ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್‌ ನಿಗ್ರಹದ ಏಳುಬೀಳು

ಮುಲ್ಲಾ ಮನ್ಸೂರ್‌ ಹತ್ಯೆಯಿಂದ ಶಾಂತಿ ಮಾತುಕತೆ ಸಾಧ್ಯತೆ ಮತ್ತಷ್ಟು ಕ್ಷೀಣ
Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಅಮೆರಿಕವು ಡ್ರೋನ್‌ ಬಳಸಿ ಆಫ್ಘಾನಿಸ್ತಾನದ ತಾಲಿಬಾನ್ ನಾಯಕ ಮುಲ್ಲಾ ಅಖ್ತರ್‍ ಮಹಮ್ಮದ್  ಮನ್ಸೂರ್‌ನನ್ನು ಹತ್ಯೆ ಮಾಡಿದ್ದು, ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರಕ್ಕೆ ಚೈತನ್ಯಕಾರಿಯಾಗಬಹುದು ಎನಿಸುತ್ತದೆ.

ಆದರೆ ಇದರಿಂದ ಕಾಬೂಲ್‌ ಎದುರಿಸುತ್ತಿರುವ ತಕ್ಷಣದ ರಾಷ್ಟ್ರೀಯ ಭದ್ರತಾ ಸಮಸ್ಯೆಗಳು ಪರಿಹಾರವಾಗುವ ಸೂಚನೆಗಳಿಲ್ಲ. ಅವು ಇನ್ನಷ್ಟು ಜಟಿಲಗೊಳ್ಳಬಹುದು. ಹಾಗಾಗಿ ನಾಯಕತ್ವವನ್ನು ನಾಶ ಮಾಡಿ ಶತ್ರುವನ್ನು ಬಲಹೀನಗೊಳಿಸುವ ಕಾರ್ಯತಂತ್ರದ ಅಂಗವಾಗಿ ತಾಲಿಬಾನ್ ನಾಯಕರನ್ನು ಆಯ್ದು ಹತ್ಯೆ ಮಾಡುವ ಅಮೆರಿಕದ ನೀತಿಯ ಬಗ್ಗೆ ಸಂಶಯ ಮೂಡುತ್ತದೆ.

ಮುಲ್ಲಾ ಮನ್ಸೂರ್‍‌ ಸಾವಿನ ಕುರಿತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ತಮ್ಮ ಕಳೆದ ವಾರದ ವಿಯೆಟ್ನಾಂ ಭೇಟಿಯ ಸಂದರ್ಭದಲ್ಲಿ ಹೀಗೆ ಪ್ರತಿಕ್ರಿಯಿಸಿದರು: ‘ಆಫ್ಘಾನಿಸ್ತಾನದ ಲೆಕ್ಕವಿಲ್ಲದಷ್ಟು ಪುರುಷರು, ಮಹಿಳೆಯರು ಮತ್ತು ಮಕ್ಕಳ ಬಲಿ ತೆಗೆದುಕೊಂಡಿರುವ ಹಿಂಸಾಚಾರವನ್ನು ಕೈಬಿಟ್ಟು ಶಾಂತಿ ಮಾತುಕತೆಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಬೇಕೆಂದು ಆಫ್ಘಾನಿಸ್ತಾನದ ಸರ್ಕಾರ ನೀಡಿದ ಆಹ್ವಾನವನ್ನು ಮನ್ಸೂರ್‌ ತಿರಸ್ಕರಿಸಿದ್ದ’.

ಇದರ ಕುರಿತು ತನ್ನ ನಿಲುವು ಏನೆಂಬುದನ್ನು ಶ್ವೇತ ಭವನ ಹೀಗೆ ಹೇಳಿದೆ:  ‘ಮಾತುಕತೆಗೆ ಬರಲು ಒಪ್ಪದ ಕಾರಣ, ಆತನನ್ನು ಹೊರಗಿಟ್ಟು ಶಾಂತಿ ಮಾತುಕತೆಯನ್ನು ಹೊಸದಾಗಿ ಆರಂಭಿಸುವುದು ಅಗತ್ಯವಾಗಿತ್ತು.  ಹೀಗಿದ್ದೂ, ಅಮೆರಿಕವು ತನಗೊಪ್ಪುವ ಸಂಧಾನಕಾರ ಸಿಗುವವರೆಗೂ ಡ್ರೋನ್‌ ಬಳಸಿ ಆಫ್ಘಾನಿಸ್ತಾನದ ತಾಲಿಬಾನ್ ನಾಯಕತ್ವ ಮಣಿಸುವ ಯತ್ನಗಳನ್ನು ಮಾಡುವುದೆಂಬ ಭಾವನೆ  ಆಶಾದಾಯಕ ಎಂದು ಹೇಳಬಹುದು’.

ಆಫ್ಘನ್‌  ತಾಲಿಬಾನ್‌ನ ಹಿಂದಿನ ನಾಯಕ ಮತ್ತು ಸಂಸ್ಥಾಪಕ ಮುಲ್ಲಾ ಮಹಮ್ಮದ್ ಒಮರ್‌ 2013ರಲ್ಲಿ ಪಾಕಿಸ್ತಾನದಲ್ಲಿ  ನಿಧನನಾಗಿರುವ  ವಿಚಾರ ಕಳೆದ ಜುಲೈನಲ್ಲಿ ಬಹಿರಂಗಗೊಂಡಾಗ ಈ ಗುಂಪಿನ ನಾಯಕತ್ವಕ್ಕೆ ಸ್ಪರ್ಧೆ ಏರ್ಪಟ್ಟಿತು. ಇದರಿಂದಾಗಿ ಮಾತುಕತೆ ನಡೆಸಲು ಬೇಕಿರುವ ಉತ್ಸುಕತೆ ಮತ್ತು ಸಾಮರ್ಥ್ಯ ಕ್ಷೀಣಗೊಂಡವು.

ತದನಂತರದ ಮಿಲಿಟರಿ ದಾಳಿ ಕಳೆದೊಂದು ದಶಕದಲ್ಲಿಯೇ ತಾಲಿಬಾನ್‌ ನಡೆಸಿದ ಅತ್ಯಂತ ಬಲಿಷ್ಠ ಕಾರ್ಯಾಚರಣೆ. ಇದರಲ್ಲಿ ಸಾವಿರಾರು ಜನ ಸತ್ತರು. ಅದರಲ್ಲೂ, ತಾಲಿಬಾನ್‌ನ ಆತ್ಮಹತ್ಯಾ ಸ್ಫೋಟಗಳು ಭಾರಿ ಅಪಾಯಕಾರಿ. ಅದರ ಒಂದು ಬಣವಾಗಿರುವ ಹಖ್ಖಾನಿ ಜಾಲ, ಹಿಂಸಾಚಾರಕ್ಕೆ ಕುಖ್ಯಾತವಾಗಿದ್ದು, ದೇಶದ ರಾಜಧಾನಿಯ ಹೃದಯ ಭಾಗದಲ್ಲೇ ದಾಳಿ ನಡೆಸಿದೆ.

ಈ ದಾಳಿಗಳಿಂದ ಇಡೀ ದೇಶವೇ ಅಭದ್ರತೆಯಲ್ಲಿ ಸಿಲುಕಿ ನಲುಗಿದೆ. ಏಳುತ್ತ ಬೀಳುತ್ತ ಆಫ್ಘನ್‌ ರಾಷ್ಟ್ರೀಯ ಭದ್ರತಾ ಪಡೆ ಹೇಗೊ ನಿಭಾಯಿಸಿಕೊಂಡು ಹೋಗುತ್ತಿದೆ, ಆದರೆ ಸೈನಿಕ ಬಲದ ತಕ್ಕಡಿ ತಾಲಿಬಾನ್ ಕಡೆಯೇ ಹೆಚ್ಚು ತೂಗುತ್ತಿದೆ.

ಒಮರ್‌ ಉತ್ತರಾಧಿಕಾರಿಯ ಆಯ್ಕೆಯ ಗೊಂದಲ ಈ ಬಾರಿ ಇರಲಿಲ್ಲ. ತನ್ನ ಮಿಲಿಟರಿ ಕಾರ್ಯಾಚರಣೆಯ ಬಲವನ್ನು ಮೊದಲಿನಂತೆಯೇ ಉಳಿಸಿಕೊಳ್ಳುವ ಉದ್ದೇಶದಿಂದ ಕಳೆದ ಬುಧವಾರ ಕ್ಷಿಪ್ರವಾಗಿ, ಮುಲ್ಲಾ ಮನ್ಸೂರರ ಸಹಾಯಕರಾಗಿದ್ದ ಮುಲ್ಲಾ ಹೈಬತ್‌ ಉಲ್ಲಾ ಅಖುಂದ್‌ಝಾದಾ ಅವರೇ ತನ್ನ ಹೊಸ ನಾಯಕರೆಂದು ತಾಲಿಬಾನ್ ಘೋಷಿಸಿದೆ. ಹಿಂಸಾಚಾರ ಮುಂದುವರಿಯುವ ಲಕ್ಷಣಗಳಿವೆ.

ಅಧ್ಯಕ್ಷ ಘನಿಯವರ ಪಾಲಿಗೆ ಪರಿಸ್ಥಿತಿ ಗಂಭೀರವಾಗಿದೆ. ಮುಲ್ಲಾ ಮನ್ಸೂರ್‌ ಸಾವು ಅದನ್ನು ಬದಲಿಸುವುದಿಲ್ಲ. ತಮ್ಮ ಆಡಳಿತದ ಮೊದಲ ಎರಡು ವರ್ಷಗಳನ್ನು ಘನಿ ಅವರು ಪಾಕಿಸ್ತಾನದತ್ತ ಸ್ನೇಹ ಹಸ್ತ ಚಾಚುವುದಕ್ಕಾಗಿ ಪಣಕ್ಕಿಟ್ಟರು.

ಆ ಮೂಲಕ ತಾಲಿಬಾನ್‌ನೊಂದಿಗೆ ಮಾತುಕತೆ ಸಾಧ್ಯವಾಗಿ, ಹಿಂಸಾಚಾರ ಕಡಿಮೆಯಾಗುವುದೆಂದು ನಂಬಿದ್ದರು. ತಾಲಿಬಾನ್ ಧುರೀಣರು ಮಾತುಕತೆಗೆ ಬರುವಂತೆ ಮಾಡಲು ಮತ್ತು ತಾಲಿಬಾನ್‌ಗೆ ಅದರಲ್ಲೂ ಹಖ್ಖಾನಿ ಜಾಲಕ್ಕೆ, ಪಾಕಿಸ್ತಾನದಲ್ಲಿ ಸುರಕ್ಷಿತ ನೆಲೆ ಸಿಗದಂತೆ ಮಾಡಲು ಪಾಕಿಸ್ತಾನದ ಮೇಲೆ ಚೀನಾ ಪ್ರಭಾವ ಬೀರುತ್ತದೆ ಎಂದು ಘನಿಯವರು ಆಶಿಸಿದ್ದರು.

ಅಧ್ಯಕ್ಷರ ಈ ಯತ್ನಗಳು ಫಲಿಸಲಿಲ್ಲ. ಅದರಲ್ಲಿ ಆಶ್ಚರ್ಯವೇನಿಲ್ಲ. ಅಮೆರಿಕ ಕೂಡ 2001ರಿಂದಲೂ ಆಫ್ಘಾನಿಸ್ತಾನದ ದಂಗೆಕೋರರನ್ನು ನಿಯಂತ್ರಿಸುವಂತೆ ಪಾಕಿಸ್ತಾನದ ಮೇಲೆ ಪ್ರಭಾವ ಬೀರುವಲ್ಲಿ ವಿಫಲವಾಗಿದೆ.

ಈ ನಿಷ್ಪ್ರಯೋಜಕ ಕೆಲಸಕ್ಕಾಗಿ ಘನಿ ಅವರು ಸಾಕಷ್ಟು ಶ್ರಮ ವಹಿಸಬೇಕಾಯಿತು. ಅಲ್ಲದೆ  2014ರ ಚುನಾವಣೆಯಲ್ಲಿ  ತಮ್ಮ ವಿರುದ್ಧ ಸ್ಪರ್ಧಿಸಿದ್ದು  ನಂತರ ಅಧಿಕಾರ ಹಂಚಿಕೆ ಸೂತ್ರದಂತೆ ಈಗ  ಆಡಳಿತದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆಗಿರುವ ಅಬ್ದುಲ್ಲಾ ಅಬ್ದುಲ್ಲಾ ಜೊತೆಗಿನ ಮನಸ್ತಾಪಗಳಲ್ಲಿ ಸರ್ಕಾರ ನಲುಗಿಹೋಗಿದೆ.

ಭ್ರಷ್ಟಾಚಾರ ಕಡಿಮೆಗೊಳಿಸುವ ಮತ್ತು ಉದ್ಯೋಗ ಸೃಷ್ಟಿಸುವ ಭರವಸೆ ಈಡೇರಿಸುವಲ್ಲಿ ಸರ್ಕಾರ ಸಫಲವಾಗಿಲ್ಲ. ಓಲೈಕೆ ನೇಮಕಾತಿ ಬಯಸುವ ರಾಜಕಾರಣಿಗಳು ದೇಶದ ಪ್ರಗತಿಗೆ ಅಡ್ಡಿಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಹಮೀದ್ ಕರ್ಜೈ  ಬಹಿರಂಗವಾಗಿಯೇ ಸರ್ಕಾರ ಉರುಳಿಸುವ ತಂತ್ರ ಹೂಡುತ್ತಿದ್ದಾರೆ.

ತಾಲಿಬಾನ್ ನಾಯಕನ ಸಾವು ಹಾಗೂ  ಹೊಸ ಉತ್ತರಾಧಿಕಾರಿಗಾಗಿ ನಡೆಸುವ ಹೋರಾಟಗಳು ಮುಲ್ಲಾ ಒಮರ್ ಸಾವಿನ ನಂತರ ಉಂಟಾದ ಆಂತರಿಕ ಕಿತ್ತಾಟಗಳಿಗಿಂತ ಹೆಚ್ಚಿನ ಕಚ್ಚಾಟಗಳಿಗೆ ಕಾರಣವಾಗಬಹುದು.  ಕೆಲವು ಘಟಕಗಳು ಪರಸ್ಪರ ಮುಗಿಬೀಳಬಹುದು. ಇತರ ಕೆಲವರು ಇಸ್ಲಾಮಿಕ್‌ ಸ್ಟೇಟ್‌ನ ಹೋರಾಟಗಾರರಾಗಿ ಪರಿವರ್ತಿತಗೊಳ್ಳಬಹುದು.

ತಾಲಿಬಾನ್‌ ಗುಂಪಿನ ಆಂತರಿಕ ಕಿತ್ತಾಟಗಳು ಸರ್ಕಾರಿ ಸೇನೆಗೆ ಒಳ್ಳೆಯ ಸುದ್ದಿ ಎನ್ನುವಂತಿಲ್ಲ;  ಹಿಂಸಾಚಾರ ಕಡಿಮೆಯಾಗುತ್ತದೆ ಎನ್ನುವಂತಿಲ್ಲ. ಕಳೆದ ಬೇಸಿಗೆ
ಯಲ್ಲಾದ ಒಮರ್‌ ಸಾವಿನ ನಂತರ ತಾಲಿಬಾನ್‌ನಲ್ಲಿನ ಕಿತ್ತಾಟಗಳ ಹೊರತಾಗಿಯೂ ಅನೇಕ ದಾಳಿಗಳು ನಡೆದು, ಅವುಗಳಲ್ಲಿ ಆಫ್ಘಾನಿಸ್ತಾನದ ಸೇನೆಯ ವಿರುದ್ಧ ಯುದ್ಧತಂತ್ರಗಳ ಬಳಕೆಯಲ್ಲಿ ತಾಲಿಬಾನ್ ಅದೆಷ್ಟೊ ಸಲ ಮೇಲುಗೈ ಸಾಧಿಸಿದೆ.

ತಾಲಿಬಾನ್ ಮಧ್ಯಸ್ತರದ ಸೇನಾಧಿಕಾರಿಗಳನ್ನು ‘ಬಲಹೀನಗೊಳಿಸಿ ಸದೆ ಬಡಿಯಬೇಕು’ ಎಂಬ ತಂತ್ರದಂತೆ ಅಮೆರಿಕ ಒಂದು ದಶಕದಿಂದ ಮಾಡಿದ ಕಾರ್ಯಾಚರಣೆಗಳು ಈ ಗುಂಪನ್ನು ಒಡೆಯಲು ಸಫಲವಾಗಿಲ್ಲ.

ಈಗಾಗಲೇ ದುಸ್ಸಾಧ್ಯವೆನಿಸುತ್ತಿರುವ ಶಾಂತಿ ಮಾತುಕತೆಗಳು ಮುಲ್ಲಾ ಮನ್ಸೂರ್‍‌ರ ಹತ್ಯೆಯಿಂದ ಇನ್ನಷ್ಟು ದೂರವಾಗಲಿವೆ. ಹೈಬತ್ಉಲ್ಲಾ, ಗುಂಪಿನ ಮೇಲೆ ನಿಯಂತ್ರಣ ಸಾಧಿಸಲು ಪರದಾಡ ಬೇಕಾಗಿರುವುದರಿಂದ ಮಾತುಕತೆ ನಡೆಸಲು ಅವರಿಗೆ ಇನ್ನೂ ಬಹಳ ಸಮಯ ಬೇಕು. ಮುಲ್ಲಾ ಮನ್ಸೂರ್‍ ವ್ಯಾವಹಾರಿಕ ವ್ಯಕ್ತಿಯಾಗಿದ್ದರು. ತನ್ನ ವಿರೋಧಿಗಳನ್ನು ಗೆಲ್ಲುವ ಇಲ್ಲವೆ ಸಮಾಧಾನಪಡಿಸುವ ಕಲೆ ಗೊತ್ತಿತ್ತು. ಆದರೂ ಅವರಿಗೆ ತಮ್ಮ ಗುಂಪನ್ನು ಒಗ್ಗೂಡಿಸಲು ಒಂದು ವರ್ಷವೇ ಹಿಡಿಯಿತು. ಈ ಕೆಲಸ ಸಾಧಿಸುವಾಗ ಹಖ್ಖಾನಿ ಜಾಲವನ್ನು ಬಲಪಡಿಸಿದರು.

ತಾಲಿಬಾನ್‌ ಗುಂಪಿನೊಳಗೆ ಹೆಚ್ಚಿದ ಹಖ್ಖಾನಿ ಜಾಲದ ಪ್ರಭಾವ, ಮಾತುಕತೆ ಮತ್ತು ಸಂಘರ್ಷ ಕಡಿಮೆಗೊಳಿಸುವ ಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ರಕ್ತಪಿಪಾಸು ಜಾಲದ ನಾಯಕ ಸಿರಾಜುದ್ದೀನ್ ಹಖ್ಖಾನಿಯನ್ನು ಬಿಟ್ಟು ಮುಲ್ಲಾ ಒಮರ್‌ನ ಹಿರಿಯ ಮಗ ಮುಲ್ಲಾ ಮಹಮ್ಮದ್ ಯಾಕೂಬ್ ಉತ್ತರಾಧಿಕಾರಿಯಾಗಿದ್ದರೂ ಇದೇ ಕತೆಯಾಗಿರುತ್ತಿತ್ತು (ಇವರಿಬ್ಬರೂ ಮುಲ್ಲಾ ಹೈಬತ್ಉಲ್ಲಾ ಅವರ ಸಹಾಯಕರೆಂದು ಬುಧವಾರ ತಾಲಿಬಾನ್‌ ಘೋಷಿಸಿದೆ).

ಆಫ್ಘಾನಿಸ್ತಾನದಲ್ಲಿನ ಅಮೆರಿಕ ಬೆಂಬಲಿತ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಹೇಗೆ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ಎರಡು ಸೂತ್ರಗಳನ್ನು ನೀಡಬಹುದು.

ಮೊದಲನೆಯದೆಂದರೆ, ತಾಲಿಬಾನ್‌ ನಾಯಕರನ್ನು ಆಯ್ದು ಹತ್ಯೆ ಮಾಡುವುದರಿಂದ ತಾಲಿಬಾನ್‌ನಲ್ಲಿ ಆಂತರಿಕ ಸಂಘರ್ಷ ಉಂಟಾಗಿ ಒಳಸಿಡಿತದಿಂದ ಛಿದ್ರಗೊಳ್ಳುವವರೆಗೆ ವಸ್ತುಸ್ಥಿತಿ ಕಾಯ್ದುಕೊಳ್ಳುವುದು.

ಎರಡನೆಯದು ತಾಲಿಬಾನ್ ಮಾತುಕತೆಗೆ ಸಿದ್ಧವಾಗಿ ಒಪ್ಪಿಕೊಳ್ಳಬಹುದಾದ ಅಧಿಕಾರ ಹಂಚಿಕೆಯ ಸೂತ್ರವೊಂದು ರೂಪುಗೊಳ್ಳುವುದನ್ನು ಕಾಯುವುದು. ಸದ್ಯಕ್ಕೆ ಮೊದಲನೆಯದು ಕೈಗೂಡುವ ಸಾಧ್ಯತೆ ಇಲ್ಲ; ಎರಡನೆಯದು ಕೈಗೂಡುವ ಸಾಧ್ಯತೆ ಮುಲ್ಲಾ ಮನ್ಸೂರ್‌ರ ಹತ್ಯೆಯಿಂದಾಗಿ ಹೆಚ್ಚಂತೂ ಆಗಿಲ್ಲ.

ಮುಲ್ಲಾ ಮನ್ಸೂರ್‌ ಹತ್ಯೆ ಮಾಡಲು ಅಮೆರಿಕಕ್ಕೆ ಅಂತರರಾಷ್ಟ್ರೀಯ ರಾಜಕೀಯ ಕಾರಣಗಳಿರಬಹುದು. ಪಾಕಿಸ್ತಾನಕ್ಕೆ ಸೈನಿಕ ನೆರವು ಕೊಡುವ ಮುನ್ನ ಅದು ತನ್ನ ನೆಲದಲ್ಲಿ ಆಫ್ಘಾನಿಸ್ತಾನದ ದಂಗೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಷರತ್ತನ್ನು ಅಮೆರಿಕವು ಪಾಕಿಸ್ತಾನಕ್ಕೆ ವಿಧಿಸಿದ್ದರೂ ಆಫ್ಘಾನಿಸ್ತಾನದ ತಾಲಿಬಾನ್ ಅಥವಾ ಹಖ್ಖಾನಿಗಳ ದಮನಕ್ಕೆ ಪಾಕಿಸ್ತಾನ ಪ್ರಯತ್ನಪಟ್ಟಿಲ್ಲ.

(ಈ ಗುಂಪುಗಳು ಪಾಕಿಸ್ತಾದ ವಿರುದ್ಧವೇ ತಿರುಗಿ ಬೀಳುವ ಅಥವಾ ‘ಪಾಕಿಸ್ತಾನಿ ತಾಲಿಬಾನ್‌’ನೊಡನೆ ಮೈತ್ರಿ ಹೊಂದುವುದನ್ನು ತಡೆಯುವುದೇ ಇಲ್ಲಿನ ಉದ್ದೇಶ). ಹಾಗಾಗಿ, ಪಾಕಿಸ್ತಾನದ ಅಧಿಕಾರಿಗಳು ತನ್ನ ನೆಲದಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಅಥವಾ ಹಖ್ಖಾನಿ ನಾಯಕರಿಲ್ಲವೆಂದು ಹೇಳಿಕೊಂಡಿದ್ದರೂ, ಮುಲ್ಲಾ ಮನ್ಸೂರ್‌ರ ಹತ್ಯೆಯಾಗಿದ್ದು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ. ಆ ಪ್ರಾಂತದಲ್ಲಿ ಅಮೆರಿಕ ನಡೆಸಿದ ಈ ಮೊದಲ ಮಾರಕ ಡ್ರೋನ್‌ ದಾಳಿ ಪಾಕಿಸ್ತಾನಕ್ಕೆ ಮತ್ತು ತಾಲಿಬಾನ್‌ಗೆ ಒಂದು ಬಲವಾದ ಎಚ್ಚರಿಕೆಯಾಗಿದೆ.

ಈ ಸಂದೇಶ ರವಾನಿಸಲು ಭಾರಿ ಬೆಲೆ ತೆರಬೇಕಾಯಿತು. ಮುಲ್ಲಾ ಮನ್ಸೂರ್‌ ಹತ್ಯೆಯಿಂದ ಶಾಂತಿ ಮಾತುಕತೆ ದೂರ ಸರಿದಿದೆ. ಈ ಗುಂಪಿನ ನಾಯಕರನ್ನು ಡ್ರೋನ್‌ ಬಳಸಿ ನಾಶ ಮಾಡುವುದು ಒಂದು ಉತ್ತಮ ಸೈನಿಕ ಅಸ್ತ್ರವೆ. ಆದರೆ, ಅಂತಿಮವಾಗಿ ಅತಿಮುಖ್ಯವಾಗಲಿರುವ ಮಾತುಕತೆ ಮತ್ತು ಸಂಧಾನ  ರಾಜಕೀಯದ ಕನ್ನಡಿಯಿಂದ ನೋಡಿದರೆ, ಈ ಅಸ್ತ್ರ ಎಷ್ಟು ಮೊಂಡಾಗಿದೆ ಎಂಬುದು ಗೊತ್ತಾಗುತ್ತದೆ.

ಲೇಖಕಿ ಬ್ರೂಕಿಂಗ್ಸ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಸೀನಿಯರ್‌ ಫೆಲೊ. ‘ಆಸ್ಪಿರೇಷನ್‌ ಅಂಡ್ ಆ್ಯಂಬಿವೆಲನ್ಸ್‌: ಸ್ಟ್ರಾಟೆಜೀಸ್ ಅಂಡ್ ರಿಯಾಲಿಟೀಸ್ ಆಫ್ ಕೌಂಟರ್ ಇನ್‌ಸರ್ಜೆನ್ಸಿ
ಅಂಡ್‌ ಸ್ಟೇಟ್‌ ಬಿಲ್ಡಿಂಗ್ ಇನ್‌ ಆಫ್ಘಾನಿಸ್ತಾನ್‌’ ಕೃತಿಯ ಕರ್ತೃ. ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT