ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನತ್ತ ರಿಯಲ್ ಎಸ್ಟೇಟ್‌ ಕುಡಿನೋಟ

Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

‘ಕಲ್ಪತರು ನಾಡಿ’ನ ಹೆಮ್ಮೆಯ ತುಮಕೂರು ಕುರಿತು ರಿಯಲ್‌ ಎಸ್ಟೇಟ್‌ ಉದ್ಯಮಿಗಳಲ್ಲಿ ಸಂಚಲನ ಕಾಣಿಸಿಕೊಂಡಿದೆ. ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಮೂಲಕ ತುಮಕೂರನ್ನು ‘ಸ್ಮಾರ್ಟ್ ಕೈಗಾರಿಕಾ ನಗರ’ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಸಕ್ತ ಹಣಕಾಸು ವರ್ಷದ ಕೇಂದ್ರ  ಮುಂಗಡಪತ್ರದಲ್ಲಿ ಪ್ರಕಟಿಸುತ್ತಿದ್ದಂತೆ ತುಮಕೂರಿನತ್ತ ಎಲ್ಲರ ಕಣ್ಣು ನೆಟ್ಟಿದೆ.

‘ಬೆಂಗಳೂರಿನ ಉಪ ನಗರ’ವಾಗುವ ಕನಸು ಹೊತ್ತಿರುವ ತುಮಕೂರಿಗೆ ಈಗ ‘ಸ್ಮಾರ್ಟ್ ಸಿಟಿ’ ಆಗುವ ಯೋಗಾಯೋಗ ಒಲಿದುಬಂದಿದೆ.
ತುಮಕೂರಿಗೆ ‘ಸ್ಮಾರ್ಟ್ ಸಿಟಿ’ಯ ಯೋಗ ಬರಲು ಅನೇಕ ಕಾರಣಗಳಿವೆ. ಇದು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಹಳ ಹತ್ತಿರವಿದೆ. ರಾಜ್ಯದ 22 ಜಿಲ್ಲೆಗಳಿಗೂ ಹೆಬ್ಬಾಗಿಲು ಎನಿಸಿಕೊಂಡಿದೆ. ಹೀಗಾಗಿ ಇಲ್ಲಿಂದ ಹಾದು ಹೋಗುವವರ ಸಂಖ್ಯೆ ಹೆಚ್ಚು.

ಇದಕ್ಕೂ ಮುಖ್ಯವಾಗಿ ಯಾವುದೇ ಕೈಗಾರಿಕೆಗಳು ಬರಬೇಕಾದರೆ ನೀರು, ರಸ್ತೆ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಪ್ರಮುಖವಾಗಿ ಬಯಸು ತ್ತವೆ. ಮಳೆ ಕಡಿಮೆ ಬೀಳುವುದರಿಂದಾಗಿ ತುಮಕೂರು ‘ಬರ’ದ ನಾಡು ಎನಿಸಿಕೊಂಡಿದ್ದರೂ ಇಲ್ಲಿಗೆ ಹೇಮಾವತಿ ನೀರಿನ ಸಂಪರ್ಕ ಇರುವ ಕಾರಣ ಕೈಗಾರಿಕೆಗಳಿಗೆ ನೀರಿನ ಕೊರತೆ ಕಾಡದು ಎಂಬ ವಿಶ್ವಾಸವೇ ಕೈಗಾರಿಕೆಗಳು ಇತ್ತ ಕುಡಿನೋಟ ಬೀರಲು ಕಾರಣವಾಗಿದೆ.

ಅಲ್ಲದೇ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಂತರವೂ ಇಲ್ಲಿಂದ ಅಷ್ಟೇನು ದೂರ ಇಲ್ಲ. ರೈಲು ಸಂಪರ್ಕ ಜಾಲವನ್ನು ಸುಧಾರಿಸುವಂತಹ ಬಹಳಷ್ಟು ಅವಕಾಶಗಳೂ ಇವೆ. ಈ ಸಕಾರಾತ್ಮಕ ಅಂಶಗಳನ್ನೆಲ್ಲಾ ಮನಗಂಡು ಕೇಂದ್ರ ಸರ್ಕಾರ ಇಲ್ಲಿ ‘ಸ್ಮಾರ್ಟ್ ಸಿಟಿ’ ರೂಪಿಸಲು ಹೊರಟಿದೆ ಎಂಬ ಮಾತುಗಳು ಕೇಳಿಬಂದಿವೆ.

ಈಗಾಗಲೇ ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕಾಗಿ 22 ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಎರಡು–ಮೂರನೇ ಹಂತದಲ್ಲಿ ಇನ್ನು 10 ಸಾವಿರದಿಂದ 12 ಸಾವಿರ ಎಕರೆಗಳಷ್ಟು ಭಾರೀ ವಿಸ್ತಾರದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಅಲ್ಲದೇ 12 ಸಾವಿರ ಎಕರೆಯಲ್ಲಿ ‘ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದಕ ವಲಯ’ (ಎನ್‌ಐಎಂಜೆಡ್‌) ತಲೆ ಎತ್ತುತ್ತಿದೆ. ಕೇಂದ್ರ ಪವರ್ ಗ್ರಿಡ್ ಯೋಜನೆ ಜಾರಿ ಹಂತದಲ್ಲಿದೆ. ಇದರ ಜತೆಗೀಗ ‘ಸ್ಮಾರ್ಟ್ ಸಿಟಿ’ ಘೋಷಣೆಯೂ ಹೊರಬಿದ್ದಿರುವುದು ಈ ಭಾಗದ ರಿಯಲ್ ಎಸ್ಟೇಟ್‌ ಉದ್ಯಮಿಗಳಲ್ಲಿ ಭಾರಿ ಭರವಸೆಯ ಅಲೆಯನ್ನು ಹುಟ್ಟಿಸಿದೆ.

ಬೇಡಿಕೆ, ಬೆಲೆ ಏರಿಕೆ
ಒಂದು ಲೆಕ್ಕದಲ್ಲಿ ತುಮಕೂರು ಯೋಜನಾಬದ್ಧ ವಾದ ನಗರವೇನೂ ಅಲ್ಲ. ಹೀಗಾಗಿ ಸಣ್ಣಮಟ್ಟದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ‘ಸ್ಮಾರ್ಟ್ ಸಿಟಿ’ ರೂಪು ತಳೆದರೆ ನಗರವನ್ನು ಯೋಜನಾಬದ್ಧವಾಗಿ ಕಟ್ಟಬೇಕಾಗುತ್ತದೆ. ಅಲ್ಲದೇ ವಿಶ್ವದರ್ಜೆಯ ಮೂಲ ಸೌಕರ್ಯ ವ್ಯವಸ್ಥೆ ಗಳು ನಿರ್ಮಾಣವಾಗುತ್ತವೆ. ಪರಿಸರ ಸ್ನೇಹಿ ಯೋಜನೆ ಸಹ ಜಾರಿಗೊಳ್ಳುವುದರಿಂದ ಈ ನಗರವನ್ನು ಅರಸಿ ಬರುವವರ ಸಂಖ್ಯೆಯೂ ಹೆಚ್ಚಲಿದೆ. ಜತೆಗೆ ಹೊಸದಾಗಿ ಕೈಗಾರಿಕೆಗಳೂ ಆರಂಭವಾಗುವುದರಿಂದ ಜನರು ವಲಸೆ ಬರುತ್ತಾರೆ. ಹೀಗಾಗಿ ನಿವೇಶನ, ಮನೆಗಳಿಗೆ ಬೇಡಿಕೆ ದುಪ್ಪಟ್ಟು ಆಗಲಿದೆ. ಅದರಿಂದಾಗಿ ಬೆಲೆಯೂ ಏರಿಕೆ ಕಾಣಲಿದೆ ಎಂಬ ಆಶಾಭಾವ ರಿಯಲ್‌ ಎಸ್ಟೇಟ್‌ ಉದ್ಯಮಗಳಲ್ಲಿ ಗರಿಗೆದರಿದೆ.

ತುಮಕೂರು ಸುತ್ತಮುತ್ತ ವಾರ್ಷಿಕ ₨300 ಕೋಟಿ ರಿಯಲ್‌ ಎಸ್ಟೇಟ್‌ ವಹಿವಾಟು ನಡೆಯುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಕೈಗಾರಿಕಾ ಕಾರಿಡಾರ್‌ ಸುತ್ತಮುತ್ತಲ 20 ಕಿಲೋ ಮೀಟರ್‌ ವ್ಯಾಪ್ತಿವರೆಗೂ ಭೂಮಿಯ ಬೆಲೆ ಗಣನೀಯವಾಗಿ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ‘ಸ್ಮಾರ್ಟ್ ಸಿಟಿ’  ಯೋಜನೆ ಘೋಷಣೆ ಆಗುತ್ತಿದ್ದಂತೆಯೇ ಭೂಮಿ ಮಾರಾಟ ವಹಿವಾಟು ಸ್ವಲ್ಪ ಬಿಗಿಯಾಗಿದೆ ಎನ್ನುತ್ತಾರೆ ಅನುಭವಿ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು.

ಕೈಗಾರಿಕಾ ನಗರಿಗಳಂತೆ ಅಪಾರ್ಟ್ ಮೆಂಟ್‌ ಸಂಸ್ಕೃತಿ ಇನ್ನು ಈ ನಗರಕ್ಕೆ ಕಾಲಿಟ್ಟಿಲ್ಲ. ಇದೇ ಮೊದಲ ಸಲ ಒಂದೆರಡು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತು ತ್ತಿವೆ. ಆದರೆ ಇದುವರೆಗೂ ಒಂದೂ ಮನೆ ಮಾರಾಟ ವಾಗಿಲ್ಲ. ಹೊರಗಿನಿಂದ ದೊಡ್ಡದೊಡ್ಡ ರಿಯಲ್‌ ಎಸ್ಟೇಟ್‌ ಉದ್ಯಮಿಗಳೇನೂ ನಗರಕ್ಕೆ ಕಾಲಿಟ್ಟಿಲ್ಲ. ಈಗ ‘ಸ್ಮಾರ್ಟ್‌ ಸಿಟಿ’ ಯೋಜನೆ ಜಾರಿ ಆಗುವುದರೊಂದಿಗೆ ಹೊಸದಾಗಿ ಹೊರಗಿನಿಂದ ದೊಡ್ಡ ಮಟ್ಟದಲ್ಲಿ ಬಂಡ ವಾಳ ಹರಿದುಬರಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸು ತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿ ಚಿದಾನಂದ್.

ಕೈಗಾರಿಕೆಗೆ ಸಾವಿರಾರು ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಭೂಮಿ ಕಳೆದು ಕೊಳ್ಳುವ ರೈತರು ಪರಿಹಾರದ ಹಣವನ್ನು ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇನ್ನು ಎರಡು–ಮೂರು ವರ್ಷಗಳಲ್ಲಿ ಹೆಚ್ಚುವರಿಯಾಗಿ ₨1,000 ಕೋಟಿಗಳಷ್ಟು ದೊಡ್ಡ ಮೊತ್ತ ಹೂಡಿಕೆ ಯಾಗಬಹುದು ಎನ್ನುತ್ತಾರೆ.

ತುಮಕೂರು ಸುತ್ತಮುತ್ತ ಏಳೆಂಟು ಕಿ.ಮೀ ದೂರ ಹೋದರೂ ಒಂದೇ ಕಡೆ  ಹತ್ತಾರು ಎಕರೆ ಭೂಮಿ ಸಿಗುವುದಿಲ್ಲ. ಸಣ್ಣ ಸಣ್ಣ ಹಿಡುವಳಿದಾರರು ಇರುವ ಕಾರಣ ಎಲ್ಲರನ್ನೂ ಒಪ್ಪಿಸಿ ಭೂಮಿ ಕೊಳ್ಳುವುದು ಕಷ್ಟ. ಹೀಗಾಗಿ ನಗರದ ಹೊರ ವಲಯದತ್ತ ರಿಯಲ್‌ ಎಸ್ಟೇಟ್‌ ಉದ್ಯಮ ಮೈಚಾಚಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT