ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆ ತೀವ್ರಗೊಳಿಸಿದ ಸಿಐಡಿ

ಕಲಬುರ್ಗಿ ಹತ್ಯೆ ಪ್ರಕರಣ: ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ತಂಡ, ಅವರ ಮನೆಯ ಹತ್ತಿರ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿದೆ.

ಕಲಬುರ್ಗಿ ಅವರ ಮನೆಗೆ ಹೋಗುವ ದಾರಿಯಲ್ಲಿರುವ ಹಿರೇಮಲ್ಲೂರು ಈಶ್ವರನ್‌ ವಿಜ್ಞಾನ ಕಾಲೇಜು ಆವರಣದಲ್ಲಿ ರಸ್ತೆ ಕಡೆಗೆ ಅಳವಡಿಸಲಾದ ಕ್ಯಾಮೆರಾದಲ್ಲಿ ಶಂಕಾಸ್ಪದ ವ್ಯಕ್ತಿಗಳು ಬೈಕ್‌ನಲ್ಲಿ ಹೋದ ದೃಶ್ಯಾವಳಿ ಸೆರೆಯಾಗಿದೆ.

ಆದರೆ, ಕ್ಯಾಮೆರಾ ಅಳವಡಿಸಲಾದ ಸ್ಥಳದಿಂದ ಸುಮಾರು 40 ಮೀಟರ್‌ ದೂರದಲ್ಲಿ ಬೈಕ್‌ ಹಾದು ಹೋಗಿರುವುದರಿಂದ ಸವಾರರ ಮುಖಗಳು ಸ್ಪಷ್ಟವಾಗಿ ಗೋಚರಿಸಿಲ್ಲ. ಆಧುನಿಕ ತಂತ್ರಜ್ಞಾನದಿಂದ ಆ ದೃಶ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾದರೆ ಆರೋಪಿಗಳ ಪತ್ತೆ ಸುಲಭವಾಗಲಿದೆ. ಈ ನಿಟ್ಟಿನಲ್ಲಿ ಸಿಐಡಿಯ ತಾಂತ್ರಿಕ ವಿಭಾಗ ಕೆಲಸ ಆರಂಭಿಸಿದೆ. ಕ್ಯಾಮೆರಾದ ಡಿವಿಆರ್‌ನಲ್ಲಿ ದಾಖಲಾದ ದೃಶ್ಯಗಳ ಪ್ರಕಾರ ಬೈಕ್‌ ಓಡಿಸುತ್ತಿರುವ ವ್ಯಕ್ತಿ ಯಾವುದೇ ಮುಸುಕು ಅಥವಾ ಹೆಲ್ಮೆಟ್‌ ಧರಿಸಿಲ್ಲ. ಆದರೆ, ಹಿಂದೆ ಕುಳಿತಿರುವ ವ್ಯಕ್ತಿ ಹೆಲ್ಮೆಟ್‌ ಹಾಕಿದ್ದು, ಆತನೇ ಕಲಬುರ್ಗಿ ಅವರನ್ನು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಬೆಂಗಳೂರಿನಿಂದ ಬಂದಿದ್ದ ಬಾಂಬ್‌ ನಿಷ್ಕ್ರಿಯ ದಳದವರು ಗುರುವಾರ ಮಧ್ಯಾಹ್ನ ಇಲ್ಲಿಯ ಕಲ್ಯಾಣ ನಗರದ 9ನೇ ಅಡ್ಡ ರಸ್ತೆಯಲ್ಲಿರುವ ಕಲಬುರ್ಗಿ ಅವರ ನಿವಾಸದ ಸುತ್ತಮುತ್ತ ಪರಿಶೀಲನೆ ನಡೆಸಿದರು. ಏತನ್ಮಧ್ಯೆ ಗುರುವಾರವೂ ಸಿಐಡಿ ಎಸ್ಪಿ ಡಾ.ಡಿ.ಸಿ. ರಾಜಪ್ಪ ಅವರು ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಒಟ್ಟು 12 ತನಿಖಾ ತಂಡಗಳನ್ನು ರಚಿಸಲಾಗಿದ್ದು, ಸಂಶಯ ಬಂದ ವ್ಯಕ್ತಿಗಳನ್ನು ಸಿಐಡಿ ತಂಡ ವಿಚಾರಣೆ ನಡೆಸುತ್ತಿದೆ.

ಫೊರೆನ್ಸಿಕ್‌ ಸಾಕ್ಷಿಗಳು ನಾಶ?  ಗುಂಡೇಟು ಬಿದ್ದು ಕಲಬುರ್ಗಿ ಅವರು ರಕ್ತದ ಮಡುವಿನಲ್ಲಿ ಬಿದ್ದ ಕೂಡಲೇ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರು. ಆರೋಪಿಗಳ ಪತ್ತೆಗೆ ನೆರವಾಗಬಹುದಿದ್ದ ಹಲವು ಸಾಕ್ಷ್ಯಗಳು ಈ ಸಂದರ್ಭದಲ್ಲಿ ನಾಶವಾಗಿರಬಹುದು ಎಂದು ಫೊರೆನ್ಸಿಕ್ ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಕಲಬುರ್ಗಿ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದ ವ್ಯಕ್ತಿ ಜತೆಗೆ ಈ ಅಂಶ ಹಂಚಿಕೊಂಡಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು, ‘ಕಲಬುರ್ಗಿ ಅವರಿಗೆ ಅತಿ ಹತ್ತಿರದಿಂದ ಗುಂಡು ಹೊಡೆದಿರುವ ವ್ಯಕ್ತಿಯ ಉಸಿರು ಗುಂಡಿನೊಂದಿಗೆ ಸೇರಿಕೊಂಡಿರುವ ಸಾಧ್ಯತೆ ಇರುತ್ತದೆ. ದೇಹವನ್ನು ಫೊರೆನ್ಸಿಕ್‌ ತಜ್ಞರು ಬರುವವರೆಗೂ ಅಲ್ಲಿಯೇ ಬಿಟ್ಟಿದ್ದರೆ, ಒಂದಷ್ಟು ಪುರಾವೆಗಳು ದೊರೆಯುವ ಸಂಭವವಿತ್ತು’ ಎಂದಿದ್ದಾರೆ.

ಸಿ.ಎಂ. ಖುದ್ದು ಪರಿಶೀಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಯ ಪ್ರಗತಿಯನ್ನು ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಅವರಿಂದ ಸ್ವತಃ ಪಡೆದುಕೊಳ್ಳುತ್ತಿದ್ದಾರೆ. ಘಟನೆ ನಡೆದ ದಿನದಿಂದಲೇ (ಆ.30) ತನಿಖೆಯನ್ನು ಚುರುಕಾಗಿ ನಡೆಸಿ ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಅವರು, ಪ್ರತಿ ದಿನವೂ ಪೊಲೀಸ್‌ ಮಹಾನಿರ್ದೇಶಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
*
ಸಲಹೆ ನಿರಾಕರಿಸಿದ್ದ ಕಲಬುರ್ಗಿ!
‘ದೇವರ ಅಸ್ತಿತ್ವವನ್ನು ಪ್ರಶ್ನಿಸಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದ ಕಲಬುರ್ಗಿ ಅವರಿಗೆ ಅಂದಿನಿಂದಲೇ ಬೆದರಿಕೆ ಪತ್ರ ಹಾಗೂ ಕರೆಗಳು ಬಂದಿದ್ದವು. ಅಂತಹ ಎಷ್ಟೋ ಪತ್ರಗಳನ್ನು ಕಲಬುರ್ಗಿ ಅವರು ನಿರ್ಲಕ್ಷಿಸಿದ್ದರು. ಮನೆಯವರೊಂದಿಗೆ ಆ ಬಗ್ಗೆ ಯಾವುದೇ ವಿಚಾರಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಅವರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಕೆಲ ದಿನಗಳ ಬಳಿಕ ದುಷ್ಕರ್ಮಿಗಳು ರಾತ್ರಿ ವೇಳೆ ಅವರ ಮನೆಯ ಮೇಲೆ ಕಲ್ಲೆಸೆದು ಗಾಜುಗಳನ್ನು ಒಡೆದಿದ್ದರು’ ಎಂದು ಕಲಬುರ್ಗಿ ಅವರ ನಿಕಟವರ್ತಿ ಹಿರೇಮಲ್ಲೂರು ಈಶ್ವರನ್‌ ಕಾಲೇಜಿನ ಪ್ರಾಚಾರ್ಯ ಡಾ.ಶಶಿಧರ ತೋಡಕರ ನೆನಪಿಸಿಕೊಂಡರು. ‘ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಕಲಬುರ್ಗಿ ಅವರಿಗೆ ನಾನು ಸಲಹೆನೀಡಿದ್ದೆ. ನನ್ನನ್ನು ಯಾರೂ ಏನೂ ಮಾಡೂದಿಲ್ಲ. ಹೆಚ್ಚೆಂದರೆ ನನ್ನ ಮೇಲೆ ಹಲ್ಲೆ ಮಾಡಬಹುದು. ಇಂಥದಕ್ಕೆಲ್ಲ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT