ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಮಡಿಲಿನಷ್ಟು ನೆಮ್ಮದಿಯ ತಾಣ

ನಾ ಕಂಡ ಬೆಂಗಳೂರು
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ದಶಕಗಟ್ಟಲೆ ಬೆಂಗಳೂರನ್ನು ಕಂಡವರಿಗೆ ಈ ನಗರವು ಆಪ್ತವಾದ ಯಾವುದೋ ಜಾಗವನ್ನು ಕೊಡುಗೆಯಾಗಿ ಕೊಟ್ಟಿರುತ್ತದೆ. ಆ ಜಾಗದೊಟ್ಟಿಗೆ ಬೆಸೆದುಕೊಂಡ ನೆನಪುಗಳ ಮಾತು ಮಧುರವೂ ಹೌದು, ಮರೆಯಲಾಗದವೂ ಹೌದು. ವಿವಿಧ ಕ್ಷೇತ್ರಗಳ ದಿಗ್ಗಜರು ವಾರಕ್ಕೊಮ್ಮೆ ಅಂಥ ನೆನಪುಗಳ ಮೆಲುಕು ಹಾಕುವ ಜಗಲಿ ಇದು. ಈ ವಾರ ಜಗಲಿಯ ಮೇಲೆ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್‌.

ದೇಶ ವಿದೇಶ ಸುತ್ತಿದ್ದೇನೆ. ಆದರೂ, ನನಗೆ ಬೆಂಗಳೂರಿಗೆ ಬಂದರೆ ಮಾತ್ರ ತಾಯಿ ಮಡಿಲಿಗೆ ಬಂದಷ್ಟು ಸಮಾಧಾನವೆನಿಸುತ್ತದೆ. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಬೇಜಾರು ತರಿಸುವಷ್ಟು ಮಿತಿಮೀರಿದೆ. ವಾತಾವರಣ ಬದಲಾಗಿದೆ. ಗುಬ್ಬಚ್ಚಿ ಕಣ್ಮರೆಯಾಗಿದೆ. ಕನ್ನಡಿಗರಿಗಿಂತ ಇತರರೇ ತುಂಬಿದ್ದಾರೆ. ಹೀಗಿದ್ದರೂ ನನಗೆ ಬೆಂಗಳೂರೇ ಪ್ರಿಯ. ಇದೇ ತವರು, ಇದೇ ಅಪ್ಯಾಯಮಾನ.

ಅಂದಹಾಗೆ ನನ್ನೂರು ಮೈಸೂರು. ಶಿಕ್ಷಕರಾಗಿದ್ದ ಅಪ್ಪ ಡಾ.ಎಂ.ಎನ್‌. ರಾಮಣ್ಣ (ರಾಮಣ್ಣ ಮೇಷ್ಟ್ರು) ನಾನು ಮೂರು ತಿಂಗಳಿನ ಶಿಶುವಿದ್ದಾಗಲೇ (1959ನೇ ಇಸವಿ) ಬೆಂಗಳೂರಿಗೆ ಕರೆದುಕೊಂಡು ಬಂದರು. ಅಮ್ಮ (ಸೀತಾಲಕ್ಷ್ಮಿ), ಅಪ್ಪ, ಅಕ್ಕ, ನಾನು ಉಳಿದಿದ್ದು ವಿಲ್ಸನ್‌ ಗಾರ್ಡನ್‌ 5ನೇ ಅಡ್ಡರಸ್ತೆ ಪ್ರದೇಶದಲ್ಲಿ. ಅಪ್ಪ ಅಲ್ಲಿಯ ನ್ಯೂ ಟೈಪ್‌ ಮೀಡಿಯಂ ಸ್ಕೂಲ್‌ನಲ್ಲಿ  (ಎನ್‌ಟಿಎಂ) ಮುಖ್ಯೋಪಾಧ್ಯಾಯರಾಗಿದ್ದರು. ನನ್ನ ಓದು ಅಲ್ಲಿಯೇ ನಡೆಯಿತು.

ನಮ್ಮ ಮನೆಯ ಹಿಂಭಾಗದಲ್ಲಿ ಪಾರ್ಕ್‌ ಇತ್ತು. ಆಗ ನನಗೆ ಸುಮಾರು ಆರು ವರ್ಷ ಇರಬಹುದು. ಪಕ್ಕದಲ್ಲೇ ಮುರಳಿ ಆರ್ಕೆಸ್ಟ್ರಾ ಕಣ್ಣು ತೆರೆಯಿತು. ಪಾರ್ಕ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾದವು. ಚಿಕ್ಕಂದಿನಿಂದಲೂ ಅಮ್ಮ ಹೇಳಿಕೊಡುತ್ತಿದ್ದ ಹಾಡಿಗೆ ದನಿಗೂಡಿಸುತ್ತಿದ್ದ ನಾನು ಏಳನೇ ವರ್ಷಕ್ಕೆ ಮುರಳಿ ಆರ್ಕೆಸ್ಟ್ರಾದಲ್ಲಿ ಹಾಡುವ ಅವಕಾಶ ಗಿಟ್ಟಿಸಿಕೊಂಡೆ. ಅದೇ ನನ್ನ ಮೊದಲ ವೇದಿಕೆ. ಹೀಗಾಗಿ ವಿಲ್ಸನ್‌ ಗಾರ್ಡನ್‌ ಪಾರ್ಕ್‌ ಎಂದರೆ ನನಗೆ ಅಚ್ಚುಮೆಚ್ಚು.

ಈಗ ಆ ಪಾರ್ಕ್‌ಅನ್ನು ಎಷ್ಟು ಚೆನ್ನಾಗಿ ನಿರ್ಮಿಸಿದ್ದಾರೆ ಗೊತ್ತಾ? ಸುಂದರವಾಗಿ ಬದಲಾದ ಆ ಪಾರ್ಕ್‌ ಅನ್ನು ಅನೇಕ ವರ್ಷಗಳ ನಂತರ ನೋಡಿ ಖುಷಿ ಆಯಿತು. ನಮ್ಮ ಮನೆಯಲ್ಲಿ ನಾನೂ ಸೇರಿದಂತೆ ಅಕ್ಕ ಪ್ರಮಿಳಾ, ತಮ್ಮ ರವಿಶಂಕರ್‌, ತಂಗಿ ನಿರ್ಮಲಾಗೆ ಸಂಗೀತದಲ್ಲಿ ಆಸಕ್ತಿ ಇದೆ. ಎಲ್ಲರೂ ಚೆನ್ನಾಗಿ ಹಾಡುತ್ತಾರೆ. ಆದರೆ ನಾನೊಬ್ಬಳೇ ವೇದಿಕೆ ಏರಿ ಹಾಡುವುದನ್ನು ವೃತ್ತಿಯಾಗಿಸಿಕೊಂಡವಳು.

ಮನೆ ಹಿಂದಿದ್ದ ಪಾರ್ಕ್‌, 10ನೇ ಅಡ್ಡರಸ್ತೆಯಲ್ಲಿದ್ದ ಶ್ರೀರಾಮಮಂದಿರ, ಓದಿದ ಶಾಲೆ, ಅಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ಓಡಾಡಿದ ಜಾಗ ಎಲ್ಲವೂ ನನಗೆ ತುಂಬ ಪ್ರಿಯ. 1986ರವರೆಗೂ ನಾವು ಅದೇ ಪ್ರದೇಶದಲ್ಲಿದ್ದೆವು. ಅಮ್ಮ ಚೆನ್ನಾಗಿ ಹಾಡುತ್ತಿದ್ದ ಕಾರಣ ಎಲ್ಲಾ ಮಕ್ಕಳಿಗೂ ಸಂಗೀತ ಸುಲಭವಾಗಿ ಒಲಿಯಿತು. ಅಪ್ಪ ಮೃದಂಗ ನುಡಿಸುತ್ತಿದ್ದರು. ಅಲ್ಲದೆ ವಂಶಪಾರಂಪರ್ಯವಾಗಿ ಬಂದ ಆಯುರ್ವೇದ ವೈದ್ಯಕೀಯವನ್ನೂ ಅರಿತಿದ್ದರು.

ರೇಡಿಯೊ ಕಾರ್ಯಕ್ರಮ ಬಾಲಜಗತ್‌ನಲ್ಲಿ ಕೂಡ ನಾನು ಹಾಡುತ್ತಿದ್ದೆ. ವಯಲಿನ್‌ ವೆಂಕಟರಮಣ ಶಾಸ್ತ್ರಿಯವರ ಬಳಿ ಅಮ್ಮ ಶಾಸ್ತ್ರೀಯ ಸಂಗೀತ ಕಲಿಯಲು ಹೋಗುತ್ತಿದ್ದರು. ಅವರೊಂದಿಗೆ ನಾನೂ ಹೋಗುತ್ತಿದ್ದೆ. ಆಗ ನನಗೆ ಐದು ವರ್ಷ ಇರಬಹುದು. ಗುರುಗಳು ಹೇಳಿಕೊಟ್ಟದ್ದನ್ನು ಹಾಡಿ ತೋರಿಸುತ್ತಿದ್ದೆ. ಈ ಮಧ್ಯೆ 1984–85ರಲ್ಲಿ ಮದ್ರಾಸ್‌ನಲ್ಲಿ ಉಳಿದುಕೊಂಡೆ. ಅಲ್ಲಿ ಎರಡು ವರ್ಷದಲ್ಲಿ ಆರು ಭಾಷೆಯ 100 ಸಿನಿಮಾಗಳಲ್ಲಿ ಹಾಡಿದೆ. ನಂತರ ಬೆಂಗಳೂರಿಗೆ, ವಿಲ್ಸನ್‌ ಗಾರ್ಡನ್‌ಗೆ ವಾಪಸ್‌ ಆದೆ.

ನಂತರ ಹನುಮಂತನಗರದ ಮುನೇಶ್ವರ ಬ್ಲಾಕ್‌ನಲ್ಲಿ ಮನೆ ಕಟ್ಟಿಸಿಕೊಂಡು ಅಲ್ಲಿಗೆ ಹೋದೆವು. ನಂತರ ಕೆಲ ವರ್ಷ ಮಲ್ಲೇಶ್ವರಂನಲ್ಲಿದ್ದೆ. 2008ರಲ್ಲಿ ಜೆ.ಪಿ.ನಗರದ ಮಿನಿ ಫಾರೆಸ್ಟ್‌ ಏರಿಯಾದಲ್ಲಿದ್ದೇವೆ. ಚಿಕ್ಕಂದಿನಿಂದಲೂ ಲಾಲ್‌ಬಾಗ್‌ ನನಗೆ ಅಚ್ಚುಮೆಚ್ಚು. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅಲ್ಲಿಗೆ ತೆರಳಿ ಬೆಟ್ಟದಲ್ಲಿ ಕುಳಿತು ಪರಿಸರ ನೋಡುವುದೇ ಒಂದು ಸಂತೋಷವಾಗಿತ್ತು.

ಫ್ಲವರ್‌ ಷೋವನ್ನಂತೂ ತಪ್ಪಿಸುತ್ತಲೇ ಇರಲಿಲ್ಲ. ಈಗ ಹೋಗಬೇಕು ಎನಿಸಿದರೂ ಆಸೆಯನ್ನು ಅದುಮಿಟ್ಟುಕೊಂಡಿದ್ದೇನೆ. ಕಡಲೆಕಾಯಿ ಪರಿಷೆ ಕೂಡ ತುಂಬಾ ಇಷ್ಟ. ಹಳ್ಳಿ ಸೊಗಡಿರುವ ಪರಿಷೆಗೆ ಸಂಜೆ ಆದ ಮೇಲೆ ಒಂದು ರೌಂಡ್‌ ಹೋಗಿ ಬರುತ್ತೇನೆ. ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿರುವ ಕಾವಡಿ ಸುಬ್ರಹ್ಮಣ್ಯ ರಥೋತ್ಸವ, ಕರಗ ತುಂಬಾ ಇಷ್ಟವಾಗುತ್ತದೆ.

ಮಾನಸ ಗುರುವಿನೊಂದಿಗೆ
ನನ್ನ ನೆಚ್ಚಿನ ಮಾನಸ ಗುರು ಆಶಾ ಭೋಂಸ್ಲೆ ಒಮ್ಮೆ ಬೆಂಗಳೂರಿಗೆ ಬಂದಿದ್ದರು. ಮದ್ರಾಸ್‌ನಲ್ಲಿ ಇಳಯರಾಜ ಅವರ ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮ ಮುಗಿಸಿ  ಅವರು ಮುಂಬೈಗೆ ಹೋಗುವವರು. ಫ್ಲೈಟ್‌ ಎರಡು ಗಂಟೆಗಳ ಕಾಲ ತಡವಾದ್ದರಿಂದ ಸಿಬಿಎಸ್‌ ಆಡಿಯೊ ಕಂಪೆನಿಯವರು ಅವರ ಜೊತೆ ಕಾಲ ಕಳೆಯಬಹುದಾ ಎಂದು ಕೇಳಿಕೊಂಡರು.

ಖುಷಿಯಲ್ಲಿ ತೇಲಿಹೋದ ನಾನು ನನ್ನ ಮಾರುತಿ 800 ಅನ್ನು ವಿಮಾನ ನಿಲ್ದಾಣಕ್ಕೆ ತೆಗೆದುಕೊಂಡು ಹೋದೆ. ಅಲ್ಲಿ ಅವರು ಹಾಗೂ ಉಷಾ ಮಂಗೇಷ್ಕರ್‌ ಅವರನ್ನು ಕೂರಿಸಿಕೊಂಡು ಇಡೀ ಬೆಂಗಳೂರು ಸುತ್ತಿದೆ. ಅದಾಗ ತಾನೆ ಲೇಕಿನ್‌ ಸಿನಿಮಾದ  ‘ಸುನಿಯೋ ಜಿ’ ಹಾಡಿಗೆ ಲತಾ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ನಾನು ಮತ್ತು ಆಶಾ ಅವರು ಒಟ್ಟಿಗೆ ಆ ಹಾಡನ್ನು ಹೇಳಿಕೊಳ್ಳುತ್ತಾ ವಿಧಾನಸೌಧ, ಕಬ್ಬನ್‌ಪಾರ್ಕ್‌ ಓಡಾಡಿದೆವು.

ಕೆಪಿಟಲ್‌ ಹೋಟೆಲ್‌ನಲ್ಲಿ ತಿಂಡಿ ತಿಂದು, ಕಾಫಿ ಕುಡಿದೆವು. ‘ಎಷ್ಟು ಚೆನ್ನಾಗಿದೆ ಬೆಂಗಳೂರು. ಎಷ್ಟೊಳ್ಳೆ ವಾತಾವರಣ’ ಎಂದು ಅವರು ಹೇಳಿದ್ದರು. ಈಗ ಎಲ್ಲ ಬದಲಾಗಿದೆ ಬಿಡಿ. ಅಂದ ಹಾಗೆ ಆಗ ಸುಮಾರು ಫೋಟೊ ತೆಗೆಸಿಕೊಂಡಿದ್ದೇನೆ. ಆಗ ವಿಡಿಯೊ ತೆಗೆಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಇದ್ದಿದ್ದರೆ ಈಗ ಅದನ್ನು ನೋಡಿ ಖುಷಿ ಪಡಬಹುದಿತ್ತು ಎನಿಸುತ್ತದೆ.

ಗಿಮಿಕ್‌ ಹಾಡಿನ ಮೋಡಿ
ಚಿಕ್ಕಂದಿನಿಂದಲೇ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ನಾನು ಹೆಚ್ಚಾಗಿ ಆಯ್ದುಕೊಳ್ಳುತ್ತಿದ್ದುದು ಗಿಮಿಕ್‌ ಹಾಡುಗಳನ್ನೇ. ‘ಕಡ್ಲೇಕಾಯ್‌’ ಹಾಡನ್ನು ಸಾಕಷ್ಟು ಬಾರಿ ಹಾಡಿದ್ದೆ. ನಾನು ದಾರಿಯಲ್ಲಿ ಓಡಾಡುತ್ತಿದ್ದರೆ ಎಲ್ಲರೂ ಕಡ್ಲೇಕಾಯ್‌ ಎಂದು ರೇಗಿಸುತ್ತಿದ್ದರು. ಜೂನಿಯರ್‌ ಎಲ್‌.ಆರ್‌. ಈಶ್ವರಿ ಎಂದೂ ಕರೆಯುತ್ತಿದ್ದರು. ಅಂಥ ಹಾಡುಗಳನ್ನೇ ಯಾಕೆ ಆಯ್ದುಕೊಳ್ಳುತ್ತಿದ್ದೆ ಎಂಬುದು ನನಗೆ ಇವತ್ತಿಗೂ ಗೊತ್ತಿಲ್ಲ.

ಒಮ್ಮೆ ಗವರ್ನ್‌ಮೆಂಟ್‌ ಆರ್ಟ್ಸ್‌ ಅಂಡ್‌ ಸೈನ್ಸ್‌ ಕಾಲೇಜಿನಲ್ಲಿ (ಗ್ಯಾಸ್‌ ಕಾಲೇಜ್‌ ಎನ್ನುತ್ತಿದ್ದೆವು) ಅಂತರಕಾಲೇಜು ಸ್ಪರ್ಧೆಗೆ ಹೋಗಿದ್ದೆ. 1976ರ ಸಂದರ್ಭ ಅದಿರಬಹುದು. ಅಲ್ಲಿ ನಾಗರಹೊಳೆ ಚಿತ್ರದ ‘ನಾಗರಹೊಳೆಯೊಳ್‌ ಅಮ್ಮಾಲೆ’ ಹಾಡು ಹಾಡಿದ್ದೆ. ಹಾಡು ಮುಗಿಸಿ ಒಂದು ಕಡೆ ನಿಂತಿದ್ದವಳ ಬಳಿ 25ರಿಂದ 30 ವಿದ್ಯಾರ್ಥಿಗಳು ಓಡಿ ಬರಲಾರಂಭಿಸಿದರು.

ಏನಾಗುತ್ತಿದೆ ಎಂದು ಅರಿಯದೆ ನಾನು ಅಲ್ಲಿಂದ ಕಾಲ್ಕಿತ್ತು ಆಟೊ ಹಿಡಿದು ಮನೆಗೆ ಹೋಗಿಬಿಟ್ಟಿದ್ದೆ. ಅವರು ವೇಟ್‌ ವೇಟ್‌ ಅನ್ನುತ್ತಿದ್ದರೂ ನಾನು ನಿಂತಿರಲಿಲ್ಲ. ಮರುದಿನ ಪ್ರಿನ್ಸಿಪಾಲರು ಕರೆದು ನಿನಗೆ ವಿಶ್‌ ಮಾಡೋಕೆ ಬಂದ್ರೆ ಹಾಗೆ ಹೊರಟುಬಿಡೋದಾ? ಎಂದಿದ್ದರು. ಆಗ ಮೂರು ಬಹುಮಾನ ನನ್ನ ಪಾಲಾಗಿತ್ತು. ಈಗಲೂ ಆ ಕಾಲೇಜು ಮುಂದೆ ಹೋದರೆ ಇವೆಲ್ಲಾ ನೆನಪಾಗಿ ನಗು ಉಕ್ಕಿ ಬರುತ್ತದೆ.

***
ನಾನು ಓದುವುದರಲ್ಲಿ ತುಂಬಾ ಚುರುಕಾಗಿದ್ದೆ. ಅಪ್ಪ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಬೇರೆ. ಹೀಗಾಗಿ ನಾನು 2ನೇ ಕ್ಲಾಸ್‌ನಿಂದ ಸೀದಾ 4ನೇ ತರಗತಿಗೆ ಹೋದೆ. ಹತ್ತು ವರ್ಷಕ್ಕೆ ಏಳನೇ ತರಗತಿಯನ್ನು ಮುಗಿಸಿಬಿಟ್ಟಿದ್ದೆ.

ನಂತರ  ಗಂಗಮ್ಮ ಹೊಂಬೇಗೌಡ ಹೈಸ್ಕೂಲ್‌ನಲ್ಲಿ ಓದಿದೆ. ಅಲ್ಲಿ ಎ.ನಾಗರತ್ನಾ ಎನ್ನುವ ಶಿಕ್ಷಕಿ ನನ್ನೊಳಗಿನ ಗಾಯಕಿಯನ್ನು ಪ್ರೋತ್ಸಾಹಿಸಿದರು. ಮಹಾರಾಣಿ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿನಿಯಾಗಿದ್ದೆ. ಆಗಲೂ ಕನ್ನಡ ಶಿಕ್ಷಕಿ ಕಮಲಾ ಹಂಪನಾ, ರಸಾಯನ ಶಾಸ್ತ್ರ ವಿಭಾಗದ ಶಿಕ್ಷಕಿ ಅರುಣಾ ಮುಂತಾದವರು ಸಂಗೀತ ಪಯಣಕ್ಕೆ ಸಹಕರಿಸಿದರು.

ವಿಲ್ಸನ್‌ ಗಾರ್ಡನ್‌ನಲ್ಲಿರುವ ನೀಲಕಂಠ ಅಡಿಗ ಹಲವು ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟವರು. ಮಹಾರಾಣಿ ಕಾಲೇಜಿನಲ್ಲಿ ‘ಬಾನಲ್ಲೂ ನೀನೆ...’ ಹಾಡಿದಾಗ ಕಾಲೇಜು ನಿಯತಕಾಲಿಕೆಗಳಲ್ಲಿ ನೈಟಿಂಗೇಲ್‌ ಆಫ್‌ ಮಹಾರಾಣೀಸ್‌ ಎಂದೆಲ್ಲಾ ಹೊಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT