ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ರಂಗ: ಅರಳಿದ್ದು ಕರುಳುಬಳ್ಳಿಗಳು ಮಾತ್ರ

Last Updated 9 ನವೆಂಬರ್ 2014, 10:57 IST
ಅಕ್ಷರ ಗಾತ್ರ

ರಾಜಕೀಯ ರಂಗದಲ್ಲಿ ಯಾವತ್ತು ಏನು ಬೇಕಾದರೂ ಆಗಬಹುದು ಎನ್ನುವ ಮಾತಿಗೆ ಒಳ್ಳೊಳ್ಳೆಯ ಉದಾಹರಣೆಗಳು ಸಿಗು­ವುದು ಚುನಾವಣೆಯ ಕಾವಿನಲ್ಲಿ ಮತ್ತು ಫಲಿ­ತಾಂಶ ಬಂದ ನಂತರದ ಕಾಲದಲ್ಲಿ. ನಿನ್ನೆ ಇಂದು ನಾಳೆಗಳ ಹಂಗಿಲ್ಲದೆ ಯಾರ ತೆಕ್ಕೆಯಲ್ಲಿ ಯಾರು ಇದ್ದಾರೆ, ಯಾಕೆ ಇದ್ದಾರೆ ಎನ್ನುವುದೆಲ್ಲ ನಮ್ಮ ಜನತಂತ್ರದ ಪಂಚತಂತ್ರದ ಕಥೆ. ಆದರೆ ರಾಜಕೀ­ಯದ ಗಣಿತದಲ್ಲಿ ಕೂಡಿ ಕಳೆಯುವು­ದಕ್ಕೂ ಗುಣಿಸಿ ಭಾಗಿಸುವುದಕ್ಕೂ ಅದರದೇ ಬೇರೆ ನಿಯ­ಮ­ಗಳುಂಟು. ಹಾಗಾಗಿ ಚುನಾವಣೆಯ ಪೂರ್ವ ಹೇಗೋ ಉತ್ತರವೂ ಬಹಳ ಕುತೂಹಲಕರ.

ಇವೆಲ್ಲವನ್ನೂ ಮೀರಿ ಲೋಕಸಭೆ, ವಿಧಾನ­ಸಭೆ ಚುನಾವಣೆಗಳಲ್ಲಿ ಕೆಲವೊಂದು ಸಾಂದ­ರ್ಭಿಕ ಅಗತ್ಯಗಳೇ ತದ್ವಿರುದ್ಧ ನೆಲೆಗಳಲ್ಲಿ ಇರುವ ಅನೇಕ ಜನರನ್ನು ಒಂದೇ ವೇದಿಕೆಗೆ ತರುತ್ತವೆ. ಸ್ವಂತ ಬಯಕೆಗಳು ಮತ್ತು ಪಕ್ಷದ ಆಕಾಂಕ್ಷೆಗ­ಳೆಂಬ ಬೇರುಗಳು ಮರೆಯಲ್ಲಿದ್ದರೂ ರಾಜ­ಕೀಯ­– ಸಾಮಾಜಿಕ ಘನೋದ್ದೇಶಗಳು ಮೇಲ್ಪ­ದರ­ದಲ್ಲಿ ಗೋಚರಿಸುತ್ತವೆ ಅಥವಾ ಘೋಷಿತ­ವಾಗುತ್ತವೆ. ‘ತೃತೀಯ ರಂಗ’ ಎಂಬ ರಾಜಕೀಯ ಪರಿಕಲ್ಪನೆ ಮತ್ತು ಪ್ರಕ್ರಿಯೆ ಹುಟ್ಟಿದ್ದೇ ಹೀಗೆ. ನಮ್ಮ ರಾಜಕೀಯ ರಂಗದಲ್ಲಿ ಮತ್ತೆ ಮತ್ತೆ ಹುಟ್ಟುವ ಅದಕ್ಕೆ ಈಗ ಇಪ್ಪತ್ತೈದು ವರ್ಷ!

ರಾಜಕಾರಣದಲ್ಲಿ ಪರ್ಯಾಯದ ಹುಡು­ಕಾಟ­ಗಳು ಇದ್ದೇ ಇರುತ್ತವೆ. ಆದರೆ ರಾಜಕೀಯ ರಂಗದಲ್ಲಿ ಅವು ಮೂರ್ತರೂಪಕ್ಕೆ ಬರಲು ಚುನಾವಣೆ ಎಂಬ ಅಗ್ನಿಪರೀಕ್ಷೆಯನ್ನು ಗೆಲ್ಲ­ಬೇಕು. ಭಾರತದ ಇತಿಹಾಸ ಮತ್ತು ರಾಜಕಾರ­ಣಕ್ಕೆ ತುರ್ತು ಪರಿಸ್ಥಿತಿ ಕೊಟ್ಟ ತಿರುವುಗಳು ಒಂದೆರ­ಡಲ್ಲ; ಪರ್ಯಾಯದ ಹುಡುಕಾಟವೂ ಆಗೊಂದು ಸ್ಪಷ್ಟ ತಿರುವು ಪಡೆಯಿತು. ಚುನಾ­ವಣೆ­ಯಲ್ಲಿ ಕಾಂಗ್ರೆಸ್ ಪಕ್ಷವೂ ಬಲ ಕಳೆದು­ಕೊಳ್ಳ­ಬಹುದು, ಇಂದಿರಾ ಗಾಂಧಿಯೂ ಸೋಲ­ಬಹುದು ಎಂಬುದನ್ನು ಅದು ತೋರಿಸಿತು. ತುರ್ತು ಪರಿಸ್ಥಿತಿ ಹೇರಿಕೆಯಾಗುವ ಮೊದಲಿ­ನಿಂದಲೂ ಇಂದಿರಾ ಗಾಂಧಿ ಆಡಳಿತ ವೈಖರಿ­ಯನ್ನು ವಿರೋಧಿಸಿ ಜಯಪ್ರಕಾಶ್ ನಾರಾ­ಯಣ್ ಬೆಳೆಸುತ್ತಿದ್ದ ನವನಿರ್ಮಾಣ ಚಳವಳಿಯ ಜೊತೆ ಹಲವು ಬಣ್ಣಗಳ ಸಂಘಟನೆಗಳು, ರಾಜ­ಕೀಯ ಪಕ್ಷಗಳು ಗುರುತಿಸಿಕೊಂಡವು ಮತ್ತು ಆ ಮೂಲಕ ರಾಜಕೀಯ ಅಸ್ತಿತ್ವ ರೂಪಿಸಿಕೊಂಡವು ಎನ್ನುವುದು ಈಗ ಇತಿಹಾಸ. ಈ ಜನಾಂದೋಲ­ನದ ಜೊತೆ ಗುರು­ತಿಸಿ­ಕೊಂಡ ಜನ­ಸಂಘ, 1977ರ ಲೋಕ­ಸಭಾ ಚುನಾವಣೆ­ಯಲ್ಲಿ ಹೆಚ್ಚು ಸ್ಥಾನ­ಗ­ಳನ್ನು ಗಳಿಸಿ ರಾಜಕೀಯವಾಗಿ ಹೊಸ ಬಲ ಪಡೆ­ಯಿತು. ಆಗ ಕಾಂಗ್ರೆಸ್ ವಿರೋಧಿ ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸಿ ಒಂದು ಚಿಹ್ನೆಯ ಮೇಲೆ ಚುನಾವಣೆ ಎದುರಿಸಲು ಜೆಪಿ ಮಾಡಿದ ಮಹಾಪ್ರಯೋಗದಲ್ಲಿ ಜನತಾ ಪಕ್ಷ ಉದಯ­ವಾಯಿತು. ಹಲವು ಪಕ್ಷಗಳು ವಿಲೀನ­ಗೊಳ್ಳಲು ಒಪ್ಪಿಕೊಂಡು ಜನತಾ ಪಕ್ಷ ಹುಟ್ಟಿದ್ದ­ರಿಂದ ಅದ­ನ್ನೊಂದು ‘ರಾಜಕೀಯ ರಂಗ’ ಎಂದು ತಾಂತ್ರಿಕ­ವಾಗಿ ಕರೆಯುವುದು ಕಷ್ಟ.

ಜನತಾ ಪಕ್ಷ ಮತ್ತು ಅದರ ಸರ್ಕಾರದ ಪತ­ನದ ನಂತರ ಹುಟ್ಟಿದ ಹೊಸ ರಾಜಕೀಯ ಪಕ್ಷಗ­ಳಲ್ಲಿ, 1980 ರಲ್ಲಿ ಹುಟ್ಟಿದ ಭಾರತೀಯ

ಜನತಾ ಪಕ್ಷಕ್ಕೆ ಮಾತ್ರ ಮತ್ತೊಂದು ರಾಷ್ಟ್ರೀಯ ಪಕ್ಷ­ವಾಗಿ ಬೆಳೆಯುವ ಮಹತ್ವಾಕಾಂಕ್ಷೆ ಇತ್ತು. 1984 ರಲ್ಲಿ ಇಂದಿರಾ ಹತ್ಯೆ ಅನುಕಂಪದ ಅಲೆ ತುಂಬಿದ್ದ ಲೋಕಸಭಾ ಚುನಾವಣೆಯಲ್ಲಿ ಅದು ಅನಿ­ವಾರ್ಯ­­­ವಾಗಿ ಎರಡೇ ಸ್ಥಾನ ಪಡೆದು ಸುಮ್ಮನೆ ಕೂರ­ಬೇಕಾಯಿತು. ಮುಂದೆ 1989ರ ಲೋಕ­ಸಭಾ ಚುನಾವಣೆಯ ಫಲಿತಾಂಶ, ಕಾಂಗ್ರೆಸ್ ಮತ್ತು ಬಿಜೆಪಿ ಎರ­ಡನ್ನೂ ಕಂಗೆಡಿ­ಸಿ­ದರೆ, 143 ಸ್ಥಾನಗಳನ್ನು ಪಡೆ­ದಿದ್ದ ಜನತಾ ದಳ ಸೇರಿ ಮಿಕ್ಕೆಲ್ಲ­ರಲ್ಲಿ ಉಂಟಾದ ಸಂಚಲನ ಸರ್ಕಾರ ರಚನೆಗೆ ಪ್ರೇರೇ­ಪಣೆ ನೀಡಿತು. ಆದ್ದರಿಂದ ಇಪ್ಪತ್ತೈದು ವರ್ಷ­ಗಳ ಹಿಂದೆ, ಅಂದರೆ 1989 ರಲ್ಲಿ ನಡೆದ ‘ತೃತೀಯ ರಂಗ’ದ ಪ್ರಯೋಗವೇ ರಾಜಕೀಯ­ವಾಗಿ ಗಮನಾರ್ಹ.

ಅನಂತರದ ಈ ಇಪ್ಪತ್ತೈದು ವರ್ಷಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಹಲವು ಕುತೂಹಲ­ಕರ ಪ್ರಯೋಗಗಳು ನಡೆದಿವೆ. 1989–91 ಅವ­ಧಿಯ ‘ರಾಷ್ಟ್ರೀಯ ರಂಗ’ದಲ್ಲಿ ವಿ.ಪಿ. ಸಿಂಗ್, ನಂತರ ಚಂದ್ರಶೇಖರ್ ಪ್ರಧಾನಿಗಳಾ­ದರೆ, 1996–98 ರ ಅವಧಿಯಲ್ಲಿ ‘ಸಂಯುಕ್ತ ರಂಗ’ ದಲ್ಲಿ ಎಚ್.ಡಿ. ದೇವೇಗೌಡ, ನಂತರ ಐ.ಕೆ. ಗುಜ್ರಾಲ್ ಪ್ರಧಾನಿಗಳಾಗಿ ಆಡಳಿತ ನಡೆ­ಸಿ­ದರು. ‘ತೃತೀಯ ರಂಗ’ ಸುಮ್ಮನೆ ಇರಲು ಸಾಧ್ಯ­ವಿಲ್ಲವಲ್ಲ. 2008 ರಲ್ಲಿ ಮೊದಲಿನ ಎರಡು ರಂಗಗಳ ಹೆಸರನ್ನೂ ಒಳಗೊಂಡ ’ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ರಂಗ’ ರಚನೆ ಪ್ರಯತ್ನ­ವಾ­ಯಿತು. 2009ರ ಲೋಕಸಭಾ ಚುನಾ­ವಣೆಗೆ ಮುನ್ನ ಬೆಂಗಳೂರು ಸಮೀಪದ ದಾಬಸ್ ಪೇಟೆಯಲ್ಲಿ ನಡೆದ ಬೃಹತ್ ಸಮಾ­ವೇಶ ನೆನಪಿಸಿ­ಕೊಳ್ಳೋಣ. ಆಗ ತೃತೀಯ ರಂಗ ಬೃಹತ್ ಪ್ರಚಾರ ಪಡೆಯಿತು. ಈ 2014ರ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೆ ಮುನ್ನ ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ತೃತೀಯ ರಂಗದ ಸಭೆ ನಡೆದು ಮತ್ತೆ ಜೀವ ಪಡೆಯಿತು.

ಮತ್ತೆ ನಡೆದದ್ದೆಲ್ಲಾ ಗೊತ್ತೇ ಇದೆ. ಲೋಕ­ಸಭೆ ಚುನಾವಣೆ ನಡೆದು ನರೇಂದ್ರ ಮೋದಿ ಅಲೆ­ಯಲ್ಲಿ ದೇಶದ ರಾಜಕಾರಣದ ಚಿತ್ರಣವೇ ಬದ­ಲಾಗಿ­ಬಿಟ್ಟಿದೆ. ಈಗ ತೃತೀಯ ರಂಗ ಏನು ಮಾಡ­ಬೇಕು? 1989 ರಿಂದ 2014 ರ ವರೆಗಿನ ಕಾಲು ಶತಮಾನದಲ್ಲಿ ತೃತೀಯ ರಂಗ ಸಾಧಿಸಿದ್ದು ಏನೇನು? ಸೋತಿದ್ದು ಎಲ್ಲೆಲ್ಲಿ? ಆದರ್ಶ ರಾಷ್ಟ್ರದ ನಿರ್ಮಾಣ ಮತ್ತು ಪ್ರಜೆಗಳ ಸುಖ ಸಮೃದ್ಧಿ ಅಭಿವೃದ್ಧಿಗೆ ಯಾವ್ಯಾವ ಅಂಶಗಳು ಬೇಕೋ ಅವೆಲ್ಲವನ್ನೂ ಮುಂದಿಟ್ಟು, ಅವುಗಳ ಪರ­ವಾಗಿ ತಾನು ದುಡಿಯುವುದಾಗಿ  ತೃತೀಯ ರಂಗ ಹತ್ತಾರು ಬಾರಿ ಘೋಷಿಸಿದೆ. ಅಂಥ ಆಸೆ ಆಕಾಂಕ್ಷೆಗಳು ಇರಬೇಕಾದ್ದೇ ಸರಿ, ಆದರೆ ಹೇಳಿದ್ದೇನು, ಮಾಡಿದ್ದೇನು?

ಇಪ್ಪತ್ತೈದು ವರ್ಷಗಳ ನಂತರ ಹತ್ತಾರು ಪ್ರಶ್ನೆ­ಗಳು ಹುಟ್ಟುವುದು ಸಹಜ ಮತ್ತು ಅನಿ­ವಾರ್ಯ. ತೃತೀಯ ರಂಗ ಎಂಬ ಆನೆಯನ್ನು ಮುಟ್ಟಿ ತಟ್ಟಿ ಕುಟ್ಟಿದರೆ ಹಲವು ಉತ್ತರಗಳು ಉದು­ರ­ಬಹುದು. ಆದರೆ ಇವುಗಳಲ್ಲಿ ಯಾವುದು ಸುಳ್ಳು ಹೇಳಿ !? ಮೊದಲಿಗೆ ತೃತೀಯ ರಂಗ ಎನ್ನುವುದು ಬಾಗಿಲುಗಳಿಲ್ಲದ ಅರಮನೆ­ಯಂತೆ – ಯಾರು ಬೇಕಾದರೂ ಯಾವಾಗ ಬೇಕಾದರೂ ಯಾವ ಬಾಗಿಲಿನಿಂದಾದರೂ ಪ್ರವೇಶಿಸ­ಬಹುದು, ಯಾವ ಬಾಗಿಲಿನಿಂದಾ­ದರೂ ನಿರ್ಗಮಿಸಬ­ಹುದು. ಹಾಗೆ ಬರಲೊಂದು ನೆಪ, ಬರದಿರ­ಲೊಂದು ನೆಪಕ್ಕೆ ಉದಾಹರಣೆ­ಗಳಿಗೆ ಬರ ಇಲ್ಲ. ಹದಿನಾಲ್ಕು ಅಥವಾ ಅದಕ್ಕೂ ಮಿಕ್ಕು ರಾಜಕೀಯ ಪಕ್ಷಗಳು ಅದರಲ್ಲಿದ್ದರೂ ಅವುಗಳನ್ನು ಒಟ್ಟಿಗೆ ಬಂಧಿಸುವ ಸೈದ್ಧಾಂತಿಕ ನಂಟಿನ ಅಂಟು ಅಲ್ಲಿಲ್ಲ. ದಿನನಿತ್ಯ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಆಲೋಚಿ­ಸುವ, ದ್ವೇಷದ ರಾಜ­ಕೀಯ ಮಾಡುವ ಪಕ್ಷಗಳು ತೃತೀಯ ರಂಗದ ವೇದಿಕೆ ಏರಿದೊಡನೆ ಕೈಕೈಹಿಡಿ­ಯು­ತ್ತವೆ. ಸಿದ್ಧಾಂತಗಳ ರಾದ್ಧಾಂತವೇ ಯಾರಿಗೂ ಬೇಕಾಗಿಲ್ಲ.
ಮಾಜಿ, ಭಾವೀ ಪ್ರಧಾನಿಗಳು ಇರುವ ತೃತೀಯ ರಂಗದಲ್ಲಿ ಎಲ್ಲರಿಗೂ ಪ್ರಧಾನಿ ಕುರ್ಚಿ ಇರುವ ಮಧ್ಯರಂಗವೇ ಇಷ್ಟ, ನೇಪಥ್ಯವೆನ್ನು­ವುದು ಎಲ್ಲರಿಗೂ ಅಪಥ್ಯ. ಮತ್ತೆ ದೇವೇಗೌಡ, (ಮೊದಲಿನ) ಲಾಲೂ ಪ್ರಸಾದ್, ಮುಲಾಯಂ ಸಿಂಗ್ ಯಾದವ್, ಕರುಣಾನಿಧಿ, ಜಯಲಲಿತಾ, ಶರದ್ ಯಾದವ್‌, ನಿತೀಶ್ ಕುಮಾರ್ ಇಂಥ ಪ್ರತಿಯೊಬ್ಬರಲ್ಲೂ ಒಬ್ಬ ಪ್ರಧಾನ­ಮಂತ್ರಿ ಇರುವುದು ನಿಜವಾದರೂ ಅಲ್ಲಿ ಇರುವುದು ಒಂದೇ ಹುದ್ದೆ. ಏನು ಮಾಡೋಣ, ಯುದ್ಧ ಮಾಡಲು ಬರೀ ಸೇನಾನಿ­ಗಳಿದ್ದರೆ ಸಾಲದು.
  
ದೇಶಕ್ಕೆ ಸುಭದ್ರ ಸರ್ಕಾರ ಕೊಡುವ ಮಾತ­ನಾ­ಡುವ ತೃತೀಯ ರಂಗದ ಎಲ್ಲರಲ್ಲೂ ಅಭದ್ರತಾ ಭಾ­ವವೇ ಸ್ಥಾಯೀ ಭಾವ. ಮುಂದೆ ಏನಾದರೂ ಸರ್ಕಾರಗಿರ್ಕಾರ ರಚನೆಯಾಗಿ­ಬಿಟ್ಟರೆ ನಮಗೂ ಒಂದು ಪಾಲಿರಲಿ ಎಂದು ಚುನಾವಣೆ ಬರುತ್ತಿ­ದ್ದಂತೆ ತೃತೀಯ ರಂಗದಲ್ಲಿ ಹಲವು ­ಪಕ್ಷಗಳು ಸೀಟು ಹಿಡಿಯುತ್ತವೆ. ಹಳ್ಳಿಯ ಕಡೆ ಬಸ್ ಬಂದು ನಿಂತೊಡನೆ ಜನ ಸೀಟು ಹಿಡಿಯಲು ಕಿಟಕಿಯಿಂದ ಮೊದಲೇ ಟವೆಲ್ ಎಸೆಯುತ್ತಾರಲ್ಲಾ ಹಾಗೆ! ಬೇರೆ ಸಮಯದಲ್ಲಿ ಸಾವಕಾಶವಾಗಿ ದೂರವಿ­ರುವ ಪಕ್ಷಗಳು ಚುನಾ­ವಣೆ ಹತ್ತಿರ ಬಂದೊಡನೆ ಒಂದು ವೇದಿಕೆ ಹತ್ತು­ವುದು ಅವಕಾಶವಾದಿ ರಾಜಕಾರಣವಲ್ಲದೆ ಬೇರೆ ಆಗಿರುವುದಿಲ್ಲ. ಚುನಾ­ವಣೆ ಇಲ್ಲದಿರುವಾಗಲೂ ಒಟ್ಟಿಗೆ ಇರಲು, ಒಟ್ಟಿಗೆ ದುಡಿಯಲು, ತೃತೀಯ ರಂಗವೇನು ಮಲ್ಟಿ­ನ್ಯಾಷನಲ್ ಕಂಪೆನಿ ಅಲ್ಲವಲ್ಲ.

ಇನ್ನು ಕೋಮುವಾದ ಮತ್ತು ಜಾತಿವಾದದ ವಿರುದ್ಧ ಹೋರಾಡುವುದು ಚೀರಾಡುವುದು ಹೇಗಿದ್ದರೂ ಎಡಪಂಥದ ಪಕ್ಷಗಳ ಕೆಲಸ, ನಮ್ಮ ರಾಜ್ಯಗಳಲ್ಲಿ ಅಧಿಕಾರದ ದಾರಿ ಮತ್ತು ಗುರಿ ಮುಟ್ಟಲು ‘ಜಾತಿ ಎಂಬ ಜ್ಯೋತಿಯೇ ನಮಗೆ ಆಧಾರ’ ಎನ್ನುವುದು ತೃತೀಯ ರಂಗದ ಮಿಕ್ಕ ಪಕ್ಷಗಳ ಬಲವಾದ ನಂಬಿಕೆ. ಕೋಮು ಮತ್ತು ಜಾತಿ ಲೆಕ್ಕಾಚಾರ ಇಲ್ಲದೆ ಚುನಾವಣೆ ಮಾಡು­ತ್ತೇವೆ ಎಂದು ಎದೆ ಮೇಲೆ ಕೈ ಇಟ್ಟು­ಕೊಂಡು ಹೇಳಿ ಎಂದು ಅವರನ್ನು ಕೇಳುವವರಿಗೆ ತಲೆ ಇಲ್ಲ. ಅಂದಹಾಗೆ, ಮುಜಫರ್ ನಗರ, ಗೋಧ್ರಾ ಇತ್ಯಾದಿ ನರಮೇಧಗಳ ಬಗ್ಗೆ ಮಾತನಾಡುವ­ವರು ಮತ್ತು ಮೌನವಾಗಿರುವವರು ಇಬ್ಬರೂ ಒಂದೆಡೆ ಶಾಂತಿಯಿಂದ ಇರಬಹುದು ಎನ್ನು­ವುದು ಇಲ್ಲಿ ಮಾತ್ರ ಸಾಧ್ಯ. ತೃತೀಯ ರಂಗದ ಪಕ್ಷಗಳ ಕೆಲವು ನಾಯಕರಿಗಂತೂ ತಮ್ಮ ರಾಜ್ಯಗಳ ರಾಜಕಾರಣಕ್ಕೆ ಜಾತಿ ಸಮೀಕರಣ, ಧ್ರುವೀಕರಣ ಕೊಟ್ಟ ಕೀರ್ತಿ ಮತ್ತು ‘ಇಂಥ ಜಾತಿಯ ಪ್ರಶ್ನಾತೀತ ನಾಯಕ’ ಎಂಬ ಕಿರೀಟ. ಜಾತಿ ಬಿಟ್ಟರೆ ಇವರಲ್ಲಿ ಅನೇಕ ನಾಯಕರಿಗೆ ಬೇರೆ ಐಡೆಂಟಿಟಿಯೇ ಇಲ್ಲ. ಪಬ್ಲಿಕ್ ಸರ್ವೀಸ್ ಕಮಿಷನ್ ಸೇರಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಜಾತಿ ಸಂಘಟಿಸಿ ಅದರ ನೆಲೆ ಬಲಪಡಿಸಿರುವುದೇ ಇವರ ಜನಸೇವೆ.

ಕೋಮುವಾದದ ಹಾಗೆ ಭ್ರಷ್ಟಾಚಾರದ ವಿರು­ದ್ಧವೂ ಹೋರಾಟ ನಡೆಸುವುದಾಗಿ ತೃತೀಯ ರಂಗ ಹೇಳಿದ್ದರೂ ಅದೇನಿದ್ದರೂ ರಾಷ್ಟ್ರಮಟ್ಟದ ಘೋಷಣೆ ಮಾತ್ರ. ಅದರ ಒಂದೊಂದೇ ಪಕ್ಷಗಳ ಮಾಜಿ, ಹಾಲಿ ಮುಖ್ಯಮಂತ್ರಿಗಳು, ಮಂತ್ರಿಗಳು ಮಾಡುತ್ತಿರುವುದು ಅದನ್ನೇ ಎಂಬುದನ್ನು ನ್ಯಾಯಾ­ಲ­ಯಗಳು ಹೇಳುತ್ತಿವೆ. ಹೇಳಿ­ದರೆ ಹೇಳಲಿ, ನಾನು ಸೆರೆಮನೆಯ ಒಳಗೆ ಹೋದರೆ ನನ್ನ ಹೆಂಡತಿ ಅಡಿಗೆ ಮನೆಯಿಂದ ಹೊರಗೆ ಬರು­ತ್ತಾಳೆ ಎಂಬ ಭಂಡನಂಬಿಕೆ ಇನ್ನೂ ಕೆಲವರಿಗಿದೆ.

ಕಾಂಗ್ರೆಸ್ ಪಕ್ಷದ ವಂಶಾಡಳಿತದ ವಿರುದ್ಧ ತೃತೀಯ ರಂಗ ಹಲವಾರು ಬಾರಿ ಮಾತನಾಡಿ­ರುವುದು ಹಲವರಿಗೆ ನೆನಪಿದೆ. ಆದರೆ, ನಮ್ಮ ದೇಶದ ಎಲ್ಲ ಪಕ್ಷಗಳ ಬಹುಪಾಲು ರಾಜಕಾರಣಿ­ಗಳ ಪೈಕಿ ಶೇ. 98 ಮಂದಿಗೆ ಅಧಿಕಾರದ ಹಾಗೆ ಉತ್ತರಾಧಿಕಾರವೂ ಬಹಳ ಮುಖ್ಯ. ಹಾಗಿದ್ದ ಮೇಲೆ ತೃತೀಯ ರಂಗದ ರಾಜಕಾರಣಿಗಳು ಅದನ್ನು ಮರೆಯಲು ಸಾಧ್ಯವಿಲ್ಲ. ಆದ್ದರಿಂದಲೇ ಬಹುಪಾಲು ರಾಜ್ಯಗಳಲ್ಲಿ ರಾಜಕಾರಣಿಗಳ ಎರಡನೇ ಪೀಳಿಗೆ ಆಡಳಿತ ನಡೆಸುತ್ತಿದ್ದರೆ, ಕೆಲವೆಡೆ ಮೂರನೇ ಪೀಳಿಗೆ ಅದಕ್ಕೆ ಸಜ್ಜಾಗುತ್ತಿದೆ. (ಅವರ ಮಾತು ಬಿಡಿ, ಇನ್ನೂ ಉದ್ಧವ್ ಠಾಕ್ರೆಗೇ ಅಧಿ­ಕಾರ ಸಿಕ್ಕಿಲ್ಲ, ಅವರ ಮಗ ಆಗಲೇ ಮಾತ­ನಾಡುತ್ತಿ­ದ್ದಾನೆ.) ಎಷ್ಟಾದರೂ ನಮ್ಮದು ರಾಜ­ಮಹಾ­ರಾಜರ ವಂಶಾಡಳಿತದ ಚರಿತ್ರೆ. ಚರಿತ್ರೆಯ ಕೆಲಸ ಏನಿ­ದ್ದರೂ ಮರುಕಳಿಸುವುದು! ಹೀಗಾಗಿ ಈ ಇಪ್ಪ­ತ್ತೈದು ವರ್ಷಗಳಲ್ಲಿ ತೃತೀಯ ರಂಗದ ಅಂಗಳ­ದಲ್ಲಿ ಹಲವು ಕರುಳುಬಳ್ಳಿಗಳು ಅರಳಿವೆ!

ಹೆಚ್ಚು ಸಂಖ್ಯೆಯ ಪಕ್ಷಗಳು ಕ್ರಿಯಾಶೀಲ­ವಾಗಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಗತ್ಯ ಎನ್ನುವುದನ್ನು ಯಾರೂ ಅಲ್ಲಗಳೆಯು­ವುದಿಲ್ಲ. ಆದರೆ ‘ಅಲ್ಲಿದೆ ನಮ್ಮ ಮನೆ ಇಲ್ಲೂ ಬರುತ್ತೇವೆ ಸುಮ್ಮನೆ’ ಎನ್ನುವುದೇ ತೃತೀಯ ರಂಗದ ಉದ್ದೇಶವಾದರೆ ಬಹಳ ಕಷ್ಟ. ಈ ಬಾರಿ ಚುನಾವಣೆ­ಗಳಲ್ಲಿ ಅನೇಕ ರಾಜ್ಯಗಳಲ್ಲಿ ಹಳೆಯ ಜಾತಿ ಸಮೀಕರಣಗಳು ಸಿಡಿದಿರುವಾಗ ಅಲ್ಲಿನ ನಾಯ­ಕರೂ ಇರುವ ತೃತೀಯ ರಂಗ ಸಮಾಧಿ ಸೇರು­ತ್ತದೋ ಮರು­ಹುಟ್ಟು ಪಡೆ­ಯುತ್ತದೋ
– ಇನ್ನೊಂದು ಚುನಾವಣೆಗೆ ಕಾಯೋಣ!

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT