ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೆ ರಹಿತ ಗ್ರಾಮಗಳ ನಿರ್ಮಾಣದ ಕನಸು

ತಿಪ್ಪೆಗುಂಡಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲು ಯೋಜನೆ –ಎಚ್. ಕೆ. ಪಾಟೀಲ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮಗಳ ತಿಪ್ಪೆಗುಂಡಿಗಳಲ್ಲಿ ಸಂಗ್ರಹಿ ಸುವ ಸೆಗಣಿ ಹಾಗೂ ಇತರ ಕೃಷಿ ಸಂಬಂಧಿಸಿದ ತ್ಯಾಜ್ಯಗಳನ್ನು ವೈಜ್ಞಾನಿಕ­ವಾಗಿ ಸಂಸ್ಕರಿಸಿ ಗೊಬ್ಬರ ವನ್ನಾಗಿ ಮಾಡುವ ಹೊಸ ಯೋಜನೆಯನ್ನು ಗ್ರಾಮೀಣಾ­ಭಿ­ವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಾರಿಗೆ ತಂದಿದೆ.

ವಿಧಾನಸೌಧದಲ್ಲಿ ಶುಕ್ರವಾರ ಯೋಜನೆ ಕುರಿತ ವಿವರಗಳನ್ನು ಸುದ್ದಿಗಾರರೊಂದಿಗೆ ಹಂಚಿಕೊಂಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್.ಕೆ. ಪಾಟೀಲ, ‘ಪ್ರಾಯೋಗಿಕವಾಗಿ ಈ ಯೋಜನೆಯನ್ನು ಗದಗ ಜಿಲ್ಲೆಯ ಕಣಕಿನ ಕೊಪ್ಪದ ಸುತ್ತಮುತ್ತಲಿನ 50 ಗ್ರಾಮಗಳು ಮತ್ತು ಕೊಪ್ಪಳ ಜಿಲ್ಲೆಯ ಹಿಟ್ನಾಳ್‌ ವ್ಯಾಪ್ತಿಯ 10 ಗ್ರಾಮಗಳಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ತಾಂತ್ರಿಕ ಮತ್ತು ವೈಜ್ಞಾನಿಕ ಬೆಂಬಲ ನೀಡುತ್ತಿವೆ’ ಎಂದರು.

ಏನಿದು ಯೋಜನೆ?: ‘ಈ ಯೋಜನೆ­ಯಲ್ಲಿ ತಿಪ್ಪೆಗುಂಡಿ ಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ (5 ರಿಂದ 6 ಕೆ.ಜಿ) ಶಿಲೀಂಧ್ರ (ಫಂಗಸ್‌) ಗಳನ್ನು ಹಾಕ­ಲಾಗು­ತ್ತದೆ. 45 ದಿನಗಳ ಒಳಗಾಗಿ ತ್ಯಾಜ್ಯವೆಲ್ಲ ಕೊಳೆತು ಗೊಬ್ಬರ­ವಾಗುತ್ತದೆ. ಚಹ ಪುಡಿಯನ್ನು ಹೋಲುವ ಈ ಗೊಬ್ಬರವು ಸೆಗಣಿ ಗೊಬ್ಬರಕ್ಕಿಂತ ಮೂರು ಪಟ್ಟು ಉತ್ಕೃಷ್ಟವಾದುದು’ ಎಂದರು.

‘ಸಾಮಾನ್ಯವಾಗಿ ತಿಪ್ಪೆಗುಂಡಿಗಳ ತ್ಯಾಜ್ಯ ಗೊಬ್ಬರ ವಾಗಲು 9 ತಿಂಗಳಿನಿಂದ ಒಂದು ವರ್ಷ ಬೇಕು. ತ್ಯಾಜ್ಯವು ಸುದೀರ್ಘ ಸಮಯ ಗುಂಡಿಯಲ್ಲೇ ಇರುವುದು ಪರಿಸರದ ಸ್ವಚ್ಛತೆ, ಜನರ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ, ತ್ಯಾಜ್ಯವನ್ನು ಶೀಘ್ರವಾಗಿ ಸಂಸ್ಕರಿಸಿ ಗೊಬ್ಬರವನ್ನಾಗಿ ಪರಿವರ್ತಿಸಲು ಈ ಯೋಜನೆ ಜಾರಿಗೆ ತರಲಾಗಿದೆ’ ಎಂದು ವಿವರಿಸಿದರು.

‘ಇದು ಹೊಸ ತಂತ್ರಜ್ಞಾನವಲ್ಲ. ಈಗಾಗಲೇ ದೊಡ್ಡ ದೊಡ್ಡ ಫಾರ್ಮ್‌ಗಳಲ್ಲಿ, ಕೃಷಿ ವಿವಿಗಳಲ್ಲಿ ಈ ವಿಧಾನ ಜಾರಿಯಲ್ಲಿದೆ. ರಾಜ್ಯದಲ್ಲಿ ತಿಪ್ಪೆ ಮುಕ್ತ  ಗ್ರಾಮಗಳ ನಿರ್ಮಾಣ ಮಾಡುವ ಸದಾಶಯದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದರು.

‘ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ. ಇದಕ್ಕೆ  ರೂ25 ಕೋಟಿ ಬೇಕು. ಈ ಯೋಜನೆಗೆ ಹಣಕಾಸಿನ ನೆರವು ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು’ ಎಂದರು.

ಗ್ರಾಮಗಳಿಗೆ ನೀರು:  ರಾಜ್ಯದ 53 ಸಾವಿರ ಗ್ರಾಮಗಳ ಪೈಕಿ ಬಹುಪಾಲು ಗ್ರಾಮಗಳಿಗೆ ಅಗತ್ಯಕ್ಕೆ ತಕ್ಕಷ್ಟು ಕುಡಿಯುವ ನೀರು ಸಿಗುತ್ತಿಲ್ಲ. ಈ ಎಲ್ಲ ಗ್ರಾಮಗಳಿಗೆ ನದಿ, ಕೆರೆ ಮೂಲಗಳಿಂದ ಗುಣಮಟ್ಟದ ಕುಡಿಯುವ ನೀರು ಪೂರೈಸಲು ರೂ 45 ಸಾವಿರ ಕೋಟಿ ಬೇಕಾಬ ಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಹಣಕಾಸು ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಇತರ ರಾಜ್ಯದ ಸಚಿವರು ಕೂಡ ಇಂತಹ ಯೋಜನೆಯ ಅಗತ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಅನುದಾನ ಕಡಿತ ಆಗಿಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ರಾಜ್ಯಕ್ಕೆ ಬರಬೇಕಾಗಿದ್ದ ಅನುದಾನವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಇನ್ನೂ ಕಡಿತಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT