ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗೇಟಿಗೆ ಕಾದಿರುವ ಭಾರತ

ಕ್ರಿಕೆಟ್‌: ಇಂದು ಮೂರನೇ ಏಕದಿನ ಪಂದ್ಯ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಸ್ತಿನ ಆಟ ಆಡುವಲ್ಲಿ ಎಡವಿದ್ದ ಭಾರತ ಮಹಿಳಾ ತಂಡ ನ್ಯೂಜಿಲೆಂಡ್‌ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿತ್ತು. ಶುಕ್ರವಾರ ಇದೇ ಅಂಗಳದಲ್ಲಿ ಮೂರನೇ ಸವಾಲು ಎದುರಿಸಲು ಸಜ್ಜಾಗಿದೆ.

ನೇರವಾಗಿ ವಿಶ್ವಕಪ್‌ ಅರ್ಹತೆ ಪಡೆಯುವ ಅವಕಾಶವನ್ನು ಈಗಾಗಲೇ ಕೈಚೆಲ್ಲಿರುವ ಭಾರತ ವನಿತೆಯರ ತಂಡಕ್ಕೆ ಪಾಯಿಂಟ್‌ ಪಡೆದುಕೊಳ್ಳಲು ಇದು ಕೊನೆಯ ಪಂದ್ಯ. ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗ ಗಳಲ್ಲಿ ಕಳಪೆಯಾಗಿ ಆಡಿ ಟೀಕೆಗೆ ಒಳ ಗಾಗಿದ್ದ ಭಾರತ ಈ ಪಂದ್ಯದಲ್ಲಿ ಸುಧಾರಿತ ಆಟ ಆಡಲೇಬೇಕಾದ ಒತ್ತಡದಲ್ಲಿದೆ.

ಮೊದಲನೇ ಪಂದ್ಯದಲ್ಲಿ ಆತಿಥೇಯರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರೂ ಚುರುಕಿನ ಫೀಲ್ಡಿಂಗ್‌ ಹಾಗೂ ಉತ್ತಮ ಸ್ಪಿನ್‌ ದಾಳಿಪಂದ ಗೆಲುವು ಒಲಿಸಿಕೊಂಡಿದ್ದರು.ಆದರೆ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್‌ ಹಾಗೂ ಕ್ಷೇತ್ರರಕ್ಷಣೆ ಮೂರೂ ವಿಭಾಗಗಳಲ್ಲೂ ಭಾರತ ಎಡವಟ್ಟು ಮಾಡಿಕೊಂಡಿದೆ.

‘ಅಲ್ಲಲ್ಲಿ ನಾಲ್ಕು ರನ್‌ ಗಳಿಸಿರುವುದು ಬಿಟ್ಟರೆ ವಿಕೆಟ್‌ಗಳ ನಡುವೆ ಓಡುವುದು ತುಂಬಾ ಕಡಿಮೆಯಾಯಿತು’ ಎಂದು ತಿರುಶ್‌ ಕಾಮಿನಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದರು.ಮೊದಲನೇ ಪಂದ್ಯದಲ್ಲಿ ಮಿಂಚಿದ್ದ ಜೂಲನ್‌ ಗೋಸ್ವಾಮಿ ಬುಧವಾರದ ಪಂದ್ಯದಲ್ಲಿ ಕೇವಲ ಒಂದು ರನ್‌ ಗಳಿಸಿ  ಲೀ ತಹುತು ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಸಿಕ್ಕಿಬಿದ್ದರು.

ಮಿಥಾಲಿ ರಾಜ್‌ ಎರಡೂ ಪಂದ್ಯದಲ್ಲಿ (17, 13) ರನ್‌ ಹೊಳೆ ಹರಿಸುವ ಗೋಜಿಗೆ ಹೋಗಿಲ್ಲ. ಆಲ್‌ರೌಂಡರ್‌ ಹರ್ಮನ್‌ಪ್ರೀತ್‌ ಕೌರ್‌ (7, 31)ದೊಡ್ಡ ಮೊತ್ತ ಗಳಿಸುವಲ್ಲಿ ವೈಫಲ್ಯ ಅನುಭವಿಸಿ ದ್ದಾರೆ. ಆರಂಭಿಕ ಆಟದ ಹೊಣೆ ಹೊತ್ತ ಸ್ಪೃತಿ ಮಂದನಾ (13, 12) ಬ್ಯಾಟ್‌ನಿಂದ ಹೆಚ್ಚು ರನ್‌ ಬರುತ್ತಿಲ್ಲ.

ಮೊದಲ ಪಂದ್ಯದಲ್ಲಿ ವೈಫಲ್ಯ ಹೊಂದಿದ್ದ ವೇದಾ ಕೃಷ್ಣಮೂರ್ತಿ ಅವರ ಬದಲು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದ ತಿರುಶ್‌ ಕಾಮಿನಿ ಎರಡನೇ ಪಂದ್ಯದಲ್ಲಿ ಭಾರತದ ಪರ ಹೆಚ್ಚು ರನ್‌  (61) ಗಳಿಸಿದ್ದರು. ಆದರೆ ಗಾಯ ಗೊಂಡಿರುವ ಅವರು ಮೂರನೇ ಪಂದ್ಯದಲ್ಲಿ ಆಡುವುದು ಅನುಮಾನ.

ಮೊದಲನೇ ಪಂದ್ಯದಲ್ಲಿ ಸ್ನೇಹಾ ರಾಣಾ, ಏಕ್ತಾ ಬಿಸ್ಟ್ ದಾಳಿಗೆ ನಲುಗಿದ್ದ ನ್ಯೂಜಿಲೆಂಡ್‌ ಎರಡನೇ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದೆ. ಇದು ಭಾರತ ತಂಡದ ಪ್ರಮುಖ ತಲೆನೋವಾಗಿದೆ. ಕೊನೆಯ ಹಂತದಲ್ಲಿ ಕ್ಯಾಚ್‌ ಕೈಚೆಲ್ಲಿ ಕೆಟ್ಟ ಕ್ಷೇತ್ರರಕ್ಷಣೆಯಿಂದ ಸೋಲನ್ನು ಎಳೆದುಕೊಂಡ ಭಾರತ ಮೂರನೇ ಪಂದ್ಯದಲ್ಲಿ ಚರುಕಿನ ಆಟ ಆಡುವ ಗುರಿ ಹೊಂದಿದೆ. ಆದರೆ ಇದಕ್ಕೆ ಸಮತೋಲನದ ಆಟದ ಅಗತ್ಯವಿದೆ.

ನ್ಯೂಜಿಲೆಂಡ್‌ ಸವಾಲು: ‘ನಮ್ಮನ್ನು ಸುಲಭವಾಗಿ ಪರಿಗಣಿಸುವಂತಿಲ್ಲ’ ಎಂಬ ದಿಟ್ಟ ಸಂದೇಶ ನೀಡಿರುವ ನ್ಯೂಜಿಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದೆ. ಇದೇ ಉತ್ಸಾಹದಲ್ಲಿ ಮೂರನೇ ಪಂದ್ಯ ಆಡಲು ಸಂಪೂರ್ಣವಾಗಿ ಸಜ್ಜುಗೊಂಡಿದೆ.

ಬ್ಯಾಟಿಂಗ್‌ನಲ್ಲಿ ಪ್ರಬಲವಾಗಿರುವ ಕಿವೀಸ್‌ ಬಳಗಕ್ಕೆ ನಾಯಕಿ ಸೂಸಿ ಬೇಟ್ಸ್‌ ಉತ್ತಮ ಆರಂಭ ದೊರಕಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಎರಡನೇ ಪಂದ್ಯದಲ್ಲಿ ಕೇವಲ 1 ರನ್‌ಗೆ ವಿಕೆಟ್‌ ಒಪ್ಪಿಸಿ ವೈಫಲ್ಯ ಅನುಭವಿಸಿದ್ದರು. ಸೋಫಿ ಡಿವೈನ್‌ (24, 33) ಸ್ಥಿರ ಆಟ ಆಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರು  ಭಾರತದ ಬೌಲರ್‌ಗಳನ್ನು ಕಾಡಬಲ್ಲ ಗುಣ ಹೊಂದಿದ್ದಾರೆ.‌

ಚುರುಕಿನ ಕ್ಷೇತ್ರರಕ್ಷಣೆ ಹಾಗೂ ಆಲ್‌ರೌಂಡರ್‌ ಲೀ ಕ್ಯಾಸ್ಪರೆಕ್‌ ಅವರ ಅನುಭವವುಳ್ಳ ಬೌಲಿಂಗ್‌ ಶೈಲಿ ಇವೆರಡೂ ನ್ಯೂಜಿಲೆಂಡ್‌ ತಂಡದ ಬಲ ಹೆಚ್ಚಿಸಿದೆ. ಆರಂಭಿಕ ಆಟಗಾರ್ತಿಯರು ವೈಫಲ್ಯ ಕಂಡರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ನ್ಯೂಜಿಲೆಂಡ್‌ ತಂಡದ ಮೊತ್ತ ಹಿಗ್ಗಿಸಲು ಕೊಡುಗೆ ನೀಡಲಿದ್ದಾರೆ. ಬೌಲರ್‌ಗಳಾದ ಲೀ ಕ್ಯಾಸ್ಪರೆಕ್‌, ಆ್ಯನ್‌ ಪೀಟರ್ಸನ್‌ ಅಗತ್ಯಬಿದ್ದರೆ ಬ್ಯಾಟ್‌ ಬೀಸಿ ಪಂದ್ಯ ಗೆಲ್ಲಿಸುವ ಶಕ್ತಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT