ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣಿಸದಿರು ಕಂಡ್ಯ...

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಇದು ಪ್ರೇಕ್ಷಕರಿಗೆ ನಿರ್ದೇಶಕ ಕೇಳುವ ಪ್ರಶ್ನೆ’– ಶೀರ್ಷಿಕೆ ಕುರಿತ ಕುತೂಹಲಕ್ಕೆ ಚುಟುಕಾಗಿ ಉತ್ತರಿಸಿದರು ನಿರ್ದೇಶಕ ಆನಂದ್‌.
‘ಟೈಟ್ಲು ಬೇಕ’ ಎಂಬ ವಿಶಿಷ್ಟ ಹೆಸರಿನ ಸಿನಿಮಾ ಇಂದು (ಅ.9) ತೆರೆಕಾಣುತ್ತಿದೆ. ಪ್ರಶ್ನೆ ಹೊಂದಿದ್ದರೂ ಶೀರ್ಷಿಕೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಇಲ್ಲದ ಚಿತ್ರವಿದು. ಸಿನಿಮಾ ಹಿಂದಿನ ವಾಸ್ತವ ಮತ್ತು ಜನರ ನಡುವಿನ ಮುಖಾಮುಖಿಯೇ ‘ಟೈಟ್ಲು ಬೇಕ’.

ಡೈರೆಕ್ಟರ್‌ ದೃಷ್ಟಿಕೋನದಲ್ಲಿ ಕಥೆ ಸಾಗುತ್ತದೆ. ಇವತ್ತಿನ ಪೀಳಿಗೆಯ ಯುವಕ ಯುವತಿಯರ ಮನೋಭಾವಗಳ ಚಿತ್ರಣವಿದೆ. ಪ್ರತಿ ಸಿನಿಮಾ ಮಾಡುವಾಗಲೂ ಪ್ರೇಕ್ಷಕರಿಗೆ ಏನು ಬೇಕು ಎಂಬುದನ್ನು ನಾವು ಕೇಳುವುದಿಲ್ಲ. ಆದರೆ ಈ ಚಿತ್ರ ಪ್ರೇಕ್ಷಕರ ಅಭಿಪ್ರಾಯದೊಂದಿಗೆ ರೂಪುಗೊಂಡಿದೆ. ಒಂದು ರೀತಿ ಇದು ಪ್ರೇಕ್ಷಕರದೇ ಕಥೆ. ಸಹಾಯಕ ನಿರ್ದೇಶಕ ಸಿನಿಮಾ ಮಾಡಲು ಹೊರಟಾಗ ಅನುಭವಿಸುವ ಸವಾಲು–ಸಂಕಟಗಳನ್ನು ಸಿನಿಮಾ ಚೌಕಟ್ಟಿನಲ್ಲಿ ವಿಭಿನ್ನವಾಗಿ ಹೇಳಲಾಗಿದೆ. ಅಂತ್ಯದಲ್ಲಿ ಇಂಥದ್ದೊಂದು ಕಥೆಗೆ ‘ಟೈಟ್ಲು ಬೇಕ’ ಎಂಬ ಪ್ರಶ್ನೆಯನ್ನು ನಿರ್ದೇಶಕ ಪ್ರೇಕ್ಷಕರ ಮುಂದಿಡುತ್ತಾನೆ. ತಮ್ಮನ್ನೂ ಒಳಗೊಳ್ಳುವ ಈ ಚಿತ್ರವನ್ನು ನೋಡಿದಾಗ ಪ್ರೇಕ್ಷಕರಲ್ಲಿಯೂ ಈ ಸಿನಿಮಾಕ್ಕೆ ಟೈಟ್ಲು ಬೇಕ? ಎಂಬ ಪ್ರಶ್ನೆ ಮೂಡುತ್ತದೆ’ ಎಂದು ತಮ್ಮ ಸಿನಿಮಾ ಹಲವು ಬಗೆಯಲ್ಲಿ ವಿಭಿನ್ನ ಎಂಬ ವಿವರಣೆ ನೀಡಿದರು ಆನಂದ್‌.

ಸಿನಿಮಾದೊಂದಿಗೆ ಬೆಸೆಯುವ ಕಥೆ ಇದ್ದರೂ ಇದು ಸಿನಿಮಾದೊಳಗಿನ ಸಿನಿಮಾ ಅಲ್ಲ. ಅನುಭವವೂ ಇದೆ, ಕಣ್ಣಾರೆ ನೋಡಿರುವುದೂ ಇದೆ. ನೈಜತೆಗೆ ಹತ್ತಿರವಾಗಿ, ಇಂದು ನಾವು ಪದೇ ಪದೇ ನೋಡುವ ಸಂಗತಿಗಳು ಯಾವುವು ಎಂದು ಹುಡುಕಾಟ ಆರಂಭಿಸಿದಾಗ ಕಂಡ ವಸ್ತು ಇದು. ಇದು ಪ್ರೇಕ್ಷಕರನ್ನು ಒಳಗೊಳ್ಳುವ ಸಿನಿಮಾ. ಕಥೆ ನಿರ್ದೇಶಕನ ದೃಷ್ಟಿಕೋನದಂತೆ ನಡೆದರೂ ಪ್ರೇಕ್ಷಕರ ದೃಷ್ಟಿಕೋನದಂತೆ ಕ್ಲೈಮ್ಯಾಕ್ಸ್‌ ನಡೆಯುತ್ತದೆ. ಕಲಾವಿದರು ಮಾತ್ರವಲ್ಲ, ಸಾಮಾನ್ಯ ಜನರೂ ಇಲ್ಲಿ ಪಾತ್ರಗಳಾಗಿದ್ದಾರೆ. ಕೆಲವು ಖ್ಯಾತ ನಿರ್ಮಾಪಕರು ಸಹ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ವಸ್ತುವಿನೊಂದಿಗೆ, ವಿಭಿನ್ನ ಸಿನಿಮಾ ಕಟ್ಟಿ ಕೊಡಲು ಪ್ರಯತ್ನಿಸಿದ್ದೇನೆ. ನಿರೂಪಣೆ ಯಲ್ಲಿಯೂ ಹೊಸತನವಿದೆ.

ಎಲ್ಲರೊಳಗೆ ಒಬ್ಬನಂತೆ ನಾನು ಆಗಲಾರೆ. ಇದು ನನ್ನದೇ ಶೈಲಿಯ ಸಿನಿಮಾ. ಸ್ನೇಹ ಮತ್ತು ಪ್ರೀತಿಯಲ್ಲಿ ಒಡಕು ಏಕೆ ಉಂಟಾಗುತ್ತದೆ ಎಂಬುದನ್ನು ತೋರಿಸುತ್ತಲೇ, ಆ ಬಿರುಕನ್ನು ಸರಿಪಡಿಸಿಕೊಳ್ಳುವ ಉತ್ತರವನ್ನೂ ನೀಡಿದ್ದೇನೆ. ಸಿನಿಮಾ ನೋಡಿದವರಲ್ಲಿ ಮುಂದೆ ಅಂತಹ ಒಡಕುಗಳು ಉಂಟಾಗುವುದಿಲ್ಲ. ಒಳ್ಳೆಯ ಸಂದೇಶ ಚಿತ್ರದಲ್ಲಿದೆ ಎಂದು ಆನಂದ್‌ ಭರವಸೆ ವ್ಯಕ್ತಪಡಿಸುತ್ತಾರೆ.

ಗಾಂಧಿನಗರದ ಹುಚ್ಚು...
ಆನಂದ್‌ ಚನ್ನರಾಯಪಟ್ಟಣಕ್ಕೆ ಸಮೀಪದ ಒಂದು ಹಳ್ಳಿಯವರು. ಏಳನೇ ತರಗತಿಗೇ ಸಿನಿಮಾ ಹುಚ್ಚು ಹತ್ತಿ ಗಾಂಧಿನಗರಕ್ಕೆ ಓಡಿ ಬಂದವರು. ಅವಕಾಶಕ್ಕಾಗಿ ನಿರ್ದೇಶಕರ ಮನೆ – ಗಲ್ಲಿಗಳನ್ನು ಸುತ್ತಿದರು. ಊಟ, ಆಶ್ರಯ ಇಲ್ಲದೆ ಮೆಜೆಸ್ಟಿಕ್‌ನಲ್ಲಿ ಮಲಗಿದವರು. ಇಲ್ಲಿ ಬದುಕು ಕಷ್ಟ ಎಂದಾಗ ಊರು ನೆನಪಾಗುವುದು. ಊರಿಗೆ ಹೋದರೆ, ಅಲ್ಲಿ ಕೆಲ ದಿನಗಳಲ್ಲಿಯೇ ಮತ್ತೆ ಬಣ್ಣದ ಲೋಕದ ಕನಸು ದಟ್ಟವಾಗಿ ಗಾಂಧಿನಗರದತ್ತ ಕರೆದೊಯ್ಯುವುದು. ಹೀಗೆ ಹೆಣಗಾಡುತ್ತಿರುವಾಗಲೇ ಚಂದ್ರು ಎಂಬುವವರೊಬ್ಬರು ‘ಚೆಲ್ಲಾಟದ ಹುಡುಗರು’ ಎಂಬ ಸಿನಿಮಾದಲ್ಲಿ ಕೆಲಸ ಕೊಡಿಸಿದರು. ಬರವಣಿಗೆ ಎಂದರೆ ಚಿಕ್ಕಂದಿನಿಂದಲೂ ಆಸಕ್ತಿ. ಮೊದಲ ಸಿನಿಮಾದಲ್ಲಿ ಸಂಭಾಷಣೆ ಬರೆಯುವ ಅವಕಾಶ. ಆಗ ತಮಗೆ 12 ವರ್ಷ ಎಂದು ಹೇಳಿಕೊಳ್ಳುತ್ತಾರೆ ಆನಂದ್‌.

‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’, ‘ಸತ್ಯ ಇನ್ ಲವ್‌’, ‘ಗಿಲ್ಲಿ’, ‘ಛತ್ರಪತಿ’, ‘ಆಲ್‌ ದಿ ಬೆಸ್ಟ್‌’ ಮುಂತಾದ ಸಿನಿಮಾಗಳಲ್ಲಿ ದುಡಿದೆ. ರಾಘವಲೋಕಿ, ಶರಣ್‌, ಪ್ರೇಮ್, ಕಿರಣ್‌ ಗೋವಿ, ದಯಾಳ್‌ ಪದ್ಮನಾಭನ್‌, ಮುರುಗದಾಸ್‌ ಮುಂತಾದ ನಿರ್ದೇಶಕರ ಬಳಿ ಕೆಲಸ ಕಲಿತೆ. ಈಗ ಆ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುವುದಿಲ್ಲ. ದೊಡ್ಡ ದೊಡ್ಡ ನಿರ್ದೇಶಕರ ಬಳಿ ಹೋಗುತ್ತಿದ್ದೆ. ಗೇಟಿನ ಒಳಗೆ ಬಿಡುತ್ತಿರಲಿಲ್ಲ.  ಜೊತೆಗಿದ್ದವರು ನಿನ್ನ ಕಥೆಯೇ ಸಿನಿಮಾ ಮಾಡಬಹುದು ಎನ್ನುತ್ತಿದ್ದರು. ಆಗಲೇ ನಿರ್ದೇಶಕನೇ ಆಗಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡಿದ್ದೆ’ ಎಂದು ಅವರು ಹೇಳುತ್ತಾರೆ.

ಸಿನಿಮಾ ಎಂದರೆ ವೈರಸ್ಸು. ಒಂದು ಬಾರಿ ಸೋಂಕು ತಗುಲಿದರೆ ಅದರಿಂದ ಪಾರಾಗಲು ಆಗುವುದಿಲ್ಲ ಎನ್ನುವುದು ಅವರ ಅನುಭವ. ಆಗದು ಎಂದು ವಾಪಸು ಹೋದರೆ ‘ಸೋತ’ ಎಂದು ಜನ ಹೀಯಾಳಿಸುತ್ತಾರೆ. ಗೆಲ್ಲದಿದ್ದರೂ ಸತ್ತಾಗ, ‘ಗೆಲ್ಲುವ ಪ್ರಯತ್ನದಲ್ಲಿ ಸತ್ತ’ ಎನ್ನುತ್ತಾರೆಯೇ ವಿನಾ, ಸೋತ ಎನ್ನುವುದಿಲ್ಲ. ಹಾಗೆ ಸೋಲಲು ನಾನು ಸಿದ್ಧನಿಲ್ಲ ಎನ್ನುವ ಆನಂದ್‌, ಪ್ರೇಕ್ಷಕರು ಏನನ್ನು ಬಯಸುತ್ತಾರೋ ಅದನ್ನೇ ಸಿನಿಮಾದಲ್ಲಿ ನೀಡಿದ್ದೇನೆ ಎನ್ನುತ್ತಾರೆ. ಚಿತ್ರಮಂದಿರಕ್ಕೆ ಬರುವ ಪ್ರತಿ ಪ್ರೇಕ್ಷಕನಲ್ಲಿ ಆತನದ್ದೇ ಸಾವಿರ ಯೋಚನೆಗಳಿರುತ್ತವೆ. ಸಿನಿಮಾ ಎರಡು ಗಂಟೆ ಕಾಲ ಆ ಯೋಚನೆಗಳನ್ನು ಮರೆಸುವ ಕೆಲಸ ಮಾಡಬೇಕು. ಒಂದೋ ನಗಿಸಬೇಕು, ಇಲ್ಲವೇ ಅಳಿಸಬೇಕು. ಆದರೆ ತಲೆನೋವು ಕೊಡಬಾರದು ಎಂದು ತಮ್ಮ ಸಿನಿಮಾ ನೀತಿ ಹೇಳಿಕೊಳ್ಳುತ್ತಾರೆ ಆನಂದ್‌.

ನಾಯಕನಟ ಹರೀಶ್‌ ಮತ್ತು ಆನಂದ್‌ ಹಳೆಯ ಸ್ನೇಹಿತರು. ನಾಯಕಿಗಾಗಿ ನೂರಾರು ಜನರನ್ನು ಆಡಿಷನ್‌ ಮಾಡಲಾಗಿತ್ತು. ದೊಡ್ಡ ನಟಿಯರ ಮನೆಯ ಬಾಗಿಲು ತಟ್ಟಿದಾಗ ಒಬ್ಬೊಬ್ಬರದು ಒಂದೊಂದು ರೀತಿಯ ಬೇಡಿಕೆ. ಕೊನೆಗೆ ಕಥೆ ಮೆಚ್ಚಿಕೊಂಡ ನೇಹಾ ಪಾಟೀಲ್‌ ನಟಿಸಲು ಮುಂದಾದರು. ಆನಂದ್‌ ತಮ್ಮಂತೆಯೇ ಅವಕಾಶಕ್ಕಾಗಿ ಗಾಂಧಿನಗರಕ್ಕೆ ಬಂದ ಎಂಟು ಮಂದಿ ಹೊಸಬರನ್ನು ತಮ್ಮ ಬಳಿ ಸಹಾಯಕ ನಿರ್ದೇಶಕರನ್ನಾಗಿ ಸೇರಿಸಿಕೊಂಡಿದ್ದಾರೆ. ‘ಉಪವಾಸವಿದ್ದಾಗಲೂ ತನ್ನ ಜೊತೆ ಇದ್ದ ಜನರಿವರು’ ಎಂದು ಅವರ ಕುರಿತು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಚಿತ್ರಮಂದಿರದ ಹಂಚಿಕೆ, ಕನ್ನಡ ಚಿತ್ರಗಳ ನಿರ್ಲಕ್ಷ್ಯ ಮತ್ತು ಪರಭಾಷಾ ಚಿತ್ರಗಳಿಗೆ ಮಣೆ ಹಾಕುವ ಧೋರಣೆ ಕುರಿತು ಅವರಲ್ಲಿ ಆಕ್ರೋಶವಿದೆ. ಸ್ವಂತ ಊರಿನಲ್ಲಿಯೇ ಚಿತ್ರಮಂದಿರ ದೊರಕುತ್ತಿಲ್ಲ ಎಂಬ ನೋವೂ ಅವರಲ್ಲಿದೆ.

ಇಂದಿನಿಂದ ‘ಟೈಟ್ಲು ಬೇಕ’
ಸಿನಿಮಾ ಶೀರ್ಷಿಕೆಗಳಿಗಾಗಿ ಗಾಂಧಿನಗರದಲ್ಲಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಂಗಳದಲ್ಲಿ ಕದನ–ಕುತೂಹಲಗಳೇ ನಡೆದಿವೆ. ಯಾರಿಗೆ ಬೇಡ ಹೇಳಿ ಆಕರ್ಷಕ ಟೈಟಲ್‌ಗಳು! ಈಗ ಆನಂದ್ ಜಿ.ಕೆ. ಟೈಟಲ್‌ ಮೂಲಕವೇ ಅದೃಷ್ಟ ಪರೀಕ್ಷೆಗೆ ಮುಂದಾಗಿ ದ್ದಾರೆ. ಅಂದಹಾಗೆ, ಆನಂದ್ ನಿರ್ದೇಶನದ ‘ಟೈಟ್ಲು ಬೇಕ’ ಇಂದು (ಅಕ್ಟೋಬರ್ 09) ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

‘ಸಹಾಯಕ ನಿರ್ದೇಶಕನೊಬ್ಬ ಸಿನಿಮಾ ಮಾಡಬೇಕಾದರೆ ಎದುರಿಸುವ ತವಕ–ತಲ್ಲಣಗಳು ಮತ್ತು ಸ್ನೇಹ ಅಂದರೆ ಶೋಕಿ ಮಾಡುವಂಥದ್ದಲ್ಲ, ನೆರವಾಗುವಂಥದ್ದು ಎನ್ನುವ ಎರಡು ವಿಷಯಗಳನ್ನು ಆಧರಿಸಿ ನಿರ್ದೇಶಕರು ‘ಟೈಟ್ಲು ಬೇಕ’ ಕಥೆ ಹೆಣೆದಿದ್ದಾರೆ. ಒಂದು ರೀತಿಯಲ್ಲಿ ಇದು ಸಿನಿಮಾದೊಳಗೊಂದು ಸಿನಿಮಾ ಎನ್ನಬಹುದಾದ ಕಥೆ. ‘ನಾನು ಸಾಮಾನ್ಯ ಹುಡುಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ.

ಬ್ಬ ಹುಡುಗಿ ಸಂಸ್ಕೃತಿಯನ್ನು ಮೀರಿ ಹೋದಾಗ ಅದನ್ನು ವಿರೋಧಿಸುತ್ತೇನೆ. ಅವಳಿಗೆ ಬುದ್ದಿ ಕಲಿಸುತ್ತೇನೆ. ಅವಳಿಗಾಗಿ ಬದಲಾಗುತ್ತೇನೆ’ ಎಂದು ತಮ್ಮ ಮೊದಲ ಚಿತ್ರದ ಅನುಭವಗಳನ್ನು ಬಿಡಿಸಿಟ್ಟರು ನಾಯಕ ಆಯುಷ್. ಬರೀ ಹುಡುಗರು ಮಾತ್ರವಲ್ಲ, ಹುಡುಗಿಯರೂ ಫ್ಲರ್ಟ್ ಮಾಡುತ್ತಾರೆ ಎಂಬಂಥ ಪಾತ್ರ ನೇಹಾ ಪಾಟೀಲರದ್ದು. ಈ ಫ್ಲರ್ಟ್ ಹುಡುಗಿಗೆ ನಾಯಕ ಹೇಗೆ ಬುದ್ಧಿ ಕಲಿಸುತ್ತಾನೆ ಎನ್ನುವುದೂ ಚಿತ್ರಕಥೆಯಲ್ಲಿ ಮುಖ್ಯ ಅಂಶ.

ಸಂಗಮೇಶ ಬಿ. ಹಲಗತ್ತಿ, ಮಹದೇವ ಹಲಗತ್ತಿ ನಿರ್ಮಾಪಕರು. ಛಾಯಾಗ್ರಹಕ ರಾಕೇಶ್ ತಿಲಕ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT