ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ್ನೆಲದಲ್ಲೇ ಅತಂತ್ರರು; ಗುರಿಯಿಲ್ಲದ ಈ ಪಯಣಿಗರು

ಮೊದಲಿಗೆ ಆಫ್ಘನ್ ಕುಟುಂಬಗಳ ಮನೆಗಳ ಮೇಲೆ ಲಾಠಿ ಹಿಡಿದ ಪೊಲೀಸರಿಂದ ದಾಳಿ ನಡೆಯಿತು. ಬಳಿಕ ಮನೆಗಳಲ್ಲಿದ್ದ ಜನರನ್ನು ಜೈಲಿಗೆ ತಳ್ಳಲಾಯಿತು. ಸಂಬಂಧಿಕರು ಲಂಚ ಕೊಟ್ಟ ಮೇಲಷ್ಟೇ ಅವರನ್ನು ಬಿಡುಗಡೆಗೊಳಿಸಲಾಯಿತು. ಲಂಚ ಕೊಡಲು ಅವರಲ್ಲಿ ಏನೂ ಉಳಿದಿಲ್ಲ ಎಂದಾಗ ಪಾಕಿಸ್ತಾನದಿಂದ ಶಾಶ್ವತವಾಗಿ ಕಾಲು ಕೀಳಬೇಕು ಮತ್ತು ಆಫ್ಘಾನಿಸ್ತಾನಕ್ಕೆ ತೆರಳಬೇಕು ಎಂದು ತಿಳಿಸಲಾಯಿತು.

ಆಫ್ಘಾನಿಸ್ತಾನ ಅವರೆಲ್ಲರ ಅಧಿಕೃತ ದೇಶ. ಆದರೆ ಅಲ್ಲಿ ತಲೆಮಾರುಗಳಿಂದ ನಡೆಯುತ್ತಿರುವ ಸಂಘರ್ಷಗಳಿಂದ ನಿರಾಶ್ರಿತರಾದ ಹಲವರಿಗೆ ಆಫ್ಘಾನಿಸ್ತಾನ ಎಂಬುದು ಇಂದು ವಿದೇಶಿ ನೆಲ. ಕಳೆದ ಡಿಸೆಂಬರ್‌ನಲ್ಲಿ ಪೆಶಾವರದಲ್ಲಿನ ಶಾಲೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ, ಪಾಕಿಸ್ತಾನದಲ್ಲಿ ನೆಲೆಸಿರುವ ಆಫ್ಘನ್ನರಿಗೆ ಇಂತಹ ಅನುಭವ ಹೆಚ್ಚು ಹೆಚ್ಚು ಆಗತೊಡಗಿದೆ. ಪಾಕಿಸ್ತಾನಿ ತಾಲಿಬಾನ್‌ಗಳು ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದರೂ ತಮ್ಮ ವಿರುದ್ಧ ಅಸಮಾಧಾನದ ಅಲೆ ಹಬ್ಬಲು ಇದೊಂದು ಪ್ರಮುಖ ಕಾರಣವಾಗಿ ಮಾರ್ಪಟ್ಟಿದೆ ಎಂದು ಆಫ್ಘನ್ ನಿರಾಶ್ರಿತರು ಹೇಳುತ್ತಿದ್ದಾರೆ.

ಅಲ್ಲಿಂದೀಚೆಗೆ ಪ್ರತಿದಿನ ಬಹುತೇಕ ಒಂದು ಸಾವಿರ ಆಫ್ಘನ್ನರು ತೋರ್ಖಂ ಗಡಿಯಲ್ಲಿ ಆಫ್ಘಾನಿಸ್ತಾನಕ್ಕೆ ತೆರಳುತ್ತಿರುವುದು ಕಂಡುಬಂದಿದೆ. ತಮ್ಮನ್ನು ಬಲಾತ್ಕಾರದಿಂದ ಹೊರಗೆ ಕಳುಹಿಸಲಾಗುತ್ತಿದೆ ಎಂಬುದು ಹೆಚ್ಚಿನವರ ಅಳಲು. ಪಾಕಿಸ್ತಾನದಲ್ಲಿ ಇರುವ ಇತರ ನಿರಾಶ್ರಿತರೂ ತಮ್ಮನ್ನು ಬಲಾತ್ಕಾರದಿಂದ ಹೊರಗೆ ಕಳುಹಿಸುವ ಆತಂಕದಲ್ಲಿದ್ದಾರೆ. 

ಆಫ್ಘನ್‌ ನಿರಾಶ್ರಿತರು ಪಾಕಿಸ್ತಾನ ಬಿಟ್ಟು ತೆರಳುವಂತೆ ಒತ್ತಡ ಬರುತ್ತಿರುವುದು ದೇಶದಲ್ಲಿ ವ್ಯಾಪಕವಾಗಿರುವ ನೀತಿಯಿಂದಾಗಿಯೋ ಅಥವಾ ಸದ್ಯ ಉದ್ಭವಿಸಿರುವ ಪರಿಸ್ಥಿತಿಯ ಲಾಭ ಪಡೆದುಕೊಂಡು ಅನಪೇಕ್ಷಿತ ನಿರಾಶ್ರಿತರನ್ನು ಹೊರಗಟ್ಟಲು ಸ್ಥಳೀಯ ಅಧಿಕಾರಿಗಳು ಮಾಡಿರುವ ಹುನ್ನಾರದಿಂದಲೋ ಎಂಬುದು ಸ್ಪಷ್ಟವಾಗಿಲ್ಲ. ಇದು ಸ್ಥಳೀಯ ಅಧಿಕಾರಿಗಳ ಹುನ್ನಾರದ ಫಲ ಎಂದೇ ಅನೇಕ ನಿರಾಶ್ರಿತರು ಭಾವಿಸಿದ್ದಾರೆ. ಆದರೆ ದಿನಕಳೆದಂತೆ ಆಫ್ಘನ್ ನಿರಾಶ್ರಿತರನ್ನು ಹೊರಗಟ್ಟುವ ಬೆಳವಣಿಗೆ ಹೆಚ್ಚುತ್ತಿದೆ.

ತೋರ್ಖಾಂನಲ್ಲಿ ಸಂಚಾರವನ್ನು ಗಮನಿಸುತ್ತಿರುವ ಆಫ್ಘಾನಿಸ್ತಾನದ ಅಧಿಕಾರಿಗಳ ಪ್ರಕಾರ, 2015ರ ಮೊದಲ ಆರು ವಾರಗಳಲ್ಲಿ ದಾಖಲಾತಿ ಇಲ್ಲದ 33 ಸಾವಿರ ಆಫ್ಘನ್ನರು ಪಾಕಿಸ್ತಾನದಿಂದ ಹಿಂದಿರುಗಿದ್ದಾರೆ. ಇದು 2014ರ ಇಡೀ ವರ್ಷದಲ್ಲಿ ನಡೆದ ನಿರಾಶ್ರಿತರ ನಿರ್ಗಮನಕ್ಕಿಂತ ಅಧಿಕ. ಆಫ್ಘಾನಿಸ್ತಾನಕ್ಕೆ ಬರುವ ಲಾರಿಗಳ ಹಿಂಬದಿ ತುಂಬಿದ್ದ ಜನರೇ ಇದಕ್ಕೆ ಸಾಕ್ಷಿ ಹೇಳುತ್ತಿದ್ದರು. ಆದರೂ ಇವರಲ್ಲಿ ಕೆಲವರು ಎದೆಯುಬ್ಬಿಸಿ ದೇಶಪ್ರೇಮ ಮೆರೆಯಲೂ ಮರೆಯುವುದಿಲ್ಲ.

‘ನನ್ನ ದೇಶಕ್ಕೆ ಹಿಂದಿರುಗುವುದು ನನ್ನ ಪಾಲಿಗೆ ಒದಗಿದ ಗೌರವ’ ಎಂದು 32ರ ಹರೆಯದ ವಜೀರ್ ಖಾನ್ ಹೇಳಿದರು. ಆಫ್ಘಾನಿಸ್ತಾನಕ್ಕೆ ತೆರಳಲು ಸಾಲುಗಟ್ಟಿ ನಿಂತಿದ್ದ ಬಣ್ಣಬಣ್ಣದ ಸರಕು ಸಾಗಣೆ ವಾಹನಗಳ ಸಾಲಿನಲ್ಲಿ ಆತನ ಕುಟುಂಬವೂ ಸೇರಿಕೊಂಡಿತ್ತು. ಖಾನ್ ಪಾಕಿಸ್ತಾನದಲ್ಲೇ ಹುಟ್ಟಿದವರು. ಆಫ್ಘಾನಿಸ್ತಾನದಲ್ಲಿ ಅವರ ಏಕೈಕ ಜೀವದ ಸೆಲೆ ಎಂದರೆ ಅವರ ಎಡ ಅಂಗೈಯಲ್ಲಿ ಮೂಡಿದ್ದ ನೀಲಿ ಶಾಯಿ ಮಾತ್ರ. ಅದು ಆಫ್ಘನ್ ಗಡಿ ದಾಟಿದ ನಂತರ ತಾನು ಸಂಪರ್ಕಿಸಲು ಉದ್ದೇಶಿಸಿರುವ ಸಂಬಂಧಿಯೊಬ್ಬರ ಮೊಬೈಲ್ ಫೋನ್ ನಂಬರ್. ಆದರೂ ‘ಇದೊಂದು ಸಂತಸದ ಕ್ಷಣ’ ಎಂದೇ ಅವರು ಹೇಳುತ್ತಾರೆ.

ವಿಶ್ವಸಂಸ್ಥೆಯ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 15 ಲಕ್ಷದಷ್ಟು ನೋಂದಾಯಿತ ಆಫ್ಘನ್ ನಿರಾಶ್ರಿತರಿದ್ದಾರೆ ಹಾಗೂ ನೋಂದಣಿಗೊಳ್ಳದ ಸಾವಿರಾರು ನಿರಾಶ್ರಿತರಿದ್ದಾರೆ. ಆಫ್ಘನ್ನರು ತಮ್ಮ ದೇಶಕ್ಕೆ ಹಿಂದಿರುಗುವುದನ್ನು ನಾವು ಎದುರು ನೋಡುತ್ತಿದ್ದೇವೆ, ಅವರು ಪಾಕಿಸ್ತಾನದಲ್ಲಿ ಇದ್ದಷ್ಟೂ ಸಮಯ ಅವರ ಭದ್ರತೆಯ ವಿಚಾರದಲ್ಲಿ ಆತಂಕ ಇದ್ದೇ ಇರುತ್ತದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಮೊದಲಿನಿಂದಲೂ ಹೇಳುತ್ತಲೇ ಇದ್ದಾರೆ.

ಕಳೆದ ಎರಡು ತಿಂಗಳಿಂದೀಚೆಗೆ ಪಾಕಿಸ್ತಾನದಿಂದ ಹೊರಗೆ ಕಳುಹಿಸಲಾದ ನಿರಾಶ್ರಿತರಲ್ಲಿ ನೋಂದಾಯಿತ ನಿರಾಶ್ರಿತರೂ ಇದ್ದಾರೆ ಎಂಬ ಮಾತು ಕೇಳಿಬಂದಿದೆ. ಸಲೀಂ (35) ಅವರೇ ಇದಕ್ಕೆ ನಿದರ್ಶನ. ಅವರು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನೆಲೆಸಿದ್ದವರು. ಪೊಲೀಸರು ಅವರ ಮನೆ ಮೇಲೆ ದಾಳಿ ನಡೆಸಿದಾಗ ಸಲೀಂ ತಮ್ಮ ನಿರಾಶ್ರಿತ ಚೀಟಿಯನ್ನು ತೋರಿಸಿದ್ದರು. ಒಬ್ಬ ಪೊಲೀಸ್ ಅಧಿಕಾರಿ ಆ ಚೀಟಿಯನ್ನು ಕಿತ್ತೆಸೆದಿದ್ದರು ಎನ್ನಲಾಗಿದೆ.

ಇದು ನಿಜವೇ ಆಗಿದ್ದರೆ ಇದು ಅಂತರರಾಷ್ಟ್ರೀಯ ನಿಯಮದ ಉಲ್ಲಂಘನೆಯಾಗುತ್ತದೆ. ಪೆಶಾವರ ದಾಳಿಯ ನಂತರ ಇಂತಹ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ನಿರಾಶ್ರಿತ ಏಜೆನ್ಸಿ ಪಾಕಿಸ್ತಾನ ಸರ್ಕಾರಕ್ಕೆ ದೂರು ಸಲ್ಲಿಸಿದೆ. ‘ಪೆಶಾವರ ದಾಳಿಯ ಬಳಿಕ ಪೊಲೀಸರು ಆರಂಭಿಸಿದ ಕಾರ್ಯಾಚರಣೆಯಲ್ಲಿ ನೋಂದಾಯಿತ ಆಫ್ಘನ್ ನಿರಾಶ್ರಿತರನ್ನು ಸಹ ಪೊಲೀಸರು ಪ್ರಶ್ನಿಸುತ್ತಿರುವ ವಿಷಯ ನಮಗೆ ಗೊತ್ತಾಗಿದೆ.

ಇದರ ಬಗ್ಗೆ ನಮ್ಮ ಆತಂಕವನ್ನು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಸರ್ಕಾರದ ಸಹೋದ್ಯೋಗಿಗಳಿಗೆ ಮನವರಿಕೆ ಮಾಡಿದ್ದೇವೆ’ ಎಂದು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈಕಮಿಷನರ್ ಅವರ ವಕ್ತಾರ ಬಾಬರ್ ಬಲೋಚ್ ಇ– ಮೇಲ್ ಮೂಲಕ ತಿಳಿಸಿದ್ದಾರೆ. ‘ಪೆಶಾವರ ದಾಳಿ ನಡೆದ ಬಳಿಕ ಪೊಲೀಸರು ಆಫ್ಘನ್‌ನ ನೋಂದಾಯಿತ ನಿರಾಶ್ರಿತರನ್ನು ಗುರಿಯಾಗಿ ಮಾಡುತ್ತಿರುವುದಕ್ಕೆ ನಮ್ಮ ಏಜೆನ್ಸಿ ತಕ್ಷಣ ಸ್ಪಂದಿಸಿ ನಮ್ಮ ಆಕ್ಷೇಪ ವ್ಯಕ್ತಪಡಿಸಿದೆ’ ಎಂದು ಅವರು ಹೇಳುತ್ತಾರೆ.

ಹೊರತಳ್ಳುವ ಪ್ರಕ್ರಿಯೆ: ಪಾಕಿಸ್ತಾನದಲ್ಲಿ ನೆಲೆಸಿರುವ ಆಫ್ಘನ್ ನಿರಾಶ್ರಿತರನ್ನು ಹೊರಗೆ ಕಳುಹಿಸುವುದಕ್ಕೆ ಅಧಿಕೃತ ಬೆಂಬಲ ನೀಡಲಾಗಿದೆ ಎಂಬುದನ್ನು ಪಾಕಿಸ್ತಾನ ಅಲ್ಲಗಳೆದರೂ, ನಿರಾಶ್ರಿತರನ್ನು ಹೊರಗಟ್ಟುವುದಕ್ಕೆ ಒಂದು ರೀತಿಯ ಔಪಚಾರಿಕ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರೆ ತಸ್ನಿಂ ಅಸ್ಲಾಂ ಖಾನ್ ಅವರು ಈಚೆಗೆ ಪತ್ರಿಕಾಗೋಷ್ಠಿ ನಡೆಸಿದಾಗ, ಈ ವರ್ಷದ ಅಂತ್ಯದೊಳಗೆ ನೋಂದಾಯಿತ ನಿರಾಶ್ರಿತರು ಪಾಕಿಸ್ತಾನದಿಂದ ಹೊರಗೆ ಹೋಗಲಿದ್ದಾರೆ ಎಂಬ ಸುಳಿವು ನೀಡಿದ್ದರು. ‘ಅವರು ಘನತೆಯಿಂದ ಮತ್ತು ಸ್ವಯಂಪ್ರೇರಿತವಾಗಿ ತಮ್ಮ ದೇಶಕ್ಕೆ ನಿರ್ಗಮಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ’ ಎಂದಿದ್ದರು.

‘ನೋಂದಾಯಿಸಿಕೊಳ್ಳದ ಆಫ್ಘನ್ ನಿರಾಶ್ರಿತರು ಅಧಿಕ ಸಂಖ್ಯೆಯಲ್ಲಿ ಇರುವ ಸ್ಥಳಗಳನ್ನು ಭಯೋತ್ಪಾದಕರ ಅಡಗುದಾಣವಾಗಿ ಬಳಸಿಕೊಳ್ಳಲಾಗುತ್ತಿದೆ, ಅದರ ಬಗ್ಗೆ ನಾವು ಕ್ರಮ ಕೈಗೊಳ್ಳಲೇಬೇಕಿದೆ’ ಎಂದು ಈ ವಕ್ತಾರೆ ಹೇಳಿದ್ದರು. ಪಾಕಿಸ್ತಾನದಿಂದ ಮರಳಿ ಆಫ್ಘಾನಿಸ್ತಾನದತ್ತ ತೆರಳುವ ಕೆಲವರಿಗೆ ಅಲ್ಲಿ ಸಂಬಂಧಿಕರು ಇದ್ದಾರೆ, ಇವರನ್ನು ತಮ್ಮೊಂದಿಗೆ ಸೇರಿಸಿಕೊಳ್ಳುತ್ತಾರೆ. ಆದರೆ ಇನ್ನೂ ಅದೆಷ್ಟೋ ಮಂದಿಗೆ ಅಲ್ಲಿ ಯಾರೂ ಇಲ್ಲ.

ತೋರ್ಖಂಗೆ ಸಮೀಪದ ದೊಡ್ಡ ನಗರ ಜಲಾಲಾಬಾದ್‌ನಲ್ಲಿ ಕಾಲುವೆಯೊಂದರ ಬದಿಯಲ್ಲಿ 15 ಕುಟುಂಬಗಳು ಟೆಂಟ್ ಹಾಕಿಕೊಂಡಿವೆ. ಹೊಟ್ಟೆ ಹೊರೆಯುವುದಕ್ಕೆ ಅವರ ಮಕ್ಕಳು ಪಕ್ಕದ ಗದ್ದೆಯಲ್ಲಿನ ಟರ್ನಿಪ್‌ ಗೆಡ್ಡೆಗಳನ್ನು ಕೀಳುತ್ತಿರುವುದು ಕಂಡುಬಂತು. ಈ ನಿರಾಶ್ರಿತ ಕುಟುಂಬದ ಆಹಾರದ ಮೂಲ ಅದೊಂದೇ. ಅವರೆಲ್ಲ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ನಿರಾಶ್ರಿತ ಕಾಲೊನಿಗಳಿಂದ ಬಂದವರು. ಸೋವಿಯತ್ ಆಕ್ರಮಣದಿಂದ ಬಚಾವಾಗಲು 35 ವರ್ಷಗಳ ಹಿಂದೆ ಆಫ್ಘಾನಿಸ್ತಾನ ಬಿಟ್ಟು ಬಂದವರು ಇವರು.

ಈ ನಿರಾಶ್ರಿತರ ಜೇಬಲ್ಲಿ ಇರುವುದು ಸರ್ಕಾರದ ಮೊಹರು ಇರುವ ಕೈಬರಹದ ಚೀಟಿಗಳು ಮಾತ್ರ. ಪೊಲೀಸರಿಂದ ಬಂಧನಕ್ಕೊಳಗಾದ ಬಳಿಕ ಪೊಲೀಸ್ ಠಾಣೆಯೊಂದರಿಂದ ಪಡೆದ ಚೀಟಿಗಳು ಇವು. ಪಾಕಿಸ್ತಾನ ಬಿಟ್ಟು ತೆರಳಲು ಒಪ್ಪಂದವಾಗಿದೆ ಎಂದು ಅವುಗಳಲ್ಲಿ ಬರೆದಿದೆ. ಕೆಲವು ಚೀಟಿಗಳಲ್ಲಿ ಇವರು ಆಫ್ಘಾನಿಸ್ತಾನಕ್ಕೆ ತೆರಳುತ್ತಿದ್ದಾರೆ ಎಂಬ ಉಲ್ಲೇಖವೂ ಇದೆ.

ಗಡಿಯಿಂದ ಕೆಲವು ಮೈಲುಗಳ ದೂರದಲ್ಲಿ ಅಂತರ ಸರ್ಕಾರಿ ಗುಂಪು ಅಂತರ ರಾಷ್ಟ್ರೀಯ ವಲಸಿಗರ ಸಂಘಟನೆಯಿಂದ ನಡೆಯುತ್ತಿರುವ ನಿರಾಶ್ರಿತ ಶಿಬಿರದಲ್ಲಿ ಖತಜ್ ಎಂಬ 8 ವರ್ಷದ ಬಾಲಕ ತನ್ನ ತಾಯಿಯ ಬಳಿ ‘ನಾವು ಎಲ್ಲಿಗೆ ಹೋಗುತ್ತಿದ್ದೇವೆ?’ ಎಂದು ಮುಗ್ಧನಾಗಿ ಕೇಳುತ್ತಿದ್ದ. ‘ನಮ್ಮ ತಾಯ್ನೆಲದತ್ತ’ ಎಂದು ಅವನ ತಾಯಿ ಪರಿ ಗುಲ್ ಉತ್ತರಿಸಿದ್ದರು. ಆದರೆ ಅವರು ತಮ್ಮ ದುಗುಡವನ್ನು ಬಚ್ಚಿಟ್ಟು ಬಾಲಕನಿಗೆ ಈ ಉತ್ತರ ನೀಡಿದ್ದರು.

‘ನಾವು ನಮ್ಮ ಮನೆಯಿಂದಲೇ ಹೊರಗೆ ಹಾಕಿಸಿಕೊಂಡಂತೆ ಭಾಸವಾಗುತ್ತಿದೆ. ನಮಗೆ ಗೊತ್ತು ಗುರಿಯೇ ಇಲ್ಲವಾಗಿದೆ’ ಎಂದು ಅವರು ಮಕ್ಕಳಿಂದ ದೂರ ಬಂದು ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ತಮ್ಮ ಆರು ಮಕ್ಕಳ ಭವಿಷ್ಯ ನೆನೆದು ಆಕೆ ಬಹಳ ಆತಂಕದಲ್ಲಿದ್ದರು.
‘ನಾವು ನಮ್ಮ ಮಕ್ಕಳಿಗೆ ಈ ದೇಶದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಅವರಿಗೆ ಈ ದೇಶದ ಯಾವ ವಿಚಾರವೂ ಗೊತ್ತಿಲ್ಲ. ಅವರು ಒಂದು ರೀತಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆಯೇ ಇದ್ದಾರೆ’ ಎಂದು ಅವರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT