ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಉಲ್ಲೇಖ ಸಲ್ಲದು

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ದಲಿತ ಮುಖ್ಯಮಂತ್ರಿ ಬೇಡಿಕೆಯ ಹಿನ್ನೆಲೆ­ಯಲ್ಲಿ ಮೈಸೂರಿನ ಮಾನಸ ಎಂಬು­ವವರು ‘ಬೇಡಿಕೆಯೂ ಚಿಂತ­ನೆಯೂ’ ಎಂಬ ಶೀರ್ಷಿಕೆಯ ಪತ್ರ ಬರೆದಿ­ದ್ದಾರೆ (ವಾ.ವಾ. ಮಾರ್ಚ್ ೨).  ಆ ಪತ್ರ­ದಲ್ಲಿ ಅವರು ದೇವನೂರ ಮಹಾ­ದೇವರ ‘ನೀವು ಆನೆಯ ಮೇಲೆ ಪಾರ್ಲಿ­ಮೆಂಟಿಗೆ ಹೋಗುವುದನ್ನು ನಾನು ಸ್ವಾಗ­ತಿಸು­ತ್ತೇನೆ; ಆದರೆ ಪ್ರಜ್ಞಾಹೀನ­ರಾಗಿ ಕತ್ತೆ ಮೇಲೆ ಕೂರಬೇಡಿ’ (‘ಎದೆಗೆ ಬಿದ್ದ ಅಕ್ಷರ’, ಪುಟ ೩೯) ಎಂಬ ಸಾಲು­ಗ­ಳನ್ನು ಉಲ್ಲೇ­ಖಿಸಿ­ದ್ದಾರೆ. ಆದರೆ ಪ್ರಶ್ನೆ­ಯೇ­­ನೆಂ­­ದರೆ ದೇವ­ನೂರ  ಅವರು ಈ ಮಾತನ್ನು ಆಡಿದ ಸಂದರ್ಭ ಏನು ಮತ್ತು ಯಾಕೆ ಅವರು ಆ ಮಾತನ್ನು ಹೇಳಿದರು ಎಂಬು­ದನ್ನು ಅವರು ಉಲ್ಲೇಖಿಸದಿರುವುದು.

ವಾಸ್ತವವೆಂದರೆ ಮಹಾದೇವ ಅವರು ೨೦೦೩ರಲ್ಲಿ ಮೈಸೂರಿನಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಏರ್ಪಡಿಸಿದ್ದ ‘ಹೊಂದಾಣಿಕೆ ಸರ್ಕಾರಗಳು– -ಒಂದು ವಿಚಾರಗೋಷ್ಠಿ’ ಎಂಬ ವಿಚಾರ ಸಂಕಿರಣ­ದಲ್ಲಿ  ಮುಖ್ಯಅತಿಥಿಯಾಗಿ  ಮಾತನಾಡಿ­ದ್ದರು.  ಉತ್ತರಪ್ರದೇಶದಲ್ಲಿ ಅಂದು ಬಿಎಸ್‌ಪಿ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿ­ಕೊಂಡು ಸರ್ಕಾರ ರಚಿಸಿದ್ದನ್ನು ಉಲ್ಲೇಖಿಸುತ್ತಾ ‘ಇಲ್ಲಿ ಬಿಎಸ್‌ಪಿ ವಿದ್ಯಾರ್ಥಿ ಸಮಾವೇಶದಲ್ಲಿ ಸೇರಿರು­ವ­ವರು ಹೆಚ್ಚಾಗಿ ಎಳೆಯ ಗೆಳೆಯರು. ಆದರ್ಶ­ಗಳನ್ನು ತಲೆತುಂಬಾ ತುಂಬಿ­ಕೊಂಡು ಇರಬೇಕಾದವರು.

ಹೊಂದಾ­ಣಿಕೆ ಅಂದರೆ ಕಿಡಿಕಾರಬೇಕಾ­ದ­ವರು. ವಯಸ್ಸಿಗೆ ಸಹಜವಾಗಿ ಇದು ಕಾಣ­ಬೇಕಿತ್ತು. ಆದರೆ ಅಂತಹವರು ಹೊಂದಾ­ಣಿಕೆ ರಾಜಕೀಯದ ಬಗ್ಗೆ ಇಲ್ಲಿ ತಲೆಕೆಡಿಸಿ­ಕೊಳ್ಳುತ್ತಿರುವುದು ನನ್ನನ್ನು ಕಕ್ಕಾಬಿಕ್ಕಿ ಮಾಡಿದೆ’ ಎನ್ನುತ್ತಾ  ‘ನೀವು (ಬಿಎಸ್‌ಪಿ­ಯವರು) ಆನೆ ಮೇಲೆ (‘ಆನೆ’ ಬಿಎಸ್‌ಪಿ ಚುನಾವಣಾ ಚಿಹ್ನೆ) ಪಾರ್ಲಿಮೆಂಟಿಗೆ ಹೋಗಿ. ಆದರೆ ಕತ್ತೆ ಮೇಲೆ ಕೂರಬೇಡಿ’  ಎಂದರು.

ದುರಂತವೆಂದರೆ, ದೇವನೂರರು ಅಂದು ಉತ್ತರ­ಪ್ರದೇಶದ ಬಿಎಸ್‌ಪಿ– ಬಿಜೆಪಿ ಹೊಂದಾ­ಣಿಕೆಗೆ ಆ ಮಾತು ಹೇಳಿದ್ದು. ಅದು ಇಂದಿನ ದಲಿತರ ಅದರಲ್ಲೂ ಕರ್ನಾ­ಟಕದ ದಲಿತರ ‘ದಲಿತ ಸಿ.ಎಂ’ ಬೇಡಿಕೆಗೆ ಹೇಗೆ ತಾಳೆಯಾಗುತ್ತದೆ? ಯಾಕೆ ಇಂಥ ತಪ್ಪು ಉಲ್ಲೇಖ? ಎಂಬುದು ಪ್ರಶ್ನೆ. ಅಲ್ಲದೆ ಇದು ಇಂದಿನ ಕೆಡುಕಿನ ಜಾತಿ ರಾಜ­ಕಾರಣಕ್ಕೆ ಪ್ರಜ್ಞಾವಂತ ಸಾಹಿತಿ­ಯೊ­ಬ್ಬ­ರನ್ನು ಮತ್ತವರ ಸಾಹಿತ್ಯವನ್ನು ಎಳೆದು­ತಂದಂ­­ತೆಯೂ ಕೂಡ ಆಗುತ್ತದಲ್ಲವೆ ಎಂಬುದು.

ಈ ನಿಟ್ಟಿನಲ್ಲಿ ಹೇಳುವುದಾದರೆ ಯಾರನ್ನು ಯಾರೇ ಉಲ್ಲೇಖ ಮಾಡಿ­ದರೂ ಅಂತಹ ಉಲ್ಲೇಖವನ್ನು ಸದರಿ ಸಾಹಿತಿ­ಗಳು ಯಾವ ಸಂದರ್ಭದಲ್ಲಿ ಹೇಳಿ­ದ್ದರು ಎಂಬುದನ್ನು ಪ್ರಸ್ತಾಪಿಸುವುದು ಸೂಕ್ತ. ಇಲ್ಲದಿದ್ದರೆ ಅಂತಹ ಉಲ್ಲೇಖಗಳು ತಪ್ಪು ಸಂದೇಶ ಬಿತ್ತುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT