ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಬೇತಿ ಗುಣಮಟ್ಟ ಹೆಚ್ಚಿಸಿ

Last Updated 26 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮಕ್ಕಳ ಭವಿಷ್ಯಕ್ಕೆ ಬುನಾದಿ ಪ್ರಾಥಮಿಕ ಶಾಲಾ ಶಿಕ್ಷಣ. ಆದರೆ ನಮ್ಮಲ್ಲಿ ಈ ಬುನಾದಿಯೇ ಅಲುಗಾಡುತ್ತಿದೆ. ಕಲಿಕೆಯ ಮಟ್ಟ ಹಾಗೂ ಕಲಿಸುವವರ ಅರಿವಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇವೆ. ಶಿಕ್ಷಕ ವೃತ್ತಿಯನ್ನು, ಹೊಟ್ಟೆ­ಪಾಡಿಗಾಗಿ ನಿರ್ವಹಿಸುವ ಇನ್ನಿತರ ಯಾವುದೇ ಒಂದು ಕೆಲಸ ಎಂಬಂತೆ ಭಾವಿಸುವವರ ಸಂಖ್ಯೆ ಹೆಚ್ಚುತ್ತಿ­ರು­ವುದು ಹಾಗೂ ಅಂಥವರನ್ನು ತರಬೇತುಗೊಳಿಸುವ ಬಹುಪಾಲು ಸಂಸ್ಥೆಗಳು ವೃತ್ತಿಪರತೆಯಿಂದ ಬಹುದೂರ ಸರಿದು, ಲಾಭಕೋರ ದಂಧೆಯಲ್ಲಿ ಮುಳು­ಗಿರುವುದು ಇದಕ್ಕೆ ಪ್ರಮುಖ ಕಾರಣ.

ಶಿಕ್ಷಕ ತರಬೇತಿಯಲ್ಲಿ ಗುಣಮಟ್ಟದ ಕುಸಿತ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ) ಫಲಿತಾಂಶ ನಿದರ್ಶನವಾಗಿ ನಿಲ್ಲುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಜೂನ್‌ ತಿಂಗಳಲ್ಲಿ ನಡೆಸಿದ ಈ ಅರ್ಹತಾ ಪರೀಕ್ಷೆಗೆ ಒಟ್ಟು 3,86,021 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ ತೇರ್ಗಡೆ ಹೊಂದಿ­ದ­ವರ ಸಂಖ್ಯೆ ಬರೀ 22,899. ಅಂದರೆ ಶೇಕಡ 5.9ರಷ್ಟು ಮಂದಿಯಷ್ಟೇ  ಉತ್ತೀರ್ಣರಾಗಿದ್ದಾರೆ.

150 ಅಂಕಗಳಿಗೆ ನಡೆದ ಈ ಪರೀಕ್ಷೆಯಲ್ಲಿ ಕನಿಷ್ಠ 90 ಅಂಕ ಪಡೆದ ಅಭ್ಯರ್ಥಿಗಳು ಮಾತ್ರ ಮುಂದೆ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆಯಲು ಅರ್ಹರಾಗುತ್ತಾರೆ. ಉದ್ಯೋಗ ಗಿಟ್ಟಿಸಬೇಕಾದರೆ ಈ ಸ್ಪರ್ಧಾತ್ಮಕ ಪರೀಕ್ಷೆ ತೇರ್ಗಡೆ­ಯಾಗ­ಬೇಕು. ಅರ್ಹತೆ ಮಟ್ಟದಲ್ಲೇ ಶೇ 94ರಷ್ಟು ಮಂದಿ ಮುಗ್ಗರಿಸಿರಬೇಕಾದರೆ ಅಂತಿಮ ಹಂತದಲ್ಲಿ ದಡ ಸೇರುವವರ ಸಂಖ್ಯೆ ಇನ್ನೆಷ್ಟು ಕುಸಿಯಬಹುದು? ಶಿಕ್ಷಕರಾಗಲು ಬಯಸುವವರ ಶೈಕ್ಷಣಿಕ ಗುಣಮಟ್ಟ ತೃಪ್ತಿಕರವಾಗಿಲ್ಲ ಎಂಬ ಅಂಶವಂತೂ ಟಿಇಟಿ ಫಲಿತಾಂಶದಿಂದ ದೃಢಪಟ್ಟಿದೆ.

ವಿಶ್ವದೆಲ್ಲೆಡೆಯ ಜ್ಞಾನವಂತ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ತುಂಬ ಮಹತ್ವ ಇದೆ. ನಮ್ಮಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಪ್ರಾಥಮಿಕ ಶಿಕ್ಷಣಕ್ಕೆ ಆದ್ಯತೆ’ ಎಂದು ಹೇಳುತ್ತಲೇ ಬಂದಿವೆ. ಆದರೆ ಪ್ರಾಥಮಿಕ ಶಿಕ್ಷಣದ ಮೂಲ ಅಗತ್ಯ ಎಂದೇ ಪರಿಗಣಿಸಲಾಗಿರುವ ಶಿಕ್ಷಕರ ನೇಮಕ ವಿಷಯದಲ್ಲಿ ಆಸ್ಥೆ ವಹಿಸುತ್ತಿಲ್ಲ. ಶಿಕ್ಷಕರ ಕೊರತೆ ಎಂಬುದು ಮುಗಿಯದ ಗೋಳು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಒಟ್ಟು 9,500 ಶಿಕ್ಷಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಈಗ ಅನುಮೋದನೆ ನೀಡಿದೆ. ಈ ಪೈಕಿ ಸುಮಾರು 8,000 ಶಿಕ್ಷಕರು ಪ್ರಾಥಮಿಕ ಶಾಲೆಗಳಿಗೇ ನೇಮಕ ಆಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಟಿಇಟಿಯಲ್ಲಿ ಬಂದಿರುವ ನಿರಾಶಾದಾಯಕ ಫಲಿತಾಂಶ, ಖಾಲಿ ಇರುವ ಪ್ರಾಥಮಿಕ ಶಿಕ್ಷಕರ ಹುದ್ದೆ ತುಂಬಲು ತೊಡ­ರು­ಗಾಲಾಗಿ ಪರಿಣಮಿಸಿದೆ.

ಅರ್ಹತಾ ಪರೀಕ್ಷೆಯ ಈ ಪ್ರಯೋಗ ರಾಜ್ಯಕ್ಕೆ ಹೊಸದು. ಮೊದಲ ಪ್ರಯತ್ನದಲ್ಲಿ ಆಶಾಭಂಗ ಆಗಿರುವುದಂತೂ ನಿಜ. ಪ್ರಶ್ನೆ­ಪತ್ರಿಕೆಯಲ್ಲಿ ಕೆಲವೊಂದು ತಪ್ಪುಗಳು ಕೂಡ ನುಸುಳಿದ್ದವು. ಇದಕ್ಕೆ ಅನುಭವ ಕೊರತೆಗಿಂತ ಹೊಣೆಗೇಡಿ ಧೋರಣೆಯೇ ಕಾರಣ. ಈ ಫಲಿ­ತಾಂಶದಿಂದ ಶಿಕ್ಷಕರ ತರಬೇತಿಯ ಗುಣಮಟ್ಟ ಬಯಲಾಗಿದೆ. ತರಬೇತಿ ಸಂಸ್ಥೆ­­ಗಳು ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿವೆ. ಅವುಗಳಿಗೆ ಲಗಾಮು ಹಾಕುವುದನ್ನು ಆದ್ಯತೆಯ ಕಾರ್ಯವಾಗಿ ಸರ್ಕಾರ ಪರಿಗಣಿಸ­ಬೇಕು. ಇಂತಹ ಕಡೆ ತರಬೇತಿ ಪಡೆದವರ ಕೈಗೆ ಮಕ್ಕಳ ಭವಿಷ್ಯ ಒಪ್ಪಿಸು­ವು­ದನ್ನು ನೆನೆದರೆ ನಡುಕ ಹುಟ್ಟದೇ ಇರದು. ಸರ್ಕಾರ ಈಗಲಾದರೂ ಎಚ್ಚೆತ್ತು ಶಿಕ್ಷಕರ ತರಬೇತಿಯ ಗುಣಮಟ್ಟ ಎತ್ತರಿಸಲು ಬಿಗಿ ಕ್ರಮ ಕೈಗೊಳ್ಳಬೇಕು. ಆ ಮೂಲಕ ಶಿಕ್ಷಣದ ಬುನಾದಿಯನ್ನು ಭದ್ರಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT