ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರುಣ್ಯ ಚಿಲುಮೆ

Last Updated 9 ಜುಲೈ 2016, 19:30 IST
ಅಕ್ಷರ ಗಾತ್ರ

ಒಬ್ಬರೇ ಒಂಟಿಯಾಗಿ ವಾಸಮಾಡುತ್ತಿದ್ದ ಡಾ. ಜಿನೇಂದ್ರ ಒಮ್ಮೆ ತನ್ನ ನಾಲ್ವರು ಗೌರವಾನ್ವಿತ ಸ್ನೇಹಿತರನ್ನು ತನ್ನ ಅಭ್ಯಾಸದ ಕೋಣೆಗೆ ಆಹ್ವಾನಿಸಿದರು. ಅವರಲ್ಲಿ ಮೂವರು ಬಿಳಿ ಗಡ್ಡದವರು, ಶ್ರೀಯುತ ಸ್ವಾಮಿ, ಶ್ರೀಯುತ ಪಂಡಿತ್ ಮತ್ತು ಶ್ರೀಯುತ ಮುತ್ತಣ್ಣ. ಮತ್ತೊಬ್ಬರು ತುಂಬ ವಯಸ್ಸಾದ ಈಗಲೋ–ಆಗಲೋ ಎಂಬಂತಿದ್ದ ವಿಧವೆ ಮಹಿಳೆ ನೀರಜ. ಇವರೆಲ್ಲಾ ತುಂಬ ವಯಸ್ಸಾದ ದುಃಖಭರಿತ ಜೀವಿಗಳು. ಜೀವನದಲ್ಲಿ ದುರದೃಷ್ಟಶಾಲಿಗಳಾಗಿ ನೊಂದವರು.

ನಿಜವಾಗಿ ಹೇಳಬೇಕೆಂದರೆ ಅವರೆಲ್ಲಾ ಒಂದು ವಿಧದಲ್ಲಿ ಈಗಾಗಲೇ ಸತ್ತು ಬದುಕಿರುವವರು. ಸ್ವಾಮಿ ತಮ್ಮ ತಾರುಣ್ಯಾವಸ್ಥೆಯಲ್ಲಿ ಒಬ್ಬ ಐಶ್ವರ್ಯವಂತ ವ್ಯಾಪಾರಿಯಾಗಿ ಮೆರೆದವರು. ಆದರೆ ಇನ್ನೂ ಹೆಚ್ಚು ಗಳಿಸುವ ಆಸೆಯಿಂದ ಸಟ್ಟಾ ವ್ಯಾಪಾರಕ್ಕಿಳಿದು ಎಲ್ಲವನ್ನೂ ಕಳೆದುಕೊಂಡರು. ಈಗ ಅವರು ಕೇವಲ ಒಬ್ಬ ಭಿಕ್ಷುಕನಿಗಿಂತ ಸ್ವಲ್ಪ ವಾಸಿ ಎನ್ನಬಹುದು. ಪಂಡಿತ್ ತನ್ನ ಅತ್ಯಂತ ಉತ್ತಮ ವರ್ಷಗಳನ್ನು ಕಂಡವರು.

ಒಳ್ಳೆಯ ಆರೋಗ್ಯ ಮತ್ತು ಐಶ್ವರ್ಯಗಳಿಂದ ಪಾಪದ ಸುಖಗಳ ಹಿಂದೆ ಬಿದ್ದವರು. ಅದರಿಂದಾಗಿ ಅನೇಕ ರೀತಿಯ ನೋವುಗಳಿಗೆ ಜನ್ಮವಿತ್ತವರು. ಕೈ-ಕಾಲುಗಳ ಸಂಧಿವಾತ ಮತ್ತಿತರ ಅನೇಕ ದೇಹಬಾಧೆಗಳಿಗೆ ಆಹ್ವಾನವಿತ್ತು ಕಷ್ಟವನ್ನು ಅನುಭವಿಸುತ್ತಿದ್ದವರು. ಇನ್ನು ಮುತ್ತಣ್ಣ ಒಬ್ಬ ಹಾಳಾದ ರಾಜಕಾರಿಣಿ, ಕುಖ್ಯಾತ ಮನುಷ್ಯ, ಈಗಿನ ಪೀಳಿಗೆಯ ಜ್ಞಾನವನ್ನು ಪಡೆಯಲಾರದಷ್ಟು ನಿಶ್ಕ್ರಿಯನಾಗಿದ್ದ. ಇನ್ನು ಈ ವಿಧವೆ ನೀರಜಳು ಹಿಂದೆ ದೊಡ್ಡ ಸುಂದರಿ ಎನಿಸಿಕೊಂಡವಳು.

ಆದರೆ ಈಗ ಬಹಳ ದಿನಗಳಿಂದ ತನ್ನಷ್ಟಕ್ಕೆ ತಾನೇ ಒಂಟಿಯಾಗಿ ಜೀವಿಸುತ್ತಿದ್ದಳು. ಅದಕ್ಕೆ ಕಾರಣವಿತ್ತು. ಅವಳ ಮೇಲೆ ಅನೇಕ ಕಥೆಗಳು ಹುಟ್ಟಿಕೊಂಡಿದ್ದವು. ಈ ಮೂರು ಬಿಳಿ ಗಡ್ಡದವರೂ ಮೊದಲು ಅವಳಿಗಾಗಿ ಒಬ್ಬರ ಕತ್ತನ್ನು ಸೀಳಲು ಮತ್ತೊಬ್ಬರು ತಯಾರಾಗಿದ್ದವರು. ಆದರೆ ಈಗ ಇವರನ್ನು ಆಹ್ವಾನಿಸಿರುವ ಡಾಕ್ಟರಾಗಲೀ ಅಥವ ಈ ನಾಲ್ವರೇ ಆಗಲೀ ತಮ್ಮ ಈಗಿನ ಪರಿಸ್ಥಿತಿಯಲ್ಲಿ ತಮ್ಮ ಹಳೆಯದನ್ನು ಕೆದಕಲು ಸುತರಾಂ ತಯಾರಿರಲಿಲ್ಲ. ಅದು ಕೂಡದೆಂದು ಮಾನಸಿಕವಾಗಿ ದೃಢ ನಿರ್ಧಾರ ಮಾಡಿದ್ದರು.

ಡಾ. ಜಿನೇಂದ್ರ ಅವರು ತಮ್ಮ ಆಹ್ವಾನಿತರು ಬಂದ ಮೇಲೆ ಅವರನ್ನು ಕುಳ್ಳಿರಿಸಿ, ನನ್ನ ಬಹುದಿನಗಳ ಹಳೆಯ ಸ್ನೇಹಿತರೇ, ನನ್ನ ಪ್ರಯೋಗಗಳಲ್ಲಿ ಒಂದನ್ನು ನನ್ನ ಸಹಾಯದಿಂದ ನಿಮ್ಮ ಮೇಲೆ ಪ್ರಯೋಗಿಸಿ ನನ್ನ ಸಂಶೋಧನೆಯ ಸಂತೋಷವನ್ನು ಅನುಭವಿಸಲು ಕಾತುರನಾಗಿದ್ದೇನೆ ಎಂದರು.

ಡಾಕ್ಟರ್ ಕೊಠಡಿಯಲ್ಲಿ ಬೆಳಕು ಕಡಿಮೆ, ಅಲ್ಲದೆ ಅದು ಹಳೆಯ ಕಾಲದ ಕೊಠಡಿ, ಅಲ್ಲಲ್ಲಿ ಜೇಡರ ಬಲೆಯೂ ಇತ್ತು, ಹಳೆಯ ಧೂಳೂ ಆವರಿಸಿತ್ತು. ಗೋಡೆಯ ಎಲ್ಲಾ ಕಡೆ ಪುಸ್ತಕಗಳ ಓಕ್ ಮರದ ಕಪಾಟುಗಳು ಇದ್ದವು. ಅವುಗಳ ಕೆಳಗಿನ ಭಾಗದಲ್ಲಿ ದೊಡ್ಡ ದೊಡ್ಡ ಹಾಳೆಗಳ ಮತ್ತು ಕಪ್ಪು ಅಕ್ಷರಗಳ ಹಾಳೆಗಳಿಂದ ಕೂಡಿದ, ಅವುಗಳನ್ನು ನಾಲ್ಕು ಕೋನಗಳಲ್ಲಿ ಮಡಸಿ ಮಾಡಿದ ಪುಸ್ತಕಗಳನ್ನು ತುಂಬಲಾಗಿತ್ತು.

ಆ ಪುಸ್ತಕಗಳಿಗೆ ಭದ್ರವಾದ ದಪ್ಪ ರಟ್ಟುಗಳನ್ನು ಹಾಕಿಡಲಾಗಿತ್ತು. ಪುಸ್ತಕಗಳ ಕಪಾಟುಗಳ ಮಧ್ಯದ ಕಪಾಟಿನ ಮೇಲೆ ಶಕ್ತಿ ದೇವತೆಯಂತೆ ಧನ್ವಂತರಿಯ ಕಂಚಿನ ಪ್ರತಿಮೆಯು ಕಂಗೊಳಿಸುತ್ತಿತ್ತು. ಡಾಕ್ಟರ್ ಜಿನೇಂದ್ರ ತಮ್ಮ ಎಲ್ಲಾ ಪ್ರಯೋಗಗಳಲ್ಲೂ ಸೂಕ್ತ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಕೊಠಡಿಯ ಮೊಬ್ಬಾದ ಒಂದು ಮೂಲೆಯಲ್ಲಿ ಒಂದು ಅಗಲ ಕಡಿಮೆಇದ್ದು, ಎತ್ತರವಾಗಿದ್ದ ಒಂದು ಅರ್ಧ ಬಾಗಿಲು ತೆರೆದಂತಿದ್ದ ಒಂದು ಕಪಾಟಿನಲ್ಲಿ ಅಸ್ಥಿಪಂಜರದಂತಿದ್ದ ವಸ್ತು ಕಾಣುತ್ತಿತ್ತು. ಎರಡು ಪುಸ್ತಕಗಳ ಕಪಾಟುಗಳ ನಡುವೆ ಒಂದು ಕನ್ನಡಿ ಇತ್ತು. ಅದೂ ಕೂಡ ಧೂಳು ತುಂಬಿದ, ಹಳೆಯ ಹಾಳಾದ ಲೋಹದ ಕಟ್ಟಿನಿಂದ ಕೂಡಿತ್ತು.

ಈ ಕನ್ನಡಿಗೆ ಹಲವಾರು ಅದ್ಬುತ ಕಥೆಗಳಿದ್ದುವು. ಈ ಡಾಕ್ಟರ ಸತ್ತ ರೋಗಿಗಳು ಅದರಲ್ಲಿ ವಾಸಿಸುತ್ತಿದ್ದಾರೆಂದೂ, ಅದನ್ನು ಡಾಕ್ಟರು ನೋಡಿದಾಗ ಅವರು ಅವರನ್ನೇ ದೃಷ್ಟಿಸಿ ನೋಡುವರೆಂದೂ ಪ್ರತೀತಿಯಿತ್ತು. ಆ ಕೊಠಡಿಯ ವಿರುದ್ಧ ದಿಕ್ಕಿನಲ್ಲಿಒಂದು ದೊಡ್ಡ ಪ್ರಮಾಣದ ಮಹಿಳೆಯ ಚಿತ್ರಪಠವಿತ್ತು. ಅದರಲ್ಲಿ ಆ ಮಹಿಳೆ ರೇಶಿಮೆ, ಸ್ಯಾಟಿನ್ ಮತ್ತು ಬ್ರೋಕೇಡ್ ಬಟ್ಟೆಗಳನ್ನು ಧರಿಸಿ ನಿಂತಿದ್ದಳು. ಈಗ ಅವುಗಳ ಹೊಳಪು ಮಾಯವಾಗಿ ಮಾಸಿಹೋಗಿದೆ.

ಸುಮಾರು ಅರ್ದ ಶತಮಾನಕ್ಕೂ ಹಿಂದೆ ಡಾಕ್ಟರ್ ಜಿನೇಂದ್ರ ಅವಳನ್ನು ಇನ್ನೇನು ಮದುವೆಯಾಗುವವರಿದ್ದರು. ಆದರೆ ಅವರು ಅವಳಿಗೆ ಕೊಟ್ಟ ಔಷದಿಯಿಂದ ಅವಳು ವಧುವಿನ ಅಲಂಕಾರದಲ್ಲೇ ಅಸು ನೀಗಿದಳು. ಆದರೆ ಇದಕ್ಕೆ ಸಂಬಂಧಪಟ್ಟ ವಿಷಯ ನಿಗೂಢವಾಗಿಯೇ ಆ ಕಪ್ಪು ಬಣ್ಣದ ದಪ್ಪನೆಯ ಮ್ಯಾಜಿಕ್ ಬುಕ್ಕಿನಲ್ಲಿ ಉಳಿದುಕೊಂಡಿದೆ.

ಅದರ ಮೇಲೆ ಏನೂ ಬರೆದಿಲ್ಲ. ಆ ಪುಸ್ತಕದ ಬಗ್ಗೆ ಯಾರೂ ಏನೂ ಹೇಳುವವರಿಲ್ಲ. ಆದರೆ ಅದೊಂದು ಮ್ಯಾಜಿಕ್ ಪುಸ್ತಕ ಎಂದು ಎಲ್ಲರೂ ಹೇಳುತ್ತಾರೆ. ಏಕೆಂದರೆ, ಒಂದು ಸಾರಿ ಆ ಮನೆ ಕೆಲಸದವಳು ಆ ಪುಸ್ತಕದ ಮೇಲಿನ ಧೂಳನ್ನು ಕೊಡವಿದಾಗ, ಕಪಾಟಿನಲ್ಲಿದ್ದ ಅಸ್ಥಿಪಂಜರ ಆಳ್ಳಾಡಿದಹಾಗಾಯಿತಂತೆ, ಚಿತ್ರದಲ್ಲಿದ್ದ ಆ ಸುಂದರಿ ಒಂದು ಹೆಜ್ಜೆ ಮುಂದೆ ಬಂದಹಾಗೆಆಯಿತಂತೆ, ಕನ್ನಡಿಯಲ್ಲಿ ಅನೇಕ ಕ್ರೂರ ಮುಖಗಳು ಕಾಣಿಸಿಕೊಂಡವಂತೆ, ಮತ್ತು ಕಪಾಟಿನ ಮೇಲಿದ್ದ ಧನ್ವಂತರಿ ತಲೆಯಿಂದ ಎಚ್ಚರಿಕೆ! ಎನ್ನುವ ಶಬ್ದ ಜೋರಾಗಿ ಕೇಳಿಸಿತಂತೆ.

ಹೀಗಿತ್ತು ಡಾಕ್ಟರ ಕೋಣೆ. ಈ ಕಥೆ ನಡೆಯುತ್ತಿರುವುದು ಒಂದು ಬೇಸಿಗೆಯ ಮಧ್ಯಾನ್ಹ. ಆ ಕೊಠಡಿಯ ಮಧ್ಯ ಭಾಗದಲ್ಲಿ, ಒಂದು ಬೀಟೆಯ ಕರೀಮರದ ಟೇಬಲ್ ಇದೆ, ಅದು ಅತ್ಯಂತ ಸುಂದರವಾದ ಕೆತ್ತನೆ ಕೆಲಸದಿಂದ ಕಂಗೊಳಿಸುತ್ತಿದೆ, ಮೇಲೆ ಅಂಚನ್ನು ಕತ್ತರಿಸಿದ ದಪ್ಪ ಗಾಜಿನ ಮೇಲ್ಬಾಗವನ್ನು ಹೊಂದಿದೆ. ಸೂರ್ಯನ ಕಿರಣಗಳು ಬಣ್ಣ ಕಳೆದುಕೊಂಡಿದ್ದ ಕಿಟಕಿಯ ಪರದೆ ಮತ್ತು ನೇತಾಡುತ್ತಿದ್ದ ಪ್ಲಾಸ್ಟಿಕ್ ಹೂವಿನ ಗೊಂಚಲುಗಳ ಮಧ್ಯದಿಂದ ತೂರಿಕೊಂಡು, ಟೇಬಲ್ ಮೇಲಿದ್ದ ಹೂದಾನಿಯ ಮೇಲೆ ಬಿದ್ದು ಪ್ರತಿಫಲಿಸುತ್ತಿದೆ. ಇದರಿಂದ ಅಲ್ಲಿ ಕುಳಿತಿದ್ದವರ ಮುಖ ಕಾಣುತ್ತಿತ್ತು. ಟೇಬಲ್ ಮೇಲೆ ನಾಲ್ಕು ಶಾಂಪೇನ್ ಗ್ಲಾಸ್‌ಗಳೂ ಇದ್ದವು.

ನನ್ನ ಪ್ರಿಯ ಮಿತ್ರರೇ ಎಂದು ಡಾಕ್ಟರ್ ಮುಂದುವರೆಸಿದರು, ಈ ಅದ್ಬುತ ಪ್ರಯೋಗದಲ್ಲಿ ನನಗೆ ನಿಮ್ಮ ನೆರವು ದೊರಕುವುದೆಂದುಕೊಳ್ಳಲೇ?. ಡಾಕ್ಟರ್ ಜಿನೇಂದ್ರ ಒಬ್ಬ ವಿಚಿತ್ರ ಮುದುಕ, ಅವನ ವಿಚಿತ್ರ ಸ್ವಭಾವವು ಅನೇಕ ನಂಬಲಾರದಂತಹ ಕಥೆಗಳಿಗೆ ಉಗಮ ಸ್ಥಾನ ವಾಗಿತ್ತು. ಅವುಗಳಲ್ಲಿ ಕೆಲವು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ.

ಡಾಕ್ಟರ್‌ರವರ ನಾಲ್ಕು ಅತಿಥಿಗಳು ಅವರ ಮಾತುಗಳನ್ನು ಕೇಳಿ ಅವರು ಎಂದಿನಂತೆ ಯಾವುದೋ ಇಲಿಯ ಮೇಲೋ, ಇಲ್ಲ ಜೇಡದ ಮೇಲೋ, ಏನೋ ಪ್ರಯೋಗ ಮಾಡಿರಬಹುದು ಎಂದುಕೊಂಡರು. ತಾವು ಕೇಳಿದ ಪ್ರಶ್ನೆಗೆ ಅತಿಥಿಗಳು ಏನೂ ಉತ್ತರಿಸಿದುದನ್ನು ಡಾಕ್ಟರು ಗಮನಿಸಲಿಲ್ಲ. ತಮ್ಮ ಕಪ್ಪು ಬಣ್ಣದ ದಪ್ಪ ಮ್ಯಾಜಿಕ್ ಪುಸ್ತಕವನ್ನು ಕೈಯಲ್ಲಿ ಹಿಡಿದು, ರೂಮಿನಲ್ಲಿ ಅತ್ತಿಂದಿತ್ತ ತಿರುಗಾಡುತ್ತಿದ್ದರು. ನಂತರ ಎಲ್ಲರ ಮುಂದೆ ಆ ಪುಸ್ತಕದ ಬೆಳ್ಳಿಯ ಕ್ಲಿಪ್ಪನ್ನು ತೆರೆದು, ಪುಸ್ತಕವನ್ನು ಬಿಡಿಸಿದರು. ಅಲ್ಲಿದ್ದ ಒಂದು ಒಣಗಿಹೋಗಿ ಕಾಗದದಂತಾಗಿದ್ದ ಗುಲಾಬಿ ಹೂವನ್ನು ತೆಗೆದರು. ಅವರ ಕೈಯಲ್ಲಿ ಅದು ಇನ್ನೇನು ಪುಡಿ ಪುಡಿ ಯಾಗುತ್ತದೆ ಎನ್ನುವ ಹಾಗಿತ್ತು.

ಡಾಕ್ಟರ್ ಜಿನೇಂದ್ರ ಒಂದು ದೊಡ್ಡ ನಿಟ್ಟುಸಿರು ಬಿಡುತ್ತಾ ಹೇಳಲು ಪ್ರಾರಂಭಿಸಿದರು, ಈ ಗುಲಾಬಿ, ಒಣಗಿ ಉದುರಿಹೋಗುವಂತಿರುವ ಇದು, ಐವತ್ತು ವರ್ಷಗಳ ಹಿಂದೆ ಅರಳಿ ನಳನಳಿಸುತ್ತಿತ್ತು. ಮಂಜರಿ ಇದನ್ನು ನನಗೆ ಕೊಟ್ಟಿದ್ದು. ನಮ್ಮ ಮದುವೆಯಲ್ಲಿ ಅದನ್ನು ನಾನು ನನ್ನ ಕೊಟಿನ ಕಾಲರ್ ನಲ್ಲಿ, ನನ್ನ ಎದೆಯ ಮೇಲೆ ಧರಿಸಬೇಕೆಂದು ನಿರ್ಧರಿಸಿದ್ದೆ. ಆಗಿನಿಂದಲೂ ಇದನ್ನು ಈ ಪುಸ್ತಕದ ಹಾಳೆಗಳ ಮಧ್ಯೆ ಜೋಪಾನವಾಗಿ ನನ್ನ ಆಸ್ತಿಯಂತೆ ಇಟ್ಟು ಕಾಪಾಡಿದ್ದೇನೆ. ಈಗ, ಈ ಅರ್ಧ ಶತಮಾನದ ಈ ಹೂವು ಪುನಃ ಹೊಸ ಹೂವಿನಂತೆ ನಳ ನಳಿಸಲು ಸಾಧ್ಯವೆಂದು ನೀವು ಭಾವಿಸುವಿರಾ?

ಅರ್ಥವಿಲ್ಲದ ಪ್ರಲಾಪ ಎಂದಳು ವಿಧವೆ ನೀರಜ, ತನ್ನ ತಲೆಯನ್ನು ಸಾಧ್ಯವಿಲ್ಲ ಎಂಬಂತೆ ಕುಣಿಸುತ್ತಾ, ಮುದುಕಿಯ ಮುಖದ ಸುಕ್ಕನ್ನು ಹೊಗಲಾಡಿಸಲು ಸಾಧ್ಯವೇ, ಮತ್ತೆ ಅದು ತನ್ನ ಯೌವನ ಪಡೆಯಲು ಸಾಧ್ಯವೇ ಹೇಳು? ಎಂದು ಮುಂದುವರೆಸಿದಳು.

ಆಗ ಡಾಕ್ಟರ್ ಹೇಳಿದರು, ನೋಡಿ. ಎಂದು ಹೇಳುತ್ತಾ, ಟೇಬಲ್ ಮೇಲಿದ್ದ ಹೂದಾನಿಯನ್ನು ತೆರೆದು ಅದರಲ್ಲಿದ್ದ ನೀರಿಗೆ ಆ ಒಣಗಿದ ಗುಲಾಬಿಯನ್ನು ಹಾಕಿದರು. ಅದರಿಂದ ತಕ್ಷಣದಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ಅದು ಕೇವಲ ಆ ನೀರಿನ ಮೇಲೆ ತೇಲುತ್ತಿತ್ತು. ಆದರೆ ನೋಡ ನೋಡುತ್ತಾ ಏನೋ ಬದಲಾವಣೆ ಕಂಡಹಾಗಾಯಿತು.

ಒಣಗಿದ್ದ ಗುಲಾಬಿಯ ತೊಟ್ಟು ಮೊದಲು ಹಸಿರು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿತು. ದಳಗಳು ನಂತರ ಗುಲಾಬಿಯ ನೈಜ ಬಣ್ಣವನ್ನು ನಿಧಾನವಾಗಿ ಪಡೆಯತೊಡಗಿತು. ಸತ್ತು ಮಲಗಿದ್ದ ಹೂವು, ಜೀವವನ್ನು ಮರಳಿ ಪಡೆದು ಮೇಲೆದ್ದಂತೆ ಕಂಡಿತು. ಈಗ ಗುಲಾಬಿ ತನ್ನ ನೈಜ ಸ್ವರೂಪವನ್ನು ಪಡೆಯಿತು, ಅದರ ತೊಟ್ಟು ಹಸಿರಾಗಿ ಹೊಸದಾಯಿತು. ಒಟ್ಟಿನಲ್ಲಿ ಅದನ್ನು ಮಂಜರಿ ತನ್ನ ಪ್ರಿಯತಮನಿಗೆ ಕೊಟ್ಟಾಗ ಹೇಗಿತ್ತೋ ಹಾಗಾಯಿತು. ಪೂರ್ತಿ ಅರಳಿ, ತುದಿಯಲ್ಲಿದ್ದ ಹಲವು ದಳಗಳು ಒದ್ದೆಯಾಗಿ ಅವುಗಳಿಂದ ಎರಡು ಮೂರು ಹನಿ ನೀರು ಉದುರಿದಂತೆ ತೋರಿತು.

ನಿಜವಾಗಿಯೂ ಇದೊಂದು ಸುಂದರವಾದ ಮೋಸ ಎಂದರು ಡಾಕ್ಟರ ಸ್ನೇಹಿತರು. ಅವರು ಮೊದಲು ಡಾಕ್ಟರು ಮಾಡಿದ ಇಂತಹ ಹಲವು, ಇದಕ್ಕಿಂತ ಅದ್ಬುತವಾದ, ಮ್ಯಾಜಿಕ್ ನೋಡಿದ್ದರು, ಹೇಳಿ, ಇದು ಏನು? ಎಂದು ಕೇಳಿದರು. ಮೂರು, ನಾಲ್ಕು ಶತಮಾನಗಳ ಹಿಂದೆ ಭಾರತದಲ್ಲಿ ಒಬ್ಬ ಸ್ಪೇನಿನ ಸಾಹಸಿ ಹುಡುಕಿಕೊಂಡು ಹೋಗಿದ್ದ ತಾರುಣ್ಯ ಚಿಲುಮೆ ಬಗ್ಗೆ ನೀವು ಕೇಳಿಲ್ಲವೇ? ಎಂದರು ಡಾಕ್ಟರ್ ಜೀತೇಂದ್ರ.

ಆದರೆ ಆ ಸಾಹಸಿ ಅದನ್ನು ಕಂಡರೇ? ಎಂದಳು ಆ ವಿಧವೆ ನೀರಜ. ಇಲ್ಲ ಎಂದರು ಡಾ.ಜೀತೇಂದ್ರ, ಏಕೆಂದರೆ ಅವರು ಅದನ್ನು ಸರಿಯಾದ ಜಾಗದಲ್ಲಿ ಹುಡುಕಲಿಲ್ಲ.ತಾರುಣ್ಯ ಚಿಲುಮೆಯು ಭಾರತ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿ, ನೀಲಗಿರಿಯ ಒಂದು ಸರೋವರದ ಸಮೀಪ ಇದೆ ಎಂದು ನನಗೆ ತಿಳಿದುಬಂದಿದೆ. ಅದನ್ನು ಅಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ, ಒಂದು ಬಗೆಯ ಹೂವನ್ನು ಬಿಡುವ ವೃಕ್ಷಗಳು ಮರೆಮಾಡಿವೆ.

ಆ ಅದ್ಬುತವಾದ ನೀರಿನ ಪ್ರಭಾವದಿಂದ ವೃಕ್ಷಗಳು ಶತಮಾನದಷ್ಟು ಹಳೆಯದಾದರೂ ಆ ಹೂವುಗಳು ಯಾವಾಗಲೂ ಶುದ್ಧವಾದ ನೇರಳೆ ಬಣ್ಣವನ್ನು ಹೊಂದಿರುತ್ತವೆ. ಸ್ವಲ್ಪ ಆ ನೀರನ್ನು ನನ್ನ ಕುತೂಹಲವನ್ನರಿತ ನನ್ನ ಸ್ನೇಹಿತನೊಬ್ಬ ನನಗೆ ಕಳುಹಿಸಿ ಕೊಟ್ಟಿದ್ದಾನೆ. ಅದನ್ನೇ ನೀವು ಈ ಟೇಬಲ್ ಮೇಲಿರುವ ಹೂದಾನಿಯಲ್ಲಿ ಕಂಡದ್ದು.

ಆಗ ಮುತ್ತಣ್ಣ ತಮ್ಮ ಗಂಟಲು ಸರಿ ಮಾಡಿಕೊಂಡು, ತಮಗೆ ಡಾಕ್ಟರ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೂ, ಈ ನೀರಿನ ಪ್ರಭಾವ ಮಾನವರ ಮೇಲೆ ಹೇಗಾಗುವುದೋ? ಎಂದರು, ಕುತೂಹಲ ತಾಳಲಾರದೆ.

ಅದಕ್ಕೆ ಡಾ.ಜಿನೇಂದ್ರ ಹೇಳಿದರು, ಮುತ್ತಣ್ಣನವರೇ, ನೀವೇ ತೀರ್ಮಾನಿಸಿ, ನನಗೆ ಸಂಬಂಧಪಟ್ಟಂತೆ ಹೇಳುವುದಾದರೆ ನಾನು ಇಲ್ಲಿಯವರೆಗೂ ಇಷ್ಟು ಬೆಳೆಯಬೇಕಾದರೆ ಸಾಕಷ್ಟು ಸಮಯ, ಪ್ರಯತ್ನ, ಎಲ್ಲವೂ ಆಗಿದೆ, ನನಗೆ ಇದನ್ನೆಲ್ಲಾ ಕಳೆದುಕೊಂಡು ಮತ್ತೆ ತಾರುಣ್ಯಕ್ಕೆ ಮರಳುವ ಇಚ್ಛೆ ಇಲ್ಲ. ನಿಮ್ಮ ಅನುಮತಿಯ ಮೇಲೆ ನನ್ನ ಈ ಪ್ರಯೋಗವನ್ನು ನಿಮ್ಮ ಮೇಲೆ ಮುಂದುವರೆಸುತ್ತೇನೆ. ತಮಗೆ ಇಚ್ಛೆ ಇದ್ದ ಪಕ್ಷದಲ್ಲಿ ತಾವು ತಾರುಣ್ಯವನ್ನು ಮತ್ತೆ ತರುವ ಈ ದ್ರವವನ್ನು ಪರೀಕ್ಷಿಸಬಹುದು, ಎಂದರು.

ಹೀಗೆ ಹೇಳಿ, ಡಾಕ್ಟರ್ ಟೇಬಲ್ ಮೇಲಿದ್ದ ನಾಲ್ಕು ಶಾಂಪೇನ್ ಗ್ಲಾಸ್ ಗಳಲ್ಲಿ ತಾರುಣ್ಯ ಚಿಲುಮೆಯ ನೀರನ್ನು ತುಂಬಿದರು. ತಕ್ಷಣವೇ ಆ ನೀರು ಗ್ಲಾಸಿನಲ್ಲಿ ಪುಟಿಯಲು ತೊಡಗಿತು. ಗ್ಲಾಸಿನ ಮೇಲೆ ನೀರು ತುಂತರು ತುಂತರಾಗಿ ಹಾರಲು ತೊಡಗಿ ಜೀವಂತವಾಗಿರುವಂತೆ ಕಾಣಿಸುತ್ತಿತ್ತು, ತಳದಲ್ಲಿ ನೀರು ಗುಳ್ಳೆ ಗುಳ್ಳೆಯಾಗಿ ಮೇಲೇರುತ್ತಿತ್ತು.

ಅದನ್ನು ಆಸಕ್ತಿಯಿಂದ ನೋಡಿದ ಅತಿಥಿಗಳು ಅದನ್ನು ಕುಡಿದು ಮತ್ತೆ ತಮ್ಮ ಕಳೆದು ಹೋಗಿರುವ ಶಕ್ತಿ-ಸಾಮರ್ಥ್ಯಗಳನ್ನು ಗಳಿಸಿಕೊಳ್ಳುವ ಕಾತುರತೆಯಲ್ಲಿದ್ದರು. ಜಿತೇಂದ್ರ ಅವರನ್ನು ಸ್ವಲ್ಪ ತಾಳಿರಿ ಎಂದು ತಡೆದರು. ನಂತರ ಹೇಳಿದರು, ನನ್ನ ಪ್ರಿಯ ಸ್ನೇಹಿತರೇ, ನೀವು ಇದನ್ನು ಕುಡಿಯುವುದಕ್ಕೆ ಮೊದಲು ಒಂದು ಮಾರ್ಗದರ್ಶನದ ರೀತಿ ನೀತಿಯನ್ನು ನಿರ್ಧರಿಸಿಕೊಳ್ಳಬೇಕು. ಏಕೆಂದರೆ ಇದು ನಿಮಗೆ ಎರಡನೆಯ ಯೌವನವನ್ನು ತಂದುಕೊಡುತ್ತದೆ.

ಆಗ ನೀವು ಸಾಕಷ್ಟು ಬುದ್ಧಿವಂತಿಕೆಯಿಂದ, ಸಂಯಮದಿಂದ ವರ್ತಿಸದಿದ್ದರೆ ಇಷ್ಟು ದಿನ ಜೀವನದಲ್ಲಿ ನೀವು ಗಳಿಸಿದ ಅನುಭವಕ್ಕೇ ಅವಮಾನವಾಗುತ್ತದೆ. ನೀವು ಇತರ ತರುಣರಿಗೆ ಮಾದರಿಯಾಗಿರಬೇಕಾಗುತ್ತದೆ. ಎಂದರು. ಡಾಕ್ಟರ ನಾಲ್ಕು ಗೌರವಾನ್ವಿತ ಸ್ನೇಹಿತರು ಯಾವ ಉತ್ತರವನ್ನೂ ಕೊಡಲಿಲ್ಲ. ಅವರ ಮಾತುಗಳಿಗೆ ಹುಚ್ಚರಂತೆ ನಗತೊಡಗಿದರು. ತಾವು ಮತ್ತೆ ದಾರಿತಪ್ಪಬಹುದೆಂಬ ಡಾಕ್ಟರ ಭಾವನೆ ಎಷ್ಟು ವಿಚಿತ್ರವಾಗಿದೆ ಎಂದು ಭಾವಿಸಿ ಅವರು ನಗತೊಡಗಿದ್ದರು.

ಹಾಗಾದರೆ ಕುಡಿಯಿರಿ ಎಂದರು ಡಾಕ್ಟರು. ನಾನು ಸರಿಯಾದ ರೀತಿಯಲ್ಲಿ ಪ್ರಯೋಗಕ್ಕೆ ವ್ಯವಸ್ಥೆ ಮಾಡಿದ್ದೇನೆ ಎಂದು ಸಂತೋಷವಾಗುತ್ತಿದೆ ಎಂದರು. ಎಲ್ಲರೂ ನಡುಗುವ ಕೈಗಳಿಂದ ತಮ್ಮ ತಮ್ಮ ಗ್ಲಾಸ್ ಗಳನ್ನು ಮೇಲೆತ್ತಿ ತುಟಿಗೆ ತಂದರು. ಪಾಪ ! ಇಂತಹದೊಂದು ತಮಗೆ ಲಭ್ಯವಾಗುತ್ತದೆ ಎಂದು ಅವರು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ.

ಆದರೆ ಅವರು ಪ್ರಕೃತಿಯ ಮಕ್ಕಳಲ್ಲವೇ? ವಯಸ್ಸಾಗಿದೆ, ತಲೆಯೆಲ್ಲಾ ನೆರೆತಿದೆ, ಶಕ್ತಿಹೀನರಾಗಿದ್ದಾರೆ, ಅವರಲ್ಲಿ ಏನೂ ಉಳಿದಿಲ್ಲ, ನೊಂದ ಜೀವಿಗಳಾಗಿದ್ದಾರೆ, ಟೇಬಲ್ ಸುತ್ತಲೂ ಕುರುಡು ಕುರುಡಾಗಿ ಏನನ್ನೋ ಹುಡುಕುತ್ತಾ ಇರುವಂತೆ ಕುಳಿತಿದ್ದಾರೆ, ಅವರಲ್ಲಿ ಸಾಕಷ್ಟು ಜೀವ ರಸವೇ ಇಲ್ಲ. ತಾವು ಮತ್ತೆ ತಾರುಣ್ಯಾವಸ್ಥೆಗೆ ಮರಳುತ್ತೇವೆಂದು ತೋರಿಸಿಕೊಳ್ಳಲೂ ಅವರಲ್ಲಿ ಶಕ್ತಿಯಿಲ್ಲ. ಹಾಗೇ ಗ್ಲಾಸಿನಲ್ಲಿದ್ದದ್ದನ್ನು ಕುಡಿದು ಮುಗಿಸಿದರು. ಗ್ಲಾಸುಗಳನ್ನು ಟೇಬಲ್ ಮೇಲೆ ಯಥಾಸ್ಥಾನದಲ್ಲಿಟ್ಟರು.

ಮೊದಲೇ ಅಂದುಕೊಂಡಂತೆ ತಕ್ಷಣವೇ ಏನೋ ಒಂದು ರೀತಿಯ ಉತ್ತಮ ಮಾರ್ಪಾಡು ತಮ್ಮಲ್ಲಿ ಆಗುತ್ತಲಿದೆ ಎಂದುಕೊಂಡರು, ಒಂದು ಗ್ಲಾಸ್ ವೈನ್ ಕುಡಿದಾಗ ಆಗುವಂತೆ. ಅವರ ಮುಖಗಳಲ್ಲಿ ಒಂದು ಬಗೆ ಉಲ್ಲಾಸದ ಸೂರ್ಯಕಿರಣದ ಪ್ರಕಾಶ ಉಂಟಾಯಿತು, ಮೊದಲು ಶವದಂತೆ ಬಿಳಿಚಿಕೊಂಡಿದ್ದ ಅವರ ಮುಖದಲ್ಲಿ ತಕ್ಷಣವೇ ಬದಲಾವಣೆಯಾಗಿ ಆರೋಗ್ಯಕರ ಬಣ್ಣ ಗೋಚರಿಸಿತು.

ಒಬ್ಬರನ್ನೊಬ್ಬರು ನೋಡಿಕೊಂಡರು. ಯಾವುದೋ ಮ್ಯಾಜಿಕ್ ಶಕ್ತಿಯಿಂದ ತಮ್ಮ ಹಣೆಯಲ್ಲಿ ಬಹಳ ದಿನಗಳಿಂದ ಕಾಲನು ಬರೆದಿದ್ದ ಬರಹಗಳು, ಮೃದುವಾಗಿ ಮಾಯವಾಗುತ್ತಿರುವುದು ಅವರ ಗಮನಕ್ಕೆ ಬಂತು. ವಿಧವೆ ನೀರಜ ತನ್ನ ತಲೆಯ ಮೇಲಿನ ಕೂದಲನ್ನು ಒಬ್ಬ ಸುಂದರ ಮಹಿಳೆಯಂತೆ ಸರಿ ಮಾಡಿಕೊಳ್ಳುತ್ತಿದ್ದಳು.

ಅವರೆಲ್ಲ ಒಟ್ಟಿಗೆ ಕೂಗಿಕೊಂಡರು, ಈ ಅದ್ಬುತ ನೀರನ್ನು ಇನ್ನೂ ಕೊಡಿ ! ನಾವು ತಾರುಣ್ಯ ಪಡೆಯುತ್ತಿದ್ದೇವೆ, ಆದರೆ ಇನ್ನೂ ಪೂರ್ತಿಯಾಗಿಲ್ಲ ! ತಕ್ಷಣ ಇನ್ನೂ ಆ ನೀರು ಕೊಡಿ.

ತತ್ವ ಜ್ಞಾನಿಯ ಶಾಂತತೆಯಿಂದ ತನ್ನ ಪ್ರಯೋಗವನ್ನು ಎಚ್ಚರಿಕೆಯಿಂದ ನೋಡುತ್ತಿದ್ದ ಡಾಕ್ಟರ್ ಜಿನೇಂದ್ರ, ತಾಳ್ಮೆ,ತಾಳ್ಮೆ, ನೀವು ಬಹಳ ದಿನಗಳಿಂದಲೂ ವೃದ್ದಾಪ್ಯವನ್ನು ಪಡೆದುಕೊಂಡು ಬಂದಿದ್ದೀರಾ! ಆದರೆ ಅರ್ಧ ಗಂಟೆಯೊಳಗೆ ತಾರುಣ್ಯ ಪಡೆಯುವಷ್ಟು ತಾಳ್ಮೆ ಇಲ್ಲವೇ! ನೀರು ನಿಮಗೆ ಸಹಾಯ ಮಾಡುತ್ತಿದೆಯಲ್ಲ ಎಂದರು.

ಮತ್ತೆ ಅವರ ಗ್ಲಾಸ್ ಗಳಿಗೆ ಈ ತಾರುಣ್ಯದ ದ್ರವವನ್ನು ಹಾಕಿದರು. ಆ ಪಾತ್ರೆಯಲ್ಲಿ ಇನ್ನೂ ಇತ್ತು. ಆ ಊರಿನ ಅರ್ಧದಷ್ಟು ವೃದ್ಧರಿಗೆ ತಮ್ಮ ಮೊಮ್ಮಕ್ಕಳ ತಾರುಣ್ಯ ತರುವಷ್ಟು. ಇನ್ನೂ ಗ್ಲಾಸಿನಲ್ಲಿ ನೀರಿನ ಗುಳ್ಳೆಗಳೇ ಆರಿಲ್ಲ, ಆ ಅತಿಥಿಗಳು ಅವುಗಳನ್ನೆತ್ತಿ ಒಂದೇ ಗುಟುಕಿಗೆ ಕುಡಿದರು. ಏನದು ಭ್ರಮೆಯೇ? ಇನ್ನೂ ಆ ನೀರು ಅವರ ಗಂಟಲಿನಲ್ಲಿ ಇಳಿಯುತ್ತಿದ್ದಂತೆ ಅವರ ದೇಹದ ವ್ಯವಸ್ಥೆ ಶೀಘ್ರ ಬದಲಾವಣೆಗೆ ಒಳಗಾಯಿತು.

ಕಣ್ಣು ಸ್ಪಷ್ಟವಾಯಿತು, ಹೋಳೆಯಲು ಪ್ರಾರಂಭಿಸಿತು, ಅವರ ಕೂದಲು ಕಪ್ಪಾಗಲು ತೊಡಗಿತು, ಟೇಬಲ್ ಸುತ್ತ ಕುಳಿತಿದ್ದರು-ಮೂವರು ಮಧ್ಯವಯಸ್ಸಿನ ಗಂಡಸರು, ಒಬ್ಬ ದುಂಡು ದುಂಡಾದ ತರುಣಿಯಂತಹ ಹೆಂಗಸು.

ಮುತ್ತಣ್ಣ ಹೇಳಿದರು, ನನ್ನ ಪ್ರೀತಿಯ ವಿಧವೆ, ನೀನು ಬಹು ಚನ್ನಾಗಿದ್ದಿ. ಅವರ ಕಣ್ಣು ಅವಳ ಮೇಲೆ ನಾಟಿತ್ತು. ಬೆಳಕು ಹರಿದಾಗ ಕತ್ತಲೆ ಓಡಿ ಹೋಗುವಂತೆ ಅವಳ ವೃದ್ಧಾಪ್ಯದ ನೆರಳು ಕಣ್ಮರೆಯಾಗಿತ್ತು. ಆದರೆ ಆ ವಿಧವೆಗೆ ಅವರ ಮಾತಿನಲ್ಲಿ ಅಷ್ಟು ನಂಬಿಕೆ ಬರಲಿಲ್ಲ. ಓಡಿ ಹೋಗಿ ಕನ್ನಡಿಯಲ್ಲಿ ನೋಡುವ ಬಯಕೆಯಾಯಿತು. ಆದರೆ ಪುನಃ ತನ್ನ ಮುದಿ ಮುಖವನ್ನೇ ಕನ್ನಡಿ ತೋರಿಸಿದರೆ ಏನು ಮಾಡುವುದು? ಎನ್ನುವ ಭಯದಿಂದಲೇ ಕನ್ನಡಿಯತ್ತ ನಡೆದಳು. ಅಷ್ಟರಲ್ಲಿ ಈ ಮೂವರು ಪುರುಷರು ತಾವು ಕುಡಿದ ನೀರಿಗೆ ಮತ್ತು ಬರಿಸುವ ಶಕ್ತಿಯಿದೆ ಎಂಬಂತೆ ತೂಗಾಡಿದರು. ಆದರೆ ಅವರ ವಯಸ್ಸಿನ ಭಾರ ಮಾಯವಾದುದರಿಂದ ಅವರು ಹಗುರಾಗಿದ್ದದ್ದು ಅವರ ಗಮನಕ್ಕೆ ತಕ್ಷಣ ಬರಲಿಲ್ಲ.

ಮುತ್ತಣ್ಣನವರ ಮನಸ್ಸಿನಲ್ಲಿ ರಾಜಕೀಯ ವಿಷಯಗಳೇ ಗಿರಕಿ ಹೊಡೆಯಲು ಪ್ರಾರಂಭಿಸಿದವು. ಆದರೆ ಅವುಗಳು ಈಗಿನವೋ, ಹಿಂದಿನವೋ ಅಥವಾ ಮುಂದಿನವೋ ತಿಳಿಯಲಿಲ್ಲ. ಐವತ್ತು ವರ್ಷಗಳ ವಿಷಯಗಳು ಕಲಸು ಮೇಲೋಗರವಾಗಿತ್ತು ಅವರ ಪಾಲಿಗೆ. ಏನೇನೋ ಬಡ ಬಡಿಸಲು ಪ್ರಾರಂಭಿಸಿದರು. ರಾಷ್ಟ್ರ ಭಕ್ತಿ, ರಾಷ್ಟ್ರ ವೈಭವ, ಮತ್ತು ಪ್ರಜೆಗಳ ಹಕ್ಕು ಮುಂತಾದವುಗಳಬಗ್ಗೆ ಏನೇನೋ ಹೇಳಲು ತೊಡಗಿದರು. ಅವುಗಳಲ್ಲಿ ಎಷ್ಟೋ ಸ್ಪಷ್ಟವಾಗಿ ಯಾರಿಗೂ ಕೇಳಿಸಲೇ ಇಲ್ಲ. ಸ್ವಾಮಿ ಯಾವುದೋ ಸಂತೋಷದ ಹಾಡನ್ನು ಹಾಡುತ್ತಾ, ಬಾಟಲ್ ಮೇಲೆ ತಾಳ ಹಾಕುತ್ತಿದ್ದರು.

ಅವರ ಕಣ್ಣು ಗುಂಡು ಗುಂಡಾಗಿದ್ದ ವಿಧವೆಯ ಮೇಲೆ ನೆಟ್ಟಿತ್ತು. ಟೇಬಲ್ಲಿನ ಮತ್ತೊಂದು ಕಡೆ ಪಂಡಿತ್ ಕಾಸಿನ ಲೆಕ್ಕಹಾಕುತ್ತಿದ್ದ. ತನ್ನ ಐಸ್ ವ್ಯಾಪಾರದ ಬಗ್ಗೆ ತಲೆ ಕೆಡಸಿಕೊಳ್ಳುತ್ತಿದ್ದ. ವಿಧವೆ ನೀರಜ ಕನ್ನಡಿಯ ಮುಂದೆ ನಿಂತು ತನ್ನ ಪ್ರತಿಬಿಂಭವನ್ನು ನೋಡಿಕೊಳ್ಳುತ್ತಾ ಸಂತೋಷಪಡುತ್ತಿದ್ದಳು. ತನ್ನ ಗುಂಗರು ಕೂದಲು, ಸುಂದರ ಮುಖ ಎಲ್ಲವನ್ನೂ ಕನ್ನಡಿಯಲ್ಲಿ ನೋಡಿಕೊಂಡು ವಿಸ್ಮಯ ಪಡುತ್ತಿದ್ದಳು. ನಂತರ ನೃತ್ಯ ಮಾಡುವವಳಂತೆ ಹೆಜ್ಜೆ ಹಾಕುತ್ತಾ ಟೇಬಲ್ ಕಡೆ ಬಂದಳು.

ನನ್ನ ಪ್ರಿಯ ಡಾಕ್ಟರೇ, ನನಗೆ ಇನ್ನೊಂದು ಗ್ಲಾಸ್ ನೀರು ಕೊಡಿ ಎಂದಳು. ಖಂಡಿತ, ನನ್ನ ಪ್ರೀತಿಯ ಮ್ಯಾಡಂ, ನೋಡಿ ನಿಮ್ಮ ಗ್ಲಾಸ್ ಭರ್ತಿ ಮಾಡಿದ್ದೇನೆ ಎಂದರು ಅವಳನ್ನು ತೃಪ್ತಿ ಪಡಿಸುವ ಆತುರದಿಂದ.

ಅಲ್ಲಿ ನಿಜವಗಿಯೂ ನಾಲ್ಕು ಗ್ಲಾಸುಗಳಲ್ಲಿ ಭರ್ತಿ ನೀರನ್ನು ತುಂಬಿಸಲಾಗಿತ್ತು. ಈಗ ಸೂರ್ಯನು ಪೂರ್ತಿ ಮುಳುಗಿದ್ದರಿಂದ ಡಾಕ್ಟರ ಕೊಠಡಿಯಲ್ಲಿ ಮತ್ತಷ್ಟು ಕತ್ತಲು ಆವರಿಸಿತು. ಅದರೆ ಅದೇನೋ ಆ ನೀರಿನ ಪಾತ್ರೆಯಿಂದ ಒಂದು ರೀತಿ ಚಂದಿರನ ಬೆಳಕಿನಂತೆ ಕಿರಣಗಳು ಬಂದು ಅತಿಥಿಗಳ ಮತ್ತು ಡಾಕ್ಟರ ಮುಖಗಳನ್ನು ಬೆಳಗಿಸುತ್ತಿತ್ತು.

ತಕ್ಷಣವೇ ಆ ಅಥಿತಿಗಳಲ್ಲಿ ನವ ಚೈತನ್ಯ ಉಂಟಾಗಿ, ತಾರುಣ್ಯ ರೂಪುಗೊಂಡಿತು. ಅವರ ಖಾಯಿಲೆಗಳ ಸಂಕಟ, ಮುಂತಾದವುಗಳು ಕೇವಲ ಕನಸಿನಂತೆ ಮಾಯವಾದುವು.

ಅವರು ಮತ್ತೆ ಹುಟ್ಟಿಬಂದವರಂತೆ, ಹೊಸ ಜಗತ್ತಿಗೆ ಪಾದಾರ್ಪಣ ಮಾಡಿದವರಂತೆ, ಹರ್ಷಿತರಾದರು. ನಾವು ತರುಣರು! ನಾವು ತರುಣರು! ಎಂದು ಆವೇಷದಿಂದ ಕೂಗಿಕೊಂಡರು. ಅವರಲ್ಲಿ ತರುಣರ ಎಲ್ಲಾ ಲಕ್ಷಣಗಳೂ ಕಂಡು ಬಂದವು. ಅವರ ತರುಣಾವಸ್ತೆಯು ಅವರಿಗೆ ಕುಣಿಯುವಂತೆ ಮಾಡಿತು. ತಮ್ಮ ಮೈಮೇಲಿದ್ದ ತಮ್ಮ ಹಳೆಯ ಬಟ್ಟೆಗಳನ್ನು ನೋಡಿಕೊಂಡು, ಅವುಗಳ ರೀತಿ-ಈತಿಯನ್ನು ಕಂಡು ಜೋರಾಗಿ ನಗಲು ತೊಡಗಿದರು.

ಒಬ್ಬರು ವೃದ್ಧರಂತೆ ಕುಂಟಲು ತೊಡಗಿದರೆ, ಮತ್ತೊಬ್ಬರು ಕನ್ನಡಕವನ್ನು ಮೂಗಿನ ಮೇಲೆ ಎಳೆದುಕೊಂಡು, ಸೊಟ್ಟಗೆ ನೋಡತೊಡಗಿದರು. ಅಲ್ಲಿದ್ದ ಕಪ್ಪು ರೊಟ್ಟಿನ ಪುಸ್ತಕವನ್ನು ಹಿಡಿದುಕೊಂಡು, ಡಾಕ್ಟರ್ ಜಿನೇಂದ್ರರಂತೆ ನಟಿಸಿ ತೋರಿಸಿದರು. ವಿಧವೆ ನೀರಜ ಈಗ ನವ ತರುಣಿ. ಡಾಕ್ಟರ್ ರವರ ಕುರ್ಚಿಯಮೇಲೆ ತನ್ನ ಗುಲಾಬಿ ಬಣ್ಣದ ಮುಖ ಚಹರೆಯಿಂದ ವಿರಾಜಮಾನಳಾಗಿದ್ದಳು.

ಡಾಕ್ಟರೇ! ಏಳಿ, ನನ್ನ ಜೊತೆ ನೃತ್ಯ ಮಾಡಿ ಎಂದು ಆಹ್ವಾನಿಸಿದಾಗ ಉಳಿದವರು ವಿಚಿತ್ರಾಕೃತಿಯ ಆ ಮುದಿ ಡಾಕ್ಟರು ಏನು ನೃತ್ಯ ಮಾಡಬಲ್ಲರು ಎಂದು ಜೋರಾಗಿ ನಗತೊಡಗಿದರು. ದಯವಿಟ್ಟು ಕ್ಷಮಿಸಿ, ನನಗೆ ವಯಸ್ಸಾಗಿದೆ, ನನ್ನ ಕೈಕಾಲುಗಳು ಹಿಡಿದುಕೊಂಡು ತೊಂದರೆಯಾಗಿದೆ. ನಿಮ್ಮ ಜೊತೆ ಈ ನವ ತರುಣರು ನೃತ್ಯ ಮಾಡಬಲ್ಲರು. ಅವರನ್ನು ಆಹ್ವಾನಿಸಿ ಎಂದರು ಡಾಕ್ಟರು.

ಆಗ ಸ್ವಾಮಿ ನನ್ನ ಜೊತೆ ನೃತ್ಯ ಮಾಡಿ, ನೀರಾ! ಎಂದು ಆಹ್ವಾನಿಸಿದರು. ಆಗ ಮುತ್ತಣ್ಣ, ಇಲ್ಲ, ಇಲ್ಲ, ನಾನು ಅವರೊಂದಿಗೆ ನೃತ್ಯ ಮಾಡುವವನು ಎಂದು ಆತುರದಲ್ಲಿ ಕಿರುಚಿದರು. ಪಂಡಿತ್ ಅವರು ನನ್ನ ಕೈ ಹಿಡಿಯಲು ಐವತ್ತು ವರ್ಷಗಳ ಹಿಂದೆಯೇ ಮಾತುಕೊಟ್ಟಿದ್ದರು ಎಂದರು.

ಅವರೆಲ್ಲಾ ಅವಳನ್ನು ಸುತ್ತುವರೆದು ನಿಂತರು. ಒಬ್ಬರು ಅವಳ ಎರಡು ಕೈಗಳನ್ನೂ ಹಿಡಿದುಕೊಂಡರು, ಮತ್ತೊಬ್ಬರು ಅವಳ ಸೊಂಟ ಬಳಸಿದರು, ಇನ್ನೊಬ್ಬರು ಅವಳ ಮುಂಗುರುಳನ್ನು ನೇವರಿಸಿದರು. ಅವಳು ಕೆಂಪಾಗಿ, ಏದುಸಿರು ಬಿಡುತ್ತಾ, ಕೊಸರಿಕೊಂಡು, ನಗುತ್ತಾ, ಅವರ ಬಿಸಿಯುಸಿರಿನ ತಾಪವನ್ನು ಅನುಭವಿಸುತ್ತಾ, ಅವರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟೂ, ಮೂವರ ಬಂಧನ ಬಿಗಿಯಾಯಿತು. ಅಷ್ಟು ಚೇತೋಹಾರಿ, ತಾರುಣ್ಯಾವಸ್ಥೆಯ ಪೈಪೋಟಿಯ ಚಿತ್ರ ಎಂದೂ ಕಂಡಿರಲಿಲ್ಲ ಎನ್ನಬೇಕು. ಆ ಕೊಠಡಿಯ ಮಂದ ಬೆಳಕು, ಅವರ ನವ ಚೈತನ್ಯ, ಎಲ್ಲವೂ ಕೂಡಿ ಅವರನ್ನು ಹುಚ್ಚರನ್ನಾಗಿಸಿತ್ತು.

ಅವರು ತರುಣರಾಗಿದ್ದರು, ಅವರಲ್ಲಿ ಗೋಚರಿಸುತ್ತಿದ್ದ ತೀವ್ರ ಮೋಹ ಅದನ್ನು ಸ್ಪಷ್ಟೀಕರಿಸಿತ್ತು. ಈ ಹುಚ್ಚಿನಿಂದ ಮತ್ತಷ್ಟು ಮತ್ತೇರಿಸಿಕೊಂಡಿದ್ದ ಆ ವಿಧವೆ ತರುಣಿ, ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲೂ ಇಲ್ಲ ಅಥವ ತಿರಸ್ಕರಿಸಲೂ ಇಲ್ಲ. ಅವರವರಲ್ಲೇ ಈಗ ಕ್ರೂರ ನೋಟ ವಿನಿಮಯವಾಗುತ್ತಿತ್ತು. ಅವರು ತಮ್ಮ ಹಿಡಿತವನ್ನು ಸಡಿಲ ಮಾಡಲಿಲ್ಲ.

ಬದಲಿಗೆ ಅದು ಇನ್ನೂ ಬಿಗಿಯಾಯಿತು. ಅವರ ಜಗ್ಗಾಟ, ನೂಕಾಟದಲ್ಲಿ ಟೇಬಲ್ ಮೇಲಿದ್ದ ನೀರಿನ ಹೂದಾನಿ ಕೆಳಗೆ ಬಿದ್ದು ಪುಡಿ ಪುಡಿಯಾಯ್ತು. ಅದರಲ್ಲಿದ್ದ ತಾರುಣ್ಯದ ನೀರು ಚೆಲ್ಲಿ ಪ್ರಕಾಶಮಾನವಾದ ಬಳ್ಳಿಯಂತೆ ಮಿಂಚುತ್ತಾ ಹರಿಯಿತು. ಅಲ್ಲೇ ಹಾರಾದೂತ್ತಿದ್ದ ಒಂದು ವಯಸ್ಸಾದ ಚಿಟ್ಟೆಗೆ ಆ ನೀರು ತಗಲಿ ಅದು ನವ ಚೈತನ್ಯವನ್ನು ಪಡೆದು, ಮತ್ತೆ ಮೇಲೆ ಹಾರಿಹೋಗಿ ಡಾಕ್ಟರ ತಲೆಯ ಮೇಲೆ ಕುಳಿತಿತು.

ಇದೆಲ್ಲವನ್ನೂ ನೊಡಿದ ಡಾಕ್ಟರ್, ಬನ್ನಿ, ಬನ್ನಿ, ಸ್ನೇಹಿತರೇ! ಬನ್ನಿ, ಮೇಡಂ ನೀರಜ, ಈ ಘರ್ಷಣೆಯನ್ನು ಕೊನೆಗೊಳಿಸಿ ಎಂದರು. ಎಲ್ಲರೂ ಅವರ ದ್ವನಿ ಕೇಳಿ ಹಾಗೇ ನಿಂತರು. ಚಲ್ಲಿದ ನೀರು, ಒಡೆದ ಪಾತ್ರೆ ಅವರನ್ನು ಸ್ಥಂಬೀಭೂತರನ್ನಾಗಿ ಮಾಡಿದವು. ಕೆತ್ತನೆ ಕೆಲಸ ಮಾಡಿದ್ದ ತಮ್ಮ ಕುರ್ಚಿಯಲ್ಲಿ ಕುಳಿತಿದ್ದ ಡಾಕ್ಟರನ್ನು ನೋಡಿದರು.

ಪಾತ್ರೆ ಒಡೆದಾಗ ಅದರಿಂದ ನೆಲಕ್ಕೆ ಬಿದ್ದ ಅರ್ಧ ಶತಮಾನ ಹಳೆಯದಾದ ಗುಲಾಬಿಯನ್ನು ಎತ್ತಿ ಅದನ್ನು ಅವರ ಕೈಯಲ್ಲಿ ಹಿಡಿದಿದ್ದರು. ಅವರನ್ನು ಕುಳಿತುಕೊಳ್ಳುವಂತೆ ಕೈ ಸನ್ನೆ ಮಾಡಿದರು. ಎಲ್ಲರೂ ಕುಳಿತರು. ಅವರಿಗೆ ತಾರುಣ್ಯ ಬಂದಿದ್ದರೂ, ಅವರ ಆ ಹುಚ್ಚಾಟ ಅವರ ಶಕ್ತಿಯನ್ನು ಹೀರಿತ್ತು.

ಪಾಪ! ನನ್ನ ಮಂಜರಿ ನನಗೆ ಕೊಟ್ಟ ಗುಲಾಬಿ, ಮತ್ತೆ ಬಾಡುತ್ತಿರುವಂತಿದೆ ಎಂದು ತಮ್ಮ ಕೈಲಿದ್ದ ಗುಲಾಬಿಯನ್ನು ನೋಡುತ್ತಾ ಹೇಳಿದರು. ನಿಜ. ನೋಡ ನೋಡುತ್ತಾ ಆ ಗುಲಾಬಿ ಮತ್ತೆ ಒಣಗಿ ತನ್ನ ಸೌಂದರ್ಯವನ್ನು ಕಳೆದುಕೊಂಡು ಕಾಗದದಂತೆ ಮುದುಡಿಹೋಯಿತು. ಅದೇ ಸಮಯದಲ್ಲಿ ಮೇಲೆ ಹಾರಿ ಕುಳಿತಿದ್ದ ಚಿಟ್ಟೆ ಪಟ್ಟನೆ ನೆಲಕ್ಕೆ ಬಿದ್ದು ಸತ್ತು ಹೋಯಿತು.

ಇದೆಲ್ಲವನ್ನೂ ಕಂಡ ಅತಿಥಿಗಳು ನಡುಗಿಹೋದರು. ಅವರಲ್ಲಿ ಒಂದು ರೀತಿಯ ಛಳಿ ಮೈ ಪ್ರವೇಶಿಸಿದಂತಾಯಿತು. ಒಬ್ಬರನ್ನೊಬ್ಬರು ನೋಡಿಕೊಂಡರು. ಏನೋ ಒಂದು ಚೈತನ್ಯ ಅವರಿಂದ ಬೇರ್ಪಟ್ಟು ಹಾರಿಹೋದಂತಾಗಿ ಮತ್ತೆ ಅವರ ಹಳೆಯ ರೂಪ ರೇಶೆಗಳು ಮರುಕಳಿಸುತ್ತಿರುವಂತೆ ಭಾಸವಾಯಿತು. ಇದೇನು ಭ್ರಮೆಯೇ? ಜೀವನದಲ್ಲಾದ ಒಂದು ಕ್ಷಣದ ಅನುಭವವೇ?

ಏನು? ನಾವು ಇಷ್ಟು ಬೇಗ ಮತ್ತೆ ವೃದ್ಧರಾದೆವೇ? ಹೌದು. ನಿಜವಾಗಿಯೂ ಅವರೆಲ್ಲಾ ಮತ್ತೆ ಯಥಾಸ್ಥಿತಿಗೆ ಬಂದಿದ್ದರು! ಆ ತಾರುಣ್ಯದ ನೀರು ಕೇವಲ ಮಧ್ಯದಂತೆ ಸ್ವಲ್ಪಕಾಲ ಕೆಲಸ ಮಾಡಿತ್ತು. ಮಧ್ಯವನ್ನು ಕುಡಿದಾಗ ಸ್ವಲ್ಪ ಹೊತ್ತು ಮತ್ತುಬಂದಂತಾಗಿ ನಂತರ ಯಥಾಸ್ಥಿತಿಗೆ ಮರಳುವಂತೆ ಈ ತಾರುಣ್ಯದ ನೀರು ತಾತ್ಕಾಲಿಕವಾಗಿ ವೃದ್ಧಾಪ್ಯವನ್ನು ನೀಗಿಸಿತ್ತು. ಅದನ್ನು ಕುಡಿಯುತ್ತಾ ಹೋದಂತೆ ಆ ಸ್ಥಿತಿಯು ಮುಂದುವರೆಯುತ್ತಿತ್ತು. ನೀರನ್ನು ಕುಡಿಯುವುದನ್ನು ನಿಲ್ಲಿಸಿದ ಸ್ವಲ್ಪ ಹೊತ್ತಿನಲ್ಲೇ ಅದರ ಪ್ರಭಾವವೂ ಹೋಯಿತು.

ವಿಧವೆಗೆ ಆದ ವೇದನೆ ಅಷ್ಟಿಷ್ಟಲ್ಲ. ತಾನು ಏಕೆ ನೇರವಾಗಿ ಸಮಾಧಿಯಾಗಬಾರದು ಎನಿಸಿತು ಅವಳಿಗೆ ತನ್ನ ಸುಕ್ಕುಗಟ್ಟಿದ ಶರೀರವನ್ನು ನೋಡಿಕೊಂಡು. ಹೌದು, ಸ್ನೇಹಿತರೇ, ನೀವೆಲ್ಲ ಮತ್ತೆ ವೃದ್ಧರಾಗಿದ್ದೀರಿ. ತಾರುಣ್ಯದ ಚಿಲುಮೆಯ ನೀರು ಚೆಲ್ಲಿಹೋಯಿತು. ಅದಕ್ಕಾಗಿ ನಾನು ದುಃಖಿಸುವುದಿಲ್ಲ. ಇವೆಲ್ಲ ಶಾಶ್ವತವಲ್ಲವೆಂಬ ಪಾಠವನ್ನು ನಾನು ನಿಮ್ಮಿಂದ ಈ ಪ್ರಯೋಗದ ಮೂಲಕ ಕಲಿತೆ. ಧನ್ಯವಾದಗಳು ಎಂದರು.

ಆದರೆ ಡಾಕ್ಟರ ಈ ನಾಲ್ಕುಜನ ಸ್ನೇಹಿತರು ಅಂತಹ ಯಾವ ಪಾಠವನ್ನೂ ತಮಗೆ ತಾವೇ ಕಲಿತುಕೊಳ್ಳಲಿಲ್ಲ. ಅವರು ತಕ್ಷಣ ನೀಲಗಿರಿಗೆ ಪ್ರಯಾಣ ಬೆಳೆಸಿ ಅಲ್ಲಿನ ತಾರುಣ್ಯ ಚಿಲುಮೆಯ ನೀರನ್ನು ಕುಡಿಯುವ ತವಕದಲ್ಲಿದ್ದರು. 

(ಮೂಲ: ಅಮೆರಿಕದ ಲೇಖಕ ನಥಾನಿಲ್ ಹಾಥೋರ್ನ್‌ನ ‘ಡಾ. ಹೆಡೇಗರ್ಸ್ ಎಕ್ಸ್‌ಪೆರಿಮೆಂಟ್’)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT