ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಕಿದೆಯೇ ಮಾತಿನ ಬಾಣ?

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ರಸಂ ಮತ್ತು ಪಲ್ಯ ಚೆನ್ನಾಗಿತ್ತು ಅಕ್ಕ. ಅತ್ತೆ, ಮಾವ, ಭಾವ ಮಾತ್ರವಲ್ಲ ನಿಮ್‌ ಮಗನೂ ಚೆನ್ನಾಗಿ ಊಟ ಮಾಡಿದ ಇವತ್ತು’ ಅಂತಂದಳು ಕೆಲಸದ ಹುಡುಗಿ. ‘ಹೌದಾ? ಎರಡೆರಡು ಬಾರಿ ಹಾಕಿಸ್ಕೊಂಡು ಊಟ ಮಾಡೋ ರೀತೀನೇ ಅಡುಗೆ ಚೆನ್ನಾಗಿದೆ ಅನ್ನೋದಕ್ಕೆ ‘ಫಲಾನುಭವಿಗಳು’ ಕೊಡೋ ಸರ್ಟಿಫಿಕೇಟು. ಖುಷಿಯಾಯ್ತು ಬಿಡು’ ಅಂತಂದೆ.

ಹಾಗೆ ಎರಡನೇ ಬಾರಿ ರಸಂ ಕುಡಿದು ತೇಗಿ ಮಲಗಿದ್ದ ಮಾಮಿ ಎದ್ದು ಆಚೆ ಬಂದು ‘ಮಾವನಿಗೂ ನಂಗೂ ಸಮಾ ಹಸಿವಾಗಿತ್ತು ಕಣಮ್ಮ ಉಪ್ಪು ಹುಳಿ ಖಾರ ಯಾವ್ದೂ ನೋಡದೇ ತಿಂದುಬಿಟ್ವಿ. ಮಗುನೂ ನಾಲ್ಕು ತುತ್ತು ತಿಂತು’ ಅಂದ್ರು.
ಯಾರ ಮಾತು ನಿಜ? ಮಾಮಿಯ ಮಾತು ಹೃದಯದಿಂದ ಬಂದಿದ್ದಲ್ಲ ಅನ್ನೋದು ಅವರನ್ನು ಎಂಟು ವರ್ಷಗಳಿಂದ ಕಂಡಿರುವ ನನಗೆ ಗೊತ್ತಿತ್ತು. ವಿಶೇಷ ಆಸ್ಥೆ ವಹಿಸಿ ರುಚಿವತ್ತಾಗಿ ಮಾಡಿದ ಅಡುಗೆಯನ್ನು ಗಡದ್ದಾಗಿ ಚಪ್ಪರಿಸಿ ಚಪ್ಪರಿಸಿ ತಿಂದರೂ ‘ಚೆನ್ನಾಗಿತ್ತು’ ಅಂತ ಹೇಳಲಾರದಂತಹ ‘ವಿಶಾಲ ಹೃದಯಿ’ ಅವರು.

‘ಸೊಸೇರು ಒಳ್ಳೇದು ಮಾಡಿದ್ರೂ ಹೇಳ್ಕೋಬಾರ್ದು ಕಣೇ, ತಲೆ ಮೇಲೆ ಕೂತು ಬಿಡ್ತಾರೆ. ಎಷ್ಟಂದ್ರೂ ಅವರು ಸೊಸೆಯಂದಿರು ಅಷ್ಟೇ...’ ಇದೇ ಸೊಸೆಯ ಬಗ್ಗೆ ಒಳ್ಳೆಯ ಮಾತಾಡಿದ ತನ್ನ ಅಕ್ಕನಿಗೆ ಇವರು ಹೇಳುವ ಕಿವಿಮಾತು!

ಇದು ‘ಹಳೆಯ ಕಾಲದವರ’ ಮಾತಾಯಿತು. ಕಚೇರಿಯಲ್ಲಿ ನಾಲ್ಕು ದಿನ ಎಲ್ಲರ ಕಣ್ಣಿಗೆ ಬೀಳುವಂತೆ ನಡೆದುಕೊಂಡರೆ ಆ ಹೆಣ್ಣು ಮಗಳಿಗೆ ನಾಲ್ಕಾರು ಪುರುಷ ಹೆಸರುಗಳನ್ನು ತಳಕು ಹಾಕಿ ಅವಳದಲ್ಲದ ವ್ಯಕ್ತಿತ್ವವನ್ನು ಅವಳ ಮೇಲೆ ಹೇರಿ ಸಂತೃಪ್ತರಾಗುವ ಯುವ ಸಹೋದ್ಯೋಗಿಗಳನ್ನೂ ಕಂಡಿಲ್ಲವೇ?

ಹೊಗಳುವ ಧಾಟಿ/ ಶೈಲಿಯಲ್ಲಿ ಹೀಗಳೆಯುವ ಕಲೆಯನ್ನು ಸಿದ್ಧಿಸಿಕೊಂಡವರು ಹೆಜ್ಜೆಹೆಜ್ಜೆಗೂ ಎದುರಾಗಬಹುದು. ಆದರೆ ಎಲ್ಲರಿಗಿಂತ ತಮಗೆ ಆತ್ಮೀಯರು, ಏನಾದರೂ ವಿಶ್ವಾಸದಿಂದ ಹೇಳಿಕೊಳ್ಳುವುದಾದರೆ ಅವರಲ್ಲಿ ಮಾತ್ರ ನಂಬಿದ ‘ತಮ್ಮವರು’ ಹಾಗೆ ಅವರಿವರ ಮುಂದೆ ಅಂದಾಗ ಮಾತ್ರ ಆಗುವ ನೋವು ಅಸಾಧ್ಯವಾದುದು.

ಸಹೋದ್ಯೋಗಿ, ಗೆಳತಿ ಶಶಿ ಮೊನ್ನೆ ಕಚೇರಿಗೆ ನಾನು ಬರುವುದನ್ನೇ ಕಾದುಕುಳಿತು ನನ್ನ ಕೈಹಿಡಿದುಕೊಂಡು ಏಕ್‌ದಂ ಅಳತೊಡಗಿದಳು. ಅವಳ ಸಂಕಟ ಕಣ್ಣೀರಧಾರೆಯಾಗಿ ಹರಿದುಬರುತ್ತಲೇ ಇತ್ತು. ಏನು ಎತ್ತ ಒಂದೂ ಹೇಳುತ್ತಿಲ್ಲ. ಬಚ್ಚಿಟ್ಟುಕೊಂಡ ಅಸಹನೀಯ ಮಾನಸಿಕ ಹಿಂಸೆ ಹೀಗೆ ದುಃಖದ ಕೋಡಿಯಾಗಿ ಒಡೆದಿದೆ ಎಂದುಕೊಂಡು ಅವಳ ಕೈ ನೇವರಿಸುತ್ತಾ ಕುಳಿತೆ.

‘ನನ್ನ ಅಣ್ಣನ ಹೆಂಡತಿ ಅತ್ತಿಗೆ ಜೊತೆಗೇ ನಾನು ಮುಖ ಕೊಟ್ಟು ಮಾತನಾಡಿದವನಲ್ಲ. ನಿಮ್ಮಲ್ಲಿ ನಾನು ನನ್ನ ಅಮ್ಮನನ್ನು, ಅತ್ತಿಗೆಯನ್ನು ಕಾಣುತ್ತೇನೆ’ ಎಂದು ಅನುನಯದ ಮಾತಾಡಿದ ಯುವಕ ಹಿಂದಿನ ದಿನವಷ್ಟೇ ಅವಳ ಗಂಡನ ಮುಂದೆ  ‘ಅವರಿಗೆ ಹುಡುಗರೆಂದರೆ ಭಾಳ ಇಷ್ಟ. ಅಲ್ವಾ ಅತ್ತಿಗೆ?’ ಎಂದು ನಕ್ಕಿದ್ದನಂತೆ. ಅದೇ ಹುಡುಗನಿಗೆ ಅವಳು ಮಾಡಿದ ಚಾಕರಿ, ಗಂಡನ ಬಗೆಗಿನ ಬದ್ಧತೆ, ಅವಳ ವ್ಯಕ್ತಿತ್ವ ಎಲ್ಲವನ್ನೂ ಅಲುಗಾಡಿಸಿದ ಮಾತಿಗೆ ಬೆಚ್ಚಿಬಿದ್ದಿದ್ದಾಳೆ ಈಕೆ.

‘ಅಯ್ಯೋ, ನಾನೇನು ಹೇಳಿದೆ? ನೀವು ನಾಲ್ಕು ಮಂದಿ ಹೆಣ್ಣುಮಕ್ಕಳೇ ಅಲ್ವಾ? ಹಾಗಾಗಿ ನಿಮಗೆ ಗಂಡುಮಕ್ಕಳೆಂದರೆ ಇಷ್ಟ ಅಂತಂದೆ. ತಪ್ಪೇನು ಅದ್ರಲ್ಲಿ?’ ಎಂದು ಸಮರ್ಥನೆಯನ್ನೂ ಕೊಟ್ಟನಂತೆ ಅವನು.ಆದರೆ ‘ಹುಡುಗರು’ ಹಾಗೂ ‘ಗಂಡು ಮಕ್ಕಳು’ ಎಂಬ ಎರಡು ಪದಗಳ ಬಳಕೆಯಲ್ಲಿ ಗಮನಾರ್ಹ ಅಂತರವಿದೆ ಎಂಬುದು ಅವನಿಗೆ ಗೊತ್ತಿಲ್ಲ ಎಂದಲ್ಲ. ಅವನು ಐಎಎಸ್‌ ಪರೀಕ್ಷೆ ಬರೆದ ಮೇಧಾವಿ!

ದೂರದ ಸಂಬಂಧಿ ಪೂರ್ಣಿಮಾ ಸ್ನಾತಕೋತ್ತರ ಪದವೀಧರೆ, ಕಂಪ್ಯೂಟರ್‌ ಸಂಬಂಧಿ ತರಬೇತಿಗಳನ್ನೂ ಪಡೆದಾಕೆ. ಒಂಬತ್ತು ವರ್ಷಗಳ ಹಿಂದೆ ಒಬ್ಬ ವೈದ್ಯನೊಂದಿಗೆ ಅವಳ ಮದುವೆಯಾಗಿತ್ತು. ಗಂಡ ಹೆಂಡತಿ ನಡುವೆ ತಕರಾರಿಲ್ಲ. ಆದರೆ ಅವಳ ಅತ್ತೆಗೆ, ಸೊಸೆ ಹೊರಗಿನವಳು ಎಂಬ ಭಾವ, ತಾತ್ಸಾರ. ಮಗ ಮತ್ತು ಸೊಸೆ ನಡುವೆ ಏನಾದರೂ ‘ತಂದು ಇಡುವುದು’ ಅವರಿಗೆ ಅಚ್ಚುಮೆಚ್ಚಿನ ಕೆಲಸ. ಮಗನೂ ಅವರ ತಾಳಕ್ಕೆ ತಲೆಯಾಡಿಸುವವನು. ಆದರೂ ಮಗುವಿಗೋಸ್ಕರ ಅವಳು ಎಲ್ಲದಕ್ಕೂ ಕಿವುಡಿ, ಕುರುಡಿಯಾಗಿದ್ದವಳು. ಒಂದು ದಿನ ಊರಿಂದ ಬಂದಿದ್ದ ಅತ್ತೆ ಹೀಗೇ ಕಾಲು ಕೆರೆದು ಜಗಳ ತಂದಿಟ್ಟದ್ದು ನೆರೆಕರೆಗೆಲ್ಲ ಗೊತ್ತಾಯಿತು.

‘ಮದುವೆ ದಿನ ಅವಳನ್ನು ‘ಬಿಟ್ಟುಕೊಡುವ ಶಾಸ್ತ್ರ’ ಮಾಡುವಾಗ ಅವಳಮ್ಮ ತಲೆ ಚಚ್ಚಿಕೊಂಡು ಅತ್ತಿದ್ದನ್ನು ನೋಡಬೇಕಿತ್ತು’ ಎಂದು ನಕ್ಕರು.‘ಹೌದು ಮತ್ತೆ, ಮದುವೆ ಮನೆಯಲ್ಲಿ ಮಗಳನ್ನು ಬೀಳ್ಕೊಡುವ ಶಾಸ್ತ್ರಕ್ಕೆ ಅಳದಿರುವ ತಾಯಂದಿರೂ ಇರುತ್ತಾರೆಯೇ?’ ಎಂದು ಮಗನೇ ಅಂದ.

‘ಮಗಳು ನಮ್ಮನ್ನೆಲ್ಲ ಬಿಟ್ಟುಹೋಗುತ್ತಾಳಲ್ಲ ಎಂಬ ವ್ಯಥೆಯಿಂದ ಅತ್ತಿದ್ದಲ್ಲ. ಇವಳು ಗಂಡನ ಮನೆಯಲ್ಲಿ ಸಂಸಾರ ಮಾಡುವವಳಲ್ಲ. ಅಯ್ಯೋ ದೇವರೇ... ನಾಲ್ಕೇ ದಿನಕ್ಕೆ ತವರಿಗೆ ವಾಪಸ್‌ ಬಂದು ಮರ್ಯಾದೆ ತೆಗೀತಾಳಲ್ಲಪ್ಪಾಂತ ಗೋಳಾಡಿದ್ದು’ ಎಂಬುದು ಅವರ ವಿಶ್ಲೇಷಣೆ.ಅಮ್ಮನ ಕರುಳವೇದನೆಯನ್ನೇ ಸಂಶಯಿಸಿದ್ದಕ್ಕೆ ಅವಳಿಗೆ ಅದೆಷ್ಟು ಯಾತನೆಯಾಗಿರಬೇಡ!

‘ಮದುವೆಗೆ ಇವಳಿಗೆ ತುಂಬಾ ಒಡವೆ ಹಾಕಿದ್ದಾರೆ. ಎಂಟು ಬಗೆ ಕಿವಿಯೋಲೆ, ಹದಿಮೂರು ಉಂಗುರ, ನಾಲ್ಕೆಳೆ ಸರ, ಎಂಟು ಬಳೆ... ಮುಟ್ಟಿದರೆ ಎಲ್ಲಿ ನಲುಗಿ ಹೋಗುತ್ತೋ ಏನೋ ಅಂತನ್ನಿಸುತ್ತಿತ್ತು. ಕಡಿಮೆ ತೂಕದ ಒಡವೆ ಹಾಕಿದ್ರು ಅಂತ ಹೇಳಿದ್ದಲ್ಲ. ಇವಳಿಗೆ ಲೈಟ್‌ವೇಟ್ ಒಡವೆಗಳೇ ಇಷ್ಟ ಅಂತೆ. ಅದಕ್ಕೆ ಹಾಗೆ ಮಾಡಿಕೊಟ್ರಂತೆ ಇವಳ ಅಪ್ಪ ಅಮ್ಮ’ ಎಂಬ ಮತ್ತೊಮ್ಮೆ ‘ಮೆಚ್ಚುಗೆ’ಯ ಮಾತಾಡಿದ್ದರು ಅವರು.

ಅವನು ಸರ್ಕಾರಿ ನೌಕರ. ಹೆಂಡತಿ ಖಾಸಗಿ ಕಂಪೆನಿ ಉದ್ಯೋಗಿ. ಮೂವತ್ತಕ್ಕೇ ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ಆಹ್ವಾನಿಸಿಕೊಂಡ ಶಿಸ್ತಿನ ಸಿಪಾಯಿ ಅವನು. ಅದು ಗೊತ್ತಾದ ತಕ್ಷಣ ಆಕೆ ಅವನ ಬಾಯಿಚಪಲಕ್ಕೆ ಕಡಿವಾಣ ಹಾಕಿದ್ದಾಳೆ. ಆದರೆ ಆರೋಗ್ಯ ಸುಧಾರಿಸುವಂತಹ ವೈವಿಧ್ಯಮಯ ಮೆನುವನ್ನು ಪ್ರತಿದಿನವೂ ಉಣಬಡಿಸುವಷ್ಟು ಸಹನಾಮೂರ್ತಿ. ಕಟ್ಟಿಕೊಟ್ಟ ಬುತ್ತಿಯ ಒಂದೊಂದು ಟ್ರೇಯಲ್ಲೂ ತನ್ನ ಆರೋಗ್ಯಕ್ಕೆ ಪೂರಕವಾದ, ಇರುವ ಅನಾರೋಗ್ಯವನ್ನು ನಿವಾರಿಸುವ ಅಂಶಗಳುಳ್ಳ ಖಾದ್ಯಗಳು. ಎಲ್ಲವನ್ನೂ ಒಂದೊಂದಾಗಿ ಖಾಲಿ ಮಾಡಿ, ಒಗ್ಗರಣೆ ಹಾಕಿ ದಾಳಿಂಬೆ ಕಾಳು ಬೆರೆಸಿದ ಮೊಸರನ್ನ ಬಾಯಿಗಿಡಬೇಕು ಅನ್ನುವಷ್ಟರಲ್ಲಿ ಸಹೋದ್ಯೋಗಿ ರೇಗಿಸಿದರಂತೆ. ‘ಇದೇನ್ರೀ ನಿಮ್ ಹೆಂಡ್ತಿ ಇಷ್ಟೊಂದು ಐಟಂ ಕೊಟ್ಟು ಕಳಿಸ್ತಾರಲ್ಲ? ಕೆಲಸಕ್ಕೆ ಎಷ್ಟು ಜನ ಇದ್ದಾರೆ?’ ಎಂದು.

‘ಅಯ್ಯೋ ಇದೇನ್‌ ಮಹಾ ಬಿಡ್ರಿ.  ಅವಳಿಗಿನ್ನೇನು ಕೆಲಸ? ಮಾಡಾಕ್ತಾಳೆ’ ಎಂದುಬಿಟ್ಟನಂತೆ ಇವನು!
* * *
ಹೊಗಳಿದಂತೆ ಬೈಯ್ಯುವ, ನೋವಾಗಲೇಬೇಕಂದು ಹಿಂಡುವವರಿಗೆ ಒಳಗೊಂದು ಅಸಾಧ್ಯವಾದ ಅಸಹನೆ ಇರುತ್ತದೆ. ಎಲ್ಲರ, ಎಲ್ಲದರ ಮೇಲೂ. ಅದು ಅವರ ಮಾನಸಿಕ ಸ್ಥಿತಿ ಅಥವಾ ಮನೋರೋಗದ ಒಂದು ಬಗೆ ಎಂದುಕೊಂಡರೂ ತಪ್ಪೇನಿಲ್ಲ.
ಈ ಬಾಣಕ್ಕೆ ಇಂತಹುದೇ ಶಕ್ತಿಯಿದೆ, ನಾಟಿದರೆ ಇಂತಹುದೇ ಪರಿಣಾಮವಾಗುತ್ತದೆ ಎಂಬ ಅರಿವು ಇದ್ದೇ ಮಹಾಯುದ್ಧಗಳಲ್ಲಿ ಭೀಷ್ಮಾಚಾರ್ಯ, ಅರ್ಜುನ, ಕರ್ಣಾದಿ ಘಟಾನುಘಟಿಗಳು ಬಾಣ ಪ್ರಯೋಗ ಮಾಡುತ್ತಿದ್ದರು. ಪ್ರತಿ ಬಾಣವನ್ನೂ ಹಣೆಗೆ ತಾಗಿಸಿ ಮನಸ್ಸಲ್ಲೇ ಮಂತ್ರ ಪಠಿಸಿ ಆ ಬಾಣಕ್ಕೆ ಶಕ್ತಿ ತುಂಬಿಯೇ ಅವರು ಪ್ರಯೋಗಿಸುತ್ತಿದ್ದರು ಎಂದು ಪುರಾಣದ ಕತೆಗಳು ಹೇಳುತ್ತವೆ.
ಹೊಗಳೋ ಧಾಟಿಯಲ್ಲಿ ತೆಗಳುವವರ ತಂತ್ರವೂ ಇದೇ ತಾನೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT