ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖಾ ವಿವರ ಸಲ್ಲಿಕೆಗೆ ಕೋರ್ಟ್ ಆದೇಶ

ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ವಿರುದ್ಧದ ಅಪರಾಧ
Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ಅಲಹಾಬಾದ್ (ಪಿಟಿಐ):  ಉತ್ತರಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿರುವ ಅಲಹಾಬಾದ್‌ ಹೈಕೋರ್ಟ್, ಬದಾಯೂಂ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಕಳೆದ ಆರು ವಾರಗಳಲ್ಲಿ ದಾಖಲಾಗಿರುವ ಇಂತಹ ಪ್ರಕರಣಗಳ ತನಿಖೆಯ ವಿವರಗಳನ್ನು ಒದಗಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿದೆ.

ಅತ್ಯಾಚಾರ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದೂ ಆದೇಶಿಸಲಾಗಿದೆ. ಸ್ತ್ರೀ ಮುಕ್ತಿ ಸಂಘಟನೆಯು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತರುಣ್‌ ಅಗರವಾಲ್ ಮತ್ತು ರಾಮ್‌ ಸೂರತ್‌ ರಾಮ್ ಮೌರ್ಯ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಎಲ್ಲಾ ಅತ್ಯಾಚಾರ ಪ್ರಕರಣಗಳ ವಿಚಾರಣೆಯ ಉಸ್ತುವಾರಿಯನ್ನು ಈ ನ್ಯಾಯಾಲಯವು ನೋಡಿಕೊಳ್ಳಲಿದೆ ಎಂದು ತಿಳಿಸಿದೆ.

ಸಿಬಿಐ ತನಿಖೆಗೆ ಅಧಿಸೂಚನೆ: ಉತ್ತರಪ್ರದೇಶದ ಬದಾಯೂಂ ಬಳಿ ಇಬ್ಬರು ಸೋದರಿ ಸಂಬಂಧಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಬಿಐ ತನಿಖೆಗಾಗಿ ಕೇಂದ್ರ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.

ಮಹಿಳೆ ಸಾವು: ಅತ್ಯಾಚಾರ, ಕೊಲೆ ಶಂಕೆ
ಬರೈಚ್‌: ಬದಾಯೂಂ ಸಾಮೂಹಿಕ ಅತ್ಯಾ­ಚಾರ, ಕೊಲೆ ಘಟನೆಯ ನೆನಪು ಮಾಸುವ ಮುನ್ನವೇ ರಾಣಿಪುರದಲ್ಲಿ 45 ವರ್ಷದ ಮಹಿಳೆಯೊಬ್ಬಳ ಮೃತ­ದೇಹ ಸೀಬೆ­ಹಣ್ಣಿನ ತೋಟದಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿ­ಯಲ್ಲಿ ಬುಧವಾರ ಪತ್ತೆಯಾಗಿದೆ.

ಲೊನಿಯಾನ್ಪುರ್‌ ಗ್ರಾಮದ  ಮಹಿಳೆ­ಯನ್ನು ಅಪ­ಹರಿಸಿ ಸಾಮೂಹಿಕ ಅತ್ಯಾ­ಚಾರ ನಡೆಸಿ ನಂತರ ನೇಣು ಹಾಕಲಾ­ಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

‘ಅರೆನಗ್ನಾವಸ್ಥೆಯಲ್ಲಿ ಮಹಿಳೆಯ ಮೃತದೇಹ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’ ಎಂದು ಹೆಚ್ಚು­­ವರಿ ಪೊಲೀಸ್‌ ವರಿಷ್ಠಾಧಿಕಾರಿ ಸುನಿಲ್‌ ಕುಮಾರ್‌ ಹೇಳಿದ್ದಾರೆ.

‘ಚಿಕಿತ್ಸೆಗೆಂದು ಮಹಿಳೆ ಲಖನೌಗೆ ಹೋಗು­ತ್ತಿದ್ದಾಗ ಮೊಬೈಲ್‌ಗೆ ಕರೆ ಮಾಡಿದ ಈಕೆಯ ಮಗ ‘ನೀನು ಅಜ್ಜಿ­ಯಾ­ಗುತ್ತಿ­ದ್ದೀಯಾ ಬೇಗನೆ ಮನೆಗೆ ಹಿಂತಿ­ರುಗು’ ಎಂದು ಹೇಳಿದ್ದಾನೆ. ಆದರೆ ಮಹಿಳೆ ಮನೆಗೆ ವಾಪಸ್ಸಾ­ಗಿರಲಿಲ್ಲ.  ಬಳಿಕ ಹುಡುಕಾಟ ನಡೆಸಿದಾಗ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಯಿತು’ ಎಂದು ಅವರು ತಿಳಿಸಿದ್ದಾರೆ.

ಈ ಕೃತ್ಯ ಎಸಗಿರುವ ಕುರಿತು ಐವರು ಶಂಕಿತರ ಬಗ್ಗೆ ಮಹಿಳೆಯ ಕುಟುಂಬ­ದವರು ದೂರು ನೀಡಿದ್ದಾರೆ ಎಂದು ಎಎಸ್‌ಪಿ ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡಲು ಮಹಿಳೆ ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಮಹಿಳೆಗೆ ಸಾರಾಯಿ ಮಾಫಿಯಾದಿಂದ ಬೆದರಿಕೆ ಇತ್ತು. ಈ ಕೃತ್ಯದಲ್ಲಿ ಅವರ ಕೈವಾಡ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT