ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ. ಚುನಾವಣೆ: ಜೆಡಿಎಸ್‌ಗೆ ಗದ್ದುಗೆ

ಸೊರಬ: ಜೆಡಿಎಸ್ಗೆ 11, ಬಿಜೆಪಿಗೆ 5 ಸ್ಥಾನ ಹಾಗೂ ಕಾಂಗ್ರೆಸ್‌ಗೆ 3 ಸ್ಥಾನ, ಕಾರ್ಯಕರ್ತರ ಸಂಭ್ರಮ
Last Updated 29 ಜೂನ್ 2016, 7:38 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಒಟ್ಟು 19 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ಜೂನ್‌ 26ರಂದು ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟ ಗೊಂಡಿದ್ದು, ಜೆಡಿಎಸ್ 11ಸ್ಥಾನ ಪಡೆದು  ಅಧಿಕಾರದ ಕನಸು ಕಾಣುತ್ತಿದ್ದರೆ, ಬಿಜೆಪಿ 5 ಹಾಗೂ ಕಾಂಗ್ರೆಸ್‌ಗೆ 3ಸ್ಥಾನಗಳು ಸಿಕ್ಕಿವೆ.

ಕಳೆದ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಮೂರು ಪಕ್ಷಗಳು ತಲಾ 6 ಸ್ಥಾನಗಳನ್ನು ಪಡೆದು ಸಮಬಲ ಸಾಧಿಸಿದ್ದವು. ಆದರೆ, ತಾಲ್ಲೂಕಿನ ಮತದಾರರು ಈ ಬಾರಿ ಜೆಡಿಎಸ್‌ಗೆ ಮಣೆ ಹಾಕಿದ್ದರೆ,  ಜೆಡಿಎಸ್‌ಗೆ ಬಹುತೇಕ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆಯೊಡ್ಡಿ ಬಿಜೆಪಿ ಎರಡನೇ ಸ್ಥಾನವನ್ನು ಕಾಯ್ದುಕೊಂಡರೆ, ಕಾಂಗ್ರೆಸ್ ಪ್ರಯಾಸದಿಂದ 3ನೇ ಸ್ಥಾನದಲ್ಲಿ ಉಳಿದುಕೊಂಡಿದೆ.

ಪಟ್ಟಣದ ಪದವಿ ಕಾಲೇಜಿನಲ್ಲಿ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿದ್ದು, ವಿವಿಧ ಪಕ್ಷಗಳ ಕಾರ್ಯಕರ್ತರು ರಾಜಕೀಯ ಮುಖಂಡರು ಚುನಾವಣಾ ಫಲಿತಾಂಶಕ್ಕಾಗಿ ಮಳೆಯನ್ನು ಲೆಕ್ಕಿಸದೆ ಮತ ಎಣಿಕೆ ಕೇಂದ್ರದ ಹೊರಗೆ ಕಾಯುತ್ತಿದ್ದು, ಪಕ್ಷದ ಧ್ವಜ ಹಿಡಿದು ತಮ್ಮ ನಾಯಕರ ಪರ ಜೈಕಾರ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು..

ಮಧ್ಯಾಹ್ನ 12.20ಕ್ಕೆ ಸಂಪೂರ್ಣ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್  ಕಾರ್ಯಕರ್ತರು ಎಣಿಕೆ ಕೇಂದ್ರದ ಹೊರಗೆ ತಮ್ಮ ನಾಯಕರನ್ನು ಎತ್ತಿ ಕೊಂಡು ಕೇಕೆ ಹಾಕಿ ಸಂಭ್ರಮಿಸಿದರು.

ತಾಲ್ಲೂಕಿನಲ್ಲಿ ಬಹು ನಿರೀಕ್ಷೆ ಹುಟ್ಟಿಸಿದ್ದ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಮೂರು ಪಕ್ಷಗಳ ನಾಯಕರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದರು. 19 ಕ್ಷೇತ್ರಗಳಲ್ಲೂ  ಜೆಡಿಎಸ್ ಅಬ್ಬರದ ಪ್ರಚಾರ ನಡೆಸಿ, ಅಧಿಕಾರಕ್ಕೆ ಬೇಕಾದ ಮ್ಯಾಜಿಕ್‌ ಸಂಖ್ಯೆ ಪಡೆಯುವಲ್ಲಿ ಸಫಲತೆ ಪಡೆದುಕೊಂಡರೆ, ಶತಾಯಗತಾಯ ಅಸ್ತಿತ್ವ ಉಳಿಸಿಕೊಳ್ಳಲು 20 ದಿನಗಳಿಂದ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಅಭ್ಯರ್ಥಿಗಳ ಪರ ಮನೆ ಮನೆ ಪ್ರಚಾರ ನಡೆಸಿದ್ದ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ ಹಾಗೂ ಎಚ್.ಹಾಲಪ್ಪ ನಿರೀಕ್ಷಿತ ಯಶ ಸಾಧಿಸದೆ ನಿರಾಶೆ ಅನುಭವಿಸಿದ್ದಾರೆ.

ಗೆಲುವು ಖಚಿತವಾಗುತ್ತಿದ್ದಂತೆಯೇ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಶಾಸಕ ಮಧು ಬಂಗಾರಪ್ಪ ಅವರ ಪರ ಘೋಷಣೆ ಕೂಗುತ್ತಾ ಗೆದ್ದ ಅಭ್ಯರ್ಥಿಗಳನ್ನು ಎತ್ತಿಕೊಂಡು ಸಂಭ್ರಮಿಸಿದರು.  ನಂತರ ಪಟ್ಟಣದ ಬಂಗಾರಧಾಮದಲ್ಲಿನ ಮಾಜಿ ಮುಖ್ಯ ಮಂತ್ರಿ ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿದರು.

ನಿರಾಸೆ: ತಮ್ಮ ಅಭ್ಯರ್ಥಿಗಳ ಪರವಾಗಿ ಗೆಲುವಿನ ವಿಶ್ವಾಸವಿಟ್ಟು ತಾಲ್ಲೂಕಿನ ದೂರದ ಗ್ರಾಮಗಳಿಂದ ಮತ ಕೇಂದ್ರಕ್ಕೆ ಬಂದ ನೂರಾರು ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳು ಸೋಲುಕಂಡ ಹಿನ್ನೆಲೆಯಲ್ಲಿ ಬೇಸದಿಂದ ಮತ ಕೇಂದ್ರದಿಂದ ಭಾರವಾದ ಹೆಜ್ಜೆಯಿಂದ ಹೊರನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT