ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿಗೆ ಚಿಂತನೆ

Last Updated 27 ಮೇ 2016, 19:50 IST
ಅಕ್ಷರ ಗಾತ್ರ

ಖಾಸಗಿ ಶಾಲೆಗಳ ವಿರುದ್ಧದ ಆರೋಪಗಳ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದ್ದಾರೆ:

*‘ಖಾಸಗಿ ಶಿಕ್ಷಣ ಸಂಸ್ಥೆಗಳು ವೇಶ್ಯಾವಾಟಿಕೆ ಅಡ್ಡೆಗಳಿಗಿಂತ ಕಡೆ’ ಎಂದು ನಿಮ್ಮ ಸಹೋದ್ಯೋಗಿ ಸಚಿವ ಎಚ್‌.ಆಂಜನೇಯ ಅವರು ಹೇಳಿದ್ದು ಸರಿಯೇ?

ಈ ಬಗ್ಗೆ ನಾನು ಸಾರ್ವಜನಿಕವಾಗಿ ಹೇಳಿಕೆ ನೀಡುವುದಿಲ್ಲ. ಆದರೆ, ಸಮಯ ಬಂದಾಗ ಆಂಜನೇಯ ಅವರೊಂದಿಗೆ ಚರ್ಚಿಸುತ್ತೇನೆ.

*ಖಾಸಗಿ ಶಾಲೆಗಳ ಮೇಲೆ ಸರ್ಕಾರದ ನಿಯಂತ್ರಣ ಏನು?
ಖಾಸಗಿ ಶಾಲೆಗಳಿಗೆ ಪರವಾನಗಿ ನೀಡಿದ ಮೇಲೆ ಸರ್ಕಾರದ ನಿಯಂತ್ರಣ ಇದ್ದೇ ಇರುತ್ತದೆ. ಆದರೆ, ಇದನ್ನು ಮತ್ತಷ್ಟು ಬಲಪಡಿಸಲು ಕಾನೂನು ಬಲಪಡಿಸಲಾಗುವುದು.

*ಖಾಸಗಿ ಶಾಲೆಗಳ ಡೊನೇಷನ್‌ ಹಾವಳಿಗೆ ಏನು ಕ್ರಮ?
ಶುಲ್ಕದ ಹೊರತಾಗಿ ಅಭಿವೃದ್ಧಿ ಹೆಸರಿನಲ್ಲಿ ಪೋಷಕರಿಂದ ಡೊನೇಷನ್‌ ಪಡೆಯುವುದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲು ಕಾನೂನು ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ಶಾಲೆಗಳು ಶುಲ್ಕ ಬಿಟ್ಟು ಹೆಚ್ಚುವರಿ ಹಣ ಪಡೆಯಬಾರದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸುತ್ತದೆ. ಆದರೆ, ಇದನ್ನು ಉಲ್ಲಂಘಿಸಿ ಡೊನೇಷನ್‌ ಸ್ವೀಕರಿಸುವವರ ವಿರುದ್ಧ ಈಗ ಕೇವಲ ಸಿವಿಲ್‌ ಕ್ರಮಗಳಿವೆ.

ಇಂತಹ ಪ್ರಕರಣಗಳು ನ್ಯಾಯಾಲಯಗಳಲ್ಲಿ ಪರಿಹಾರವಾಗಲು ದೀರ್ಘಾವಧಿ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಇದನ್ನು ಕ್ರಿಮಿನಲ್‌ ಅಪರಾಧವಾಗಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ಶಿಕ್ಷಕರು, ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳನ್ನು ಕ್ರಿಮಿನಲ್‌ ಅಪರಾಧದ ವ್ಯಾಪ್ತಿಗೆ ತರಲು ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ. ಆಗ ಈ ವಿಷಯವನ್ನೂ ಅಡಕ ಮಾಡಲಾಗುವುದು.

*ಎಸ್‌ಎಸ್‌ಎಲ್‌ಸಿಯಲ್ಲಿ ಶೂನ್ಯ ಫಲಿತಾಂಶದ ಶಾಲೆಗಳ ವಿರುದ್ಧ ಏನು ಕ್ರಮ?
ಕ್ರಮ ತೆಗೆದುಕೊಳ್ಳುವುದರಷ್ಟೇ ಮುಖ್ಯವಾಗಿ ಶೂನ್ಯ ಫಲಿತಾಂಶಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಆಲೋಚಿಸಬೇಕಿದೆ. ಪ್ರತಿ ಶಾಲೆಗೆ ಅಧಿಕಾರಿಗಳ ತಂಡ ತೆರಳಿ ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸುತ್ತದೆ. ಒಂದು ವೇಳೆ ಶಿಕ್ಷಕರಿಂದಲೇ ಲೋಪಗಳು ಆಗಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

*ಆರ್‌.ಟಿ.ಇ. ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೂ ಸಾವಿರಾರು ರೂಪಾಯಿ ಶುಲ್ಕ ವಸೂಲಿ ಮಾಡಲಾಗುತ್ತಿದೆಯಲ್ಲ?
ಈ ಬಗ್ಗೆ ಕೇವಲ ಆರೋಪಗಳಿವೆ. ಪೋಷಕರು ಒಂದು ವೇಳೆ ಹಾಗೇನಾದರೂ ಹಣ ಪಾವತಿಸಿದ್ದಲ್ಲಿ ಸೂಕ್ತ ರಸೀತಿಯೊಂದಿಗೆ ಲಿಖಿತವಾಗಿ ದೂರು ನೀಡಿದರೆ ಅಂತಹ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT