ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಎರಡು ಕ್ಷೇತ್ರಗಳ ಚುನಾವಣೆ ರದ್ದು

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಭ್ಯರ್ಥಿಗಳು ಮತದಾರರಿಗೆ ಹಣ  ಹಂಚಿರುವುದು ಖಚಿತವಾಗಿದ್ದರಿಂದ ಚುನಾವಣಾ ಆಯೋಗವು   ತಮಿಳುನಾಡಿನ ಅರವ್‌ಕುರಿಚಿ ಮತ್ತು ತಂಜಾವೂರು ಕ್ಷೇತ್ರಗಳ ಚುನಾವಣೆಯನ್ನು ರದ್ದುಗೊಳಿಸಿದೆ.

‘ಕೆಲ ದಿನಗಳ ಬಳಿಕ ಇಲ್ಲಿ ಚುನಾವಣೆಗೆ ಹೊಸದಾಗಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ಹೇಳಿದೆ.

ಆಯೋಗ ಇಂತಹ ನಿರ್ಧಾರ ಕೈಗೊಂಡಿದ್ದು ಭಾರತದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು. ತಮಿಳುನಾಡಿನಲ್ಲಿ ಮೇ 16 ರಂದು ವಿಧಾನಸಭಾ ಚುನಾವಣೆ ನಡೆದಿತ್ತು.

ಆದರೆ,  ಹಣ ಹಂಚಿಕೆ ಆರೋಪ ಕೇಳಿ ಬಂದ ಕಾರಣ ಈ ಎರಡು ಕ್ಷೇತ್ರಗಳ ಚುನಾವಣೆಯನ್ನು ಆಯೋಗ ಮೇ 23 ಕ್ಕೆ ಮುಂದೂಡಿತ್ತು.

ಮೇ 21 ರಂದು ಮತ್ತೆ ತನ್ನ ನಿರ್ಧಾರ ಬದಲಿಸಿ, ಚುನಾವಣೆಯನ್ನು ಜೂನ್‌ 13ರಂದು ನಡೆಸುವುದಾಗಿ ತಿಳಿಸಿತ್ತು. ‘ಚುನಾವಣಾ ವೀಕ್ಷಕರು, ಕೇಂದ್ರದ ವೀಕ್ಷಕರ ವಿಶೇಷ ತಂಡ, ಅರವ್‌ಕುರಿಚಿ ಮತ್ತು ತಂಜಾವೂರು ಕ್ಷೇತ್ರಗಳ ವೀಕ್ಷಕರ ತಂಡ ನೀಡಿದ ವರದಿಯನ್ನು ಪರಿಗಣಿಸಿ ಅಧಿಸೂಚನೆ ರದ್ದುಗೊಳಿಸಲು ನಿರ್ಧರಿಸಲಾಗಿದೆ’ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

‘ಈ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರಿಗೆ ಹಣ ಹಂಚಿಕೆ ಹಾಗೂ
ನಿತ್ಯಬಳಕೆಯ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದು ಖಚಿತವಾಗಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಚುನಾವಣೆ ನಡೆಸಲು  ಸಾಧ್ಯವಿಲ್ಲ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಸೂಕ್ತ ವಾತಾವರಣ ನಿರ್ಮಾಣವಾದ ಬಳಿಕವೇ ಇಲ್ಲಿ ಚುನಾವಣೆ ನಡೆಯಲಿದೆ’ ಎಂದು ಹೇಳಿದೆ.
ಮತದಾರರನ್ನು ಸೆಳೆಯಲು ಹಣ ಹಂಚಿರುವುದು ಖಚಿತವಾದರೆ ಮಾತ್ರ ಚುನಾವಣಾ ಆಯೋಗ ಚುನಾವಣೆ ರದ್ದುಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT