ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೇಕೆ ಅಸಹಕಾರ?

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ನಮ್ಮ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಎಬ್ಬಿಸಿದ ದೂಳು ಅಷ್ಟಿಷ್ಟಲ್ಲ. ಹಿಂದೆ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಈ ಅಕ್ರಮ ಗಣಿಗಾರಿಕೆಯ ಮೇಲೆ ಬೆಳಕು ಚೆಲ್ಲಿದ್ದರು. ಸುದೀರ್ಘ ವರದಿಯನ್ನೇ ಸಲ್ಲಿಸಿದ್ದರು. ಈ ವರದಿಯ ಕೆಲ ಭಾಗಗಳ ತನಿಖೆ­ಯನ್ನು ಸಿಬಿಐ ನಡೆಸುತ್ತಿದೆ.

ಆದರೆ 22ಕ್ಕೂ ಹೆಚ್ಚು ಅಧ್ಯಾಯಗಳಲ್ಲಿ ಹೆಸರಿಸ­ಲಾದ ಹಗರಣಗಳನ್ನು ರಾಜ್ಯ ಸರ್ಕಾರವೇ ಖುದ್ದು ಆಸಕ್ತಿ ವಹಿಸಿ ವಿಶೇಷ  ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಒಪ್ಪಿಸಿದೆ. ಅಂದರೆ ವರದಿಯಲ್ಲಿನ  ಶೇ 80ಕ್ಕೂ ಹೆಚ್ಚು ಭಾಗದ ತನಿಖೆಯ ಜವಾಬ್ದಾರಿ ಎಸ್‌ಐಟಿ ಮೇಲಿದೆ. ಇಷ್ಟೊಂದು ಮಹತ್ವದ ಕಾರ್ಯವನ್ನು ವಹಿಸಿದ ಮೇಲೆ ಅದಕ್ಕೆ ಸೂಕ್ತ ಸೌಕರ್ಯ­ಗಳನ್ನು ಒದಗಿಸುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ. ಆದರೆ ವಾಸ್ತವದಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಮತ್ತು ಒಂದು ಕಟ್ಟಡ ಬಿಟ್ಟು ಇನ್ನೇನೂ ಸೌಕರ್ಯ ಕಲ್ಪಿಸಿಲ್ಲ ಎಂಬುದು ಈಗ ಬೆಳಕಿಗೆ ಬಂದಿದೆ.

ತನಿ­ಖೆಗೆ ಅತ್ಯಂತ ಅವಶ್ಯವಿರುವ ₨ 2.5 ಕೋಟಿ ಮೌಲ್ಯದ ‘3 ಡಿ ಸರ್ವೆ ಯಂತ್ರ’ ಆಮದು ಮಾಡಿಕೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ಅಡ್ಡ­ಗಾಲು ಹಾಕಲಾಗಿದೆ. ಹೀಗಾಗಿ ತನಿಖೆ ಮುಂದುವರಿಸಲು ಕಷ್ಟವಾಗು­ತ್ತಿದೆ ಎಂಬುದು ಲೋಕಾಯುಕ್ತ ಪೊಲೀಸರ ಅಳಲು. ಎಸ್‌ಐಟಿಗೆ ಅನು­ದಾನ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೂಲಕ ತಮ್ಮ ಬಳಿ ಬರುತ್ತವೆ. ಅವರು ಒಪ್ಪಿದ ಪ್ರಸ್ತಾ­ವ­ಗಳನ್ನು ತಾವು ತಡೆ ಹಿಡಿದಿಲ್ಲ ಎಂದು ಮುಖ್ಯ ಕಾರ್ಯದರ್ಶಿಗಳು ಹೇಳಿ­ದ್ದಾರೆ. ಹಾಗಿದ್ದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಏಕೆ ಕೊಕ್ಕೆ ಹಾಕಲಾಗುತ್ತಿದೆ?

ನಮ್ಮ ರಾಜ್ಯ ಮಾತ್ರವಲ್ಲದೆ ಆಂಧ್ರದಲ್ಲೂ ಗಣಿ ಅಕ್ರಮ ತನಿಖೆಗೆ ಸಿಬಿಐ ಈ ಸಾಧನವನ್ನು ಪರಿಣಾಮಕಾರಿಯಾಗಿ ಬಳಸಿ­ಕೊಂಡಿದೆ. ಅದೇ  ಅನುಕೂಲತೆಯನ್ನು ಎಸ್‌ಐಟಿಗೆ ಒದಗಿಸಲು ಹಿಂದೇಟು ಹಾಕು­ತ್ತಿ­ರುವುದೇಕೆ? ಸಿದ್ದರಾಮಯ್ಯನವರು ಹಿಂದೆ ವಿರೋಧ ಪಕ್ಷದ ನಾಯಕ­­ರಾಗಿದ್ದಾಗ ಗಣಿ ಅಕ್ರಮದ ವಿರುದ್ಧ ದನಿ ಎತ್ತಿದ್ದರು. ಪಾದ­ಯಾತ್ರೆ­ಯನ್ನೂ ನಡೆಸಿದ್ದರು. ಈಗ ಅವರ ಕೈಯಲ್ಲೇ ಅಧಿಕಾರ ಇದೆ. ಅವರಾದರೂ ಈ ಬಗ್ಗೆ ಗಮನ ಹರಿಸಬೇಕಾಗಿತ್ತು. ಕೇವಲ ಅಧಿಕಾರಿಗಳ ಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳಲು ಬಿಟ್ಟರೆ ತನಿಖೆಯ ದಾರಿಯಲ್ಲಿ ಇಂಥ ಹತ್ತಾರು ಅಡ­ಚಣೆ­ಗಳು ಎದುರಾಗಬಹುದು.

ಸಿದ್ದರಾಮಯ್ಯನವರ ಸರ್ಕಾರವೇ ಕಳೆದ ಸೆಪ್ಟೆಂಬರ್‌ನಲ್ಲಿ ಎಸ್‌ಐಟಿ­ಯನ್ನು ಅಸ್ತಿತ್ವಕ್ಕೆ ತಂದಿತ್ತು. 2 ವರ್ಷದ ಅವಧಿ ನಿಗದಿ ಮಾಡಿತ್ತು. ಅದರಲ್ಲಿ ಈಗಾ­ಗಲೇ 9 ತಿಂಗಳು ವ್ಯರ್ಥವಾಗಿವೆ. ಇನ್ನುಳಿದ ಅವಧಿಯಲ್ಲಿ ಅದು ಕನಿಷ್ಠ 50 ಎಫ್‌ಐಆರ್‌ಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಬೇಕಾಗಿದೆ. ಆ ತನಿಖೆ­ಗಳಿಗೆ ಸಹಕರಿಸುವುದು ಸರ್ಕಾರದ ಧರ್ಮ. ಆದರೆ ಎಸ್‌ಐಟಿಗೆ ಬಲ ತುಂಬಲು ಹಿಂದೇಟು ಹಾಕುವುದನ್ನು ನೋಡಿದರೆ ಅಧಿಕಾರದಲ್ಲಿ ಇರುವ­ವರು ಆ ಧರ್ಮವನ್ನು ಪಾಲಿಸುತ್ತಿಲ್ಲವೇನೋ ಎಂಬ ಅನುಮಾನ ಮೂಡು­ತ್ತದೆ. ಇವರ್‍ಯಾರಿಗೂ ತನಿಖೆಯೇ ಬೇಕಿಲ್ಲವೇನೋ? ಹೀಗಾದರೆ ಗಣಿ ಹಗ­ರಣ ನಡೆಸಿದವರಿಗೆ ಶಿಕ್ಷೆಯಾಗುವುದಾದರೂ ಹೇಗೆ? ಅಧಿಕಾರದ ಸೂತ್ರ ಹಿಡಿ­ದ­ವ­ರಿಂದ ಜನ ಇಂಥ ನಡವಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಆದರೆ, ಇನ್ನೂ ಕಾಲ ಮಿಂಚಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT