ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೆಗೂ ದೀಪದ ಪೂಜೆ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೀಪಾವಳಿ ಅಮವಾಸ್ಯೆ ದಿನದಂದು ಲಕ್ಷ್ಮಿ ಮನೆ ಮನೆಗೆ ಬರುತ್ತಾಳೆಂಬುದು ಇಲ್ಲಿನ ನಂಬಿಕೆ. ಆದ್ದರಿಂದಲೇ ರೈತ ಮಹಿಳೆಯರು ಕಾರ್ತಿಕ ಮಾಸದವರೆಗೂ ತಮ್ಮ ತಮ್ಮ ಮನೆಯ ಬಾಗಿಲ ಮುಂದೆ ಸೆಗಣಿ ಹುಂಡೆಗೆ ಹುಚ್ಚೆಳ್ಳು ಹೂವು ಸಿಕ್ಕಿಸಿ ಅದಕ್ಕೆ ದೀಪವಿಟ್ಟು ಹಚ್ಚಿಡುವುದು ಸಾಮಾನ್ಯ. ಬಲಿಪಾಡ್ಯಮಿ ದಿನದಂದು ರೈತರು ತಮ್ಮ ಜಮೀನುಗಳಲ್ಲಿ ವೀಳ್ಯೆದೆಲೆ, ಅಡಿಕೆ, ಬಾಳೆ ಮುಂತಾದವುಗಳನ್ನಿಟ್ಟು ಬಲೀಂದ್ರನನ್ನು ಪೂಜೆ ಮಾಡುವುದೂ ಮಾಮೂಲು.

ಆದರೆ, ಮಂಡ್ಯ ಜಿಲ್ಲೆಯ ಮದ್ದೂರು ಹತ್ತಿರ ಶಿಂಷಾ ನದಿ ಎಡದಂಡೆ ಸಮೀಪವಿರುವ ತೈಲೂರು ಅಕ್ಕಪಕ್ಕದ ಹಳ್ಳಿಗಳಲ್ಲಿ ರೈತ ಮಹಿಳೆಯರು ಮನೆ ಮನೆಯ ಮುಂದೆ ದೀಪ ಹಚ್ಚಿಡುವಂತೆ ಆ ದಿನಗಳಲ್ಲಿ ತಮ್ಮ ಮನೆಯ ಮುಂದಿನ ತಿಪ್ಪೆ ಗುಂಡಿಗಳನ್ನು ಒಪ್ಪ ಮಾಡಿ ಕಸದ ಗುಪ್ಪೆಯ ಬಳಿ ದೀಪವನ್ನು ಹಚ್ಚಿಟ್ಟು ಪೂಜೆ ಮಾಡುತ್ತಾರೆ!

ತಿಪ್ಪೆಯ ಗೊಬ್ಬರ ಭೂಮಿಯ ಫಲವತ್ತತೆಗೆ ಅತಿ ಮುಖ್ಯ. ಗೊಬ್ಬರವಿದ್ದರೆ ಒಳ್ಳೆಯ ಫಸಲು. ಆದ್ದರಿಂದಲೇ ಈ ಭಾಗದಲ್ಲಿ ತಮ್ಮ ಪಾಲಿಗೆ ಗೊಬ್ಬರವೇ ಲಕ್ಷ್ಮಿ ಎಂದು ಭಾವಿಸಿ ತಿಪ್ಪೆಗಳಿಗೆ ಪೂಜೆ ಸಲ್ಲಿಸುತ್ತಾರೆ. ಪೌರಾಣಿಕ, ಧಾರ್ಮಿಕ ಹಿನ್ನೆಲೆಯಲ್ಲಿ ಆಚರಿಸುವ ಈ ಪದ್ಧತಿಯಲ್ಲಿ ವೈಜ್ಞಾನಿಕ ಹಿನ್ನೆಲೆಯೂ ಉಂಟು. ಊರಿನ ಸುತ್ತಮುತ್ತ ಸಮೃದ್ಧವಾಗಿ ಬೆಳೆ ಬೆಳೆದಿರುತ್ತದೆ. ಕಾಡು ಪ್ರಾಣಿಗಳು ಮನೆಯ ಹತ್ತಿರ ಬಾರದಿರಲೆಂದು ದೀಪಗಳನ್ನು ಹಚ್ಚಿಡುವುದು, ಪಟಾಕಿ ಸುಡುವುದು ಆರಂಭವಾಯಿತು. ತಿಪ್ಪೆಗಳಲ್ಲಿರುವ ಗೊಬ್ಬರದ ಹುಳುಗಾಗಿ ಕಾಡು ಹಂದಿಗಳ ಹಾವಳಿ ಇರುತ್ತಿತ್ತು. ಹಾಗಾಗಿ ದೀಪ ಹಚ್ಚಿಡುವ ಪದ್ಧತಿ ಬಂದಿರಬಹುದು.

ಎರಡು ದಶಕಗಳ ಹಿಂದಿನವರೆಗೂ ತಿಪ್ಪೆ ಗುಡ್ಡೆಗಳಲ್ಲಿ ಮಿಂಚುಹುಳುಗಳು ಕಾಣುವಂತೆ ದೀಪಗಳನ್ನು ನೋಡಲು ಸಾಧ್ಯವಿತ್ತು. ರೈತರು ಪ್ರತಿಯೊಬ್ಬರೂ ಪಶುಪಾಲನೆ ಮಾಡುತ್ತಿದ್ದರು, ದನ-ಕರುಗಳಿದ್ದವು. ಪ್ರತೀ ರೈತ ಮನೆಗಳಲ್ಲಿಯೂ ಜಾಗದಲ್ಲಿ ತಿಪ್ಪೆಗಳನ್ನು ಮಾಡಿಕೊಂಡಿದ್ದರು. ಸೆಗಣಿ, ಗಂಜಲ, ಕಸ ಕಡ್ಡಿಗಳನ್ನು ತಿಪ್ಪೆಗೆ ಹಾಕುತ್ತಿದ್ದರು.

ಆ ನೈಸರ್ಗಿಕ ಗೊಬ್ಬರ ತಮ್ಮ ಹೊಲಗಳಿಗೆ ಫಲವತ್ತತೆ ನೀಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪವರ್ ಟಿಲ್ಲರ್, ಟ್ರಾಕ್ಟರ್ ಇಂತಹ ಯಂತ್ರಗಳು ಕೃಷಿಯಲ್ಲಿ ಬಳಕೆಗೆ ಬಂದ ನಂತರ ದನ-ಕರುಗಳನ್ನು ಸಾಕುವುದನ್ನು ಕೈಬಿಟ್ಟಿರುವುದರಿಂದ ಹಳ್ಳಿಗಳಲ್ಲಿ ತಿಪ್ಪೆಗುಡ್ಡೆಗಳೇ ಕಡಿಮೆಯಾಗಿವೆ. ಆದರೂ ದನ-ಕರುಗಳನ್ನಿಟ್ಟಿರುವ ಕೆಲವೇ ರೈತರಲ್ಲಿ ಮಾತ್ರ ತಿಪ್ಪೆಗುಡ್ಡೆಗಳಿವೆ. ಈಗಲೂ ಆ ಭಾಗದಲ್ಲಿ ರೈತ ಮಹಿಳೆಯರು ತಿಪ್ಪೆಗುಡ್ಡೆಗಳಿಗೆ ಪೂಜೆ ಮಾಡುವ ಸಂಪ್ರದಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT