ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಪ್ರಕಟಣೆ ತಡೆಗೆ ‘ಸುಪ್ರೀಂ’ ನಕಾರ

ಜಯಲಲಿತಾ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ
Last Updated 26 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯ­ಲಲಿತಾ ಅವರ ಮೇಲಿನ ಆದಾಯ ಮೀರಿ ಆಸ್ತಿ ಗಳಿ­ಸಿದ ಪ್ರಕರಣದ ತೀರ್ಪು ಪ್ರಕಟಣೆ  ತಡೆ ಹಿಡಿಯುವಂತೆ ಬೆಂಗಳೂರಿನ ವಿಶೇಷ ನ್ಯಾಯಾ­ಲಯಕ್ಕೆ ಸೂಚಿಸ­ಬೇಕೆಂದು ಕೋರಿ ವಕೀಲ­ರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕ­ರಿಸಿತು.

ಜಯಲಲಿತಾ ವಿರುದ್ಧದ ಪ್ರಕರಣ­ದಲ್ಲಿ ವಿಶೇಷ ನ್ಯಾಯಾ­­ಲಯದ ತೀರ್ಪು ಪ್ರಕಟವಾದ ಬಳಿಕ ಕಾನೂನು– ಸುವ್ಯವಸ್ಥೆ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಅದನ್ನು ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಗ­ಬಹುದು ಎಂಬ ವಾದವನ್ನು ನ್ಯಾ. ಟಿ.ಎಸ್‌. ಠಾಕೂರ್‌ ಅವರ ನೇತೃತ್ವದ ನ್ಯಾಯಪೀಠ ತಳ್ಳಿಹಾಕಿತು.

‘ಮುಖ್ಯಮಂತ್ರಿ ಭದ್ರತೆ ಕುರಿತು ನೀವೇಕೆ ಚಿಂತಿಸು­ತ್ತೀರಿ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ನೀವ್ಯಾರು? ಈ ಪ್ರಕರಣದಲ್ಲಿ ನಿಮಗಿರುವ ಸಂಬಂಧ­ವೇನು? ಮುಖ್ಯಮಂತ್ರಿ ಭದ್ರತೆ ಕುರಿತು ರಾಜ್ಯ  ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ನ್ಯಾಯಪೀಠ ಹೇಳಿತು. ‘ಮುಖ್ಯ­ಮಂತ್ರಿಗೆ ಅವರ ಭದ್ರತೆ ಕುರಿತು ಆತಂಕ­ಗಳಿ­ದ್ದರೆ ಅವರೇ ಕೋರ್ಟ್‌ಗೆ ಮನವಿ ಮಾಡಲಿ ಅಥವಾ ತಮಗೆ ಬೆದರಿಕೆ ಇದೆ ಎಂದು ಭಾವಿಸುವವರು ಅರ್ಜಿ ಹಾಕಲಿ’ ಎಂದು ನ್ಯಾಯಪೀಠ ಹೇಳಿತು.’

‘ನಾವು ತಮಿಳುನಾಡು ನಾಗರಿಕರು. ಜಯಲಲಿತಾ ತಮಿಳುನಾಡಿನ ಬಹು ದೊಡ್ಡ ನಾಯಕಿ. ಅವರ ಭದ್ರತೆ ಕುರಿತು ನಮಗೆ ಆತಂಕವಿದೆ. ಹೀಗಾಗಿ ಈ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ಈ ಕಾರಣಕ್ಕೆ ತೀರ್ಪು ಪ್ರಕಟಣೆ ಮುಂದೂಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದರು.

‘ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನದಿ ನೀರಿನ ವಿವಾದ­ಇರುವುದರಿಂದ ಜಯ­ಲಲಿತಾ ಅವರಿಗೆ ಬೆದರಿಕೆ ಇದೆ’ ಎಂದು ಕೃಷ್ಣಮೂರ್ತಿ ಪರ ವಕೀಲರು ವಾದಿಸಿದರು. ಈ ಹಂತದಲ್ಲಿ ನ್ಯಾಯ­ಪೀಠ ‘ಮುಖ್ಯ­ಮಂತ್ರಿಗೆ ಬೆದರಿಕೆ ಏನಾದರೂ ಬಂದಿ­ದೆಯೇ?’ ಎಂದು ಕೇಳಿತು. ‘ಜಯಲಲಿತಾ ಅವರ ಪರ­ವಾಗಿ ಅರ್ಜಿ ಸಲ್ಲಿಸಲು ನೀವ್ಯಾರೂ ಅಲ್ಲ. ಸಮಸ್ಯೆ ಇದ್ದವರು ಬಂದು ಮನವಿ ಮಾಡಲಿ’ ಎಂದು ತಿಳಿಸಿತು.

ಅರ್ಜಿದಾರರ ವಾದವನ್ನು ನ್ಯಾಯಾ­ಲಯ ತಳ್ಳಿಹಾಕಿತು. ನಿಮ್ಮ ಅರ್ಜಿ ವಿಚಾರಣೆಗೆ ಅಂಗೀಕರಿ­ಸಲು ಯಾವ ಕಾರಣಗಳೂ ಇಲ್ಲದಿರುವುದರಿಂದ ವಜಾ ಮಾಡುವುದಾಗಿ ಹೇಳಿತು. ಆದರೆ, ಅರ್ಜಿದಾ­ರರು ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅನುಮತಿ ನೀಡುವಂತೆ ಕೋರಿದರು. ನ್ಯಾಯಾಲಯ ಅದಕ್ಕೆ ಅನುಮತಿ ಕೊಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿತು.

ಜಯಲಲಿತಾ ಮತ್ತು ಅವರ ಗೆಳತಿ ಶಶಿಕಲಾ ಸೇರಿ ನಾಲ್ವರು ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿ­ಸಿದ ಪ್ರಕರಣದಲ್ಲಿ ಹದಿನೆಂಟು ವರ್ಷ ಕಾನೂನು ಹೋರಾಟದ ಬಳಿಕ ಶನಿವಾರ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.

ಜಯಲಲಿತಾ 1991ರಿಂದ 1996­ರವರೆಗೆ ಮೊದಲ ಸಲ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆದಾಯ ಮೀರಿ ₨ 66 ಕೋಟಿ ಮೌಲ್ಯದ ಆಸ್ತಿ ಹೊಂದಿ­ರುವ ಆರೋಪ ಎದುರಿಸುತ್ತಿ­ದ್ದಾರೆ. ಈ ಪ್ರಕರಣ ಅನೇಕ ರಾಜಕೀಯ ಮತ್ತು ಕಾನೂನು ತಿರುವುಗಳನ್ನು ಪಡೆದು­ಕೊಂಡಿದೆ. ಜಯ­ಲಲಿತಾ ಅವರ ಒಂದು ಕಾಲದ ದತ್ತು ಪುತ್ರ ಸುಧಾ­ಕ­ರನ್‌ ಹಾಗೂ ಶಶಿಕಲಾ ಅವರ ಸಂಬಂಧಿ ಇಳವರಸಿ ಈ ಪ್ರಕರಣದ ಉಳಿದ ಇಬ್ಬರು ಆರೋಪಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT