ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನುತುಂಬಿ ಮನದುಂಬಿ...

ಕಥೆ
Last Updated 14 ಮೇ 2016, 19:37 IST
ಅಕ್ಷರ ಗಾತ್ರ

ಮೇಡಂ ಏನು ಬೇಕ್ರಿ? ಕಿರಾಣಿ ಅಂಗಡಿ ಹುಡುಗ ಅಷ್ಟೊತ್ತಿನಿಂದ ನೋಡಿ ನೋಡಿ ತಾನೇ ಮುಂದಾಗಿ ಕೇಳಿದಾಗ ಅವಳು ಬದುಕಿನ ವರ್ತಮಾನದ ವರ್ತುಲದಲ್ಲಿ ಕಾಲಿಡಲು ಇನ್ನೂ ಹಲವು ಹೆಜ್ಜೆ ಸಾಗಬೇಕಿತ್ತು. ಹೌದು, ತನಗೇನು ಬೇಕು? ಬೇಕಾಗಿದ್ದೆಲ್ಲವೂ ಸಿಕ್ಕಿದೆ; ಎಂದೇ ಜಗತ್ತು ಭಾವಿಸಿದೆ.

ಅದನ್ನೆಲ್ಲ ಆಲೋಚಿಸುವ ಮೊದಲೇ ಜೀವನವೇ ತಾ ಮುಂದಾಗಿ ಭವಿಷ್ಯವನ್ನು ಕಟ್ಟಿಕೊಂಡುಬಿಟ್ಟಿತ್ತು. ಎಲ್ಲವೂ ಸಹಜ ರೀತಿಯಲ್ಲಿ ನಡೆದುಹೋಗಿಬಿಟ್ಟಿತ್ತು. ಹಿಂತಿರುಗಿ ನೋಡಬೇಕೆನ್ನುವುದರಲ್ಲಿ ಕಾಲಮೀರಿಹೋಗಿತ್ತು. ಕಣ್ತೆರೆದು ನೋಡುವ ಮೊದಲು ವಾಸ್ತವಿಕತೆ ಸುತ್ತಲೂ ಹುತ್ತಕಟ್ಟಿಬಿಟ್ಟಿತ್ತು. ಕಾವಳ ಕಬಂಧಬಾಹುವಾಗಿ ಅವತಾರವೆತ್ತಿಬಿಟ್ಟಿತ್ತು.
***
ಓಣಿಯ ಹಿರಿಯರು ಸರಿಯಾದ ಸಮಯಕ್ಕೆ ಬಂದು ಉದ್ಧಾರ ಮಾಡಿದ ಧನ್ಯತೆಯನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಿದ್ದರು. ತೆರೆದ ಕೈಯನ್ನು ತೋರಿಸುತ್ತ ತಿಳಿಹೇಳಿದ್ದರು. ‘ಇದು ನಿಂಗ ಅನಿವಾರ್ಯ’ ಎಂದಿದ್ದರು. ಹಿರಿಯರಾಗುವ ಮೊದಲೇ ಹಿರಿಯರೆನಿಸಿಕೊಂಡು ಬಿಸುಪನ್ನು ತಣಿಸಿ ತಂಪೆರೆಯಲು ಬಂದಿದ್ದರು. ಕಾಯ್ದ ಕಬ್ಬಿಣವನ್ನು ಇಚ್ಛಾನುಸಾರ ಮಣಿಸುವಂತೆ ತಣ್ಣಗಿನ ಕಬ್ಬಿಣಕ್ಕೆ ಕಡಚಲಾದರು.

‘ರೀತಿ ರಿವಾಜು ಅಂತ ಇರ್ತಾವು, ಸಂಪ್ರದಾಯ ಬಿಟ್ಟು ಹೋಗಾಕ ಬರಂಗಿಲ್ಲ. ಕಣ್ಣ ಮುಂದಿನ ಬಾಳೇವು ಜೊತಿಗೆ  ಬೆನ್ನ ಹಿಂದಿಂದೂ ಕಬರು ಇರ್ಬೇಕು’– ಮನೆ ಹೊರಗಿನಿಂದಲ್ಲ, ಒಳಗಿನಿಂದಲೇ ಧ್ವನಿ ತೂರಿ ಬಂದಿತ್ತು.

ಆ ಧ್ವನಿಯಲ್ಲಿದ್ದುದು ಅನಿವಾರ್ಯತೆಯೋ ಅಸಹಾಯಕತೆಯೋ ಎಂದು ತಿಳಿಯಲು ಬುದ್ಧಿ ಬಲಿತಿರಲಿಲ್ಲ. ಯಾರ ಅನಿವಾರ್ಯತೆ ತನ್ನ ಅನಿವಾರ್ಯತೆಯಾಯಿತೊ? ಮನೆತನಕ್ಕೆ ಏರಿಬಂದ ಕಾರ್ಮೋಡವೊಂದು ಹಿರಿಯರು ತೋರಿಸಿದ ಬಯಲಲ್ಲಿ  ಮಳೆಯಾಗಿ ಸುರಿದು ನಿಚ್ಚಳವಾಯಿತು.

ಇವರ ಕಷ್ಟವನ್ನು ಅವರು ಪರಿಹರಿಸಿದರು; ಅವರ ಇಷ್ಟವನ್ನು ಇವರು ಪೂರೈಸಿದರು. ಗದ್ದಲ–ಗೌಜಿನ ಮಾತೆಲ್ಲಿ? ಅವಳಿಗಂತೂ ಎಲ್ಲವೂ ಸಹಜವಾಗಿಯೇ ಕಂಡಿತ್ತು. ‘ಮೇಡಂ ಏನು ಬೇಕಂತ ನೀವು ಹೇಳಲೇ ಇಲ್ಲ’.
‘ಅತ್ಯಾಚಾರ ತಡಿಬೇಕಂದ್ರ ವೇಶ್ಯಾವಾಟಿಕೆ ಸಕ್ರಮಗೊಳಿಸ್ಬೇಕು’.

***
‘ನೀವು ಹೆಸರಿಗೆ ತಕ್ಕಂಗ ಅದೀರಿ’.
‘ಯಾವಾಗಲೂ ಫ್ರೆಶ್ ಕಾಣ್ತೀರಲ್ಲ?’
‘ನಿಮ್ನ ನೋಡಿದ್ರ ನೋಡಕೋತನ ಇರಬೇಕನಸ್ತತಿ’.
‘ಈ ಫಿಗರ್ ಹೆಂಗ ಮೆಂಟೇನ್ ಮಾಡೀರಿ?’

ಲಾವಣ್ಯಳಿಗೆ ಇವೆಲ್ಲ ಯಾವಾಗಲೂ ಕೇಳುತ್ತ ಬಂದ ಪ್ರಶ್ನೆಗಳೇ. ಮೊದಮೊದಲು ಇಂಥ ಮಾತನ್ನು ಕೇಳಿದಾಗ ಎದೆಯ ಸೀಳಿನಲ್ಲಿ ಗಾಳಿ ನುಗ್ಗಿ ಸಿಳ್ಳೆ ಹೊಡೆದ ಅನುಭವವಾಗುತ್ತಿತ್ತು. ಈಗೀಗ ಇವೆಲ್ಲ ಜಂಗು ಹಿಡಿದ ಡೈಲಾಗಿನಂತೆ ಕರಕರ ಸಪ್ಪಳ ಮಾಡುತ್ತವೆ.

ಸತ್ಯವನ್ನೇ ಹೇಳಿದರೂ ಸುಳ್ಳಿನಂತೆಯೇ ಕೇಳುತ್ತದೆ. ಮಾತುಗಳನ್ನೆಲ್ಲಾ ಹಿಡಿದಿಟ್ಟಿದ್ದರೆ ಅವಳ ಹೊಟ್ಟೆ ಯಾವಾಗಲೂ ತುಂಬಿರಬೇಕಿತ್ತು. ಮುತ್ತುರತ್ನಗಳ ರಾಶಿಯಲ್ಲಿ ಅವಳು ಹೂತುಹೋಗಬೇಕಿತ್ತು. ಇತ್ತೀಚಿಗೆ ಮತ್ತೊಂದು ಪರಾಕುಶ್ಲೋಕ ಪಾಳಿಯಲ್ಲಿ ಬಂದು ನಿಂತಿದೆ. ‘ನಿಮಗ ಒಬ್ಬಕಿ ವಯಸ್ಸಿಗೆ ಬಂದ ಮಗಳು ಅದಾಳಂತ ಹೇಳಾಕ ಆಗಲ್ಲ ನೋಡ್ರಿ’.

‘ಭಾಳ ಬೋಂಗಾ ಬಿಡಬ್ಯಾಡ್ರಿ, ಕೆಲಸಾ ಮುಗಿಸ್ಕೊಂಡು ಹೋಗ್ರಿ’ ಅಂತ ಹೇಳಬೇಕೆನಿಸುತ್ತದೆ. ಆದರೇನು ಮಾಡುವುದು? ವೃತ್ತಿಧರ್ಮ ಕಾಯ್ದುಕೊಳ್ಳಬೇಕಲ್ಲ. ನಗುಮುಖದ ಸೇವೆ ಒದಗಿಸುವುದೇ ಸೌಜನ್ಯ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕಲ್ಲವೇ? ಬರಬರುತ್ತ ಎಲ್ಲವೂ ಅನಿವಾರ್ಯವಾಗುವುದು ಲಾವಣ್ಯಳ ಬದುಕಿನ ಭಾಗವೇ ಆಗಿಹೋಗಿದೆ.

ಕಾಲಸರಿದಂತೆ ಮನುಷ್ಯನ ಬಣ್ಣಿಸುವ ಭಾಷೆಯೂ ಬಣ್ಣಗಟ್ಟುತ್ತಿದೆ. ಐಟಿ–ಬಿಟಿ ಮಂದಿಯಂತೂ ಕೀಬೋರ್ಡಿನ ಮೇಲೆ ಬೆರಳಾಡಿಸಿದಂತೆಯೇ ಮಾತನಾಡುತ್ತಾರೆ. ಮೊನ್ನೆ ಒಬ್ಬ ಕಂಪ್ಯೂಟರ್ ಇಂಜನಿಯರ್ ಲ್ಯಾಪ್‌ಟಾಪ್ ಬ್ಯಾಗನ್ನು ಸವರುತ್ತ ಚಿಗರುವ ಮಾತಿನಲ್ಲಿ ಹೇಳಿದ್ದ. ‘ನಿಮ್ಮ ಜೊತೀಗ ಸೆಲ್ಫೀ ತಕ್ಕೊಂಡು ವ್ಯಾಟ್ಸಪ್‌ನ್ಯಾಗ ಹಾಕಿಬಿಡಬೇಕು ಅನಿಸ್ತತಿ, ಆದರ ಏನು ಮಾಡೋದ್ರಿ ಮೇಡಮ್. ಡೈವೋರ್ಸ ಸಿಕ್ಕು ಇನ್ನೂ ಒಂದು ವಾರಾ ಆಗಿಲ್ಲ.

ನೋಡಿದವ್ರು ಏನು ಅನ್ಕೋತಾರ?’– ಹೀಗೆ ಏನೇನನ್ನೊ ಬಡಬಡಿಸುತ್ತಾರೆ. ತಿರುಗಿ ಹೋಗುವಾಗ ಬೆಚ್ಚಗಾದ ಕಿವಿಯನ್ನು ಎರಡೂ ಕೈಯಿಂದ ಹಿಡಿದುಕೊಂಡು ತಲೆಕೆಳಗೆ ಹಾಕಿ ಸರಿದುಬಿಡುತ್ತಾರೆ.

ಅದುವರೆಗೂ ಸುಪ್ತವಾಗಿದ್ದ ಪ್ರಜ್ಞೆಯೊಂದು ಧುತ್ತೆಂದು ಹೆಡೆಬಿಚ್ಚಿ ಇವರ ಪುಂಗಿಯನ್ನೇ ಮೇಲೆ ಕೆಳಗೆ ಓಲಾಡಿಸುತ್ತದೆ. ಬರುವವರದು ಒಂದು ರೀತಿಯ ಅವಸರವಾದರೆ, ಹೋಗುವವರದು ಮತ್ತೊಂದು ರೀತಿಯ ಅವಸರ. ಅವರ ಅವಸರವನ್ನೂ ಇವರ ಪೆಚ್ಚುತನವನ್ನೂ ಇವಳೇ ಕಾಯ್ದುಕೊಳ್ಳಬೇಕು. ಅಷ್ಟು ಹುರುಪಿನಿಂದ ವಟಗುಟ್ಟಿದ ಕಂಪ್ಯೂಟರ್ ತಜ್ಞನ ಮಾತಿಗೆ ಏನಾದರೊಂದು ಪ್ರತಿಕ್ರಿಯಿಸಬೇಕೆಂಬ ಅನಿವಾರ್ಯತೆಯಿಂದ ಲಾವಣ್ಯ ಕೇಳಿದಳು.

‘ಮದುವೆಯಾಗಿ ಮಕ್ಕಳಿಲ್ಲ ಮರಿಯಿಲ್ಲ, ಆಗಲೇ ಡೈವೋರ್ಸ್ ತಗೊಂಡಿಯಲ್ಲ. ಅಂತಾ ಅವಸರ ಏನಿತ್ತು?’. ‘ಮೇಡಂ ಅವಸರ ನಂದಲ್ರೀ.... ನನ್ನ ಹೆಣ್ತೀದಿತ್ತು, ನೌಕರಿ ಮಾಡ್ಕೊಂಡು ಸಂಸಾರ ನಡಸಾಕ ಆಗಂಗಿಲ್ಲ ಅಂದ್ಲು.

ಅದಕ್ಕ ಲಗೂನ ಖುಲ್ಲಾ ಆಗ್ಬಿಟ್ವಿ’. ಭಾವನೆಗಳಿಗೂ ತನಗೂ ಏನೂ ಸಂಬಂಧ ಇಲ್ಲವೆನ್ನುವಂತೆ ಹೇಳಿದ. ‘ಶುದ್ಧಾತು ಬಿಡು, ಜೀವನಾಂದ್ರ ಏನಂತ ತಿಳಿಕೊಂಡಿರೊ ಪುಣ್ಯಾತ್ಮಾರ?’ ಎಂದು ಒಳಗೊಳಗೆ ನಕ್ಕಳು. ಬಂದವರ ಕಥೆಯನ್ನೆಲ್ಲ ಕೇಳುತ್ತ ಕೂರಲು ತಾನೇನು ಅವರ ಬಂಧು–ಬಳಗ ಅಲ್ಲವಲ್ಲ. ಪೊಗರದಸ್ತಾದ ಮೈಕಟ್ಟಿನ ಅವನನ್ನು ಇನ್ನೂ ಹೆಚ್ಚು ಕಾಯಿಸುವುದು ಸರಿಯಲ್ಲವೆಂದು, ಕಪಾಟಿನಲ್ಲಿದ್ದ ಕಾಂಡೋಮ್ ಹೊರತೆಗೆದಳು.

ಜಬರದಸ್ತಾಗಿ ಕಾದಾಡಿದ್ದ ಕಂಪ್ಯೂಟರ್ ಹ್ಯಾಂಗ್ ಆಗಿ ಶಟ್‌ಡೌನ್ ಆಗುವ ಹಂತಕ್ಕೆ ಬಂದಿತ್ತು. ಇಷ್ಟು ಕಸರತ್ತು ಕಟ್ಟಿಕೊಂಡ ಹೆಂಡತಿ ಜೊತೀಗ ಮಾಡಿದ್ರ ಆಕಿಯಾಕ ಸೋಡಚೀಟಿ ಕೊಡ್ತಿದ್ಲು? ಅಥವಾ ಈ ಹೊನಗ್ಯಾನ ಕುಣಿಕಾಲತನಕ್ಕ ಜಿಬ್ಯಾಗಿ ನಾಜೂಕಿನ ಹಾವರಾಣಿಯಂಗ ಜಾರ್ಕೊಂಡು ಹೋದಳೋ? ಬಗೆಬಗೆಯ ಪ್ರಶ್ನೆಗಳು.
***
ಲಾವಣ್ಯ ಹಾಲಿನಲ್ಲಿ ಕುಳಿತು ಟೀವಿ ನೋಡುತ್ತಿದ್ದಳು. ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಂಬ ಸುದ್ದಿ ಶೀರ್ಷಿಕೆ ಸ್ಕ್ರೀನ್ ಮೇಲಿತ್ತು. ಪರದೆಯ ಕೆಳಭಾಗದ ನೀಲಿಪಟ್ಟಿಯಲ್ಲಿ ವಿವಿಧ ಜಾಹೀರಾತುಗಳ ಮಧ್ಯೆ ಜೂಜಿನ ಕುದುರೆಯಂತೆ ಓಡುತ್ತಿತ್ತು. ಮಡಿವಂತಿಕೆಯ ಮುಖವಾಡ ಹೊತ್ತ ಸಮಾಜಕ್ಕೆ ಇದೂ ಒಂದು ಮಾಮೂಲಿ ಸುದ್ದಿ. ದಿನಂಪ್ರತಿ ದೇಶದ ಮೂಲೆಮೂಲೆಯಿಂದ ವರ್ತಮಾನಗಳು ಬರುತ್ತಲೇ ಇವೆ.

ಹೊಸದಿಲ್ಲಿಯ ನಿರ್ಭಯಾಳ ಅತ್ಯಾಚಾರದ ಸಂದರ್ಭದಲ್ಲಿ ನಿದ್ದೆಯಿಂದ ಝಾಡಿಸಿಕೊಂಡು ಎದ್ದಿದ್ದ ಸಾರ್ವಜನಿಕವು ಮತ್ತೆ ಮಲಗಲು ಸಜ್ಜಾಗಿದೆ. ಅದೇನಿದ್ದರೂ ಈಗ ಸುಸ್ತಾಗಿ, ಶಿಸ್ತಿನಿಂದ ಸುದ್ದಿಸಮಾಚಾರಗಳ ದಾರಿಯನ್ನು ಕಾಯುತ್ತ ನೆಲೆನಿಂತಿದೆ ಅಂತ ಲಾವಣ್ಯಳಿಗೆ ಅನಿಸಿತು. ಈಗ ತಾನೂ ಅದನ್ನೇ ಮಾಡುತ್ತಿದ್ದಳು.

ಟೀವಿ ಪರದೆಯ ನೀಲಿಪಟ್ಟಿಯಲ್ಲಿ ಬುರುಬುರು ಓಡುತ್ತಿದ್ದ ಶೀರ್ಷಿಕೆ, ಊರಗಲದ ಸುದ್ದಿಯಾಗಿ ಪರಿವರ್ತನೆಯಾಯಿತು. ಸ್ಕ್ರೀನ್ ತುಂಬ ಹರಡಿಕೊಂಡ ಸಮಾಚಾರ ಇಡೀ ದಿನ ಬಿತ್ತರಗೊಳ್ಳಲು ಮುನ್ನುಗ್ಗುತ್ತಿತ್ತು.

ಮಿನಿಸ್ಕರ್ಟ್‌, ಸ್ಲೀವ್‌ಲೆಸ್ ಟಾಪನ್ನು ತೊಟ್ಟ ಬಂಗಾರ ಬಣ್ಣದ ಹುಡುಗಿ ಸುದ್ದಿ ಹೇಳುವುದನ್ನೂ ಚರ್ಚೆಯನ್ನೂ ಫೋನ್ ಕರೆಗಳನ್ನೂ ನಡುನಡುವೆ ಜಾಹೀರಾತುಗಳನ್ನೂ ನಿಭಾಯಿಸಲು ತಯಾರಾಗಿದ್ದಳು. ಬಳ್ಳಿಯಂತ ದೇಹವನ್ನು ಇಡೀ ದಿನದ ಕಡುಬಿನ ಕಾಳಗಕ್ಕೆ ತಾಲೀಮುಗೊಳಿಸುತ್ತಿದ್ದಳು. ಟೀವಿ ಸ್ಟುಡಿಯೊ ಮುಂಬರುವ ಲೈವ್ ಪ್ರೋಗ್ರಾಮ್‌ಗಾಗಿ ಯುದ್ಧಭೂಮಿಯಂತೆ ಹಸಿದು ಕುಳಿತಿತ್ತು.

ಮಧ್ಯದ ಮಹಾರಾಜಾ ಆಸನದ ಮೇಲೆ ಸೂಟುಧಾರಿ ಸುದ್ದಿಸಂಪಾದಕ ವಿರಾಜಮಾನನಾಗಿದ್ದ. ಎಡಬಲಕ್ಕೆ ಪರವಿರೋಧದ ತಂಡಗಳು. ಒಂದು ಬದಿಗೆ ಧರ್ಮಗುರು ಮತ್ತು ಚಿಗುರು ಮೀಸೆಯ ಮುಖಂಡ ಕುಳಿತಿದ್ದರೆ, ಮತ್ತೊಂದು ಭಾಗದಲ್ಲಿ ಸಾಮಾಜಿಕ ಕಾರ್ಯಕರ್ತನ ಜೊತೆಗೆ ಸ್ತ್ರೀವಾದಿ ಹೋರಾಟಗಾರ್ತಿ ಆಸೀನರಾಗಿ ನೋಡುಗರ ಎದೆಬಡಿತಕ್ಕೆ ತಾಳ ಹಾಕುವರಿದ್ದರು.

ಇವರೆಲ್ಲರ ಮುಂದೆ ಬಿಳಿತೊಡೆಗಳನ್ನು ಅದುರಿಸುತ್ತ ನಿರೂಪಕಿ, ಚಕಮಕಿ ಕಲ್ಲಿನ ಕಿಡಿಯಾಗಿ ಪರದೆಯ ತುಂಬ ಸಿಡಿಯುತ್ತಿದ್ದಳು. ಮೇಡಮ್ ಟುಸಾಡ್ಸ್ ಮ್ಯೂಜಿಯಂನ ಮೇಣದ ಗೊಂಬೆಗೆ ಜೀವ ತುಂಬಿದಂತಾಗಿತ್ತು. ಟೀವಿಯವರಿಗೆ ರೇಪ್ ನಡೆದ ಒಂದು ತಾಸಿನೊಳಗಾಗಿ ಲೈವ್ ಕಾರ್ಯಕ್ರಮ ಏರ್ಪಡಿಸಿರುವ ತಮ್ಮ ಕ್ರಿಯಾಶೀಲತೆಗೆ ತಾವೇ ಹೆಮ್ಮೆಪಟ್ಟುಕೊಳ್ಳುತ್ತಿರುವ ಭಾವ ಸ್ಟುಡಿಯೋದ ಫ್ಲಡ್‌ಲೈಟಿನ ಬೆಳಕಿನಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು.

ಹುರುಪಿನಲ್ಲಿ ಬಿಸಿಯೇರಿರುವ ಮೇಣದಗೊಂಬೆ ಅದ್ಯಾವ ಕ್ಷಣದಲ್ಲಿ ಕರಗಿ ನೀರಾಗುತ್ತದೋ ಎನ್ನುವಂತಿತ್ತು. ಮಹಿಳೆಯರು ಪ್ರಚೋದನಾತ್ಮಕ ಬಟ್ಟೆ ಧರಿಸುವದೇ ಅತ್ಯಾಚಾರಕ್ಕೆ ಕಾರಣ ಎಂದು ಕುರುಚಲು ಗಡ್ಡದಲ್ಲಿ ಬೆರಳಾಡಿಸಿಕೊಳ್ಳುತ್ತ ಸುದ್ದಿಸಂಪಾದಕ ರಣಕಹಳೆ ಮೊಳಗಿಸಿದ. ಸೊಂಟ ಬಳುಕಿಸಿದ ಹುಡುಗಿ ತುಂಡುಲಂಗ ನೀವಿಕೊಂಡು ಚರ್ಚೆಗೆ ಶ್ರೀಕಾರ ಹಾಕಿದಳು.

ಅಬ್ಬಬ್ಬಬ್ಬಾ! ಅದೇನು ಮಾತು, ಅದೇನು ಕಥೆ?! ಎದೆ ತಟ್ಟುವುದೇನು, ಮೇಜು ಕುಟ್ಟುವುದೇನು? ಸಂವಾದವೋ ವಾಗ್ವಾದವೋ ಮೂರನೇ ಮಹಾಯುದ್ಧವೋ? ಎದುರು ಪಕ್ಷದವರನ್ನು ಅಕ್ಷರಶಃ ಕೊಂದುಬಿಡುವಂತೆ ಪರಸ್ಪರ ಯುದ್ಧ ಪಿಪಾಸುಗಳಾಗಿ ಗರ್ಜಿಸುತ್ತಿದ್ದರು. ಟೀವಿ ಚಾನಲ್‌ನ ಕಾವು ಮತ್ತು ಟಿಆರ್‌ಪಿ ಸೂಚ್ಯಂಕಗಳೆರಡೂ ಒಟ್ಟೊಟ್ಟಿಗೆ ಮೇಲ್ಮುಖವಾಗಿ ಚಿಮ್ಮುತ್ತಿದ್ದವು.

ಚರ್ಚಾಗೋಷ್ಠಿಯ ಹುರಿಯಾಳುಗಳನ್ನು ನಿಯಂತ್ರಿಸಲು ಮಧ್ಯದ ಸಿಂಹಾಸನವು ಮುನ್ನೂರಾ ಅರವತ್ತು ಡಿಗ್ರಿಯಲ್ಲಿ ಗರಗರ ತಿರುಗುತ್ತಿತ್ತು. ಹೀಗೂ ಉಂಟೇ? ಹಾಗೂ ಉಂಟೆ? ಅಂತ ಕಣ್ಣು–ಕಿವಿ–ಬಾಯಿ ತೆರೆದು ತರ್ಕಿಸುತ್ತಿದ್ದ ವೀಕ್ಷಕರಿಗೆ ಬುದ್ಧಿಯ ನಾಗಾಲೋಟವನ್ನು ಅನುಸರಿಸುವದು ಕಷ್ಟಸಾಧ್ಯವಾಗಿತ್ತು.

ನಿಲ್ಲಿಸೀ..... ಗೊಂಬೆ ಚಿಟ್ಟನೆ ಚೀರಿತು.
ಕದನ ವಿರಾಮದ ಜಾಗಟೆ ಬಾರಿಸಿತು. ಪಳ್ಳೆಂದು ಮಿಂಚುವ ನೇಲ್‌ಪಾಲಿಶ್‌ನ ತೋರುಬೆರಳನ್ನು ಕಿವಿಯೊಳಗೆ ಸೇರಿಸಿ ಮೈಕ್ರೋಫೋನ್ ಸರಿಪಡಿಸಿಕೊಂಡು ಹೇಳಿದಳು,

‘ಈಗಷ್ಟೇ ರೇಪ್‌ಗೊಳಗಾದ ಬಾಲಕಿಯ ಪಾಲಕರು ನಮ್ಮ ಸ್ಟುಡಿಯೋದ ದೂರವಾಣಿ ಸಂಪರ್ಕದಲ್ಲಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡುವ. ಅದಕ್ಕೆ ಮೊದಲು ಒಂದು ಪುಟ್ಟ ಬ್ರೇಕ್ ತೆಗೆದುಕೊಳ್ಳೋಣ. ಎಲ್ಲಿ ಹೋಗದೇ ಕಾಯುತ್ತಿರಿ. ವಿ ವಿಲ್ ಬಿ ಬ್ಯಾಕ್ ವಿದಿನ್ ಟು ಮಿನಿಟ್ಸ್’.

***
ಅಕ್ಕ ತನ್ನ ಮೃದುವಾದ ಗಲ್ಲ ಸವರುತ್ತ ಹೇಳಿದ್ದಳು– ‘ಲಾವಣ್ಯ ನೀನು ಭಾಳ ಶಾಣ್ಯಾ ಅದಿ. ಚೆಂದಗಿ ಸಾಲಿ ಕಲ್ತು ಮುಂದ ಬಾ. ನೀ ನಮ್ಮಂಗ ಆಗಬ್ಯಾಡ. ಹೆಂಗರ ಮಾಡಿ ನಾ ನಿಂಗ ಓದಸ್ತೀನಿ’. ಅದೂ ಸರಿಯೆ. ಶಾಲೆಯಲ್ಲಿ ಆಕೆ ಬಹಳ ಜಾಣ ಹುಡುಗಿ. ಓದುಬರಹ, ಆಟಪಾಠ, ಹಾಡುಹಸೆ ಎಲ್ಲದರಲ್ಲೂ ಮುಂದೆ. ರೂಪವಂತೂ ಬ್ರಹ್ಮ ಅವರ ವಂಶಕ್ಕೆ ಬರೆದು ಕೊಟ್ಟ ಬ್ಲಾಂಕ್ ಚೆಕ್.

ವಯಸ್ಸಿಗೆ ಮೀರಿ ಬೆಳೆಯುವುದು, ನೋಡುಗರ ಕಣ್ಣು ಕುಕ್ಕುವುದು ಅವರ ರಕ್ತದಲ್ಲಿಯೇ ಹರಿದು ಬಂದಿದೆ. ಅಕ್ಕತಂಗಿಯರು ಬೀದಿಗೆ ಬಂದರೆಂದರೆ ಸೃಷ್ಟಿಕರ್ತನಿಗೆ ಸಾಮೂಹಿಕ ಶಬ್ಬಾಶ್‌ಗಿರಿ. ಅವರ ಅಜ್ಜಿ ಯಾವಾಗಲೂ ಹೇಳುತ್ತಿತ್ತು– ‘ಬಿಸಿಲ್ಗೆ ಬೀಳಬ್ಯಾಡ್ರೇ ನನ್ನ ಕಂದಮ್ಮಗುಳ, ಗಿಳಿ ಕಚ್ಗೊಂಡು ಹೋದಾವು’.

ಶಾಲೆಯಲ್ಲಿ ತಾನು ಚುಟುಪುಟು ಓಡಾಡಿದರೆ, ಪಕಪಕನೆ ಮಾತನಾಡಿದರೆ, ಗೆಳತಿಯರಿಗೆ ಹೊಟ್ಟೆಯಲ್ಲಿ ತಳಮಳ. ಸಹಪಾಠಿ ಹುಡುಗರ ಕಣ್ಣುಗಳು ಕಾಯಂ ತನ್ನ ಮೇಲೆಯೇ ಎಂಬುದು ಅವಳ ಬಗೆಗಿನ ಆರೋಪ.

ಶನಿವಾರಕ್ಕೊಮ್ಮೆ ಬಿಳಿಸಮವಸ್ತ್ರ ತೊಟ್ಟು ಬಂದರೆ ಡ್ರಿಲ್‌ಮಾಸ್ಟರ್ ಬೆರಳುದ್ದ ಮಾಡಿಕೊಂಡು ನಡುಪಟ್ಟಿಯನ್ನು ಸರಿಪಡಿಸಲೇಬೇಕು. ಅಕ್ಕಂದಿರು ತೊಟ್ಟುಬಿಟ್ಟ ಬಟ್ಟೆಗಳನ್ನೇ ಉಟ್ಟರೂ ಹೊಡೆದು ಕಾಣುವ ಮೈಬಣ್ಣ. ಗಾಳಿಯಿರಲಿ, ಇಲ್ಲದಿರಲಿ, ಮನೆ ಸುತ್ತಮುತ್ತ ಗಾಳಿಪಟದ ಪಟಪಟ ಸದ್ದು.

ಅಕ್ಕನ ಮಾತು ಪಕ್ಕಾಗಿ ಹುಡುಗಿ ಮೆಟ್ರಿಕ್‌ನಲ್ಲಿ ಶಾಲೆಗೇ ಮೊದಲು ಬಂದು ಬಿಡುವುದೇ? ಎಲ್ಲಕ್ಕಿಂತ ಹೆಚ್ಚು ಗಾಬರಿಯಾದವರು ಮನೆಯ ಮಂದಿ. ಊರವರು ಮಾಸ್ತರಮಂದಿಗೆ ಹಾಕಿದ ಹಿಡಿಶಾಪದಿಂದ ಗುರುಗಣಂಗಳಿಗೆ ಒಂದೆರಡು ರಾತ್ರಿ ನಿದ್ದಿಯೇ ಹತ್ತಿರಲಿಕ್ಕಿಲ್ಲ.

ಲಾವಣ್ಯ ಅಂಬೋ ಹುಡುಗಿ ಕುಂತರೂ ಸುದ್ದಿ, ನಿಂತರೂ ಸುದ್ದಿ. ಅಕ್ಕನ ಕಕ್ಕುಲಾತಿಯನ್ನು ಹೆಕ್ಕಿತೆಗೆದು ಅರ ಹಚ್ಚಿ ತಿಕ್ಕುವ ಕಾಲ ಬಂದೇ ಬಿಟ್ಟಿತು. ಹುಡುಗಿ ಇಪ್ಪತ್ತು ಮೈಲಿ ದೂರದ ಕಾಲೇಜಿನ ಮೆಟ್ಟಿಲನ್ನು ಮೆಟ್ಟಿಯೇ ಬಿಟ್ಟಿತು. ಹೊಸ ಅಂಗಿ, ಹೊಸ ಲಂಗ, ಹೊಸ ಚಪ್ಪಲಿ; ಕಣ್ಣತುಂಬ ಕನಸು, ಕ್ಲಾಸ್‌ತುಂಬ ಹಾಜರಿ.

ಎರಡನೇ ಪಿಯುಸಿ ಹುಡುಗರೂ ಆಕೆಯ ಕ್ಲಾಸ್ ರೂಮಿನ ಮುಂದೆ ಸುತ್ತಿ ಸುಳಿದು ಸಂಭ್ರಮಿಸಿದರು. ಅದೆಲ್ಲವೂ ಸರಿ. ಆದರೆ... ಹಳ್ಳಿಯಲ್ಲಿ ಶಾಲೆಗೆ ಮೊದಲು ಬಂದರೂ, ಕಾಲೇಜಿನ ಇಂಗ್ಲಿಷ್ ಕಕ್ಕಾಬಿಕ್ಕಿ ಮಾಡಿತು. ಲೆಕ್ಚರರ್ ಇಂಗ್ಲಿಷಿನಲ್ಲಿಯೇ ಅದೇನೋ ಕೇಳಿದಾಗ ಹುಡುಗಿ ತಡವರಿಸಿಕೊಂಡು, ‘ಆಯಾಮ್ ನಾಟ್ ನೋ ಇಂಗ್ಲಿಷ್, ಪ್ಲೀಸ್ ಕನ್ನಡಾ ಟೆಲ್’ ಎಂದಿತು. ಕಾಲೇಜಿಗೆ ಕಾಲೇಜೇ ಗೊಳ್ಳೆಂದಿತು.

ಲೆಕ್ಚರರ್ ‘ಕಾಪಿ ಹೊಡೆದು ಫಸ್ಟ್ ಬಂದಿಯೇನು?’ ಅಂತ ಕಾರಿಬಿಟ್ಟರು. ಎದೆಗೆ ನೂರು ಸಲ ತಿವಿದಂತಾಯಿತು. ಲಾವಣ್ಯಳಿಗೆ ತಾನು ನಗಣ್ಯಳಾಗಿ ಹೋದೆ ಎನಿಸಿತು. ರಾಣಿಜೇನಿನ ಮುಖ ಕಪ್ಪಿಟ್ಟು ಕಾಲೇಜಿನ ಕಳೆಯೇ ಕುಂದಿತು. ತಲೆಬಾವು ಬಂದಂತಾಗಿ ಪಾಠ ಹೊರಗೇ ಉಳಿಯಿತು. ಓದಲು ಕುಳಿತರೆ ಇಂಗ್ಲಿಷ್ ಲೆಕ್ಚರರ್ ತಿವಿದಂತಾಗುತ್ತಿತ್ತು. ಕುಲುಕುಲು ಎನ್ನುತ್ತಿದ್ದ ಜೀವ ವಿಲಿವಿಲಿಯೆಂದಿತು.

ಕಾಲೇಜಿನ ಹುಡುಗರಿಗೆ ಇಂಗ್ಲಿಷ್ ಲೆಕ್ಚರರ್ ವಜ್ರಮುನಿಯಂತೆ ಕಂಡರು. ಹುಡುಗಿಯನ್ನು ನೋಡಿದರೆ ಸಾಲು ಸಾಲು ಕತೆಗಳು. ಊರಲ್ಲಿ ಆಡಿಕೊಳ್ಳುವ ನಾಲಿಗೆಗೆ ಉಪ್ಪಿನಕಾಯಿ ನೆಂಚಿಕೊಂಡಂತಾಯಿತು. ಆಕೆ ಕಾಲೇಜು ಮುಗಿಸಿ ಊರಿಗೆ ಬಂದು ಬಸ್ಸಿಳಿಯುವ ಮೊದಲು, ಕತೆಗಳು ಮನೆಗೆ ಬಂದು ಮುಟ್ಟಿರುತ್ತಿದ್ದವು.

ತನಗಿರುವ ನಾಲೇಜೇ ಸಾಕು, ಕಾಲೇಜು ಬೇಡವೆಂದ ಹುಡುಗಿ ಹೊಸ ಅಂಗಿ–ಲಂಗಗಳನ್ನು ಮಡಿಸಿಟ್ಟು ತ್ರಿವೇಣಿ ಕಾದಂಬರಿ ಹಿಡಿದು ಕೂತಳು. ಒಲ್ಲದ ಮನಸ್ಸಿನಿಂದ ಹೊರಕಳಿಸಿದ್ದ ಮನೆಯವರು ನಿಟ್ಟುಸಿರಿಟ್ಟು ತಟ್ಟಾದರು. ತೆಕ್ಕಿಬಿದ್ದು ಬಿಕ್ಕುವುದು ಬಿಟ್ಟರೆ ಅಕ್ಕನಿಗೆ ಬೇರೇನೂ ಮಾಡಲಾಗಲಿಲ್ಲ. ಇಲ್ಲಿಗೆಲ್ಲವೂ ಮುಗಿಯಿತು ಎಂದು ಅಜ್ಜಿ ನಿರ್ಣಯ ಸಾರಿತು.

ಮತ್ತೊಂದು ಮಗದೊಂದು ದಿನ ಸಾಗುತ್ತಿರುವಾಗಲೇ ಅಂದು ಸಂಜೆ ಬಾಗಿಲು ಕಿಟಕಿಗಳನ್ನೆಲ್ಲ ಭದ್ರಪಡಿಸಿ ಮನೆಯಲ್ಲಿ ಗುಸುಗುಸು ಶುರುವಾಯಿತು. ನಡುನಡುವೆ ಅಕ್ಕ ಬಾಯಿ ತೆಗೆದರೆ ಸಾಕು ಟಳ್ಳೆಂಬ ಸಪ್ಪಳ. ‘ರೀತಿರಿವಾಜು ಅಂತ ಇರ್ತಾವು, ಸಂಪ್ರದಾಯ...’ ಎಂದು ಒಳಗಿನಿಂದ ತೂರಿಬಂತು ಧ್ವನಿ. ಇವತ್ತೇಕೆ ಮನೆಯಲ್ಲಿ ಇಷ್ಟೊಂದು ಇರಿಸುಮುರಿಸು ಎಂಬುದು ತ್ರೀವೇಣಿ ಕಾದಂಬರಿಯಲ್ಲಿ ಮುಖವಿಟ್ಟಿದ್ದ ಹುಡುಗಿಗೆ ಗೊತ್ತಾಗಲಿಲ್ಲ.

ಒಟ್ಟಾಭಿಪ್ರಾಯ ಕಟ್ಟಿಕೊಳ್ಳುತ್ತಿದ್ದಂತೆ ಹೊರಬಾಗಿಲು ತೆರೆದುಕೊಂಡಿತು. ಸಂಜೆಯ ತಣ್ಣನೆ ಗಾಳಿಯ ಹಿಂದೆ ತಣ್ಣಗಿನ ಹೆಜ್ಜೆ ಇಡುತ್ತ ಬಂದವರು ಓಣಿಯ ಹಿರಿಯರು. ಅಷ್ಟೇ ತಂಪಾಗಿ ‘ಇದು ನಿಂಗ ಅನಿವಾರ್ಯ ಲಾವಣ್ಯ’ ಎಂದಿದ್ದರು.
. . .
ಅವರೇ ಮೊದಲ ಫಲಾನುಭವಿ.
***
ಮುಂದೆ ಅದೇ ಹಿರಿಯರು ಗಂಡ ಎಂಬುವನನ್ನು ತೋರಿಸಿ ಅದೂ ಅನಿವಾರ್ಯವೆಂದರು. ಕುಡಿಯಲು ದುಡ್ಡೊಂದು ಸಿಕ್ಕರೆ ಬಾಗಿಲು ತಟ್ಟಿದವರಿಗೆಲ್ಲ ಎದೆಯ ಮೇಲೆ ದಾರಿ ಮಾಡಿಕೊಡುತ್ತಿದ್ದ ಆತ ತನ್ನೊಂದಿಗೆ ಬಾಳಿ, ಬದುಕಿ, ಸತ್ತೂ ಹೋದ. ಅಷ್ಟರಲ್ಲಿ ಒಬ್ಬ ಮಗಳಿಗೆ ಅಪ್ಪನಾಗಿದ್ದ. ಹೊಸ ಬದುಕಿನ ಹುಡುಕಾಟದಲ್ಲಿ ಲಾವಣ್ಯ ಮಗಳೊಂದಿಗೆ ಶಹರ ಸೇರಿದಳು. ನಡೆದು ಬಂದ ದಾರಿ ಮಾತ್ರ ಹೆಬ್ಬಾವಾಗಿ ಆಕೆಯನ್ನು ಮತ್ತೆಮತ್ತೆ ಸುತ್ತಿಕೊಂಡಿತು.

ತೋಟವಿದ್ದವರು ಹಣ್ಣು ಕಿತ್ತು ಕೊಟ್ಟಂತೆ, ಅಂಗಡಿಯವನು ಮಿಠಾಯಿ ಹಂಚಿದಂತೆ, ತನ್ನಲ್ಲಿದ್ದುದನ್ನು ಬಯಲಾಗಿಸುತ್ತ ಹೋದಳು. ಕಾಲಕ್ಕೆ ತಕ್ಕಂತೆ ವೇಷಭೂಷಣ, ಮಾತುಕತೆ, ಹಾವಭಾವ ರೂಢಿಸಿಕೊಂಡಳು. ಹೊಟ್ಟೆ ತುಂಬಿ ಚೆಲ್ಲುವಂತಾಯಿತು. ಶಹರದ ವೃತ್ತಿ ಬಾಂಧವರು ಲಟಿಕೆ ಮುರಿದರು.

ಕೀರ್ತಿವಾರ್ತೆ ದೂರದೂರಕ್ಕೆ ತಲುಪಿ ಗಣ್ಯಾತಿಗಣ್ಯರು ಬಂದು ಹೋಗಿ ತನಗೊಂದು ಸ್ಟಾರ್‌ವ್ಯಾಲ್ಯೂ ತಂದರು. ಯಾವುದೋ ಕಾದಂಬರಿಯ ಯಾವುದೋ ಪಾತ್ರವಾದಳು. ಒಳ್ಳೊಳ್ಳೆ ಸಾಹಿತ್ಯ ಕೃತಿಗಳನ್ನು ತಂದು ಓದಿ ಶಾಲೆಯಲ್ಲಿ ಕಲಿತ ವಿದ್ಯೆಗೆ ಬುದ್ಧಿಯ ಸಾಣೆ ಹಿಡಿದಳು. ಮಾತಿಗೆ ತೂಕ ಬಂತು.

ಹಲಕೆಲ ಸಂಗತಿಗಳ ಮೇಲೆ ಅಭಿಪ್ರಾಯ ಹೇಳುವಂತಾದಳು. ವೃತ್ತಿಯನ್ನು ಮೀರಿದ ಚಿಂತನೆಯಿಂದ ಲಟಿಕೆ ಮುರಿದವರನ್ನು ಒಗ್ಗೂಡಿಸಿ ತನ್ನದೇ ಕೋಠಿ ಕಟ್ಟಿದಳು. ಮಾಡುವ ಕೆಲಸದಲ್ಲಿ ಶ್ರದ್ಧೆ ಕಾಯ್ದುಕೊಳ್ಳುವಂತೆ ತಿಳಿಹೇಳಿದಳು. ಕಾಂಡೋಮ್ ಬಳಕೆ ಬಗ್ಗೆ ವೇದಿಕೆ ಮೇಲೆ ನಿಂತು ಮುಜುಗರವಿಲ್ಲದೆ ಭಾಷಣ ಮಾಡುತ್ತಿದ್ದಳು. ಅಖಿಲ ಭಾರತ ಹಿಜ್ಡಾಗಳ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರ ಹಕ್ಕುಗಳ ರಕ್ಷಣೆ ಕುರಿತಂತೆ ಮಾತನಾಡಿದಳು.

ಅವಳ ಹೇಳಿಕೆಯು ಅಂತರ್ಜಾಲದ ಮುಖಾಂತರ ಜಗತ್ತಿನ ಮೂಲೆಮೂಲೆಗೆ ಹೋಯಿತು. LGBT ಅಂತರಾಷ್ಟ್ರೀಯ ಸಂಘಟನೆಯವರು ಆಕೆಯ ಮನೆ ಬಾಗಿಲಿಗೆ ಬಂದು ಗೌರವ ಸದಸ್ಯತ್ವ ನೀಡಿದರು. ಆಗ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕೆ ನೀಡಿದ ಹೇಳಿಕೆಯೇ ಅಲ್ಲೋಲಕಲ್ಲೋಲ ಸೃಷ್ಟಿಸಿತು. ಹೇಳಿದ್ದಿಷ್ಟೆ– ‘ಅತ್ಯಾಚಾರ ತಡಿಬೇಕಂದ್ರ ವೇಶ್ಯಾವಾಟಿಕೆ ಸಕ್ರಮಗೊಳಿಸಬೇಕು’.

***
ಯುವ ರಾಜಕೀಯ ಮುಖಂಡ ಅಚ್ಚಬಿಳಿ ಬಟ್ಟೆ ತೊಟ್ಟು, ಎಂದಿನಂತೆ ಝುಗಮಗಿಸುತ್ತ ಲಾವಣ್ಯಳ ಕೋಠಿಗೆ ಬಂದ. ತನ್ನ ಸಾಧನೆಗೆ ಪ್ರಭಾವಿ ರಾಜಕಾರಣಿಗಳ  ಸಹಾಯ ಪಡೆಯಲು ಆಕೆಯನ್ನೇ ಆಶ್ರಯಿಸಿದ್ದ. ಪಟ್ಟಂಗಕ್ಕೆ ಕೂತು ರಾಜಕೀಯ ವಿಷಯದೊಂದಿಗೆ ಮನುಕುಲಕ್ಕೆ ಕಾಮಸೂತ್ರದಂತಹ ಅಮೋಘಶಾಸ್ತ್ರ ನೀಡಿದ ವಾತ್ಸಾಯನ ಷಂಡನಾಗಿದ್ದ, ಭೈರವೇಶ್ವರ ಪೀಠದ ಸ್ವಾಮೀಜಿ ಸಲಿಂಗಕಾಮಿ, ಮಾಜಿ ಮುಖ್ಯಮಂತ್ರಿಗಳು ಸತ್ತಿದ್ದು ಏಡ್ಸ್‌ನಿಂದ,

ಪ್ರಸಿದ್ಧ ಗಣಿತಶಾಸ್ತ್ರಜ್ಞ ಹೆಂಡತಿಯನ್ನು ಹಿಂಸಿಸುವ ವಿಕೃತ ಕಾಮಿಯಾಗಿದ್ದ– ಅವನ ಮಾತು ಕೇಳಿದರೆ ಗಿಡದೊಳಗಿನ ಮಂಗ ಕೈ ಬಿಡಬೇಕು. ಅತ್ಯಾಚಾರ ಕುರಿತ ತನ್ನ ಹೇಳಿಕೆಯನ್ನು ಬಹಿರಂಗವಾಗಿ ಬೆಂಬಲಿಸುವ ಎದೆಗಾರಿಕೆಯನ್ನು ಆತ ತೋರಿದ್ದ. ‘ಈ ಸಮಾಜದಲ್ಲಿ ವೇಶ್ಯಯರು ಇಲ್ಲದಿದ್ದರೆ ಎಷ್ಟೋ ಪುರುಷರು ತಮ್ಮ ಅಕ್ಕ  ತಂಗಿಯರನ್ನೇ ಬಿಡುತ್ತಿರಲಿಲ್ಲ’ ಎಂಬ ಅನಕೃ ಅವರ ಮಾತನ್ನು ಉಲ್ಲೇಖಿಸಿದ್ದ.

ಖಾಸಗಿ ಕೋಣೆಗೆ ಹೊರಟ ಆಕೆಯನ್ನು ಹಿಂಬಾಲಿಸಿದ. ಒಳಬಂದು ಪಲ್ಲಂಗದ ಮೇಲೆ ಕೂರುತ್ತಿದ್ದಂತೆ ಆತ ಗಂಭೀರನಾಗಿ ಮುಖದ ಭಾವ ಬದಲಾಗುತ್ತಿತ್ತು. ಏನನ್ನೋ ಹೇಳಲು ಒದ್ದಾಡುತ್ತಿದ್ದ. ಕಪಾಟಿಗೆ ಕೈ ಹಾಕುತ್ತಿದ್ದವಳು ‘ಏನು?’ ಎಂಬಂತೆ ಅವನೆಡೆಗೆ ಪ್ರಶ್ನಾರ್ಥಕವಾಗಿ ನೋಡಿದಳು.

ಇಂಥ ಎಷ್ಟು ಜನರನ್ನು ಆಕೆ ನೋಡಿಲ್ಲ? ತನಗೆ ಬುದ್ಧಿ ಬಲಿಯುವ ಮೊದಲೇ ಅನಿವಾರ್ಯತೆಯ ಪಾಠ ಹೇಳಿದ ಓಣಿಯ ಹಿರಿಯರ ಭಾವ ಅವನ ಕಣ್ಣಲ್ಲಿ ಹೆಪ್ಪುಗಟ್ಟುತ್ತಿತ್ತು. ವಂಶಕ್ಕೇ ಸೂಳೆಯರ ಪಟ್ಟಕಟ್ಟಿ ತಮ್ಮ ತೆವಲನ್ನು ತೀರಿಸಿಕೊಳ್ಳುವ ಬೀದಿಗೂಳಿಗಳು ಎಂದು ಕೂಗಾಡಿ ಅವನನ್ನು ಹೊರಹಾಕಿದಳು.

ಮುಖ ಒಣಗಿಸಿಕೊಂಡು ತಲೆಕೆಳಗೆ ಹಾಕಿ ಹೊರನಡೆದ. ಬೆಳೆಯುತ್ತಿದ್ದ ಮಗಳನ್ನು ತನ್ನ ಬದುಕಿನ ಕರಿನೆರಳು ಬೀಳದಂತೆ ದೂರದ ಪ್ರತಿಷ್ಠಿತ ರೆಸಿಡೆನ್ಸಿಯಲ್ ಶಾಲೆಯಲ್ಲಿಟ್ಟು ಕಲಿಸಿದ್ದಳು. ಶಿಕ್ಷಣ ಪೂರೈಸಿ ಈಗಷ್ಟೇ ಮರಳಿರುವ ಮಗಳನ್ನು ಪ್ರತ್ಯೇಕ ಮನೆಯಲ್ಲಿ ಇಟ್ಟಿದ್ದಳು. ಅವಳ ಭವಿಷ್ಯವನ್ನು ರೂಪಿಸುವ ತಾಕಲಾಟದಲ್ಲಿರುವಾಗಲೇ....

***
ಅವಮಾನದಿಂದ ಕುದಿಯುತ್ತಿದ್ದ ಯುವ ರಾಜಕೀಯ ಮುಖಂಡ ದಾರಿಯಲ್ಲಿ ಸಿಕ್ಕ ಬಾರನ್ನು ಹೊಕ್ಕು ಹೊಟ್ಟೆಯಲ್ಲಿ ಬೆಂಕಿ ಬೀಳುವಂತೆ ಕುಡಿದ. ವೇಗವಾಗಿ ಓಡಿದ ಕಾರು ದೂರದ ಮನೆಯ ಮುಂದೆ ನಿಂತು. ಕರೆಗಂಟೆ ಒತ್ತಿದ. ಬಾಗಿಲು ತೆಗೆದ ಹುಡುಗಿ ತಾಯಿಯ ಪಡಿಯಚ್ಚಿನಂತಿದ್ದಳು.

ಅಪರಿಚಿತ ಮುಖವನ್ನು ಕಂಡು ‘ನಿಮಗ ಯಾರು ಬೇಕಿತ್ತು? ಮಮ್ಮಿ ಮನ್ಯಾಗ ಇಲ್ಲ, ಆಮೇಲೆ ಬರ್ರೀ’ ಎಂದು ತಿರುಗಿ ಬಾಗಿಲು ಹಾಕಿಕೊಳ್ಳುವಷ್ಟರಲ್ಲಿ ಅವನು ಒಳಗೆ ಬಂದಿದ್ದ. ಆಕೆಯನ್ನು ಅಡ್ಡಗಟ್ಟಿ ತೊದಲುತ್ತ ಗಹಗಹಿಸಿದ.

‘ನೀನು ಕಾಲೇಜಿನಿಂದ ಬರೋದ ಕಾಯ್ತಿದ್ದೆ. ನಿಮ್ಮವ್ವ ನಿನ್ನ ಮಹಾರಾಣಿ ಮಾಡಾಕ ಹೊಂಟಾಳು. ನೀನು ಅಕಿಯಂಗ ಆಗ್ಬೇಕು, ಹಂಗ ಮಾಡ್ತೇನಿ’ ಎನ್ನುತ್ತ ದುಪ್ಪಟ್ಟ ಕಿತ್ತೆಸೆದ. ಮೈಮನಸ್ಸುಗಳಲ್ಲಿ ಸೇಡಿನ ಭಾವನೆ ವಿಜೃಂಭಿಸುತ್ತಿತ್ತು. ಹುಡುಗಿಯ ಚೀರಾಟ ರಸ್ತೆಯ ವಾಹನಗಳ ಭರಾಟೆಯಲ್ಲಿ ಕೇಳುವಂತಿರಲಿಲ್ಲ.

ಮಗಳಿದ್ದ ಮನೆಗೆ ಬಂದ ಲಾವಣ್ಯ ಕಾರು ಕಂಡು ಹೌಹಾರಿದಳು. ವ್ಯಾನಿಟಿ ಬ್ಯಾಗಿನಲ್ಲಿರವ ಮತ್ತೊಂದು ಕೀಯಿಂದ ಡೋರ್‌ಲಾಕ್‌ನ್ನು ತೆಗೆದು ಒಳನುಗ್ಗಿದಳು. ತಗ್ಗಿದ ದನಿಯ ಹೆಣ್ಣಿನ ನರಳಿಕೆಯು ನಿಧಾನವಾಗಿ ನೆಲಕಚ್ಚುತ್ತಿತ್ತು.

ಎದುರಿನಿಂದ ತೂರಾಡುತ್ತ ಬಂದ ಅವನ ಕಣ್ಣಿನಲ್ಲಿ ಸಾಧನೆಯ ತೃಪ್ತಿ ಕಾಣುತ್ತಿತ್ತು. ಬಿಗಿಮುಷ್ಠಿಯೊಳಗಿನ ಚಾಕು ನೇರವಾಗಿ ಎದೆಹೊಕ್ಕಿತು. ನೆಲಕ್ಕುರುಳಿದ ದೇಹ ಒದ್ದಾಡಿ ತಣ್ಣಗಾಗುವುದನ್ನು ಕಂಡು– ‘ ಇದು ನಿಂಗ ಅನಿವಾರ್ಯ’ ಎಂದಳು.

ಬದುಕಿನ ಅನಿವಾರ್ಯತೆಯ ಬುದ್ಧಿವಾದ ಹೇಳಿದ ಓಣಿಯ ಹಿರಿಯರ ಮಗನಿಗೆ ಸಾವಿನ ಅನಿವಾರ್ಯತೆಯ ದಾರಿ ತೋರಿಸಿದ ತೃಪ್ತಿ ಲಾವಣ್ಯಳ ಮನದುಂಬಿತ್ತು.

ಟೀವಿಯಲ್ಲಿ ಅತ್ಯಾಚಾರ ತಡೆಯಲು ವೇಶ್ಯಾವಾಟಿಕೆ ಸಕ್ರಮಗೊಳಿಸಬೇಕೆಂಬ ಲಾವಣ್ಯಳ ಹೇಳಿಕೆಯ ಮೇಲೆ ಗಹನವಾದ ಚರ್ಚೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT