ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಜಾ ತಾಜಾ ತರಕಾರಿಗೆ ಯಶವಂತಪುರ ಸಂತೆ

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಯಶವಂತಪುರ ರೈಲು ನಿಲ್ದಾಣ ಪಕ್ಕದ ರಸ್ತೆಯಲ್ಲಿ ಪ್ರತಿ ಭಾನುವಾರ ನಡೆಯುವ ‘ರೈತಸಂತೆ’ಯಲ್ಲಿ  ರೈತ ಮಹಿಳೆಯರು ತರಕಾರಿ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಾರುತ್ತಾರೆ. ಗ್ರಾಹಕರು ಕಡಿಮೆ ಬೆಲೆಗೆ ತಾಜಾ ತರಕಾರಿ ಪಡೆದು ಧನ್ಯರಾಗುತ್ತಾರೆ.

ಪ್ರತಿ ಭಾನುವಾರ ಮುಂಜಾನೆ  ಸೂರ್ಯನ ಕಿರಣಗಳು ಭೂಮಿ ಮುಟ್ಟುವ ಮೊದಲೇ ಯಶವಂತಪುರದ ಗೋವರ್ಧನ ಟಾಕೀಸ್ ಸಮೀಪ ನೆಲಮಂಗಲ, ಮಾಗಡಿಯಿಂದ ಧಾವಿಸಿ ಬಂದ ಟೆಂಪೊ– ರಿಕ್ಷಾ ವಾಹನಗಳ ಭರಾಟೆ ಕಾಣಿಸುತ್ತದೆ.

ಈ ವಾಹನಗಳಿಂದ  ಭಾರದ ಚೀಲ, ಬುಟ್ಟಿ ಇಳಿಸುವ ಕಾಯಕ, ಇಳಿಸಿದ ಚೀಲಗಳ ಒಡೆಯ/ಒಡತಿಯರಿಂದ ಜಾಗ ಹಿಡಿಯುವ ತವಕ, ಅದಕ್ಕಾಗಿ ಪುಟ್ಟ ಜಗಳ, ಹೊಂದಾಣಿಕೆ ನಡೆಯುವ ಹೊತ್ತಿಗೆ ನಿಚ್ಚಳ ಬೆಳಕು.

ರಸ್ತೆ ಬದಿ ಉತ್ಪನ್ನಗಳನ್ನು ಜೋಡಿಸಿಕೊಳ್ಳುವ ರೈತರು ತರಕಾರಿಗಳನ್ನು ಮಾರಲು ಅಣಿಯಾಗುತ್ತಿದ್ದಂತೆ ರಾಜಾಜಿನಗರ, ಪ್ರಕಾಶನಗರ, ಯಶವಂತಪುರ, ಮಿಲ್ಕ್ ಕಾಲೊನಿ, ನಂದಿನಿ, ಮಹಾಲಕ್ಷ್ಮಿ ಬಡಾವಣೆಯ ನಾಗರಿಕರು ದೊಡ್ಡ ಕೈಚೀಲಗಳನ್ನು ಹಿಡಿದುಕೊಂಡು ಬಂದಿರುತ್ತಾರೆ.

ವಾರಕ್ಕೆ ಬೇಕಾಗುವಷ್ಟು ತರಕಾರಿ ಕೊಳ್ಳುವ ಧಾವಂತ ಅವರದು. ಐಟಿ ಉದ್ಯೋಗಿಯಿಂದ ಗೂಡಂಗಡಿಯ ಮಾಲೀಕರವರೆಗೆ ಹಲವು ಶ್ರೇಣಿಯ ಜನರು ಇಲ್ಲಿ ಪಾಳಿ ಹಚ್ಚಿರುತ್ತಾರೆ.

ಹೊತ್ತೇರಿದಂತೆ ಜನ ಸಂದಣಿಯೂ ಹೆಚ್ಚುತ್ತದೆ. ಕಾಲಿಡಲೂ ಸಾಧ್ಯವಾಗದಂತೆ ಜನರು ಕಿಕ್ಕಿರಿದು ನೆರೆಯುತ್ತಾರೆ. ಕೊಡು-ಕೊಳ್ಳುವಿಕೆಯ ಅಬ್ಬರವೂ ಹೆಚ್ಚುತ್ತದೆ.

ರೈತರೇ ಬೆಳೆದ ಉತ್ಪನ್ನಗಳಾದ ಕಾರಣ ಬೆಲೆಯೂ ಕಡಿಮೆ. ಶನಿವಾರ ಸಂಜೆ ಕೊಯ್ದು ತರುವುದರಿಂದ ತಾಜಾವಾಗಿರುತ್ತವೆ. ‘ನಾಟಿ’ ಹುಡುಕಿ ಖರೀದಿಸುವವರ ಸಂಖ್ಯೆಯೂ ದೊಡ್ಡದು.

ಹಾಗೆಂದು ಇಲ್ಲಿಗೆ ತರಕಾರಿ ಮಾರಲು ಬರುವವರೆಲ್ಲ ರೈತರೇ ಎಂದಲ್ಲ. ಫಾರಂಗಳಲ್ಲಿ ಬೆಳೆದ ತರಕಾರಿಗಳನ್ನು ಕೊಂಡು ತಂದು ಮಾರುವವರೂ ಇದ್ದಾರೆ. ಸಾವಯವ ಉತ್ಪನ್ನಗಳ ಮೌಲ್ಯ ಅರಿಯದ ಕೆಲವರು, ರೈತರೊಂದಿಗೆ ಚೌಕಾಶಿಗೆ ಇಳಿದು ಜಗಳವಾಡುತ್ತಾರೆ. ನಂತರ ಫಾರಂಗಳಲ್ಲಿ ಬೆಳೆದ ರಾಸಾಯನಿಕ ಸಿಂಪಡಿಸಿದ ಉತ್ಪನ್ನವನ್ನು ಕಡಿಮೆ ಬೆಲೆಗೆ ಕೊಳ್ಳುತ್ತಾರೆ.

ಫಾರಂನಲ್ಲಿ ಬೆಳೆದ ಹೂಕೋಸು, ಅಲೂಗಡ್ಡೆ, ಸೊಪ್ಪುಗಳು, ಮತ್ತು ಈರುಳ್ಳಿ, ಬೆಳ್ಳುಳ್ಳಿಗಳನ್ನು ತಂದು ವ್ಯಾಪಾರಿಗಳು ಮಾರುತ್ತಾರೆ.  ಅದರಂತೆ ಹಣ್ಣುಗಳನ್ನು ತಂದು ಮಾರಲಾಗುತ್ತದೆ. ರಸ್ತೆಯ ಅಂಚಿನಲ್ಲಿ ಹೀಗೆ ತಂದ ಹಣ್ಣುಗಳ ಕೈಗಾಡಿಗಳು ಹೆಚ್ಚು. ಮಲ್ಲಿಗೆ, ಸೇವಂತಿಗೆ, ಕಾಕಡ, ಕನಕಾಂಬರ, ಗುಲಾಬಿ ಹೂಗಳನ್ನೂ ಮಾರಲಾಗುತ್ತದೆ.

ಕಟ್ಟಡಗಳಿಲ್ಲ: ಮಾರುಕಟ್ಟೆ ಕಟ್ಟಡದಂತಹ ವ್ಯವಸ್ಥಿತ ನಿರ್ಮಾಣಗಳು ಇಲ್ಲಿ ಕಾಣಿಸುವುದಿಲ್ಲ. ಕೆಲವರು ಸನಿಹದ ಕೈಗಾರಿಕಾ ಘಟಕದ ಗೋಡೆಯನ್ನು ಬಳಸಿಕೊಂಡು ಟಾರ್ಪಾಲಿನ್, ಪ್ಲಾಸ್ಟಿಕ್ ಹಾಕಿಕೊಂಡರೆ, ತೀರಾ ಸಣ್ಣ ರೈತರು ಬಿಸಿಲಿನಲ್ಲೇ ವ್ಯಾಪಾರ ಮಾಡಿ, ತಾವು ತಂದ ತರಕಾರಿಗಳಂತೆಯೇ ಬಸವಳಿದು ಬಿಡುತ್ತಾರೆ.

ಪಕ್ಕದಲ್ಲಿ ಕಟ್ಟಡ ನಿರ್ಮಾಣ ತಾಜ್ಯ, ಇತರ ಹೊಲಸು ನಾರುವ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಕೆಟ್ಟ ವಾಸನೆ ನಡುವೆ ಬಡ, ವೃದ್ಧ ರೈತರು ವ್ಯಾಪಾರ ಮಾಡಬೇಕಿದೆ.

ಹಲವು ಹಳ್ಳಿಗಳ ರೈತರು: ಮಾಗಡಿ ತಾಲೂಕಿನ ಕುದೂರು ಹೋಬಳಿಯ ಸಿರಿಗಿರಿಪುರ, ಶಿವಗಂಗೆ ಮತ್ತು ನೆಲಮಂಗಲ ಸಮೀಪದ ಹುಣಗಲ್, ಸೋಲೂರು, ಗುಡಮಾರನಹಳ್ಳಿ, ಸಿದ್ದನಹಳ್ಳಿ, ಟಿ.ಬೇಗೂರು, ತ್ಯಾಮಗೊಂಡ್ಲು, ಚಿಕ್ನಳ್ಳಿ, ಹುಲಿಪುರ, ಕಂಬದಕಲ್ಲು, ದಾಬಸ್‌ಪೇಟೆ, ಗೆದ್ನಳ್ಳಿ, ಸೂಲುಕುಂಟೆ,  ತುಮಕೂರು, ಕುಣಿಗಲ್, ಅರಸಿಕೆರೆ ಸುತ್ತಲಿನ ಹಳ್ಳಿಗಳ ರೈತರು ಸಂತೆಯಲ್ಲಿ ಪಾಲ್ಗೊಳ್ಳುತ್ತಾರೆ.

ಸೊಪ್ಪು, ತರಕಾರಿ ವೈವಿಧ್ಯ: ಸ್ಥಳೀಯವಾಗಿ ಬೆಳೆಯುವ ಎಲ್ಲ ರೀತಿಯ ಸೊಪ್ಪು, ತರಕಾರಿಗಳು ಈ ಸಂತೆಯಲ್ಲಿ ದೊರೆಯುತ್ತವೆ. ರೈತ ಸಂತೆಯಲ್ಲಿ ಪ್ರತಿವಾರವೂ 6ರಿಂದ 8 ನಮೂನೆಯ ಬದನೆಕಾಯಿ ಲಭ್ಯ. ಮಾಗಡಿ ತಾಲ್ಲೂಕು ಸಿರಿಗೆರೆಪುರದಲ್ಲಿ ಬೆಳೆಯುವ ವಿಶಿಷ್ಟ ರುಚಿಯ ನೇರಳೆಕೆಂಪು ಬಣ್ಣದ ಸಪೂರ ಉದ್ದ ಬದನೆ ಸಹ ಇಲ್ಲಿ ದೊರೆಯುತ್ತದೆ.

ಈ ಬದನೆಯನ್ನು ಕಳೆದ 30 ವರ್ಷದಿಂದ ಪುಟ್ಟಮ್ಮ ಸಂತೆಗೆ ತರುತ್ತಿದ್ದಾರೆ. ನೆಲಮಂಗಲ ತಾಲ್ಲೂಕು  ಸೂಲುಕುಂಟೆಯ ಪಾರ್ಥಸಾರಥಿ ಸಹ ಕೆಲ ವರ್ಷಗಳಿಂದ ಬದನೆ ತರುತ್ತಿದ್ದಾರೆ. ಧಾರಾಳ ವಿಟಮಿನ್ ಹೊಂದಿರುವ  30ಕ್ಕೂ ಹೆಚ್ಚಿನ ಸೊಪ್ಪುಗಳನ್ನು ಈ ಸಂತೆಯಲ್ಲಿ ಕೊಂಡುಕೊಳ್ಳಬಹುದು.

ಸಂತೆ ವಿಶೇಷ
ನೆಲಮಂಗಲದ ಸಕ್ಕರೆ ಕ್ಯಾರೆಟ್, ಅರಸೀಕೆರೆಯ ಸಪೂರ ಪಡುವಲ, ಸಿರಿಗಿರಿಪುರದ ನಾಟಿ ಗೋರಿಕಾಯಿ

*
ಈ ಸಂತೆಯಲ್ಲಿ ತಾಜಾ ಮತ್ತು ಬೆಲೆಯೂ ಕಡಿಮೆ. ಹೀಗಾಗಿ ನಾನು ಇಲ್ಲಿಯೇ ತರಕಾರಿಗಳನ್ನು ಕೊಳ್ಳುತ್ತೇನೆ.
–ಧನಲಕ್ಷ್ಮಿ
ಗೃಹಿಣಿ, ಪ್ರಕಾಶನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT