ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಟಿ ಚಲನೆ, ಗ್ರಹಿಕೆಯಿಂದ ಸಾಧನೆ

ಪಿಯು ಫಲಿತಾಂಶ: ವಿದ್ಯಾರ್ಥಿನಿಯ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ
Last Updated 26 ಮೇ 2015, 7:11 IST
ಅಕ್ಷರ ಗಾತ್ರ

ಚಿತ್ರದುರ್ಗ:  ಮಾತು ಬಾರದ, ಕಿವಿ ಕೇಳಿಸದ ವಿದ್ಯಾರ್ಥಿನಿ ಕೇವಲ ತುಟಿಯ ಚಲನೆಯಿಂದಲೇ ಶಿಕ್ಷಕರು ಹೇಳಿದ್ದನ್ನು ಗ್ರಹಿಸಬಲ್ಲ ಅದ್ಭುತ ಶಕ್ತಿ ಹೊಂದಿದ್ದು, ದ್ವಿತೀಯ ಪಿಯುನಲ್ಲಿ ವಿಶಿಷ್ಟ ಸಾಧನೆಗೈದು ಪ್ರತಿಭೆ ಯಾರ ಸ್ವತ್ತಲ್ಲ ಎಂಬುದಕ್ಕೆ ಉದಾಹರಣೆ ಆಗಿದ್ದಾರೆ.

ಯಾವ ವಿಷಯದಲ್ಲೇ ಆಗಲಿ ಆಸಕ್ತಿ, ಶ್ರದ್ಧೆ, ಆತ್ಮವಿಶ್ವಾಸದಿಂದ ಪ್ರಯತ್ನಿಸಿದರೆ, ಖಂಡಿತ ಅದರಲ್ಲಿ ಗುರಿ ಸಾಧಿಸಬಹುದು ಎಂಬುದನ್ನು ಇವರು ಸಾಧಿಸಿ ತೋರಿಸಿದ್ದು, ಇತರರಿಗೂ  ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಪ್ರಸ್ತುತ ದಿನಗಳಲ್ಲಿ ದೇಹದ ಅಂಗವೈಕಲ್ಯತೆ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಇಂಥ ಅದೆಷ್ಟೋ ಪ್ರತಿಭೆ ಗಳಿಂದ ಸಾಬೀತಾಗಿದೆ. ಅಂಥವರಲ್ಲಿ ನಗರದ ಸೇಂಟ್ ಜೋಸೆಫ್ ಬಾಲಕಿಯರ ಪದವಿಪೂರ್ವ ಕಾಲೇಜಿನ ಬಿ.ಜಿ.ರಶ್ಮಿಯೂ ಒಬ್ಬರು.

ಚಿಕ್ಕಂದಿನಿಂದಲೇ ಮಾತು ಬಾರದ, ಕಿವಿಯೂ ಕೇಳಿಸದ ರಶ್ಮಿ ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 537 (ಶೇ 89.5) ಅಂಕಗಳನ್ನು ಗಳಿಸಿ  ಕೆಲ ಸಾಮಾನ್ಯ  ಮಕ್ಕಳನ್ನು  ಹಿಂದಿಕ್ಕಿದ್ದಾರೆ.  ವಿದ್ಯಾರ್ಥಿನಿಗೆ  ನಗರದ ಸೇಂಟ್  ಜೋಸೆಫ್ ಕಾನ್ವೆಂಟ್ ಉಚಿತ ಶಿಕ್ಷಣ ನೀಡಿದೆ. ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ರಶ್ಮಿ ಪಿಯುಗೆ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದರು. ಕೇವಲ ಎರಡು ವರ್ಷ ಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿತ ಈಕೆ ದ್ವಿತೀಯ ಪಿಯುನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಕನ್ನಡ ವಿಷಯದಲ್ಲಿ 80, ಇಂಗ್ಲಿಷ್ 79, ಅರ್ಥಶಾಸ್ತ್ರ 98, ವ್ಯವಹಾರ ಅಧ್ಯಯನ 98, ಲೆಕ್ಕಶಾಸ್ತ್ರ 92 ಹಾಗೂ ಗಣಕಯಂತ್ರ ವಿಜ್ಞಾನದಲ್ಲಿ (ಕಂಪ್ಯೂಟರ್ ಸೈನ್ಸ್) 98 ಅಂಕ ಪಡೆದಿದ್ದಾರೆ. ಮುಂದೆ ಬಿ.ಕಾಂ ಮುಗಿಸಿ ಸಿ.ಎ. ಓದುವ ಆಸೆ ಈ ಬಾಲಕಿಯದು. ತಾಲ್ಲೂಕಿನ ಬೆನಕನಹಳ್ಳಿಯ ಗುರುಮೂರ್ತಿ ಹಾಗೂ ರುದ್ರಮ್ಮ ಎಂಬ ದಂಪತಿಯ ಹಿರಿಯ ಮಗಳಾದ ರಶ್ಮಿಗೆ ಹುಟ್ಟಿನಿಂದಲೇ ಮಾತು ಬರುತ್ತಿರಲಿಲ್ಲ. ಕಿವಿ ಕೇಳಿಸುತ್ತಿರಲಿಲ್ಲ.

ಅದನ್ನು ಗಮನಿಸಿದ ಪೋಷಕರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಹಿತೈಷಿಗಳ ಸಲಹೆಯಂತೆ ಮೈಸೂರಿನ ಮಾನಸಗಂಗೋತ್ರಿ ಬಳಿಯ ಬೋಗಾದಿಯಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಮಗಳಿಗೆ ವಿಶೇಷ ತರಬೇತಿ ಕೊಡಿಸಿದರು. ತಾಯಿ ರುದ್ರಮ್ಮ ತರಬೇತಿ ಶಾಲೆಗೆ ಹೋಗಿ ಮಗಳ ಜತೆ ತಾವೂ ತರಬೇತಿ ಪಡೆದರು.

ನಂತರ ತಮ್ಮ ಸ್ವಗ್ರಾಮ ಬೆನಕನಹಳ್ಳಿಗೆ ಬಂದು ಅಲ್ಲಿನ ಸರ್ಕಾರಿ ಶಾಲೆಗೆ ದಾಖಲಿಸಿದರು. ಎರಡನೇ ತರಗತಿ ಮುಗಿಸಿದ ರಶ್ಮಿಯನ್ನು ಚಿತ್ರದುರ್ಗದ ಶಾಲೆಗೆ ಸೇರಿಸಲು ಮುಂದಾದಾಗ ಯಾವ ಶಾಲೆಯೂ ಪ್ರವೇಶ ನೀಡಲಿಲ್ಲ. ಅಂಥ ಸಂದರ್ಭದಲ್ಲಿ ನಗರದ ಸೃಜನ ಕ್ಲಿನಿಕ್‌ನ ಕಿವಿ, ಮೂಗು ತಜ್ಞ ಡಾ.ಲಕ್ಷ್ಮಣರೆಡ್ಡಿ ಇವರ ನೆರವಿಗೆ ಧಾವಿಸಿದರು. ರಶ್ಮಿಯ ಸ್ಥಿತಿಗತಿಯ ಕುರಿತು ವಿವಿರ ನೀಡಿ ಆಕೆಗೆ ಪ್ರವೇಶ ನೀಡುವಂತೆ ಸೇಂಟ್ ಜೋಸೆಫ್ ಕಾನ್ವೆಂಟ್‌ನ ಆಡಳಿತ ಮಂಡಳಿಗೆ ತಿಳಿ ಹೇಳಿದರು. ಕಾನ್ವೆಂಟ್‌ನಲ್ಲಿ ಪ್ರವೇಶ ಪಡೆದು ಶಿಕ್ಷಣ ಆರಂಭಿಸಿದರು. 

ಕಾಲೇಜಿನ ವಾಣಿಜ್ಯ ವಿಭಾಗದ ಒಟ್ಟು 55 ವಿದ್ಯಾರ್ಥಿನಿಯರಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತರಲ್ಲಿ ರಶ್ಮಿ 6ನೇಯವರು. ವಿಶಿಷ್ಟ ವಿದ್ಯಾರ್ಥಿನಿೀ  ಯಾದ ಇವರು ಕೆಲ ವಿಷಯಗಳಲ್ಲಿ ಶಾಲೆಗೆ ಎರಡನೇ ಸ್ಥಾನ ಪಡೆದಿದ್ದಾರೆ. ವ್ಯವಸಾಯ ನಂಬಿಕೊಂಡು ಬದುಕು ತ್ತಿರುವ ಗುರುಮೂರ್ತಿ, ರುದ್ರಮ್ಮ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಎರಡನೇ ಮಗಳಾದ ಅಂಕಿತ ಪಕ್ಕದ ಸಿದ್ದಾಪುರ ಗ್ರಾಮದ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಇಷ್ಟು ವರ್ಷ ಶ್ರಮಪಟ್ಟು ಮಗಳ ಭವಿಷ್ಯ ರೂಪಿಸಿರುವ ಪೋಷಕರಿಗೂ ರಶ್ಮಿಯ ಚಾರ್ಟೆಡ್ ಅಕೌಂಟೆಂಟ್ ಆಗುವ ಕನಸನ್ನೂ ಪೂರೈಸಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT