ್ನೂರ ಜಲಾಲ ಸಾಹೇಬ ಹೀಗೆ  ಅನೇಕ ಜೋಡಿಗಳನ್ನು ಇಲ್ಲಿ ಗುರುತಿಸಬಹುದು. ಆನುಭಾವಿಕ ನೆಲೆಯ ಇನ್ನೊಂದು ಲಕ್ಷಣ ಯೋಗ­ಮಾರ್ಗ. ದೇಹವೇ ಎಲ್ಲ ಸಾಧನೆಗಳ ತಾಣ. ದೇಹವನ್ನು ತಾಲೀಮಿ­ಗೊಳಪಡಿಸಿ, ಮನುಷ್ಯನೇ ದೇವ­ರಾಗಬಲ್ಲ ಎಂಬ ಚಿಂತನೆಯಿದು. ಸಾವಿ­ರಾರು ವರ್ಷಗಳಿಂದ ಭಾರತ­ದಲ್ಲಿ ಶಿಷ್ಟಧರ್ಮ ಹಾಗೂ ಪ್ರಭುತ್ವದ ಧರ್ಮಗಳ ಭಾಗವಾಗಿ ಬೆಳೆದು ಬಂದ ಭಾವ­ನಾವಾದಿ ದರ್ಶನಗಳನ್ನು ಇದು ನಿರಾಕರಿಸುತ್ತದೆ. ಇಲ್ಲಿ ಯೋಗದ ಸಾಧ­ನೆಯ ತುತ್ತತುದಿಯ ಅವಸ್ಥೆ ತಲುಪಿದ ಸಾಧಕರು ತಾವೇ ಶಿವನಾಗುವ ಕಾರಣ ಬೇರೆ ದೇವರ ಕಲ್ಪನೆ ಇಲ್ಲಿ ಇಲ್ಲ. ಅನುಭಾವ ಮೂಲತಃ ನಾಸ್ತಿಕತೆ­ಯನ್ನು ಪ್ರತಿ­ಪಾ­ದಿ­ಸುತ್ತದೆ. ಯೋಗಸಾಧನೆಯ ಮೂಲಕ ಯಾರಾ­ದರೂ ದೇವರಾಗಬಲ್ಲರು. ನಾಥ ಮತ್ತು ಸೂಫಿ ಪಂಥಗಳೆರಡೂ ಇದೇ ನೆಲೆ­ಯನ್ನು ಒಳ­ಗೊಂಡಿವೆ. ಆನುಭಾವಿಕ ನೆಲೆಯ ಮತ್ತೊಂದು ಲಕ್ಷಣವೆಂದರೆ ಇದು ದುಡಿಯುವ ವರ್ಗ, ಕೆಳ­ವರ್ಗ ಮತ್ತು ಕೆಳಜಾತಿಗಳಿಗೆ ಸಂಬಂಧಿ­ಸಿದ್ದು. ಶಿಷ್ಟ­ಧರ್ಮಗಳ ಪುರೋಹಿತಶಾಹಿಯ ಮೆರ­ವಣಿಗೆಗೆ ಪ್ರತಿಕ್ರಿಯೆಯಾಗಿ ದಲಿತರು, ಕೆಳ­ವರ್ಗದವರು, ಮಹಿಳೆಯರು ಅನುಭಾವ ಚಳವಳಿ­ಯಲ್ಲಿ ಕಾಣಿಸಿ­ಕೊಂಡರು. ಹೀಗಾಗಿ ಇದು ಎಷ್ಟೋ ಬಾರಿ ಭಕ್ತಿಯ ಮುಖವಾಡವನ್ನು ನಿಗೂಢ ಆಚರಣೆ­ಗಳನ್ನು ಒಳಗೊಂಡಿತು. ಅನು­ಭಾವ, ಲಿಂಗ­ತಾರ­ತಮ್ಯ­ವನ್ನು ನಿರಾಕರಿಸುತ್ತದೆ. ಹೀಗಾಗಿ ಹಲ­ವಾರು ಮಹಿಳಾ ಅನುಭಾವಿಗಳೂ ಕಂಡು ಬರು­ತ್ತಾರೆ. ಲೈಂಗಿಕತೆಯ ಉನ್ನತೀಕರಣ ಯೋಗ­ಸಾಧನೆಯ ಒಂದು ಮಾರ್ಗವಾಗಿ ನಾಥ, ಶಾಕ್ತ ಮೊದಲಾದ ಪಂಥಗಳಲ್ಲಿ ಆಚರಣೆಗೆ ಬಂದಿತು. ಪುರುಷ ಸಾಧನೆಗೆ ಸಾಧನವಾಗ­ಬೇಕಾದ ಮುಜು­ಗರದಲ್ಲಿ ಕಾಲಾಂತರದಲ್ಲಿ ಮಹಿಳೆಯರ ಸಂಖ್ಯೆ ಇಲ್ಲಿ ಕಡಿಮೆಯಾದಂತಿದೆ.

ವಸಾಹತುಶಾಹಿ ಹಾಗೂ ಬಂಡವಾಳ­ಶಾಹಿಯ ಪ್ರವೇಶದ ಮೂಲಕ ಕೋಮುವಾದ ಕಣ್ಣು ಬಿಡುವ ಹೊತ್ತಿನಲ್ಲಿ ಸೃಷ್ಟಿಯಾದ ತತ್ವ ಪದ­ಕಾರರು ಹೊಸ ಆರ್ಥಿಕ, ರಾಜಕೀಯ ವ್ಯವಸ್ಥೆ­ಗ­ಳಿಗೆ ಕೆಳಸ್ತರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಾಧಾರಿತವಾಗಿ ಮನುಷ್ಯರನ್ನು ಒಡೆದು ಆಳುವ ನೀತಿ ಆರಂಭವಾದಂಥ ಕಾಲದಲ್ಲಿ ಇವರು ಹಿಂದೂ–-ಮುಸ್ಲಿಂ ಸಾಮರಸ್ಯವನ್ನು ಪ್ರತಿ­ಪಾದಿಸಿದ್ದಾರೆ. ತತ್ವಪದಗಳ ಸ್ವರೂಪವನ್ನು ತಿಳಿ­ಯು­­ವುದಕ್ಕಾಗಿ ಐದು ತತ್ವಪದಗಳನ್ನು ನೆನಪಿಸಿ­ಕೊಳ್ಳಬಹುದು. 

ಶರೀಫರ ‘ಹಾಕೀದಾ ಜನಿವಾರವಾ’ ಎಂಬ ತತ್ವ­ಪದ ಜಾತ್ಯತೀತ ಗುರು–ಶಿಷ್ಯ ಸಂಬಂಧದ ಮೂಲಕ    ಸಾಮರಸ್ಯವನ್ನು ಪ್ರತಿಪಾದಿಸುತ್ತದೆ.  ಶರೀಫರ ಪದದಲ್ಲಿ ಜನಿವಾರ ತೊಡಿಸಿ, ಮಂತ್ರ­ಬೋಧೆ ಮಾಡುವವ ತಂದೆಯಲ್ಲ, ಗುರು. ಗುರು– ಶಿಷ್ಯ ಸಂಬಂಧ ಜಾತಿ, ಕುಲ, ಗೋತ್ರ, ಭವ­ಗಳಿಗೆ ಅತೀತವಾದದ್ದು. ಕೈವಾರ ತಾತಯ್ಯ­ನವರ ‘ಈ ಊರೊಳಗಿಷ್ಟು ಉತ್ಪಾತವೇನೋ’ ಎಂಬ ಪದವು ಆರ್ಥಿಕತೆ-, ಭಕ್ತಿ-– ಅನುಭಾವಗಳ ಸಂಬಂಧ­ವನ್ನು ಹಿಂಸೆಯ ನೆಲೆ­ಯಲ್ಲಿ ಚರ್ಚಿಸು­ತ್ತದೆ.  ಮೋಟ್ನಳ್ಳಿ ಹಸನ್‌ಸಾಹೇಬ ‘ಅಲ್ಲಲ್ಲಾ ಇಲ್ಲಿಲ್ಲಾ ಶಿವನಿಲ್ಲಿಲ್ಲ ಶಿವನೆಲ್ಲಿಲ್ಲಾ? ನಿನ್ನ ನೀ ತಿಳಿ ನೀನೇ ಪರಬ್ರಹ್ಮನಲ್ಲಾ?’ ಎಂಬ ತತ್ವಪದದಲ್ಲಿ ಮುಖ್ಯ­ವಾಗಿ ವೈದಿಕ, ವೀರಶೈವ ಹಾಗೂ ಮುಸ್ಲಿಂ ಧರ್ಮಗಳ ಜಡ ಆಚರಣೆಗಳನ್ನು ನಿರಾಕರಿಸು­ತ್ತಾನೆ. ಇವುಗಳಿಗೆ ಪರ್ಯಾ­ಯವಾಗಿ ಹಸನ್‌­ಸಾಹೇಬ ಯೋಗ­ಮಾರ್ಗವನ್ನು ಸೂಚಿಸಿದ್ದಾನೆ.

ಕಡಕೋಳ ಮಡಿವಾಳಪ್ಪನ ‘ಶರಣಾರ್ಥಿ’ ಎಂಬ ತತ್ವಪದವು ತತ್ವಪದಕಾರರ ಧಾರ್ಮಿಕ ಸೌಹಾರ್ದ ಪರಿಕಲ್ಪನೆಯ ಸ್ವರೂಪವನ್ನು ಹಾಗೂ ಅದರ ಹಿಂದಿರುವ ತಾತ್ವಿಕ -ವಿನ್ಯಾಸಗಳನ್ನು ಖಚಿತ­ವಾಗಿ ನಿರೂಪಿಸುತ್ತದೆ.

‘ಹಲವು ನಾಮರಿಗೆ ಹಲವು ರೂಪರಿಗೆ ಹಲವು ಕ್ರೀಯರಿಗೆ ಶರಣಾರ್ಥಿ ಹಲವು ಜಾಣರಿಗೆ ಹಲವು ಮುಗ್ಧರಿಗೆ ಹಲವು ಛಲರಿಗೆ ಶರಣಾರ್ಥಿ’
ಸ್ಥಾಪಿತ ಧರ್ಮಗಳು ಜಡಗೊಂಡು ಆಂತರಿಕ­ವಾಗಿ ಪುರೋಹಿತಶಾಹಿ ಮತ್ತು ಮೌಢ್ಯಗಳನ್ನು ಬೆಳೆಸಿ ಜನಸಮುದಾಯವನ್ನು ಶೋಷಿಸುತ್ತಿದ್ದವು ಹಾಗೂ ಜಡಗೊಂಡ ಧರ್ಮಗಳು ಪರಸ್ಪರ ದ್ವೇಷದ ಕಾರಣದಿಂದ ಧಾರ್ಮಿಕ ಹಿಂಸೆಗೆ ವೇದಿಕೆ­ಯಾಗುತ್ತಿದ್ದವು. ಈ ಬಗೆಯ ಧಾರ್ಮಿಕ ಹಿಂಸೆಗೆ ಪರ್ಯಾಯವಾಗಿ ಎಲ್ಲ ಧರ್ಮ, ಜಾತಿ, ಜನ­ಸಮು­ದಾ­ಯಗಳು ಸೌಹಾ­ರ್ದದಿಂದ ಬದುಕು ರೂಪಿ­ಸಿ­­ಕೊಳ್ಳ­ಬೇ­ಕೆಂದು ಸಾಮರಸ್ಯದ ತಾತ್ವಿಕತೆ­ಯನ್ನು ಪ್ರತಿಪಾದಿಸ­ಲಾಗಿದೆ.

ಶಿವಲಿಂಗಮ್ಮ ಜತ್ತಿಯವರ ‘ಮಗಾ ಹುಟ್ಟಿತವ್ವ ಎನಗೊಬ್ಬ ಮಗಾ ಹುಟ್ಟಿತವ್ವ’ ಎಂಬ ತತ್ವಪದ ಸ್ತ್ರೀ ಕೂಡ ಅನುಭಾವದಲ್ಲಿ ಪಾಲುದಾರಳಾಗಿ ಧಾರ್ಮಿಕ ಅಸಮಾನತೆಯ ಹಿಂಸೆಯಿಂದ ಮುಕ್ತಿ ಪಡೆದ ಸುಳಿವನ್ನು ಸಂಭ್ರಮದಿಂದ ದಾಖಲಿಸು­ತ್ತದೆ. ವಚನಕಾರ್ತಿಯರಿಗೆ ಅನುಭವ ಮಂಟಪ ಸಿಕ್ಕಂಥ ಸಂಭ್ರಮವದು. ಅನುಭಾವದ ಐದು ನೆಲೆಗಳನ್ನು ಈ ತತ್ವಪದಗಳು ವಿವರಿಸುತ್ತವೆ. ಸಮಗ್ರ ತತ್ವಪದ ಸಂಪಾದನೆಯ ಚಾರಿತ್ರಿಕ ಕಾರ್ಯದ ಆರಂಭಕ್ಕೆ ಮುನ್ನ ಇನ್ನೂ ಈ ನಿಟ್ಟಿ­ನಲ್ಲಿ ಹೆಚ್ಚಿನ ಚರ್ಚೆ ನಡೆಯಲಿ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT