ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ನೀಡುವ ಮುನ್ನ...

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ನಿಮಗೆ ಅಚ್ಚರಿಯಾಗಬಹುದು. ಆದರೆ, ಇದು ನಿಜ... ಭಾರತ ತಂಡ ಮೊದಲ ಟೆಸ್ಟ್‌ ಆಡಿದ್ದು 1932ರಲ್ಲಿ. ಈಗ ಹಲವು ದಾಖಲೆಗಳು ಭಾರತದ ಹೆಸರಿನಲ್ಲಿವೆ. ಸುನಿಲ್‌ ಗಾವಸ್ಕರ್‌ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಸಚಿನ್‌ ತೆಂಡೂಲ್ಕರ್‌ ವಯಸ್ಸು ಕೇವಲ 14 ವರ್ಷ.

ಟೆಸ್ಟ್‌ಗೆ ಸಚಿನ್ ಪದಾರ್ಪಣೆ ಮಾಡಿದಾಗ ವಿರಾಟ್‌ ಕೊಹ್ಲಿ ಒಂದು ವರ್ಷದ ಮಗು. ಅವರೀಗ ಟೆಸ್ಟ್‌ ತಂಡದ ನಾಯಕ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಷ್ಟೆಲ್ಲಾ ಬದಲಾವಣೆ ಆಗಿದೆ ಅಲ್ಲವೇ? ಆದರೆ, ಇಷ್ಟು ವರ್ಷಗಳಾದರೂ ಅಂಪೈರಿಂಗ್‌ ವಿಷಯದಲ್ಲಿ ಮಾತ್ರ ಭಾರತ ಬದಲಾಗಿಯೇ ಇಲ್ಲ. ಅದಕ್ಕೊಂದು ಉದಾಹರಣೆ ಎಂದರೆ ಐಸಿಸಿ ಎಲೈಟ್‌ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಕಾರ್ಯನಿರ್ವಹಿಸಲು ಇದುವರೆಗೆ  ಭಾರತದಿಂದ ಅರ್ಹತೆ ಪಡೆದವರು ಕೇವಲ ಇಬ್ಬರು.

ಅವರೆಂದರೆ ಎಸ್‌. ವೆಂಕಟರಾಘವನ್ ಹಾಗೂ ಎಸ್‌. ರವಿ. ಇದು ಭಾರತದ ಅಂಪೈರ್‌ಗಳ ದುಸ್ಥಿತಿಯನ್ನು ಬಿಚ್ಚಿಡುತ್ತದೆ. ದಿಗ್ಗಜ ಆಟಗಾರರನ್ನು ನೀಡಿರುವ ಹಾಗೂ ಹಲವು ಟ್ರೋಫಿಗಳನ್ನು ಜಯಿಸಿರುವ ಭಾರತವು ಅಂಪೈರ್‌ಗಳ ವಿಷಯ ಬಂದಾಗ ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ತೀರಾ ಹಿಂದುಳಿದಿದೆ. ಭಾರತದ ಯಾವುದೇ ಅಂಪೈರ್‌ ಇದುವರೆಗೆ ‘ಐಸಿಸಿ ಅತ್ಯುತ್ತಮ ಅಂಪೈರ್’ ಪ್ರಶಸ್ತಿ ಪಡೆದಿಲ್ಲ.

ವೆಂಕಟರಾಘವನ್ (73 ಟೆಸ್ಟ್‌) ಹಾಗೂ ವಿ.ಕೆ. ರಾಮಸ್ವಾಮಿ (26 ಟೆಸ್ಟ್‌) ಹೊರತುಪಡಿಸಿದರೆ ಇನ್ನುಳಿದವರು 20 ಪಂದ್ಯಗಳನ್ನೂ ದಾಟಿಲ್ಲ. ವೆಂಕಟರಾಘವನ್ ಅವರು 1993ರಿಂದ 2004ರವರೆಗೆ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು. ಅವರು ಐಸಿಸಿ ಎಲೈಟ್‌ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದ ಭಾರತದ ಮೊದಲ ಅಂಪೈರ್‌. ಆ ಬಳಿಕ 11 ವರ್ಷ ಯಾರೂ ಇರಲಿಲ್ಲ. ಇತ್ತೀಚೆಗೆ ಎಸ್‌. ರವಿ (8 ಟೆಸ್ಟ್‌) ಅವರಿಗೆ ಅವಕಾಶ ಲಭಿಸಿದೆ. 

ಗುಣಮಟ್ಟದ ಕೊರತೆ
ಹಣದ ಹೊಳೆಯನ್ನೇ ಹರಿಸುತ್ತಿರುವ ಬಿಸಿಸಿಐ, ಅಂಪೈರ್‌ಗಳ ವಿಷಯದಲ್ಲಿ ಸಂಪೂರ್ಣ ಎಡವಿದೆ. ಭಾರತದ ಅಂಪೈರ್‌ಗಳು ಜಾಗತಿಕ ಗುಣಮಟ್ಟವನ್ನು ಹೊಂದಿಲ್ಲ ಎಂಬ ದೂರು ಅನೇಕ ವರ್ಷಗಳಿಂದ ಕೇಳಿಬರುತ್ತಿದೆ. ಕಳೆದ ವರ್ಷ ಅಂಪೈರ್‌ಗಳ ಗುಣಮಟ್ಟ ಪರೀಕ್ಷಿಸಲು ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಹೆಸರಾಂತ ಅಂಪೈರ್‌ ಸೈಮನ್ ಟಫೆಲ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪಾಕಿಸ್ತಾನದಂಥ ದೇಶದಲ್ಲೂ ಅತ್ಯುತ್ತಮ ಅಂಪೈರ್‌ಗಳಿದ್ದಾರೆ. ಅದಕ್ಕೆ ಅಲೀಮ್‌ ದಾರ್ ಅತ್ಯುತ್ತಮ ಉದಾಹರಣೆ. ಅಲೀಮ್‌ ಸತತ ಎರಡು ಬಾರಿ ‘ವರ್ಷದ ಅತ್ಯುತ್ತಮ ಐಸಿಸಿ ಅಂಪೈರ್‌’ ಗೌರವ ಪಡೆದಿದ್ದಾರೆ.  ಕ್ರಿಕೆಟ್‌ ಜಗತ್ತು ಅದ್ಭುತ ಅಂಪೈರ್‌ಗಳನ್ನು ಕಂಡಿದೆ. ಡಿಕಿ ಬರ್ಡ್‌, ಡೇವಿಡ್‌ ಶೆಫರ್ಡ್‌, ಸ್ಟೀವ್ ಬಕ್ನರ್‌, ರೂಡಿ ಕರ್ಜನ್‌,  ಡರಿಲ್‌ ಹಾರ್ಪರ್‌, ಟೋನಿ ಹಿಲ್‌, ಬಿಲಿ ಡಾಕ್ಟ್ರೋವ್‌, ಬಿಲಿ ಬೌಡೆನ್‌ ಅವರಲ್ಲಿ ಪ್ರಮುಖರು.

ಈ ಸಾಲಿನಲ್ಲಿ ನಿಲ್ಲುವ ಭಾರತದ ಏಕೈಕ ಅಂಪೈರ್‌ ವೆಂಕಟರಾಘವನ್. ಅವರು ಆ್ಯಶಸ್‌ ಸರಣಿಯಲ್ಲಿ ಅಂಪೈರಿಂಗ್ ಮಾಡಿದ ಕೀರ್ತಿ ಹೊಂದಿದ್ದಾರೆ. ಅಲ್ಲದೆ, 1996, 1999 ಹಾಗೂ 2003ರ ಏಕದಿನ ವಿಶ್ವಕಪ್‌ಗಳಲ್ಲಿ ಅಂಪೈರ್‌ ಆಗಿದ್ದರು. ಸಂಜಯ್‌ ಹಜಾರೆ, ಕೆ. ಹರಿಹರನ್‌ ಅವರು ಏಕದಿನ ಕ್ರಿಕೆಟ್‌ಗೆ ಸೀಮಿತವಾಗಿದ್ದರು.

ಕರ್ನಾಟಕದ ಕೊಡುಗೆ
ರಾಜ್ಯದ ಎ.ವಿ. ಜಯಪ್ರಕಾಶ್‌ 13 ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿಶೇಷವೆಂದರೆ 1999ರಲ್ಲಿ ನವದೆಹಲಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅನಿಲ್‌ ಕುಂಬ್ಳೆ 10 ವಿಕೆಟ್‌ ಕಬಳಿಸಿ ವಿಶ್ವದಾಖಲೆ ಸರಿಗಟ್ಟಿದಾಗ ಅಂಪೈರ್ ಆಗಿದ್ದವರು ಜಯಪ್ರಕಾಶ್‌.
ಎಂ.ಜಿ. ವಿಜಯಸಾರಥಿ (13 ‍ಪಂದ್ಯ) ಹಾಗೂ ಅವರ ಪುತ್ರ ಎಂ.ವಿ. ನಾಗೇಂದ್ರ (11 ಪಂದ್ಯ) ಕೂಡ ಟೆಸ್ಟ್‌ನಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. 1960ರಲ್ಲಿ ಬೆಂಗಳೂರಿನಲ್ಲಿ ನಡೆದ ಮೈಸೂರು ಹಾಗೂ ಆಂಧ್ರ ನಡುವಿನ ರಣಜಿ ಪಂದ್ಯದಲ್ಲಿ ಇವರಿಬ್ಬರು ಅಂಪೈರ್‌ ಆಗಿದ್ದರು. ಅಪ್ಪ–ಮಗನ ಈ ಸಾಧನೆ ವಿಶೇಷ.

ಶಾವಿರ್‌ ತಾರಾಪೂರ್‌ ಅವರು ಅಂತರರಾಷ್ಟ್ರೀಯ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಇದ್ದವರು. ಎಸ್‌.ಎನ್‌. ಹನುಮಂತರಾವ್‌ (9 ಟೆಸ್ಟ್‌) ಅಂಪೈರ್‌ ಆಗಿದ್ದರು. 1877ರಿಂದ ಸುಮಾರು ಎರಡು ಸಾವಿರ ಟೆಸ್ಟ್‌ ಪಂದ್ಯಗಳು ನಡೆದಿವೆ. ಅದರಲ್ಲಿ ಎರಡು ಪಂದ್ಯ ಮಾತ್ರ ಟೈ ಆಗಿವೆ. ಅದರಲ್ಲಿ ಮದ್ರಾಸ್‌ ಟೆಸ್ಟ್‌ ಕೂಡ ಒಂದು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಆ ಪಂದ್ಯದಲ್ಲಿ ಅಂಪೈರ್‌ ಆಗಿದ್ದವರು ಕರ್ನಾಟಕದ ವಿ. ವಿಕ್ರಮರಾಜು. ಅದೇನೇ ಇರಲಿ, ಆಟದಲ್ಲಿ ಮಿಂಚಿದಂತೆ ಅಂಪೈರಿಂಗ್‌ ಕ್ಷೇತ್ರದಲ್ಲೂ ಭಾರತ ಮಿಂಚಬೇಕು. ಇದು ಕೇವಲ ಅಂಪೈರಿಂಗ್ ವಿಷಯಕ್ಕೆ ಸೀಮಿತವಲ್ಲ. ಮ್ಯಾಚ್‌ ರೆಫರಿಗಳ ವಿಷಯಕ್ಕೆ ಬಂದರೂ ಅಷ್ಟೆ.
ಸದ್ಯ ಜಾವಗಲ್ ಶ್ರೀನಾಥ್‌ ಮಾತ್ರ ಐಸಿಸಿ ಮ್ಯಾಚ್‌ ರೆಫರಿಗಳ ಪಟ್ಟಿಯಲ್ಲಿದ್ದಾರೆ. ಈಗಿನ ತಂತ್ರಜ್ಞಾನವು ಅಂಪೈರ್‌ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಅಂಪೈರ್‌ ತೀರ್ಪು ಪುನರ್‌ಪರಿಶೀಲನಾ ಪದ್ಧತಿ (ಯುಡಿಆರ್‌ಎಸ್‌) ಬಂದ ಬಳಿಕ ಅಂಪೈರ್‌ ಮೇಲಿನ ಒತ್ತಡ ಮತ್ತಷ್ಟು ತಗ್ಗಿದೆ.
*
ಈ ಎಂಜಿನಿಯರ್‌ ಈಗ ಅಂತರರಾಷ್ಟ್ರೀಯ ಅಂಪೈರ್‌...
‘ಕ್ರಿಕೆಟ್ ಆಡುತ್ತಿದ್ದ ದಿನಗಳಿಂದಲೇ ನನಗೆ ಅಂಪೈರ್‌ ವೃತ್ತಿ ಮೇಲೆ ತುಂಬಾ ಆಸಕ್ತಿ. ಐಸಿಸಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಬೇಕೆಂಬ ನನ್ನ ಕನಸು ಈಗ ನನಸಾಗಿದೆ. ನಾನೀಗ ಅಂತರರಾಷ್ಟ್ರೀಯ ದರ್ಜೆಯ ಅಂಪೈರ್‌ ಎಂದು ಹೇಳಿಕೊಳ್ಳಲು ಖುಷಿಯಾಗುತ್ತಿದೆ’ ಈ ರೀತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಸಿ.ಕೆ. ನಂದನ್‌.

ಅಂದಹಾಗೆ, ಕರ್ನಾಟಕದ ನಂದನ್‌ ಅವರೀಗ ಐಸಿಸಿ ಎಮಿರೇಟ್ಸ್‌ ಅಂತರರಾಷ್ಟ್ರೀಯ ಅಂಪೈರ್‌ಗಳ ಪ್ಯಾನೆಲ್‌ಗೆ ನೇಮಕವಾಗಿದ್ದಾರೆ. ಕರ್ನಾಟಕದಿಂದ ಐಸಿಸಿ ಪ್ಯಾನೆಲ್‌ಗೆ ಸ್ಥಾನ ಪಡೆದವರು ಕೆಲವೇ ಮಂದಿ. ಎ.ವಿ. ಜಯಪ್ರಕಾಶ್‌ ಹಾಗೂ ಶಾವಿರ್‌ ತಾರಾಪೂರ್‌ ಬಳಿಕ 51 ವರ್ಷ ವಯಸ್ಸಿನ ನಂದನ್ ಅವರಿಗೆ ಸ್ಥಾನ ಲಭಿಸಿದೆ.

80ರ ದಶಕದಲ್ಲಿ ರಾಜ್ಯ ತಂಡದ ವಿಕೆಟ್‌ ಕೀಪರ್‌ ಆಗಿದ್ದ ನಂದನ್‌, ಐಪಿಎಲ್‌ ಹಾಗೂ ರಣಜಿ ಟೂರ್ನಿಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ನಡೆದ ಕೆಪಿಎಲ್‌ ಟೂರ್ನಿಯಲ್ಲಿ ಅವರು ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದರು.

‘ಇದೊಂದು ಸವಾಲಿನ ಜವಾಬ್ದಾರಿ. ಅಷ್ಟೇ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಎಲ್ಲರೂ ನಮ್ಮತ್ತ ಕಣ್ಣು ನೆಟ್ಟಿರುತ್ತಾರೆ. ದೇಸಿ ಕ್ರಿಕೆಟ್‌ನಲ್ಲಿ ಅಂಪೈರಿಂಗ್‌ ಮಾಡಿದ ಅನುಭವವಿದೆ. ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ನಂದನ್‌. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಅವರು, ಎಚ್‌ಎಎಲ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಕ್ರಿಕೆಟ್‌ನಿಂದ ನಿವೃತ್ತನಾದ ಬಳಿಕ ನನ್ನ ಮುಂದೆ ಎರಡು ಅವಕಾಶಗಳಿದ್ದವು. ಅವುಗಳೆಂದರೆ ಕೋಚ್‌ ಆಗಿ ಕಾರ್ಯನಿರ್ವಹಿಸುವುದು ಹಾಗೂ ಅಂಪೈರಿಂಗ್‌ ಮಾಡುವುದು. ಅದರಲ್ಲಿ ನಾನು ಅಂಪೈರಿಂಗ್‌ ಕೆಲಸ ಆಯ್ಕೆ ಮಾಡಿಕೊಂಡೆ’ ಎಂದು ಹೇಳುತ್ತಾರೆ.

‌ಎಮಿರೇಟ್ಸ್‌ ಅಂತರರಾಷ್ಟ್ರೀಯ ಅಂಪೈರ್‌ಗಳ ಸಮಿತಿಯಲ್ಲೀಗ ನಂದನ ಅಲ್ಲದೆ, ಭಾರತದ ವಿನೀತ್‌ ಕುಲಕರ್ಣಿ, ಅನಿಲ್‌ ಚೌಧರಿ, ಸಿ. ಷಂಶುದ್ದೀನ್‌ ಇದ್ದಾರೆ.
*
ಐಸಿಸಿ ಅಂಪೈರ್‌ಗಳು...
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರಿಂಗ್‌ ಮಾಡುವವರನ್ನು ಎಲೈಟ್‌ ಪ್ಯಾನೆಲ್‌ ಅಂಪೈರ್‌ ಹಾಗೂ ಎಮಿರೇಟ್ಸ್‌ ಅಂತರರಾಷ್ಟ್ರೀಯ ಪ್ಯಾನೆಲ್‌ ಅಂಪೈರ್‌ ಎಂದು ಐಸಿಸಿ ವಿಂಗಡಿಸಿದೆ.

ಎಲೈಟ್‌ ಪ್ಯಾನೆಲ್‌ ಪದ್ಧತಿ ಶುರುವಾಗಿದ್ದೇ 2002ರಲ್ಲಿ. ಇದರಲ್ಲಿ 12 ಅಂಪೈರ್‌ಗಳು ಇದ್ದಾರೆ. ಗುಣಮಟ್ಟದ ಹಾಗೂ ಅನುಭವಿ ಅಂಪೈರ್‌ಗಳಿಗೆ ಮಾತ್ರ ಅವಕಾಶ. ಪ್ರತಿವರ್ಷ ಈ ಪ್ಯಾನೆಲ್‌ ಪರಿಷ್ಕರಣೆಗೆ ಒಳಗಾಗುತ್ತದೆ.

ಭಾರತದ ಪ್ರತಿನಿಧಿಯಾಗಿ ಸದ್ಯ ಎಸ್‌. ರವಿ ಇದ್ದಾರೆ. ಈ ಪ್ಯಾನೆಲ್‌ನಲ್ಲಿರುವ ಅಂಪೈರ್‌ ವರ್ಷಕ್ಕೆ 7–8 ಟೆಸ್ಟ್‌ ಹಾಗೂ 10–15 ಏಕದಿನ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

ಇನ್ನು ಅಂತರರಾಷ್ಟ್ರೀಯ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಕರ್ನಾಟಕದ ಸಿ.ಕೆ. ನಂದನ್ ಸೇರಿದಂತೆ ಭಾರತದ ನಾಲ್ವರು ಇದ್ದಾರೆ. ಈ ಅಂಪೈರ್‌ಗಳಿಗೆ ಟೆಸ್ಟ್‌ನಲ್ಲಿ ಅವಕಾಶ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT