ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರು ಬೆಟದೂರಲ್ಲಿ ಕಣ್ಣೀರಸಾಗರ

ಸಾವು ಜಯಿಸದ ಹನುಮಂತಪ್ಪ: ಕುಟುಂಬಕ್ಕೆ ಜನಪ್ರತಿನಿಧಿಗಳಿಂದ ಸಾಂತ್ವನ
Last Updated 11 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಟದೂರ (ಧಾರವಾಡ ಜಿಲ್ಲೆ): ಆರು ದಿನ ಹಿಮದಡಿಯಲ್ಲಿ ಹುದುಗಿಯೂ ಉಸಿರಾಡುತ್ತಿದ್ದ ತಮ್ಮೂರಿನ ಯೋಧ ಹನುಮಂತಪ್ಪ ಕೊಪ್ಪದ, ಸಾವು ಗೆದ್ದುಕೊಂಡೇ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಕುಂದಗೋಳ ತಾಲ್ಲೂಕಿನ ಬೆಟದೂರಿನ ಗ್ರಾಮಸ್ಥರು ಗುರುವಾರ ಮಧ್ಯಾಹ್ನ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದರು.

ಇಡೀ ಊರಿನಲ್ಲಿ ಒಮ್ಮೆಲೇ ಸೂತಕದ ಛಾಯೆ ಆವರಿಸಿತು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಗ್ರಾಮದ ಮಂದಿರ– ಮಸೀದಿಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಪ್ರಾರ್ಥನೆ ನಡೆದಿತ್ತು. ಮೃತ್ಯುಂಜಯ ಮಂತ್ರ ಪಠಿಸಲಾಗುತ್ತಿತ್ತು.
ಆದರೆ, ಯೋಧನ ಸಾವಿನ ಸುದ್ದಿ ಮಾಧ್ಯಮಗಳ ಮೂಲಕ ತಿಳಿಯುತ್ತಲೇ ಮಂತ್ರ ಹೇಳುತ್ತಿದ್ದ ಧ್ವನಿಗಳು ಕ್ಷೀಣಿಸಿ ದವು. ಮಹಿಳೆಯರು, ವಿದ್ಯಾರ್ಥಿಗಳು ವೀರ ಯೋಧನ ಮನೆಯತ್ತ ಭಾರವಾದ ಹೆಜ್ಜೆ ಹಾಕತೊಡಗಿದರು.

ಎದೆ ಬಡಿದುಕೊಂಡು ಅಳುತ್ತಿದ್ದ ಯೋಧನ ಚಿಕ್ಕಮ್ಮ ಲಕ್ಷ್ಮವ್ವ ಕೊಪ್ಪದ, ಅತ್ತಿಗೆಯರಾದ ಗೌರವ್ವ ಮತ್ತು ಲಕ್ಷ್ಮವ್ವ ಅವರನ್ನು ಸಮಾಧಾನಪಡಿಸಲು ಗ್ರಾಮದ ಮಹಿಳೆಯರು ಪ್ರಯತ್ನಿಸುತ್ತಿದ್ದರು.

ಸುದ್ದಿ ತಿಳಿದಾಕ್ಷಣ ಗ್ರಾಮದ ನಾಲ್ಕೂ ಶಾಲೆಗಳಿಗೂ ರಜೆ ಘೋಷಿಸಲಾಯಿತು. ಗ್ರಾಮ ಪಂಚಾಯ್ತಿ ಕಚೇರಿಯ ಎದುರು ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಯಿತು. ಯೋಧನ ಮನೆಯಲ್ಲಿಯೇ ಮಕ್ಕಳು ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು.

ಪ್ರತಿಕ್ರಿಯೆ ಪಡೆಯಲು ಪ್ರಯತ್ನಿ ಸುತ್ತಿದ್ದ ಮಾಧ್ಯಮಗಳ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದ ಕುಟುಂಬದ ಸದಸ್ಯರು, ಉಮ್ಮಳಿಸಿ ಬರುತ್ತಿದ್ದ ಕಣ್ಣೀರನ್ನು ತಡೆಹಿಡಿಯಲು ಕಷ್ಟಪಡುತ್ತಿದ್ದರು.

ಬರಲೇ ಇಲ್ಲ:  ‘ಇದೇ 27ಕ್ಕೆ ನನ್ನ ಅಣ್ಣ ಊರಿಗೆ ಬಂದು ಹೋಗಿ ಐದು ತಿಂಗಳಾಗುತ್ತದೆ. ನನ್ನ ಮಗನ ಕೈಲಿ ನೂರು ರೂಪಾಯಿ ಕೊಟ್ಟು, ಅವನಿಗೆ ಉಡದಾರ ಕೊಡಿಸಿ ಹೋಗಿದ್ದ. ಮಗನನ್ನ ಚೆನ್ನಾಗಿ ನೋಡಿಕೋ ಎಂದು ಹೇಳಿ ಹೋದವ ಮತ್ತೆ ಬರಲೇ ಇಲ್ಲ’ ಎಂದು ಗದ್ಗದಿತರಾದರು ಹನುಮಂತಪ್ಪ ಅವರ ಚಿಕ್ಕಪ್ಪನ ಮಗಳು ರತ್ನವ್ವ ಕೊಪ್ಪದ.

‘ಸೈನ್ಯದಾಗ ದುಡಿದು ಬಂದರೂ ಅವನು ದಣಿಯುತ್ತಿರಲಿಲ್ಲ.  ಹೊಲಕ್ಕೆ ಹೋಗಿ ಹತ್ತಿಕಾಳು ಊರುತ್ತಿದ್ದ. ಏನಾದರೂ ಕೆಲಸ ಮಾಡುತ್ತಲೇ ಇದ್ದ’ ಎಂದು ಅವರು ಸ್ಮರಿಸಿದರು.

‘ಪಂಜಾಬ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಹೆಂಡತಿ ಮಹಾದೇವಿಯನ್ನು ಕರೆಸಿಕೊಂಡಿದ್ದ. ಅಲ್ಲಿ ಹವಾಮಾನ ಸರಿ ಇಲ್ಲ ಎಂದು ಹೆಂಡತಿ, ಮಗಳು ನೇತ್ರಾಳನ್ನು ಊರಿಗೆ ತಂದು ಬಿಟ್ಟ. ಇಲ್ಲಿಂದ ಸೀದಾ ಹೋಗಿದ್ದು ಸಿಯಾಚಿನ್‌ಗೆ. ಅಲ್ಲಿ ಆರು ತಿಂಗಳು ಮಾತ್ರ ಡ್ಯೂಟಿ ಹಾಕಿದ್ದಾರೆ. ಅದು ಮುಗಿಸಿಕೊಂಡು ಊರಿಗೆ ಬರುತ್ತೀನಿ ಅಂದಿದ್ದ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಒಂದು ತಿಂಗಳಲ್ಲಿ ಅವನು ಬರಬೇಕಿತ್ತು’ ಎಂದು ಅವರು ಕಣ್ಣೀರಿಟ್ಟರು.

ಅಣ್ಣ ಮಂಜುನಾಥ ಕೊಪ್ಪದ ಅವರನ್ನು ಸಮಾಧಾನಪಡಿಸಲು ಗ್ರಾಮಸ್ಥರು ಹರಸಾಹಸ ಪಡುತ್ತಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಂಬಂಧಿಕರು ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT