ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪು ಸಂದೇಶ

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಭಾರತೀಯ ಪತ್ರ­ಕರ್ತರನ್ನು ಯಾವುದೇ ಕಾರಣ ನೀಡದೆ ಪಾಕಿಸ್ತಾನ ಸರ್ಕಾರ ಉಚ್ಚಾಟಿಸಿದೆ. ಇಬ್ಬರೂ ಇಸ್ಲಾಮಾಬಾದ್‌ನಲ್ಲಿ ಕಳೆದ ಒಂಬತ್ತು ತಿಂಗಳು­ಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈಗ ಯಾವೊಂದು ಪ್ರಚೋ­ದನೆ ಇಲ್ಲದಿದ್ದರೂ ಏಕಾಏಕಿ  ಇದೇ 20ರೊಳಗೆ ರಾಷ್ಟ್ರ ಬಿಟ್ಟು ಹೊರ­ಹೋಗಬೇಕೆಂಬ ಸೂಚನೆಯನ್ನು ಇಬ್ಬರಿಗೂ ನೀಡಲಾಗಿದೆ. 

ಭಾರತ­ದಲ್ಲಿ  ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರದ ಜೊತೆ ಬಾಂಧವ್ಯ ಬಲವರ್ಧ­ನೆಗೆ ಶ್ರಮಿಸಬೇಕಾಗಿರುವ ಈ ಹೊತ್ತಲ್ಲಿ ಈ ಕ್ರಮ ತಪ್ಪು ಸಂದೇಶ ರವಾನಿಸು­ವಂತ­ಹದ್ದು. ಇತ್ತೀಚೆಗೆ 500 ಪಾಕಿಸ್ತಾನಿ ಯಾತ್ರಿಗಳಿಗೆ  ವೀಸಾಗಳನ್ನು  ನಿರಾಕರಿಸಿದ ಭಾರತದ ಕ್ರಮಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬಂತಹ ವ್ಯಾಖ್ಯಾನಗಳಿವೆ.  ಆದರೆ ಭಾರತದಲ್ಲಿ ಆ ಸಂದರ್ಭದಲ್ಲಿ ಚುನಾ­ವಣೆ ಪ್ರಕ್ರಿಯೆ ಚಾಲನೆಯಲ್ಲಿತ್ತು.

ಹೀಗಾಗಿ  ಭದ್ರತೆ ದೃಷ್ಟಿಯಿಂದ  ಈ ವೀಸಾ­ಗಳನ್ನು ನಿರಾಕರಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ವಾಸ್ತವ­ವಾಗಿ ಪಾಕಿಸ್ತಾನದ ನಾಗರಿಕ ಸರ್ಕಾರ ಹಾಗೂ ಅತ್ಯಂತ ಪ್ರಭಾವ­ಶಾಲಿ­ಯಾಗಿ­ರುವ ಪಾಕ್ ಮಿಲಿಟರಿ ಅಧಿಕಾರಿಗಳ ಮಧ್ಯದ ಕಿತ್ತಾಟ ಈ ಉಚ್ಚಾಟ­ನೆಗೆ ಕಾರಣವಾಗಿರುವ ಸಾಧ್ಯತೆಗಳಿವೆ.  ಆದರೆ ಸ್ವತಂತ್ರ ಪತ್ರಕರ್ತರ ಕಾರ್ಯ ನಿರ್ವ­ಹಣೆಗೆ ಅವಕಾಶಗಳನ್ನು  ಮೊಟಕುಗೊಳಿಸುವಂತಹ ಈ ಕ್ರಮ  ಸರಿ­ಯಲ್ಲ. ಇದು ಹಿನ್ನಡೆಯ ಹೆಜ್ಜೆ  ಎಂದು ಭಾರತ ಸರ್ಕಾರ ಟೀಕಿಸಿರುವುದು ಸರಿಯಾಗಿಯೇ ಇದೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ವಿಶ್ವಾಸ ನಿರ್ಮಾಣ ಮಾಡಲು ಕೈಗೊಳ್ಳ­ಬೇಕಾದ ಅನೇಕ ಕ್ರಮಗಳಲ್ಲಿ (ಸಿಬಿಎಂ) ಮುಕ್ತ ಮಾಹಿತಿಗಳ ಪ್ರಸಾರ ಬಹು ಮುಖ್ಯವಾದದ್ದು. ಹೀಗಾಗಿಯೇ ಹಲವು ದಶಕಗಳ ಹಿಂದೆಯೇ ಆಗಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಭಾರತ  ಹಾಗೂ ಪಾಕಿಸ್ತಾನ ತಲಾ ಇಬ್ಬರು ಪತ್ರಕರ್ತರನ್ನು ಪರಸ್ಪರರ ದೇಶಗಳಿಗೆ ಕಳಿ­ಸಲು ಅವಕಾಶವಿದೆ.  ಈ ಕ್ರಮದಿಂದ ನಿಜಕ್ಕೂ  ಒಳ್ಳೆಯ ಪರಿಣಾಮ­ಗಳಾ­ಗಿವೆ.

ಪತ್ರಕರ್ತರ  ಸ್ವತಂತ್ರ  ಅಭಿಪ್ರಾಯಗಳ ಬರಹಗಳಿಂದಾಗಿ ಉಭಯ ದೇಶ­ಗಳ ಕುರಿತಂತೆ ಹೊಸ ಒಳನೋಟಗಳು ದಕ್ಕಿವೆ.  ಆದರೆ,  ದೇಶ ತೊರೆ­ಯ­­ಬೇಕೆಂದು ಭಾರತೀಯ ಪತ್ರಕರ್ತರಿಗೆ ಆದೇಶಿಸುವ ಮೂಲಕ ಈಗ ಇಂತಹ ವಿಶ್ವಾಸ ಮೂಡಿಸುವ ಕ್ರಮಗಳನ್ನೇ ಕ್ಷುಲ್ಲಕಗೊಳಿಸಿದಂತಾಗಿದೆ.  ಇತ್ತೀ­ಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಯ ವಿಚಾರದಲ್ಲಿ ಬದಲಾವಣೆಗಳು ಕಂಡು ಬಂದಿದ್ದವು.

ದ್ವಿಪಕ್ಷೀಯ ಮಾತುಕತೆ­ಗಳ ಧಾಟಿಗಳಲ್ಲೂ ಪ್ರಬುದ್ಧತೆ  ವ್ಯಕ್ತವಾಗುತ್ತಿತ್ತು. ಆದರೆ ಈಗ ಭಾರತೀಯ ಪತ್ರಕರ್ತರ ಉಚ್ಚಾಟನೆ ಕ್ರಮದಿಂದ  ಇವೆಲ್ಲ ಪ್ರಗತಿಗೂ ಮತ್ತೆ ಹಿನ್ನಡೆ ಆದಂ­ತಾ­ಗಿದೆ. ವೀಸಾ ನೀಡಿಕೆ ವಿಚಾರದ  ಭಿನ್ನಾಭಿಪ್ರಾಯಗಳು ಉಭಯ ದೇಶಗಳ ನಡು­ವಿನ  ಶಾಂತಿ ಪ್ರಕ್ರಿಯೆಯನ್ನು ಹಾಳು ಮಾಡಬಾರದು. 2011ರಿಂದ   ಯಾವೊಬ್ಬ ಪಾಕಿಸ್ತಾನಿ ಪತ್ರಕರ್ತನೂ ಅವರದೇ ಕಾರಣಗಳಿಗಾಗಿ ಭಾರತದ ನೆಲದಿಂದ ವರದಿಗಾರಿಕೆ ಮಾಡುತ್ತಿಲ್ಲ.

ಕಳೆದ ವರ್ಷ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ  ವರದಿಗಾರನನ್ನೂ ಪಾಕಿಸ್ತಾನ ಉಚ್ಚಾ­ಟಿ­­ಸಿತ್ತು. ಭಾರತದಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿ­ಕೊಳ್ಳು­ತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಉಭಯ ದೇಶಗಳ ಮಧ್ಯದ ವಿಶ್ವಾಸ ವರ್ಧಿ­ಸುವ ಕ್ರಮಗಳನ್ನು  ಕೈಗೊಳ್ಳುವ ಜವಾಬ್ದಾರಿ ಉಭಯ ದೇಶಗಳಿಗೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT