ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ. ಪಂ.ಗೆ ಬೇಕು ಶಕ್ತಿ ವರ್ಧಕ

Last Updated 14 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ 3 ಹಂತದ ಪಂಚಾಯತ್‌ರಾಜ್‌ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ ತಾಲ್ಲೂಕು ಪಂಚಾಯಿತಿ ಬಗ್ಗೆ ಅಪಸ್ವರಗಳು ಕೇಳಿಬರುತ್ತಲೇ ಇವೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕು ಪಂಚಾಯಿತಿಗಳು ಅಗತ್ಯ ಇಲ್ಲ ಎಂಬ ಮಾತನ್ನು ಹೇಳುವ ಮೂಲಕ ಈ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದ್ದಾರೆ. ಈಗಲೂ  ತಾಲ್ಲೂಕು ಪಂಚಾಯಿತಿ ಅನಗತ್ಯ ಎಂದು ಹೇಳುವವರ ಸಂಖ್ಯೆಯೇ ಹೆಚ್ಚಾಗಿದೆ.

ಆದರೆ ತಾಲ್ಲೂಕು ಪಂಚಾಯಿತಿ ಅನಗತ್ಯ ಎಂದು ಈಗ ನಾವು ನಾವೇ ಹೇಳಿಕೊಂಡರೆ ಏನೂ ಪ್ರಯೋಜನವಿಲ್ಲ. ಯಾಕೆಂದರೆ ಅದನ್ನು ರದ್ದು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ತಾಲ್ಲೂಕು ಪಂಚಾಯಿತಿಯನ್ನು ಕೈಬಿಟ್ಟು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಎಂಬ ಎರಡೇ ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು ಎಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

ಯಾಕೆಂದರೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಪ್ರಕಾರ ಯಾವ ರಾಜ್ಯದಲ್ಲಿ 20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆಯೋ ಆ ರಾಜ್ಯಗಳಲ್ಲಿ ಮೂರು ಹಂತದ ಪಂಚಾಯತ್‌ರಾಜ್‌ ವ್ಯವಸ್ಥೆ ಇರಬೇಕು. ಅದನ್ನು ಇಡೀ ದೇಶ ಒಪ್ಪಿಕೊಂಡಿದೆ. ಈಗ ಬದಲಾವಣೆ ಮಾಡಬೇಕು ಎಂದರೆ ಮತ್ತೆ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಬೇಕು. ಅದನ್ನು ರಾಜ್ಯಗಳ ವಿಧಾನ ಮಂಡಲದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು.
ತಾಲ್ಲೂಕು ಪಂಚಾಯಿತಿ ಅಸ್ತಿತ್ವದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ಆರಂಭಿಸಿರುವುದರಿಂದ ಈ ಬಗ್ಗೆ ಇನ್ನಷ್ಟು ಗಂಭೀರ ಚರ್ಚೆಗಳು ನಡೆದು ತಾಲ್ಲೂಕು ಪಂಚಾಯಿತಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವ ಬಗ್ಗೆ ಕೂಡ ಆಲೋಚಿಸಬಹುದು.

ತಾಲ್ಲೂಕು ಪಂಚಾಯಿತಿಗಳಿಗೆ ಈಗ ವರ್ಷಕ್ಕೆ ಒಟ್ಟಾರೆ ಅಂದಾಜು ₨ 3 ಕೋಟಿ ಅನುದಾನ ಬರುತ್ತಿದೆ. ಈ ಹಣದಲ್ಲಿ ತಾಲ್ಲೂಕು ಪಂಚಾಯಿತಿ ಯಾವುದೇ ಕೆಲಸವನ್ನೂ ಪೂರ್ಣ ಮಾಡಲು ಸಾಧ್ಯವಿಲ್ಲ. ತಾಲ್ಲೂಕು ಪಂಚಾಯಿತಿಯ ಅಡಿಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಶಿಕ್ಷಣ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳು ಬರುತ್ತವೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕಿನಲ್ಲಿರುವ ರಾಜ್ಯ ಸರ್ಕಾರದ 28 ಇಲಾಖೆಗಳಿಗೂ ಭೇಟಿ ನೀಡಿ ಪರಿಶೀಲಿಸಬಹುದು. ಆದರೆ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ನೇರವಾಗಿ ಬರುವ ಇಲಾಖೆಗಳು 12 ಮಾತ್ರ. ಅವುಗಳಲ್ಲಿ ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಇಲಾಖೆಗಳನ್ನು ಬಿಟ್ಟರೆ ಉಳಿದ ಇಲಾಖೆಗಳಿಗೆ ಬರುವ ಅನುದಾನ ಬಹಳ ಕಡಿಮೆ.

ತಾಲ್ಲೂಕು ಪಂಚಾಯಿತಿಗೆ ಸಂಯುಕ್ತ ಅನುದಾನ ಎಂದು ರಾಜ್ಯ ಸರ್ಕಾರ ₨ 1 ಕೋಟಿ ನೀಡುತ್ತದೆ. ಇದನ್ನು  2 ಕೋಟಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರಾದರೂ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಇದಲ್ಲದೆ ಕೇಂದ್ರ ಹಣಕಾಸು ಆಯೋಗದಿಂದ ನೇರವಾಗಿ ತಲಾ 80ರಿಂದ 90 ಲಕ್ಷ, ಸಾಮಾನ್ಯ ನಿರ್ವಹಣೆಗಾಗಿ  50ರಿಂದ 60 ಲಕ್ಷ ಬರುತ್ತದೆ. ಮುದ್ರಾಂಕ ಶುಲ್ಕದಿಂದ ₨ 10ರಿಂದ 15 ಲಕ್ಷ ಸಿಗಬಹುದು. ಪರಿಶಿಷ್ಟ ವರ್ಗಗಳ ಉಪ ಯೋಜನೆಯಲ್ಲಿ ಅಲ್ಪಸ್ವಲ್ಪ ಹಣ ಬರುತ್ತದೆ. ಆದರೆ ತಾಲ್ಲೂಕು ಪಂಚಾಯಿತಿ ನಡೆಯುವುದು ಸಂಪೂರ್ಣವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಿಂದ. ಶೇ 99.99ರಷ್ಟು ಅನುದಾನ ಸರ್ಕಾರದಿಂದಲೇ ಬರುತ್ತದೆ. ಕೆಲವು ಕಡೆ ತಾಲ್ಲೂಕು ಪಂಚಾಯಿತಿಗಳು ಕಟ್ಟಡ ನಿರ್ಮಿಸಿ ಹಣ ಸಂಪಾದಿಸುತ್ತಿವೆ.

ಪಂಚಾಯತ್ ರಾಜ್‌ ವ್ಯವಸ್ಥೆ ಕುರಿತಂತೆ ಪರಿಶೀಲನೆ ನಡೆಸಲು ಶಾಸಕ ಕೆ.ಆರ್‌.ರಮೇಶಕುಮಾರ್‌ ನೇತೃತ್ವದಲ್ಲಿ ಈಗ ಸಮಿತಿ ರಚಿಸಲಾಗಿದೆ. ಈ ಸಮಿತಿ ತಾಲ್ಲೂಕು ಪಂಚಾಯಿತಿಯನ್ನು ಮುಚ್ಚುವ ಬದಲು ತಾಲ್ಲೂಕು ಪಂಚಾಯಿತಿಯನ್ನು ಇನ್ನಷ್ಟು ಬಲ ಪಡಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆ ಆಲೋಚಿಸಿದರೆ ಚೆನ್ನ.

ತಾಲ್ಲೂಕಿನಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಬರುತ್ತವೆ. ಉದ್ಯೋಗ ಖಾತ್ರಿ, ಶೌಚಾಲಯ, ವಸತಿ ಯೋಜನೆಗಳಲ್ಲಿ ಹಣ ದುರುಪಯೋಗವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಧಿಕಾರ ವಿಕೇಂದ್ರೀಕರಣದಿಂದ ಭ್ರಷ್ಟಾಚಾರದ ವಿಕೇಂದ್ರೀಕರಣವೂ ಆಗಿದೆ ಎಂಬ ಆಪಾದನೆ ಮೊದಲಿನಿಂದಲೂ ಇದೆ. ಇದನ್ನು ತಡೆಯಲು ತಾಲ್ಲೂಕು ಪಂಚಾಯಿತಿಗೆ ಇನ್ನಷ್ಟು ಅಧಿಕಾರವನ್ನು ನೀಡಬಹುದು.

ತಾಲ್ಲೂಕು ಪಂಚಾಯಿತಿಯನ್ನು  ರಾಜಕೀಯ ನಿರಾಶ್ರಿತರ ತಾಣವನ್ನಾಗಿ ಬಳಸುವುದರ ಬದಲು ಸದಸ್ಯರಿಗೆ ಇನ್ನಷ್ಟು ಜವಾಬ್ದಾರಿ, ಇನ್ನಷ್ಟು ಅವಕಾಶವನ್ನು ನೀಡಿದರೆ ಮೂರು ಹಂತದ ವ್ಯವಸ್ಥೆಯೂ ಚೆನ್ನಾಗಿ ಕೆಲಸ ಮಾಡುತ್ತದೆ.

ಸಾಮಾಜಿಕ ಅರಣ್ಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮುಂತಾದ ಇಲಾಖೆಗಳ ಹೆಚ್ಚಿನ ಜವಾಬ್ದಾರಿಯನ್ನು ತಾಲ್ಲೂಕು ಪಂಚಾಯಿತಿಗೇ ವಹಿಸಿದರೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ತಾಲ್ಲೂಕು ಪಂಚಾಯಿತಿಗೆ ಆದಾಯ ಮೂಲಗಳನ್ನೂ ಗುರುತಿಸುವ ಕೆಲಸವಾಗಬೇಕು. ಆಗ ಮಾತ್ರ ತಾಲ್ಲೂಕು ಪಂಚಾಯಿತಿಗಳು ಬದುಕಿ ಉಳಿಯಲು ಸಾಧ್ಯ.

ಜಿಲ್ಲಾ ಪಂಚಾಯಿತಿಗಳಿಗೆ ಈಗ ಸಾಕಷ್ಟು ಕೆಲಸಗಳಿವೆ. ಇವುಗಳಲ್ಲಿ ಕೆಲವನ್ನು ತಾಲ್ಲೂಕು ಪಂಚಾಯಿತಿಗಳಿಗೆ ಹಂಚಿದರೆ ಎರಡೂ ಕಡೆಯಲ್ಲಿ ಉತ್ತಮ ಕೆಲಸವಾಗುತ್ತವೆ. ‘ಎಲ್ಲಕ್ಕಿಂತ ಮುಖ್ಯವಾಗಿ ತಾಲ್ಲೂಕು ಪಂಚಾಯಿತಿ ವ್ಯವಸ್ಥೆಯನ್ನು ಕಳೆದ 20 ವರ್ಷಗಳಿಂದ ನಾವು ಇಟ್ಟುಕೊಂಡಿದ್ದೇವೆ. ಎಲ್ಲ ರಾಜಕೀಯ ಪಕ್ಷಗಳೂ ಇವುಗಳಲ್ಲಿ ಸಕ್ರಿಯವಾಗಿವೆ. ಈಗ ಏಕಾಏಕಿ ತಾಲ್ಲೂಕು ಪಂಚಾಯಿತಿಗಳನ್ನು ಮುಚ್ಚಿಬಿಟ್ಟರೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ನಿರುದ್ಯೋಗಿಗಳು ಹೆಚ್ಚಾಗುತ್ತಾರೆ. ಅವರು ಜಿಲ್ಲಾ ಪಂಚಾಯಿತಿ ಅಥವಾ ಶಾಸಕ ಸ್ಥಾನದ ಆಕಾಂಕ್ಷಿಗಳಾಗುತ್ತಾರೆ. ಇದು ರಾಜಕೀಯ ಪಕ್ಷಗಳಿಗೆ ತಲೆನೋವು ಎಂದು ರಾಜಕಾರಣಿಯೊಬ್ಬರು ಹೇಳುತ್ತಾರೆ.

ರಾಜಕೀಯ ಪಕ್ಷಗಳಲ್ಲಿ ಕಾರ್ಯಕರ್ತರು ಅವಕಾಶಕ್ಕಾಗಿ ದುಂಬಾಲು ಬೀಳುವುದನ್ನು ತಪ್ಪಿಸಿಕೊಳ್ಳಲು ತಾಲ್ಲೂಕು ಪಂಚಾಯಿತಿಗೆ ಟಿಕೆಟ್‌ ನೀಡಿ ಅವರನ್ನು ಸಮಾಧಾನಿಸುವ ಪರಿಯೂ ರಾಜಕೀಯದಲ್ಲಿ ನಡೆಯುತ್ತದೆ. ಈಗ ಯಾವುದೇ ಚುನಾವಣೆಯೂ ಸುಲಭವಾಗಿ ಆಗುವುದಿಲ್ಲ. ತಾಲ್ಲೂಕು ಪಂಚಾಯಿತಿಗೆ ಸ್ಪರ್ಧಿಸಿದ ಅಭ್ಯರ್ಥಿಗಳೂ  8ರಿಂದ 10 ಲಕ್ಷ ವೆಚ್ಚ ಮಾಡುತ್ತಾರೆ. ರಾಜಕೀಯ ಪಕ್ಷಗಳಲ್ಲಿ ಕಾರ್ಯಕರ್ತರನ್ನು ಗುರುತಿಸಲು ಇದೊಂದು ಮಾರ್ಗ ಎಂದು ಬಿಂಬಿತವಾಗಿದೆ. ಈಗ ಇದಕ್ಕೆ ಬ್ರೇಕ್‌ ಹಾಕಿದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಇದನ್ನೆಲ್ಲಾ ಗಮನಿಸಿದರೆ ತಾಲ್ಲೂಕು ಪಂಚಾಯಿತಿಗೆ ಶಕ್ತಿ ವರ್ಧಕ ಟಾನಿಕ್‌ ನೀಡಬೇಕು.

ಪಂಚಾಯತ್‌ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ತಾಲ್ಲೂಕು ಪಂಚಾಯಿತಿ ಯೋಜನೇತರ ವೆಚ್ಚಕ್ಕೆ ಕಾರಣವಾಗುತ್ತದೆ. ಅವುಗಳನ್ನು ರದ್ದು ಮಾಡಿ 2 ಹಂತದ ವ್ಯವಸ್ಥೆ ಜಾರಿಗೊಳಿಸುವುದು ಉತ್ತಮ
ಬಸವರಾಜ ರಾಯರೆಡ್ಡಿ, ಶಾಸಕ

ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಈಗ ತಲೆನೋವೇ ಜಾಸ್ತಿ. ಕಷ್ಟಪಟ್ಟು ಗೆದ್ದು ಬಂದರೂ ಕೆಲಸ ಮಾಡಲು ಅನುದಾನ ಸಿಗುವುದಿಲ್ಲ. ಗಣೇಶೋತ್ಸವಕ್ಕೆ, ಕ್ರಿಕೆಟ್‌ ಪಂದ್ಯಾವಳಿಗೆ, ಭಜನೆ ಉತ್ಸವಕ್ಕೆ ಹಣ ಕೊಟ್ಟು ಸಾಕಾಗುತ್ತದೆ.
ಎಸ್‌.ಜಿ.ನಂಜಯ್ಯನಮಠ

ಮೂರು ಹಂತದ ವ್ಯವಸ್ಥೆಗೆ ಹಂಚುವಷ್ಟು ಕೆಲಸಗಳಿಲ್ಲ. ಆದರೆ ತಾಲ್ಲೂಕು ಪಂಚಾಯಿತಿಗಳನ್ನು ಏಕಾಏಕಿ ರದ್ದು ಮಾಡುವುದು ಕಷ್ಟದ ಕೆಲಸ. ಹಲವಾರು ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ಹೇರಿದರೆ 2 ಹಂತದ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬಹುದು. ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ತಕ್ಷಣಕ್ಕೆ ತಾಲ್ಲೂಕು ಪಂಚಾಯಿತಿಗಳಿಗೆ ಇನ್ನಷ್ಟು ಜವಾಬ್ದಾರಿಯನ್ನು ಕೊಡುವುದರ ಬಗ್ಗೆ ಯೋಚಿಸಬೇಕು.
ಪ್ರೊ.ವಿ.ಕೆ.ನಟರಾಜ್‌

ತಾಲ್ಲೂಕು ಪಂಚಾಯಿತಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಅವುಗಳಿಗೆ ಇನ್ನಷ್ಟು ಅಧಿಕಾರ ನೀಡಿ ಇಡೀ ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡಬೇಕು.
ಸುಬ್ರಹ್ಮಣ್ಯ, ತಿ.ನರಸೀಪುರ ತಾಲ್ಲೂಕು ಪಂಚಾಯಿತಿ ಸದಸ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT