ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯ ಮೊಲೆಹಾಲು ನಂಜಾಗಿ...

ಚರ್ಚೆ
Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ದೇವನೂರ ಮಹಾದೇವ ಅವರ ಸರ್ವೋ­ದಯ ಪಕ್ಷ, ಕಾಂಗ್ರೆಸ್ ಹಾಗೂ ಆಮ್‌ ಆದ್ಮಿ ಪಕ್ಷಕ್ಕೆ  ಬೆಂಬಲ ಘೋಷಿಸಿದೆ. ‘ಬಿಜೆಪಿ ತನ್ನ ಆತ್ಮಹತ್ಯೆಗೆ ತಾನೇ ಸಜ್ಜಾಗು­ತ್ತಿದೆಯೇ?’ ಲೇಖನದಲ್ಲಿ (ಪ್ರ.ವಾ. ಏ.10) ಬಿಜೆಪಿ ಹಾಗೂ ಸಂಘ ಪರಿವಾರದ ಹುನ್ನಾರ­ಗಳನ್ನು ಅವರು ಬಯಲಿ­ಗೆಳೆದಿ­ದ್ದಾರೆ. ಆದರೆ ಮುಖ್ಯ­ಮಂತ್ರಿ ಸಿದ್ದರಾಮಯ್ಯ­ನವರ ನೇತೃತ್ವದ ಕರ್ನಾಟಕ ಸರ್ಕಾರವು ಕಳೆದ ಹತ್ತು ತಿಂಗಳಿಂದ ಮಾಡಿ­ರುವ ಅನಾಹುತಗಳ ಬಗೆಗೆ ದೇವನೂರರು ದಿವ್ಯಮೌನ ವಹಿಸಿದ್ದಾರೆ.

ಈ ಸರ್ಕಾರದ ಅನೇಕ ಜನವಿರೋಧಿ ನೀತಿ­ಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿರುವ ಸಾಹಿತಿ­ಗಳು, ಬುದ್ಧಿಜೀವಿಗಳು ಸಹಿಸಿಕೊಂಡು ಬರುತ್ತಿ­ದ್ದಾರೆ. ಉದಾಹರಣೆಗೆ; 1) ರೈತರ ಅಹ­ವಾಲು­­ಗಳನ್ನು ಕೇಳದೆ, ಸಾವಿಗೆ ಕಾರಣ­ವಾ­ಗಿದ್ದು, - ಇತ್ತೀಚೆಗೆ ಅವರ ಸಾವಿಗೆ ಕುಡಿತ ಕಾರಣ ಎಂಬ ಹೇಳಿಕೆ ಸಿದ್ದರಾಮಯ್ಯ­ನವ­ರಿಂದ ಬಂದಿದೆ! 2) ರೈತರ ಮೇಲೆ ಅಮಾನ­ವೀ­ಯ­ವಾಗಿ ಲಾಠಿ ಚಾರ್ಜ್ ಮಾಡಿರುವ ಕ್ರಮ 3) ರಾಜ್ಯದಾ­ದ್ಯಂತ ನಡೆದ ವಿವಿಧ ಪ್ರತಿ­ಭಟ­ನೆ­ಗಳ ಬಗೆಗೆ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ 4) ಅನು­ದಾನಿತ ಕಾಲೇಜುಗಳ ಉಪನ್ಯಾಸಕರ ಉಪ­ವಾಸ ಸತ್ಯಾಗ್ರಹ 5) ಅತಿಥಿ ಉಪನ್ಯಾಸ­ಕರ ಬೇಡಿಕೆ ಈಡೇರಿಕೆಗಾಗಿ ನಡೆಸಿದ ಪ್ರತಿ­ಭ­ಟನೆ

6) ದಿನಗೂಲಿ ನೌಕರರ ಪ್ರತಿಭಟನೆ 7) ಅಂಗನ­ವಾಡಿ ಕಾರ್ಯಕರ್ತೆ­ಯರ ಪ್ರತಿ­ಭ­ಟನೆಗಳಲ್ಲದೆ ಮಾಜಿ ಮುಖ್ಯ­ಮಂತ್ರಿಗಳ ಪ್ರತಿ­ಭಟನೆಗಳೂ ಈ ಸರ್ಕಾರದ ಗಮನಸೆಳೆದಿಲ್ಲ. ಅಷ್ಟು ಈ ಸರ್ಕಾರ ಸಂವೇದನೆಯನ್ನು ಕಳೆ­ದುಕೊಂಡಿದೆ. 8) ಕೃತಿ ನಿಷೇಧ, ಲೇಖಕರ ಬಂಧನ–ಕರ್ನಾಟಕದಲ್ಲಿ ಕೃತಿ ಬರೆದ ಕಾರಣಕ್ಕೆ ಬಂಧಿಸುವ ಕೆಟ್ಟ ಪರಂಪರೆಗೆ ಈ ಸರ್ಕಾರ ನಾಂದಿ ಹಾಡಿದೆ  9) ಸಾಂಸ್ಕೃತಿಕ ನೀತಿಯ ಹೇರಿಕೆ ಯತ್ನ  10) ಅಲ್ಪ­ಸಂಖ್ಯಾತ­ರಿಗೆ ಶಾದಿ­ಭಾಗ್ಯ ಯೋಜನೆ 11) ‘ಅಹಿಂದ’ ಮಕ್ಕಳಿಗೆ ಮಾತ್ರ ಪ್ರವಾಸ ಭಾಗ್ಯ ಯೋಜನೆ  ರೂಪಿಸಿ,  ವಿರೋಧ ಬಂದಿದ್ದ­ರಿಂದ ನಂತರ ವಿಸ್ತರಿಸಿದ್ದು– ಇತ್ಯಾದಿ ಅನಾ­ಹುತ­ಗಳು ನಡೆ­­ದಿವೆ. ಸಿದ್ದರಾಮಯ್ಯ­ವರ ಅಧಿಕಾ­ರಾ­ವ­ಧಿ­ಯಲ್ಲಿ ನಡೆದಿರುವ ಅಹಿತಕರ ಘಟ­ನೆ­ಗಳು, ತಳೆದ ಜೀವವಿರೋಧಿ ನಿಲುವು­ಗಳ ಸಮ­ಯದಲ್ಲಿ ಈಗ ಬಹಿರಂಗ ಪ್ರಚಾರಕ್ಕೆ ಬಂದಿ­ರುವ ಸಾಹಿತಿಗಳು ಮೌನ ವಹಿಸಿದ್ದರು.  ಅದನ್ನು ಪ್ರಜ್ಞಾವಂತರು ನಿಜಕ್ಕೂ ಪ್ರಶ್ನಿಸ­ಬೇಕು.

ಕಳೆದ ಎರಡು ಸರ್ಕಾರಗಳು ಮಾಡಿದ ಕೆಟ್ಟ ಸಾಧನೆಯ ಪಟ್ಟಿಯನ್ನು ನೋಡಿದರೆ ನಮ್ಮ ಶೈಕ್ಷಣಿಕ ವ್ಯವಸ್ಥೆಯ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಸರ್ಕಾರಗಳು ಏನು ಮಾಡಿ­ದರೂ ಸುಮ್ಮನಿರುವ ವಿದ್ಯಾವಂತ ಮತದಾ­ರರು ಒಂದು ಕಡೆ ಇದ್ದಾರೆ. ಇನ್ನೊಂದು ಕಡೆ ತಾವು ನಡೆದದ್ದೇ ಹಾದಿ, ಮಾಡಿದ್ದೇ ಕೆಲಸ, ಹಗರಣಗಳೇ ನಮ್ಮ ಸಾಧನೆಗಳು ಎಂಬಂತೆ ಅನೇಕ ರಾಜಕಾರಣಿ­ಗಳು ಸಾಗಿದ್ದಾರೆ. ಹಾಗಾ­ದರೆ ಈ ಅನಾಹುತ­ಗಳನ್ನು ತಡೆಯುವವ­ರಾರು? ಹೇಗೆ? ಇದಕ್ಕೆ ಕೊನೆ ಎಂದು? ಇಂತಹ ಅನೈತಿಕ ಚಟುವಟಿಕೆ­ಗಳು ನಿರಂತರವೇ? ಇಂತಹ ಪ್ರಶ್ನೆಗಳು ಮೂಡು­­ವುದು ಸಹಜ. ಇಂತಹ ಸಂದರ್ಭ­ದಲ್ಲಿ ಸಾಹಿತಿ, ಬುದ್ಧಿಜೀವಿ, ಹೋರಾಟ­ಗಾರರು ಕ್ರಿಯಾಶೀಲವಾಗಬೇಕಿದೆ.

ಭಾರತಕ್ಕೆ ಬ್ರಿಟಿಷರು ಬರುವವರೆಗೆ ವಿದ್ಯೆ ಬಹುತೇಕ ಉಳ್ಳವರ ಸ್ವತ್ತಾಗಿತ್ತು. ಅಲ್ಲದೆ ವಿದ್ಯೆ­ಯನ್ನು ಹಂಚುವುದು, ವಿಸ್ತರಿಸುವುದು ಪ್ರಮಾ­ದ­ವೆಂಬಂತಹ ಭಾವನೆಗಳನ್ನು ಬಿತ್ತ­ಲಾ­ಗಿತ್ತು. ಇದರಿಂದಾಗಿ ಯಾರು ಏನು ಮಾಡಿ­ದರೂ ನಡೆಯುತ್ತಿತ್ತು. ದುರದೃಷ್ಟವ­ಶಾತ್ ಆಧುನಿಕ ಸಂದರ್ಭದಲ್ಲೂ ಇಂತಹದೇ ಮನೋ­ಧರ್ಮ­ವಿದೆ. ಇದರಿಂದಾಗಿ ಜನರಿಗೆ ಉತ್ತರದಾಯಿ­ಗ­ಳಾಗಬೇಕಾದ ರಾಜಕಾರಣಿ, ಅಧಿಕಾರಿಗಳು ಆರಾಮ­ವಾಗಿ ಕುಳಿತಿದ್ದಾರೆ. ಅನ್ಯಾಯ, ಅಕ್ರಮ, ಭ್ರಷ್ಟಾಚಾರ, ಕೊಲೆ ಮಾಡಿ ಜೈಲಿ­ನ­ಲ್ಲಿರ­ಬೇಕಾದವರು ನಾಚಿಕೆ­ಯಿಲ್ಲದೆ ಸಾರ್ವ­ಜ­ನಿಕವಾಗಿ ತಿರುಗಾಡಿಕೊಂಡಿ­ದ್ದಾರೆ.   ತಮ್ಮ ಜಾತಿಯವನು ಎಂಬ ಕಾರಣಕ್ಕೆ ಭ್ರಷ್ಟ, ಲಂಚಕೋರ, ಅತ್ಯಾಚಾರಿ, ಮತಾಂಧರನ್ನು ಬೆಂಬಲಿಸುವ ವರ್ಗವಿದೆ.

ಇದು ಹೀಗೆಯೇ ಎಷ್ಟು ದಿನ ಮುಂದುವ­ರೆ­ಯಬೇಕು? ಇಂತಹ ಪ್ರಶ್ನೆ ಈಗಿನದಲ್ಲ. ಕರ್ನಾ­ಟಕದಲ್ಲಿ ಪ್ರಗತಿರಂಗದ ಪರಿಕಲ್ಪನೆ­ಯನ್ನು ಪಿ. ಲಂಕೇಶ್, ಎಂ.ಡಿ.­ ನಂಜುಂಡ­ಸ್ವಾಮಿ, ಎಸ್.­ರಾಮದಾಸ್, ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ, ಚಂದ್ರ­ಶೇಖರ ಪಾಟೀಲ ಮೊದಲಾದವರು ರಾಜಕೀಯ ಶಕ್ತಿಯಾಗಿಸಲು ಪ್ರಯತ್ನಿ­ಸಿ­ದರು. ರಾಜಕಾರಣದಲ್ಲಿ ಬದಲಾ­ವಣೆ­ಯನ್ನು ತರುವ ಇವರ ಪ್ರಯತ್ನದಲ್ಲಿ ಇಂದಿನ ದೆಹಲಿ­ಯಲ್ಲಿ ನಡೆದ ಮ್ಯಾಜಿಕ್ ನಡೆಯ­ದಿದ್ದರೂ, ಪ್ರೊ.ನಂಜುಂ­ಡ­ಸ್ವಾಮಿ­ಯವರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾದರು. ಆದರೆ ಅನಂತರ ಈ ಪ್ರಯತ್ನ ವಿಫಲ­ವಾಯಿತು. ಸಾಹಿತಿ, ಹೋರಾ­ಟಗಾರರು, ಚಿಂತಕರು ಒಟ್ಟಿಗೆ ಹೊಂದಾ­ಣಿಕೆ ಮಾಡಿ­ಕೊಂಡು ಹೋಗು­ವಲ್ಲಿ ವಿಫಲರಾದರು.

ಪ್ರಸ್ತುತ ರಾಜಕೀಯ ದುರಂತಕ್ಕೆ ಈ ಸೋಲು ಪ್ರಮುಖ ಕಾರಣವಾಗಿದೆ. ಚಿಲಿಯ ನೆರೂಡ, ಜರ್ಮ­ನಿಯ ಬ್ರೆಕ್ಟ್, ಆಫ್ರಿಕಾದ ಗೂಗಿ ವಾ ಥಿಯಾಂಗೋ, ಕ್ಯೂಬಾದ ಚೆಗೆ­ವಾರ ಮೊದ­ಲಾ­ದ­ವರು ತೀವ್ರವಾಗಿ ರಾಜ­ಕೀಯ ಸಂಘಟನೆಯಲ್ಲಿ ತೊಡ­ಗಿ­ಸಿ­­ಕೊಂಡಿ­ದ್ದರು. ಇಂದಿಗೂ ಅಮೆರಿಕದ ಕಟು ವಿಮರ್ಶಕ ನೋಮ್‌­ಚಾಮ್‌ಸ್ಕಿ ರಾಜ­ಕೀಯ ಸಿದ್ಧಾಂತ­ಗಳನ್ನು ಒರೆಗೆ ಹಚ್ಚುವುದರಿಂದಲೇ ಪ್ರಸಿದ್ಧ­ನಾ­ದವನು. ಆದರೆ ಭಾರತ­ದಲ್ಲಿ ಸಾಹಿತಿಗಳನ್ನು ಶುದ್ಧಾಂಗ­ವಾಗಿ ಸಾಹಿತ್ಯ­ವಲಯಕ್ಕೆ ಮಾತ್ರ ಸೀಮಿತಗೊಳಿಸ­ಲಾಗುತ್ತಿದೆ. ಆದ್ದರಿಂದಲೇ ಭಾರ­ತ­ದಲ್ಲಿ ಸಣ್ಣ ಬದಲಾ­ವಣೆಗೂ ಸಾವಿ­ರಾರು ವರ್ಷಗಳ ಸುದೀರ್ಘ ಹಾದಿಯನ್ನು ಕ್ರಮಿಸಬೇಕಾ­ಗುತ್ತಿದೆ.

ಅದರೊಟ್ಟಿಗೆ ಸಾಹಿತಿಗಳು ಸಕ್ರಿಯ ರಾಜ­ಕೀಯ ಪ್ರವೇಶದ ಬದಲು, ಕೇವಲ ಬೆಂಬ­ಲಿ­ಸುವ ಕೆಲಸಕ್ಕೆ ಸೀಮಿತವಾಗುತ್ತಿದ್ದಾರೆ. ವಿಚಾರ­­­­ಗಳು ಮನುಷ್ಯರನ್ನು ಆಳುತ್ತವೆ ಎಂಬ ಮಾತಿದೆ. ಆದರೆ ಬುದ್ಧಿಜೀವಿಗಳನ್ನು ಅನು­ಮಾನದಿಂದ ನೋಡುವ, ಅವರನ್ನು ಅವ­ಮಾ­ನಿಸುವ, ಅವರ ಬಗ್ಗೆ ಸಾರ್ವಜನಿಕವಾಗಿ ಅವ­ಹೇಳನ ಮಾಡುವ ಕೆಲಸಗಳು ಇಲ್ಲಿ ನಡೆ­ಯುತ್ತಿವೆ. ಇಂತಹ ಸಮ­ಯದಲ್ಲಿ ಸಾಹಿತಿಗಳ ಮಾತುಗಳನ್ನು ಅಪ­ವ್ಯಾಖ್ಯಾನಿಸುವ ಕೆಲಸ ಕೂಡ ನಡೆಯುತ್ತಿದೆ. ಇನ್ನು ಈ ದೇಶದ ಸಮಸ್ಯೆಗಳು ಬಗೆಹರಿಯು­ವುದೆಂತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT