ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲೂರು: 12ರಂದು ನಕ್ಷತ್ರಾಕಾರದ ರಾಜ್ಯದ ಪ್ರಥಮ ಚರ್ಚ್‌ ಉದ್ಘಾಟನೆ

Last Updated 6 ಮೇ 2016, 5:14 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರದ ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಕರ್ನಾ ಟಕದ ಪ್ರಥಮ ನಕ್ಷತ್ರಾಕಾರದ ಸಂತ ಫ್ರಾನ್ಸಿಸ್‌ ಆಸಿಸಿಯವರ ಚರ್ಚ್‌ನ ಉದ್ಘಾಟನಾ ಸಮಾರಂಭವು ಇದೇ 12ರಂದು ಬೆಳಿಗ್ಗೆ 9ಗಂಟೆಗೆ ನಡೆಯಲಿದೆ ಎಂದು ಚರ್ಚ್‌ನ ಧರ್ಮಗುರು ಸುನಿಲ್‌ ವೇಗಸ್‌ ಹೇಳಿದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್‌ ಐಸಾಕ್‌ ಲೋಬೊ ನೂತನ ಚರ್ಚ್‌ ಅನ್ನು ಉದ್ಘಾಟಿಸುವರು. ಬಲಿಪೂಜೆಯ ಬಳಿಕ ನಡೆಯುವ ಸಭಾಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ, ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ, ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅನಿಲ್‌ ಡಿಸೋಜ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರ ಗಣ್ಯರು ಭಾಗವಹಿಸುವರು. ಸಂಜೆ 6.30ಕ್ಕೆ ಮಂಗಳೂರಿನ ‘ಚಾ ಪರ್ಕ’ ಕಲಾವಿದರಿಂದ ‘ಹೇಳುವಂತದಲ್ಲ ’ ಕನ್ನಡ ನಾಟಕ ಪ್ರದರ್ಶನವಾಗಲಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚರ್ಚ್‌ ತಲ್ಲೂರು, ಉಪ್ಪಿನಕುದ್ರು, ಹೆಮ್ಮಾಡಿ, ದೇವಲ್ಕುಂದ ಹಾಗೂ ಹಟ್ಟಿಯಂಗಡಿ ಈ ಐದು ಗ್ರಾಮಗಳನ್ನು ಒಳಗೊಂಡಿದ್ದು, 220 ಕುಟುಂಬಗಳ 896 ಕ್ರೈಸ್ತ ವಿಶ್ವಾಸಿಗಳನ್ನು ಹೊಂದಿದೆ. ಚರ್ಚ್‌ನಲ್ಲಿ ಕ್ಯಾಥೋಲಿಲ್‌ ಸಭಾ, ವಿನ್ಸೆಂಟ್‌ ದಿ ಪಾವ್ಲ್‌ ಸಭೆ, ಫ್ರಾನ್ಸಿಸ್ಕನ್‌ ಸಭೆ, ವೈಸಿಎಸ್‌, ವೇದಿ ಸೇವಕರ ಸಂಘ ಟನೆಯಲ್ಲದೆ 18 ವಿವಿಧ ಆಯೋಗ ಗಳಿವೆ. ಸುಮಾರು ₹ 3.5 ಕೋಟಿ ವೆಚ್ಚ ದಲ್ಲಿ ನಿರ್ಮಿಸಲಾದ ನೂತನ ಚರ್ಚ್‌ನಲ್ಲಿ ಏಕಕಾಲದಲ್ಲಿ 600 ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಲು ಅವಕಾಶವಿದ್ದು, 10,800 ಚದರಅಡಿ ವಿಸ್ತೀರ್ಣವನ್ನು ಹೊಂದಿದೆ. ಚರ್ಚ್‌ನ್ನು ನಕ್ಷತ್ರಾಕಾರದ ಹೊಸ ವಿನ್ಯಾಸದಲ್ಲಿ ನಿರ್ಮಿಸಿದ್ದು, ಕರ್ನಾಟಕದಲ್ಲಿಯೇ ಇಂತಹ ವಿನ್ಯಾಸ ಹೊಂದಿದ ಪ್ರಥಮ ಚರ್ಚ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು. 

ಚರ್ಚ್‌ನ ಪಾಲನಾ ಮಂಡಳಿಯ ಉಪಾಧ್ಯಕ್ಷ ಅರುಣ್‌ ಮೆಂಡೊನ್ಸಾ, ಕಾರ್ಯದರ್ಶಿ ಸ್ಟ್ಯಾನಿ ಡಿಸಿಲ್ವಾ, ಮಾಧ್ಯಮ ಸಂಚಾಲಕ ಪ್ರವೀಣ್‌ ಪಿರೇರಾ, ಕಾರ್ಯಕ್ರಮ ಸಂಚಾಲಕ ಜೋನ್‌ ಮೆಂಡೊನ್ಸಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT