ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣಿಸದಿರು ಕಂಡ್ಯ...

ಈ ಜೀವನಾ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕುಟುಂಬದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾದರೆ, ಅದು ಆ ಕುಟುಂಬದ ಮೇಲೆ ಬೀರುವ ಪರಿಣಾಮ ಭೀಕರವಾದುದು. ಮುಖ್ಯವಾಗಿ ಹಿತೈಶಿಗಳು ಅಥವಾ ಪೋಷಕರು ಈ ಆತ್ಮಹತ್ಯೆ ಕುರಿತು ನಾನಾ ಬಗೆಯಲ್ಲಿ ಯೋಚಿಸಬಹುದು. ತೀವ್ರ ದುಃಖ ಎದುರಿಸಲು ಅವರಿಗೆ ಕಷ್ಟಕರವಾಗಬಹುದು ಅಥವಾ ಸಾಧ್ಯವಾಗದೆ ಇರಬಹುದು. ನೋವು ಕಾಡಬಹುದು.

‘ನನಗೇಕೆ ಹೀಗಾಯಿತು?’. ‘ನಾನೇಕೆ ಆತನ/ಅವಳ ಮನಃಶಾಂತಿ ಅಥವಾ ಆತ್ಮಹತ್ಯೆ ಸಂಜ್ಞೆಗಳನ್ನು ಗುರುತಿಸಲಿಲ್ಲ’ ಅನ್ನಿಸಬಹುದು. ‘ಯಾಕೆ ಅವನು/ಅವಳು ಆತ್ಮಹತ್ಯೆಗೆ ಪ್ರಯತ್ನಿಸುವ ಮುನ್ನ ನನಗೆ ಕರೆ ಮಾಡಲಿಲ್ಲ?’ ಎನ್ನಿಸಬಹುದು. ‘ನಾನು ಅವನ/ಅವಳ ಉತ್ತಮ ಅಪ್ಪ/ಅಮ್ಮ ಅಥವಾ ಪೋಷಕನಾಗಿರಲಿಲ್ಲ’ ಎಂಬ ಚಿಂತೆ ಹುಟ್ಟಬಹುದು. ಪ್ರತಿಯೊಂದು ಆತ್ಮಹತ್ಯೆ ಪ್ರಮುಖವಾಗಿ ಕುಟುಂಬದ ಸದಸ್ಯರು, ಸಹೋದ್ಯೋಗಿಗಳು, ನೆರೆಹೊರೆಯವರು, ಕ್ಲಾಸ್‌ಮೇಟ್ ಅಥವಾ ಹತ್ತಿರದ ಸ್ನೇಹಿತರ ಮೇಲೆ ಪರಿಣಾಮ ಬೀರುತ್ತದೆ.

ನೊಂದ ಕುಟುಂಬದಲ್ಲಿನ ಭಾವನೆಗಳು
ಕೆಳಗೆ ಕೊಟ್ಟಿರುವಂಥ ಹಂತಗಳು ಆತ್ಮಹತ್ಯೆಯ ನಂತರ ಮನೆಯವರು ಮತ್ತು ಹತ್ತಿರದವರು ಅನುಭವಿಸುವ ದುಃಖದ ಹಂತಗಳಾಗಿರುತ್ತವೆ. ಅದು ಕ್ಷಣಿಕವಾಗಿರಬಹುದು ಅಥವಾ ಧೀರ್ಘ ಕಾಲದವರೆಗೆ ಇರಬಹುದು. ಹೀಗಾಗಿ ಇಂಥ ಭಾವನೆಗಳನ್ನು ಎಚ್ಚರದಿಂದ ಚಿಕಿತ್ಸೆಗೆ ಒಳಪಡಿಸಬೇಕು.

ಆಘಾತ (ಶಾಕ್)
ಆತ್ಮಹತ್ಯೆಯಿಂದ ಬದುಕುಳಿದವರು ಅಥವಾ ಆತ್ಮಹತ್ಯೆ ಮಾಡಿಕೊಂಡವರಿಗೆ ಹತ್ತಿರದವರ ತಕ್ಷಣದ ದೈಹಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆ ಆಘಾತ(ಶಾಕ್)ದಿಂದ ಕೂಡಿರುತ್ತದೆ. ಕೋಪ-ಪ್ರೀತಿಪಾತ್ರರು ಮತ್ತು ಕುಟುಂಬದ ಸದಸ್ಯರು ಮೌಲ್ಯಯುತ ಬದುಕನ್ನು ದುರಂತವಾಗಿಸಿಕೊಳ್ಳಲು ಹೊರಟ್ಟಿದ್ದಕ್ಕೆ ಸಿಟ್ಟಾಗಬಹುದು. ಸಿಟ್ಟು ಕೂಡ ಒಂದು  ರೀತಿಯ ದುಃಖದ ಪ್ರತಿಕ್ರಿಯೆ.

ಅಪರಾಧಿತ್ವ-ಆತ್ಮಹತ್ಯೆಯಿಂದಾದ ಸಾವಿನ ನಂತರ ಕುಟುಂಬದ ಸದಸ್ಯರು ತಮ್ಮಿಂದ ಎಲ್ಲಿ ತಪ್ಪಾಯಿತೆಂದು ಹುಡುಕಲು ಶುರು ಮಾಡುತ್ತಾರೆ, ಹೇಗೆ ಆತ್ಮಹತ್ಯೆಯಿಂದ ರಕ್ಷಿಸಬಹುದಿತ್ತು ಎಂದು ಚಿಂತಿಸುತ್ತಾರೆ. ಈ ಸ್ವಯಂ ಅಪರಾಧಿತ್ವ ಅವರ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಾದ ವೈಫಲವನ್ನು ಬಿಂಬಿಸುತ್ತದೆ.

ಭಯ-ಕುಟುಂಬದ ಓರ್ವ ಸದಸ್ಯ ಆತ್ಮಹತ್ಯೆಗೆ ಶರಣಾದರೆ, ನಂತರ ಮತ್ತೋರ್ವ ಇದೇ ಪ್ರಯತ್ನ ಮಾಡುವ ಭಯ ಹುಟ್ಟುಹಾಕುತ್ತದೆ.
ಖಿನ್ನತೆ-ಇದು ನಿದ್ರಾಹೀನತೆ ಅಥವಾ ನಿದ್ದೆಗೆ ಧಕ್ಕೆ ತರಬಹುದು. ಬದುಕಿನ ಸಂತಸವನ್ನು ಕಸಿದುಕೊಳ್ಳಬಹುದು. ಈ ತರಹದ ಒಳ ಭಾವನೆಗಳು ಕಾಲ ಕಳೆದಂತೆ ಕಡಿಮೆಯಾಗಬಹುದು. ಆದಾಗ್ಯೂ ಕೆಲ ಭಾವನೆಗಳು ಶಾಶ್ವತವಾಗಿ ಮಾಯವಾಗಲಾರದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದರೊಂದಿಗೆ ಒಂದಷ್ಟು ಪ್ರಶ್ನೆಗಳು ಉತ್ತರವಿಲ್ಲದೆ ಹಾಗೆ ಉಳಿಯುತ್ತವೆ.

ಆತ್ಮಹತ್ಯೆಯಿಂದ ನೊಂದ ಕುಟುಂಬಕ್ಕೆ ನಿಮ್ಮೆಲ್ಲ ಭಾವನೆಗಳು (ದುಖಃ, ಕೋಪ, ಪಶ್ಚಾತಾಪ ಇತ್ಯಾದಿ) ದುಃಖವನ್ನು ಸೂಚಿಸುತ್ತದೆ ಎಂದು ಅರಿತುಕೊಳ್ಳಿ. ನಿಮಗೆ ತೃಪ್ತಿಯಾಗುವವರೆಗೂ ನಿಮ್ಮಲ್ಲಿನ ಪ್ರಶ್ನೆಗೆ ಉತ್ತರಿಸಲು ಸಮಯ ನೀಡಿ. ನೀವು ಸ್ವಲ್ಪ ಉತ್ತರ ಪಡೆದರೆ, ಅದೇ ಮುಂದಿನ ಉತ್ತರ ಹುಡುಕಬಹುದು. ಅದರಿಂದ ನೀವು ತೃಪ್ತಿಯಾಗಬಹುದು. ದುಖಃಪಡುವುದು ಉತ್ತರಗಳನ್ನು ಹುಡುಕಲು ಸಹಾಯ ಮಾಡುತ್ತದೆ.

ಕುಟುಂಬದ ಇತರೆ ಸದಸ್ಯರೊಂದಿಗೆ ಸಂಪರ್ಕದಲ್ಲಿರಿ. ನಿಮ್ಮ ಪ್ರೀತಿಪಾತ್ರರು ಆತ್ಮಹತ್ಯೆಗೆ ಶರಣಾದರೆ 6 ತಿಂಗಳ ಕಾಲ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರುವುದು ಅತ್ಯಂತ ಮಹತ್ವದ್ದು. ಕುಟುಂಬದ ಸದಸ್ಯರೊಂದಿಗೆ ಮುಕ್ತವಾಗಿ ಮಾತನಾಡಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಅವರ ಸಹಾಯ ಕೇಳಿ.

ಮಕ್ಕಳ ಕುರಿತು ವಿಶೇಷ ಗಮನಹರಿಸಿ-ಮಕ್ಕಳ ಪಾಲಿಗೆ ಇದು ಅತ್ಯಂತ ಸಂಕಷ್ಟದ ಸಮಯ. ಅವರಿಗೆ ಸಮಯ ಕೊಡಿ. ನೀವು ಅವರನ್ನು ಈಗಲೂ ಪ್ರೀತಿಸುತ್ತಿರುವಿರಿ ಎಂಬದುನ್ನು ಅವರಿಗೆ ಮನದಟ್ಟು ಮಾಡಿಕೊಡುವುದು ಅತ್ಯಂತ ಮಹತ್ವದ್ದು. ಆತ್ಮಹತ್ಯೆ ಮಾಡಿಕೊಂಡವರಿಗೆ ಸಂಬಂಧಿಸಿದ ಕೆಲ ವಿಶೇಷ ದಿನಗಳಾದ ಹುಟ್ಟುಹಬ್ಬ, ವಾರ್ಷಿಕೋತ್ಸವ ಮತ್ತು ಇತರ ವಿಶೇಷ ದಿನಗಳ ಅತ್ಯಂತ ಒತ್ತಡದ ದಿನಗಳು ಎಂಬುದರ ಅರಿವಿರಲಿ. 
ಈ ದಿನಗಳಲ್ಲಿ ನೀವು ಇತರರೊಂದಿಗೆ ಸಕ್ರಿಯರಾಗಿರಲು ಯೋಜನೆ ರೂಪಿಸಿಕೊಳ್ಳಿ.

ಇದರಿಂದ ಗುಣಮುಖರಾಗಲು ನಿಮಗೆ ಸಮಯ ಬೇಕು. ಇದು ನಿರ್ದಿಷ್ಟ ಸಮಯದಲ್ಲಿ ಆಗುತ್ತದೆ ಎಂದು ನಿರೀಕ್ಷಿಸಬೇಡಿ. ಇದು ಪ್ರತಿಯೊಬ್ಬರಿಗೂ ಭಿನ್ನ. ನಿಮ್ಮೊಳಗೆ ನೀವು ಮತ್ತು ಇತರರ ಜೊತೆ ತಾಳ್ಮೆಯಿಂದಿರಿ. ಇದೇ ರೀತಿ ಇತರ ಕುಟುಂಬದ ಸದಸ್ಯರು ಮತ್ತು ಪ್ರೀತಿಪಾತ್ರರು ಅವರ ದುಃಖದಲ್ಲಿ ಇದೇ ರೀತಿ ಸಹಕಾರ ಬಯಸುತ್ತಾರೆ. ವೃತ್ತಿಪರರ ಸಹಾಯಕ್ಕೆ ಸದಾ ಸಲಹೆ ನೀಡುತ್ತೇವೆ.

(ಲೇಖಕರು ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ, ನಿಮ್ಹಾನ್ಸ್)

ಸಮಾಲೋಚನೆಗೆ: ಬೆಂಗಳೂರಿನ ವೆಲ್‌ಬೀಂಗ್‌ ಸಂಸ್ಥೆ ದೂರವಾಣಿ: 94808 29670 / (080) 2668 5948 ಸಮಯ: ಬೆಳಗಿನ 9ರಿಂದ ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT