ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪಗೊಂಡನಹಳ್ಳಿ: 25 ಅಡಿ ನೀರು

Last Updated 21 ಆಗಸ್ಟ್ 2014, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನತೆಗೆ ಕುಡಿ­ಯುವ ನೀರು ಪೂರೈಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದ್ದ ತಿಪ್ಪಗೊಂಡ­ನ­­ಹಳ್ಳಿಯ ಚಾಮರಾಜ­ಸಾಗರ ಜಲಾಶ­ಯ­­ದಲ್ಲಿ 25 ಅಡಿ ನೀರು ತುಂಬಿದೆ.

ದೇವನಹಳ್ಳಿ, ದೊಡ್ಡಬಳ್ಳಾಪುರ,  ಮಾಗಡಿ, ನೆಲಮಂಗಲ ಸೇರಿದಂತೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಇತ್ತೀಚೆಗೆ ಉತ್ತಮ ಮಳೆ ಆಗುತ್ತಿರುವುದರಿಂದ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಸಾಮಾನ್ಯವಾಗಿ ತುಂಬಿಕೊ­ಳ್ಳುವುದು ಸೆಪ್ಟೆಂಬರ್‌, ಅಕ್ಟೋಬರ್‌, ನವೆಂಬರ್‌ ತಿಂಗಳಿನಲ್ಲಿ. ಈ ಸಲ ಆಗಸ್ಟ್‌ ತಿಂಗಳ ಮಧ್ಯ ಭಾಗದಲ್ಲಿಯೇ 25 ಅಡಿ ನೀರು ತುಂಬಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15.9 ಅಡಿ ನೀರು ಇತ್ತು.

ಸೆಪ್ಟೆಂಬರ್ ಮಧ್ಯಭಾಗದಲ್ಲಿ 25 ಅಡಿ ನೀರು ಬಂದಿತ್ತು. ಕಳೆದ ವರ್ಷ ನಗರಕ್ಕೆ ನೀರು ಪಂಪ್‌ ಮಾಡಿರಲಿಲ್ಲ. ಅಚ್ಚು­ಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆ ಆಗುವ ನಿರೀಕ್ಷೆಯಿದೆ. ಹೀಗಾಗಿ ನೀರಿನ ಮಟ್ಟ 40 ಅಡಿ ತಲುಪಬಹುದು  ಎಂದು ಜಲ­ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ನೀರಿನ ಮಟ್ಟ ಹೆಚ್ಚಳವಾದ ಕಾರಣ ಜಲಮಂಡಳಿಯ  ಮುಖ್ಯ ಎಂಜಿನಿ­ಯರ್ (ಕಾವೇರಿ) ಎಸ್‌.ಕೃಷ್ಣಪ್ಪ ಜಲಾಶ­ಯಕ್ಕೆ ಭೇಟಿ ನೀಡಿ ನೀರು ಪಂಪ್‌  ಮಾಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಿದ್ದರು. ಈ ಜಲಾಶಯ 1980ರ ವರೆಗೆ ನಗರಕ್ಕೆ ಕುಡಿಯುವ ನೀರು ಪೂರೈಸುವ ಪ್ರಮುಖ ಮೂಲವಾಗಿತ್ತು. ಕಾವೇರಿ ಯೋಜನೆಯ ಅನುಷ್ಠಾನದಿಂದ ಜಲಾಶ­ಯದ ಒತ್ತಡ ಕಡಿಮೆಯಾಯಿತು. ರಾಜಾಜಿನಗರ, ಸುಂಕದಕಟ್ಟೆ, ಪಶ್ಚಿಮ ಕಾರ್ಡ್ ರಸ್ತೆ, ವಿಜಯನಗರ, ಮಹಾ­ಲಕ್ಷ್ಮಿ ಬಡಾವಣೆ ಹಾಗೂ ಸುತ್ತಮು­ತ್ತಲಿನ ಪ್ರದೇಶಗಳ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಈ ಜಲಾಶ­ಯದಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು.

1992ರ ಜೂನ್‌ನಲ್ಲಿ ಜಲಾಶಯ ತುಂಬಿತ್ತು. ಮತ್ತೆ 1998–-99ರಲ್ಲಿ ನೀರಿನ ಮಟ್ಟ 71 ಅಡಿಗೆ ತಲುಪಿತ್ತು. ಕಳೆದ ಏಳು ವರ್ಷಗಳಲ್ಲಿ ನೀರಿನ ಗರಿಷ್ಠ ಮಟ್ಟ 43 ಅಡಿಗಿಂತ ಹೆಚ್ಚು ಆಗಿಲ್ಲ. ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಆದ ಕಾರಣ  2012ರ ಅಕ್ಟೋಬರ್‌ನಲ್ಲಿ ನಗರಕ್ಕೆ ನೀರು ಪೂರೈಕೆ ನಿಲ್ಲಿಸಲಾಗಿತ್ತು.

ನಗರದಿಂದ 30 ಕಿ.ಮೀ. ದೂರದ­ಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯ 74 ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಇಲ್ಲಿ ಮೂರು ಟಿಎಂಸಿ ಅಡಿ ನೀರು ಸಂಗ್ರಹ ಮಾಡ­ಬಹುದು. ಜಲಾಶಯ ಭರ್ತಿ­ಯಾ­ದರೆ ನಗರಕ್ಕೆ ಪ್ರತಿನಿತ್ಯ 135 ದಶಲಕ್ಷ ಲೀಟರ್‌ ನೀರು ಪಂಪ್‌ ಮಾಡಲು ಸಾಧ್ಯವಿದೆ. ಜಲಾಶಯ ಪಕ್ಕದಲ್ಲಿರುವ ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ಧಗೊಳಿಸಿ ತಾವರೆಕೆರೆಗೆ ಪಂಪ್‌ ಮಾಡಲಾಗುತ್ತದೆ. ಅಲ್ಲಿನ ಪಂಪಿಂಗ್‌ ಘಟಕದಲ್ಲಿ ಮತ್ತೆ ಶುದ್ಧ­ಗೊಳಿಸಲಾಗುತ್ತದೆ. ಬಳಿಕ ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಮಂಡಳಿಯ ಅಧಿಕಾರಿಗಳು ವಿವರ ನೀಡುತ್ತಾರೆ.

ಪ್ರಸ್ತುತ ನಗರಕ್ಕೆ ಅಗತ್ಯ ಇರುವ ನೀರನ್ನು 100 ಕಿ.ಮೀ. ದೂರದಿಂದ ಪೂರೈಕೆ ಮಾಡಲಾಗುತ್ತಿದೆ. ಕಾವೇರಿಯ ನಾಲ್ಕು ಹಂತಗಳಿಂದ ನಗರಕ್ಕೆ ಈಗ ಪ್ರತಿ­ನಿತ್ಯ 1300 ದಶಲಕ್ಷ ಲೀಟರ್‌ ನೀರು ಪೂರೈಕೆ ಆಗುತ್ತಿದೆ. ತಿಪ್ಪಗೊಂಡ­ನ­ಹಳ್ಳಿಯಿಂದ ನೀರು ಪೂರೈಕೆಯಾದರೆ ಜಲಮಂಡಳಿಗೆ ವಿದ್ಯುತ್ ವೆಚ್ಚದಲ್ಲಿ ಸ್ವಲ್ಪ ಉಳಿತಾಯ ಆಗುತ್ತದೆ ಎಂದು ಅವರು ತಿಳಿಸುತ್ತಾರೆ.

‘ಜಲಚರಗಳು ಹಾಗೂ ಸುತ್ತಮು­ತ್ತಲಿನ ಜೀವಸಂಕುಲಗಳ ಹಿತದೃಷ್ಟಿ­ಯಿಂದ ಜಲಾಶಯದಲ್ಲಿ ಕನಿಷ್ಠ 10ರಿಂದ 12 ಅಡಿ ನೀರು ಇರಲೇಬೇ­ಕಿದೆ. ಹೀಗಾಗಿ ಇದಕ್ಕಿಂತ ಕೆಳಗಿನ ಮಟ್ಟದ ನೀರನ್ನು ಸರಬರಾಜು ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೂ ಹೂಳು, ಕಲ್ಮಶಗಳನ್ನು ಶುದ್ಧೀಕರಿ­ಸು­ವುದು ಕಷ್ಟವಾಗುತ್ತದೆ’ ಎಂದರು.

‘ಜಲಾಶಯದ ಅಚ್ಚುಕಟ್ಟು ಪ್ರದೇಶ­ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಿಂಡಿ ಅಣೆಕಟ್ಟು ಹಾಗೂ ಕೊಳವೆಬಾವಿಗಳ ಸಂಖ್ಯೆ ಸಾಕಷ್ಟು ಜಾಸ್ತಿ ಆಗಿದೆ. ಕೈಗಾರಿಕೆಗಳೂ ತಲೆ ಎತ್ತಿವೆ. ಇದರಿಂದ ಕಲುಷಿತ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಜೊತೆಗೆ ಜಲಾಶಯವೂ ತುಂಬುತ್ತಿಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

‘ತುರ್ತು ಸಂದರ್ಭದಲ್ಲಿ ನೀರು ಪಂಪ್‌’
‘ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶ­ಯದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಈಗ 25 ಅಡಿ ನೀರು ಇದೆ. ಈಗಲೂ ನಗರಕ್ಕೆ ಪಂಪ್‌ ಮಾಡಲು ಸಾಧ್ಯವಿದೆ’ ಎಂದು ಜಲಮಂಡಳಿಯ  ಮುಖ್ಯ ಎಂಜಿನಿಯರ್ (ಕಾವೇರಿ) ಎಸ್‌.ಕೃಷ್ಣಪ್ಪ ತಿಳಿಸಿದರು.
‘ಕಾವೇರಿ ಯೋಜನೆಯಿಂದ ನಗರಕ್ಕೆ ಅಗತ್ಯ ಇರುವಷ್ಟು ನೀರು ಪೂರೈಕೆ ಆಗುತ್ತಿ­ರುವುದರಿಂದ ಸದ್ಯ ತಿಪ್ಪಗೊಂಡನಹಳ್ಳಿಯ ನೀರು ಪಂಪ್‌ ಮಾಡು­ವು­ದಿಲ್ಲ. ಕಾವೇರಿ ಯೋಜನೆಯ ದುರಸ್ತಿ ಕಾಮಗಾರಿ ಸೇರಿದಂತೆ ತುರ್ತು ಸಂದ­ರ್ಭಗಳಲ್ಲಿ ಇಲ್ಲಿನ ನೀರನ್ನು ಪಂಪ್‌ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT