ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿವೋಲಿ ಅರಣ್ಯದಲ್ಲಿ ಮರಗಳ ಹನನ: ಅಧಿಕಾರಿಗಳ ಮೌನ

Last Updated 3 ಮಾರ್ಚ್ 2016, 9:00 IST
ಅಕ್ಷರ ಗಾತ್ರ

ಖಾನಾಪುರ: ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಬೆಲೆಬಾಳುವ ಮರಗಳು ಧರೆಗೆ ಉರುಳಿದ ಘಟನೆ ತಾಲ್ಲೂಕಿನ ಲೋಂಡಾ ವಲಯದ ತಿವೋಲಿ ಅರಣ್ಯದಲ್ಲಿ ಬೆಳಕಿಗೆ ಬಂದಿದೆ.

ಆಳೆತ್ತರ ಬೆಳೆದು ನಿಂತಿದ್ದ ಮರಗಳು ಧರೆಗುರುಳಿವೆ. ಈ ಮರಗಳನ್ನು ನಂಬಿ ಅರಣ್ಯದಲ್ಲಿ ಸ್ವಚ್ಛಂದ ಬದುಕು ನಡೆಸುತ್ತಿದ್ದ ವನ್ಯಜೀವಿಗಳು, ಪ್ರಾಣಿ, ಪಕ್ಷಿಗಳು ನೆಲೆ ಕಳೆದುಕೊಂಡು, ನಗರದತ್ತ ದಾಳಿ ಇಡುತ್ತಿವೆ.

ತಿವೋಲಿ ಅರಣ್ಯ ಸರ್ವೇ ನಂ.16ರಲ್ಲಿ ಅಂದಾಜು 130 ಎಕರೆ ಪ್ರದೇಶದಲ್ಲಿ ಕೋಟ್ಯಂತರ ಬೆಲೆಬಾಳುವ ಸುಮಾರು 850 ಸಮೃದ್ಧವಾಗಿ ಬೆಳೆದಿದ್ದ ಮರಗಳನ್ನು ಲೂಟಿಕೋರರು ಕಡಿದು ನೆಲಕ್ಕುರುಳಿಸಿದ್ದಾರೆ. ಅರಣ್ಯದ ಆಯ್ದ ಬೀಟೆ, ಹೊನ್ನೆ, ನಂದಿ, ತೇಗ, ನೇರಲ, ಮತ್ತಿ, ಮತ್ತಿ ಮುಂತಾದ ಮರಗಳನ್ನು ಮರಗಳ್ಳರು ಕಳೆದ ಹಲವು ದಿನಗಳಿಂದ ಹಂತ ಹಂತವಾಗಿ ಕಡಿದುಹಾಕಿದ್ದಾರೆ.

ಕಡಿದು ಉರುಳಿಸಿದ ಮರಗಳ ಪೈಕಿ ಶೇ 80ರಷ್ಟು ಮರಗಳನ್ನು ಈಗಾಗಲೇ ಲೂಟಿಕೋರರು ಬೇರೆಡೆ ಸಾಗಿಸಿದ್ದಾರೆ ಎಂಬುದು ಅಂಶ ಅರಣ್ಯ ಇಲಾಖೆಯ ಸಂಚಾರಿ ಮತ್ತು ವಿಚಕ್ಷಕ ದಳದ ಪ್ರಾಥಮಿಕ ತನಿಖೆಯಿಂದ ಹೊರಬಂದಿದೆ. ತಿವೋಲಿ ಭಾಗದಲ್ಲಿ ಮರ­ಗಳನ್ನು ಕಡಿದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳಗಾವಿಯ ಅರಣ್ಯ ಸಂಚಾರಿ ದಳದ ಎಸಿಎಫ್ ಅಶೋಕ ಪಾಟೀಲ ಹಾಗೂ ತಂಡ ಕಳೆದ ಫೆ. 28ರಂದು ನಸುಕಿನ ಜಾವ ಭೇಟಿ ನೀಡಿ­ದಾಗ ಅರಣ್ಯ ಇಲಾಖೆಗೆ ಅಂದಾಜು 3500 ಮರಗಳ ನಾಟುಗಳು ಸಿಕ್ಕಿವೆ. ಘಟನಾಸ್ಥಳದಲ್ಲಿ ಲಭ್ಯವಾದ ಕಡಿದು ಸಾಗಿಸದೇ ಹಾಗೆಯೇ ಬಿಟ್ಟಿದ್ದ ಕಟ್ಟಿಗೆಯ ಮೌಲ್ಯ ಅಂದಾಜು ₹ 5 ಲಕ್ಷ ಎನ್ನ­ಲಾಗಿದೆ. ಈ ಪ್ರದೇಶದಲ್ಲಿ ಮರ ಕಡಿದ ಕಳ್ಳರು ಅವನ್ನು ರಾತ್ರಿಯ ಹೊತ್ತಿನಲ್ಲಿ ಇಟ್ಟಿಗೆ ಭಟ್ಟಿಗಳಿಗೆ ಸರಬ­ರಾಜು ಮಾಡಿದ್ದಾರೆ ಎಂಬ ವಿಷಯ ಪ್ರಾಥ­ಮಿಕ ತನಿಖೆಯಿಂದ ಹೊರಬಂದಿದೆ.

ತಿವೋಲಿ ಅರಣ್ಯದ ಅಪರೂಪದ ಮರಗಳನ್ನು ಕಡಿದುಹಾಕಿದ ಪ್ರಕರಣ­ವನ್ನು ಇಲಾಖೆ ಗಂಭೀರವಾಗಿ ಪರಿಗಣಿ­ಸದಿರುವ ಕಾರಣ ಇದುವರೆಗೂ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗಿದೆ. ಜೊತೆಗೆ ತಾಲ್ಲೂಕಿನವರೇ ಆದ ಅರಣ್ಯ ಇಲಾಖೆಯ ಡಿ.ಎಫ್.ಒ ಬಸವ­ರಾಜ ಪಾಟೀಲ, ಪಕ್ಕದ ತಾಲ್ಲೂಕಿನ­ವರಾದ ಆರ್.ಎಫ್.ಒ ಬಸವರಾಜ ವಾಳದ ಸೇರಿದಂತೆ ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಮರಗಳ್ಳರ ಬೆಂಬಲಕ್ಕೆ ನಿಂತಿದ್ದಾರೆ.

ಹೀಗಾಗಿ ಘಟನೆ ನಡೆದು ನಾಲ್ಕು ದಿನ ಕಳೆದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದಿರುವುದು ಅರಣ್ಯ ಇಲಾ­ಖೆಯ ಕಾರ್ಯವೈಖರಿಯ ಬಗ್ಗೆ ಅನು­ಮಾನ ಹುಟ್ಟಿಸುತ್ತಿದೆ ಎಂಬ ಸಂಶಯವನ್ನು ತಾಲ್ಲೂಕಿನ ಪರಿಸರವಾದಿಗಳು ವ್ಯಕ್ತಪ­ಡಿ­ಸಿದ್ದಾರೆ. ಲೋಂಡಾ ಅರಣ್ಯ ವಲಯದ ತಿವೋಲಿ ಪ್ರದೇಶದಲ್ಲಿ ಬೆಲೆಬಾಳುವ ಮರಗಳನ್ನು ಕಡೆಯಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಘಟನಾ ಸ್ಥಳದ ಪಂಚನಾಮೆ ನಡೆಸಿದ್ದು, ಈ ಪ್ರಕರಣದ ಬಗ್ಗೆ ಲೋಂಡಾ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ದೂರು ದಾಖಲಾಗಿದೆ.

ತನಿಖೆ ಪ್ರಗತಿಯಲ್ಲಿದೆ ಎಂದು ಅರಣ್ಯ ಸಂಚಾರಿ ದಳ ಎಸಿಎಫ್‌ ಅಶೋಕ ಪಾಟೀಲ ತಿವೋಲಿ ಅರಣ್ಯದಲ್ಲಿ ಸಮೃದ್ಧವಾಗಿ ಬೆಳೆದ ಮರಗಳು ಕಳ್ಳರ ಪಾಲಾಗುತ್ತಿವೆ ಎಂಬುದು ಪ್ರಜ್ಞಾವಂತರು ತಲೆ ತಗ್ಗಿಸುವ ಆಘಾತಕಾರಿ ವಿಷಯವಾಗಿದೆ. ತಿವೋ­ಲಿಯ ಕಾಡುನಾಶ ಪ್ರಕರಣ ಅರಣ್ಯ ಇಲಾಖೆಯ ಕಾರ್ಯಕ್ಷಮತೆ­ಯನ್ನು ಪ್ರಶ್ನಿಸುತ್ತಿದ್ದು, ಈ ವಿಷಯದ ಬಗ್ಗೆ ಇಲಾಖೆ ರಾಜಕೀಯ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕಿದೆ. ಹೀಗಾಗದಿದ್ದಲ್ಲಿ ಇಲಾಖೆಯ ವಿರುದ್ಧ ಹೋರಾಟ ಅನಿವಾರ್ಯ ಎಂದು ಪರಿಸರವಾದಿ ಶಿವಶಂಕರ ಕಟ್ಟೀಮನಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT