ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಗ್ಗಿಹಳ್ಳಿಯ ಬಿರಾದಾರ ಎಡಿನ್‌ಬರೊದಲ್ಲಿ ಓಡಿದ ಕಥೆ...

Last Updated 27 ಜುಲೈ 2014, 19:30 IST
ಅಕ್ಷರ ಗಾತ್ರ

ಸ್ಕಾಟ್ಲೆಂಡ್‌ನಲ್ಲಿ ಇದೀಗ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದ ಸುದ್ದಿಗಳ ಮಳೆ      ಸುರಿಯುತ್ತಿದೆ. ಈ ‘ಸುದ್ದಿಗಳ ಮಳೆ’ಯಲ್ಲಿ ಮಿಂದು ಏಳುತ್ತಿರುವ ನನ್ನಲ್ಲಿ 44 ವರ್ಷಗಳ ಹಿಂದೆ ಅಲ್ಲಿಯೇ ನಡೆದಿದ್ದ ಕಾಮನ್‌ವೆಲ್ತ್‌  ಕ್ರೀಡಾಕೂಟದ ನೆನಪುಗಳು ಒತ್ತರಿಸಿ ಬರುತ್ತಿವೆ.  ಆ ಘಟನೆಗಳೆಲ್ಲಾ ಕನಸುಗಳೇನೊ ಎಂದು ಇವತ್ತಿಗೂ ನನಗೆ ಭಾಸವಾಗುತ್ತಿವೆ. ವಿಜಾಪುರದ ಕುಗ್ರಾಮವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅನಕ್ಷರಸ್ಥ ಬಾಲಕನೊಬ್ಬ ಅದೊಂದು ದಿನ ಸ್ಕಾಟ್ಲೆಂಡ್‌ನ ಎಡಿನ್‌ಬರೊದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಓಡಿದ್ದೆಂದರೆ ಅಸಾಮಾನ್ಯ ಸಂಗತಿ ತಾನೆ. ಆದರೆ ನನ್ನ ಬದುಕಲ್ಲಿ ಅದು ನಡೆದು ಹೋಗಿದೆ. ಆ ನೆನಪಿನ ಬುತ್ತಿಯನ್ನು ಹೊತ್ತುಕೊಂಡು ಇವತ್ತಿಗೂ ನಾನು ಸಾರ್ಥಕತೆಯಿಂದ ಉಸಿರಾಡುತ್ತಿದ್ದೇನೆ.

ಎಡಿನ್‌ಬರೊ ನಗರಕ್ಕೆ ಹೋಗಿ ಬಂದ ಕಥೆ ಹೇಳುವುದಕ್ಕೆ ಮುನ್ನ ನಾನು ಓಡಲು ಕಾರಣವಾದ ಸಂಗತಿಗಳನ್ನು ಮೊದಲಿಗೆ ಹೇಳಿ ಬಿಡುತ್ತೇನೆ. ವಿಜಾಪುರದ ಇಂಡಿ ತಾಲ್ಲೂಕಿನ ತೆಗ್ಗಿಹಳ್ಳಿ ನನ್ನ ಹುಟ್ಟೂರು. ನನ್ನದು ಕಡು ಬಡತನದ ಕುಟುಂಬ. ನಾನು ಓರಗೆಯ ಮಕ್ಕಳೊಂದಿಗೆ ಬೀದಿಯಲ್ಲಿ ಆಟವಾಡುವಷ್ಟು ದೊಡ್ಡವನಾಗುತ್ತಿದ್ದಂತೆಯೇ ಅಪ್ಪ ಅಮ್ಮ  ನನ್ನನ್ನು ಶಾಲೆಗೆ ಸೇರಿಸಿದರು. ಎರಡನೇ ತರಗತಿಯವರೆಗೆ ಓದಿದೆ. ಅದೇಕೋ ತಲೆಗೆ ವಿದ್ಯೆ ಹತ್ತಲೇ ಇಲ್ಲ. ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ. ಶ್ರೀಮಂತರ ಹೊಲಗಳಲ್ಲಿ ಜೀತದ ಆಳಾಗಿ ದುಡಿಯತೊಡಗಿದೆ. ಹಾಗೂ ಹೀಗೂ  ಸುಮಾರು ಹದಿನೈದು ವರ್ಷಗಳು ಕಳೆದು ಹೋದವು.

1961ರ ಅದೊಂದು ದಿನ ನಮ್ಮೂರಿನ ಮೇಷ್ಟ್ರೊಬ್ಬರು ನನ್ನನ್ನು ಕರೆದು ‘ಪೊಲೀಸ್‌ ಕೆಲಸಕ್ಕೆ ಸೇರುವಂತೆ ಬಾ’ ಎಂದು ಬೆಳಗಾವಿಗೆ ಕರೆದೊಯ್ದರು. ಅಲ್ಲಿ ಒಂದಷ್ಟು ಓಡುವಂತೆ ಹೇಳಿದರು, ಜಿಗಿಯುವಂತೆ ಹೇಳಿದರು. ಕನ್ನಡ ಅಕ್ಷರಗಳನ್ನು ಬರೆಯಲು ಹೇಳಿದರು.  ನಾನು ಅವರು ಹೇಳಿದಂತೆ ಎಲ್ಲವನ್ನೂ ಮಾಡಿದೆ. ನಾನು ತೇರ್ಗಡೆಯಾದೆ. ಆಗ ನನಗೆ 25 ವರ್ಷ ವಯಸ್ಸು.

ಬೆಳಗಾವಿ ಬಳಿ ಲಾಲ್‌ಕಿಲ್ಲಾ ಎಂಬ ಪ್ರದೇಶವಿದೆ. ಅಲ್ಲಿ ಪೊಲೀಸ್‌ ತರಬೇತಿ ನಡೆಯಿತು. ಅಲ್ಲಿ ತಮಿಳು, ಮರಾಠಿ, ಹಿಂದಿ, ಇಂಗ್ಲಿಷ್‌ ಮಾತನಾಡುವವರೆಲ್ಲಾ ಇದ್ದರು. ನನಗೆ ಈ ಯಾವ ಭಾಷೆಗಳೂ ಬರುತ್ತಿರಲಿಲ್ಲ. ನಾನು ಎಲ್ಲವನ್ನೂ, ಎಲ್ಲರನ್ನೂ ಅಚ್ಚರಿಯಿಂದ ನೋಡುತ್ತಾ ಓಡಾಡಿಕೊಂಡಿದ್ದೆ. ಅಂತಹದ್ದೊಂದು ಕಡೆ ಇರುವ ಅವಕಾಶ ಸಿಕ್ಕಿದ್ದರಿಂದ ನನ್ನ ಜೀವನ ಪಾವನವಾಯಿತು ಎಂದು ಅವತ್ತು ನಂಬಿಕೊಂಡಿದ್ದೆ.

ಆ ತರಬೇತಿ ಶಿಬಿರದಲ್ಲಿ ಕೆಲವರು ಓಟದ ಅಭ್ಯಾಸ ನಡೆಸುತ್ತಿದ್ದರು. ಇನ್ನು ಕೆಲವರು ಜಿಗಿತದ, ಎಸೆತಗಳ ಅಭ್ಯಾಸ ನಡೆಸುತ್ತಿದ್ದರು. ನಾನು ಹೇಗೂ ಹಳ್ಳಿಯಲ್ಲಿ ಜೋಳದ ರೊಟ್ಟಿ ತಿಂದು ಬೆಳೆದವನು ತಾನೆ. ನಾನೂ ಅವರೆಲ್ಲರಿಗಿಂತ ಚೆನ್ನಾಗಿ ಓಡಬಲ್ಲೆ, ಜಿಗಿಯಬಲ್ಲೆ ಎಂದೆನಿಸುತ್ತಿತ್ತು. ನನ್ನ ಮನದಾಳದ ಆಸೆಯನ್ನು ಆಗ ಪೊಲೀಸ್‌ ಅಸಿಸ್ಟೆಂಟ್‌ ಕಮಿಷನರ್‌ ಆಗಿದ್ದ ಲೂಯಿಸ್‌ ಎಂಬುವವರಿಗೆ ಹೇಳಿದೆ. ಅವರು ಜೋರಾಗಿ ನಕ್ಕು ಬಿಟ್ಟರು. ‘ಏನಯ್ಯ, ನಿನಗೆ ನಾಳೆ ನಾಡಿದ್ದು ಕಳೆದರೆ ಸಾಯುವಷ್ಟು ವಯಸ್ಸಾಗಿ ಬಿಡುತ್ತದೆ. ನೀನು ಓಡುವುದಾದರೂ ಎಲ್ಲಿಗೆ...’ ಎಂದು ಬಿಟ್ಟರು. ನಾನೂ ಸುಮ್ಮನಾಗಿ ಬಿಟ್ಟೆ. ಪೊಲೀಸ್‌ ತರಬೇತಿಯ ನಂತರ ದಿನಗಳು ಉರುಳತೊಡಗಿದವು.

“ಕೆಂಪು ಬಸ್ಸಿನಲ್ಲಿ ಹತ್ತು ಕಿ.ಮೀ. ಪ್ರಯಾಣಿಸುವುದನ್ನೇ ಹೆಮ್ಮೆ ಎಂದುಕೊಂಡಿದ್ದವ ನಾನು. ದೂರದ ಬೆಂಗಳೂರು ನನಗೆ ಲಂಡನ್‌ನಂತೆ ಸ್ವಪ್ನನಗರಿಯಾಗಿತ್ತು. ವಿಜಾಪುರದ ಕುಗ್ರಾಮದಿಂದ ಬೆಂಗಳೂರು ತಲುಪಿದೆ. ನನ್ನ ಬಾಳ ಪಯಣದಲ್ಲಿ ವಿಮಾನವನ್ನೂ ಏರಿದೆ. ಇಡೀ ದೇಶವನ್ನು ಸುತ್ತಿದೆ. ಯೂರೋಪ್‌ನಲ್ಲಿ ತಿರುಗಾಟ ನಡೆಸಿದೆ.  ಕೇವಲ ಎರಡನೇ ತರಗತಿವರೆಗೆ ಓದಿದ ನನಗೆ ರೈಲ್ವೆ ಇಲಾಖೆ ಒಳ್ಳೆಯ ಉದ್ಯೋಗ ನೀಡಿತು. ಎಳವೆಯಲ್ಲಿ ಯಾರದೋ ಹೊಲಗದ್ದೆಗಳಲ್ಲಿ ಹತ್ತು ವರ್ಷಗಳ ಕಾಲ ಕೂಲಿಯಾಗಿ ದುಡಿದಿದ್ದ ನನ್ನಂತಹವನಿಗೆ ಇನ್ನೇನು ಬೇಕು. ನನ್ನ ಪಾಡಿಗೆ ನಾನು ಸಂತೃಪ್ತಿಯಿಂದ ಬದುಕುತ್ತಿದ್ದೇನೆ.
–ವೈ.ಡಿ. ಬಿರಾದಾರ

ಅದೊಂದು ದಿನ ಬೆಳಗಾವಿ ಜಿಲ್ಲಾ ಮಟ್ಟದ ಪೊಲೀಸ್‌ ಕ್ರೀಡಾಕೂಟವೊಂದು ನಡೆಯಿತು. ಅಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ನಾನು ಸುಮ್ಮನೆ ಒಂದು ಕಡೆ ನಿಂತಿದ್ದಾಗ 1,500 ಮೀಟರ್ಸ್‌ ದೂರ ಓಡುವವರಿದ್ದರೆ ಬನ್ನಿ ಎಂದು ಎನೌನ್ಸ್‌ ಮಾಡಿದ್ದು ಕೇಳಿಸಿತು. ಆ ಓಟದ ಆರಂಭದ ಜಾಗದಲ್ಲಿ ಹೋಗಿ ನಿಂತುಕೊಂಡೆ. ಯಾವುದೇ ಸಿದ್ಧತೆಯೂ ಇರಲಿಲ್ಲ. ಎಲ್ಲರೂ ನನ್ನನ್ನು ವಿಚಿತ್ರವಾಗಿ ನೋಡಿದರು. ನಾನು ಓಡಿ ಗುರಿ ಮುಟ್ಟಿದೆ. ವಿಶೇಷವೆಂದರೆ ಆ ಸ್ಪರ್ಧೆಯಲ್ಲಿ ನಾನು ಗೆದ್ದು ಬಿಟ್ಟಿದ್ದೆ. ನನಗೇ ಅಚ್ಚರಿಯಾಗಿತ್ತು. ನಂತರ ರಾಜ್ಯಮಟ್ಟದ ಪೊಲೀಸ್‌ ಕ್ರೀಡಾಕೂಟ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರಿಗೆ ಓಡಲು ತೆರಳಿದೆ. ಅಲ್ಲಿ ಯಾರೋ ಒಬ್ಬರು ‘ಸಾವಿರ ಮೀಟರು ಓಡುತ್ತಿಯಲ್ಲಾ. ಹಾಗಿದ್ದರೆ ಮ್ಯಾರಥಾನ್‌ ಸ್ಪರ್ಧೆ ಇದೆ. ಗುಂಡಿಗೆ ಇದ್ರೆ ಓಡು. ಅಲ್ಲಿ ಸ್ಪರ್ಧಿಗಳೇ ಕಡಿಮೆ’ ಎಂದರು. ನನಗೋ ಓಡುವ ಹುಚ್ಚು. ಕಂಠೀರವ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿಂದಲೇ ಮ್ಯಾರಥಾನ್‌ ಓಟ ಶುರುವಾಯಿತು. ಅಲ್ಲಿಂದ ಹೊಸೂರುವರೆಗೆ ಓಡಿ ಅದೇ ದಾರಿಯಲ್ಲಿ ವಾಪಸು ಕಂಠೀರವ ಕ್ರೀಡಾಂಗಣ ತಲುಪಿದ್ದೆ. ರಂಗಯ್ಯ ಎಂಬುವವರು ಮೊದಲ ಸ್ಥಾನ ಪಡೆದಿದ್ದರೆಂದು ನೆನಪಿದೆ. ನಾನು ಎರಡನೇ ಸ್ಥಾನ ಪಡೆದಿದ್ದೆ!

ಜೈಪುರದಲ್ಲಿ ಅಖಿಲ ಭಾರತ ಪೊಲೀಸ್‌ ಕ್ರೀಡಾಕೂಟದಲ್ಲಿ ಆಗಿನ ‘ಮೈಸೂರು’ ರಾಜ್ಯವನ್ನು ಪ್ರತಿನಿಧಿ ಸಿದ್ದೆ. ಕಂಚಿನ ಪದಕ ಗೆದ್ದೆ. 1964ರಲ್ಲಿ ಅಜ್ಮೀರ್‌ನಲ್ಲಿ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ನಡೆದಿತ್ತು. ಇಡೀ ದೇಶದ ಪೊಲೀಸ್‌ ತಂಡವನ್ನು ನಾನು ಪ್ರತಿನಿಧಿಸಿದ್ದೆ. ಅಲ್ಲಿ ನಡೆದ ಮ್ಯಾರಥಾನ್‌ ಓಟದಲ್ಲಿ ಚಿನ್ನದ ಪದಕ ಗೆದ್ದೆ. ಆ ಪ್ರಶಸ್ತಿಯನ್ನು ಸತತ ನಾಲ್ಕು ವರ್ಷಗಳ ಕಾಲ ನಾನು ಉಳಿಸಿಕೊಂಡಿದ್ದೆ.

ಮ್ಯಾರಥಾನ್‌ ಓಟಕ್ಕೆ ಸಂಬಂಧಿಸಿದಂತೆ ಅಥ್ಲೆಟಿಕ್ಸ್‌ ರಂಗದ ರಾಷ್ಟ್ರೀಯ ಮಟ್ಟದಲ್ಲಿ ನನ್ನ ಹೆಸರು ಎಲ್ಲರಿಗೂ ಪರಿಚಿತವಾಗಿತ್ತು. 1970ರಲ್ಲಿ ಸ್ಕಾಟ್ಲೆಂಡ್‌ನ ಎಡಿನ್‌ಬರೊ ನಗರದಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯುವು ದಿತ್ತು. ಆಯ್ಕೆ ಟ್ರಯಲ್ಸ್‌ನಲ್ಲಿಯೂ ನಾನೇ ಮುಂದಿದ್ದೆ. ಎಡಿನ್‌ಬರೊ ನಗರಕ್ಕೆ ಭಾರತದ ಅಥ್ಲೆಟಿಕ್‌ ತಂಡ ಹೊರಟು ನಿಂತಾಗ ಮ್ಯಾರಥಾನ್‌ ಓಟಗಾರನಾಗಿ ನಾನೂ ಎಲ್ಲರ ಜತೆಗೆ ವಿಮಾನ ಏರಿದ್ದೆ.

ಎಡಿನ್‌ಬರೊ ನನಗೆ ಸುಂದರ ಸ್ವಪ್ನದಂತೆ. ಮೋಹಕ ನಗರ ಅದು. ಅಲ್ಲಿನ ಮಿಡೊ ಬ್ಯಾಂಕ್‌ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆದಿದ್ದವು. ಮ್ಯಾರಥಾನ್‌ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಈಗಿನಂತೆ ಆಗ ಆಫ್ರಿಕಾ ಖಂಡದ ಓಟಗಾರರ ಪೈಪೋಟಿ ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಆದರೆ ನನಗೆ ಅಂತರರಾಷ್ಟ್ರೀಯ ಕೂಟದಲ್ಲಿ ಓಡಿದ ಮೊದಲ ಅನುಭವ ಅದಾಗಿತ್ತು. ನನ್ನ ಶಕ್ತಿ ಮೀರಿ ಓಡಿದ್ದೆ. ಇಂಗ್ಲೆಂಡ್‌ನ ರಾನ್‌ಹಿಲ್‌ 2ಗಂಟೆ 9 ನಿಮಿಷ ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಸ್ಕಾಟ್ಲೆಂಡ್‌ನ ಜಿಮ್‌ ಆಲ್ಡರ್‌ ಮತ್ತು ಇಂಗ್ಲೆಂಡ್‌ನ ಡಾನ್‌ಫೇರ್‌ಕ್ಲಾತ್‌ ಕ್ರಮವಾಗಿ ರಜತ ಮತ್ತು ಕಂಚಿನ ಪದಕಗಳನ್ನು ಗೆದ್ದು ಕೊಂಡರು. ನಾನು ಏಳನೇಯವನಾಗಿ ಗುರಿ ತಲುಪಿದ್ದೆ. ಆ ಸಲ ಭಾರತದ ಅಥ್ಲೆಟಿಕ್ಸ್‌ ತಂಡದ ಮೊಹಿಂದರ್‌ ಸಿಂಗ್‌ ಗಿಲ್‌ ಟ್ರಿಪಲ್‌ ಜಂಪ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದರು. ಮಹಿಳಾ ಅಥ್ಲೀಟ್‌ಗಳಿಗೆ ಯಾವುದೇ ಪದಕ ಬರಲಿಲ್ಲ. ಭಾರತದ ಅಥ್ಲೀಟ್‌ಗಳು ಗಳಿಸಿದ ಏಕೈಕ ಪದಕ ಅದು.

ನಾನು ಎಡಿನ್‌ಬರೊಗೆ ಹೊರಟು ನಿಂತಾಗ ನನಗೆ ಪೊಲೀಸ್‌ ಇಲಾಖೆ ಹೆಡ್‌ಕಾನ್‌ಸ್ಟೆಬಲ್‌ ಹುದ್ದೆಗೆ ಬಡ್ತಿ ನೀಡಿ ಗೌರವಿಸಿತು. ಆದರೆ ಹೋಗಿ ಬಂದ ಮೇಲೆ ‘ಹುದ್ದೆಗಳು ಖಾಲಿ ಇಲ್ಲ’ ಎಂದು ಹೇಳಿ ಬಡ್ತಿಯನ್ನು ಹಿಂದಕ್ಕೆ ಪಡೆಯಿತು. ಆಗ ರೈಲ್ವೆ ಕ್ರೀಡಾ ಮಂಡಳಿ ಯವರು ನನ್ನನ್ನು ಸಂಪರ್ಕಿಸಿ ರೈಲ್ವೆಯಲ್ಲಿ ಉದ್ಯೋಗ ನೀಡುವುದಾಗಿ ಹೇಳಿದರು. ಪೊಲೀಸ್‌ ಇಲಾಖೆಯಲ್ಲಿ ಒಂದು ದಶಕ ಸೇವೆ ಸಲ್ಲಿಸಿದ್ದ ನಾನು ರಾಜೀನಾಮೆ ಸಲ್ಲಿಸಿದೆ. 1971ರಲ್ಲಿ ರೈಲ್ವೆಯಲ್ಲಿ  ಟಿಕೆಟ್‌ ಕಲೆಕ್ಟರ್‌ ಹುದ್ದೆಗೆ ಸೇರಿದೆ. ಪೊಲೀಸ್‌ ಇಲಾಖೆಯಲ್ಲಿದ್ದಾಗ ನನಗೆ 300 ರೂಪಾಯಿ ಸಂಬಳವಿತ್ತು. ರೈಲ್ವೆಗೆ ಸೇರಿದ ಮೇಲೆ 500 ರೂಪಾಯಿ ಸಂಬಳ ಸಿಗತೊಡಗಿತು. ಆ ನಂತರ ಐದು ವರ್ಷಗಳ ಕಾಲ ಸತತವಾಗಿ ಇಂಡಿಯನ್‌ ರೈಲ್ವೆ ಕ್ರೀಡಾ ಕೂಟದಲ್ಲಿ ಮ್ಯಾರಥಾನ್‌ ಚಾಂಪಿಯನ್‌ ಆಗಿದ್ದೆ.

ನನ್ನ ಈ ಸಾಧನೆಯ ಬದುಕಲ್ಲಿ ನಾನೆಷ್ಟೋ ಪದಕ ಗಳನ್ನು ಗೆದ್ದಿರಬಹುದು. ಆದರೆ ತೆಗ್ಗಿಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ನಾನು ಕನ್ನಡನಾಡಿನ ಹಲವು ಹೃದಯವಂತರನ್ನು ಹತ್ತಿರದಿಂದ ನೋಡಿದೆ. ಅವರ ಪ್ರೀತಿ ಗಳಿಸಿದೆ. ನನ್ನ ಪದಕಗಳಿಗಿಂತಲೂ ಅವರ ಸ್ನೇಹ ಸಂಬಂಧವೇ ದೊಡ್ಡದು ಎಂಬುದನ್ನು ಈ ಸುದೀರ್ಘ ಬದುಕಿನ ಓಟದಲ್ಲಿ ನಾನು ಕಂಡು ಕೊಂಡಿದ್ದೇನೆ. ಕೆ.ಎ.ನೆಟ್ಟಕಲ್ಲಪ್ಪ, ಎಂ.ಪಿ.ಗಣೇಶ್‌, ಎ.ಜೆ. ಆನಂದನ್‌, ದೇವಿ ಪ್ರಸಾದ್‌ ಶೆಟ್ಟಿ.. ಇಂತಹ ಕೆಲವರನ್ನು ನಾನು ನಿತ್ಯವೂ ನೆನಪಿಸಿಕೊಳ್ಳುತ್ತೇನೆ.

ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದು ಮ್ಯಾರಥಾನ್‌ ಪದಕ ಗೆದ್ದು ಕಂಠೀರವ ಕ್ರೀಡಾಂಗಣದ ಅಂಗಣದಲ್ಲಿ ಬೆರಗುಗೊಂಡವನಂತೆ ನಿಂತಿದ್ದಾಗ ನನ್ನ ಹತ್ತಿರ ಬಂದು ಬೆನ್ನು ತಟ್ಟಿ ಪ್ರೀತಿಯಿಂದ ಮಾತನಾಡಿ ದವರು ನೆಟ್ಟಕಲ್ಲಪ್ಪ. ನಂತರ ಒಂದೂವರೆ ದಶಕದ ಕಾಲ ಅವರ ಪ್ರೀತಿಯ ತಂಪು ನನ್ನ ಸಾಧನೆಗಳಿಗೆ ಉತ್ತೇಜನ ವಾಗಿತ್ತು. ಆ ಕಾಲದಲ್ಲಿ ರಾಜ್ಯ ಅಥ್ಲೆಟಿಕ್‌ ಸಂಸ್ಥೆ, ಒಲಿಂಪಿಕ್‌ ಸಂಸ್ಥೆಗಳ ಆಡಳಿತದ ಚುಕ್ಕಾಣಿ ಅವರ ಕೈಯಲ್ಲಿತ್ತು.  ಕ್ರೀಡಾಪಟುಗಳ ಪೌಷ್ಠಿಕ ಆಹಾರ, ಉತ್ತಮ ದರ್ಜೆಯ ಶೂ ಇತ್ಯಾದಿಗಳ ಬಗ್ಗೆ ಖುದ್ದು ಅವರೇ ಕಾಳಜಿ ವಹಿಸುತ್ತಿದ್ದರು. ದೂರದ ಊರುಗಳಿಗೆ ಹೋಗಿ ಬರುವ ಸ್ಪರ್ಧಿಗಳ ಬಸ್ಸು ಚಾರ್ಜು, ಟ್ರೇನು ಚಾರ್ಜು  ಕೊಡುತ್ತಿದ್ದರು. ಅವರು ಆಗರ್ಭ ಶ್ರೀಮಂತರು.   ತಮ್ಮ ಕಿಸೆಯಿಂದಲೇ ಹಣ ನೀಡುತ್ತಿದ್ದರು. ನಾನು ಯಾವುದೇ ಪದಕ ಗೆದ್ದು ಬಂದರೂ ನನ್ನನ್ನು ಅಭಿಮಾನದಿಂದ ಕಾಣುತ್ತಿದ್ದರು. ಹೀಗಾಗಿ ಅವರ ನೆಚ್ಚಿನ ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ನ ಆರಂಭದಿಂದಲೂ ಜತೆಜತೆಗೇ ಹೆಜ್ಜೆ ಹಾಕಿದ್ದೇನೆ.

ಡೆಕ್ಕನ್‌ ಅಥ್ಲೆಟಿಕ್‌ ಕ್ಲಬ್‌ ನನ್ನಂತಹ ನೂರಾರು ಮಂದಿಗೆ ಅಯಸ್ಕಾಂತದಂತೆ. ಹಳಬರು, ಹೊಸಬರೆಲ್ಲಾ ಆ ಚಾವಣಿಯ ಅಡಿ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಸೋಮಶೇಖರಪ್ಪ, ಮಲ್ಲೇಶ್ವರನ್‌, ಅನಂತರಾಜು ಸೇರಿದಂತೆ ಹಲವು ಕ್ರೀಡಾಡಳಿತಗಾರರ ಸ್ನೇಹ ದೊರಕಿದ್ದೇ ಅಲ್ಲಿ. ಇನ್ನು ಎಂ.ಪಿ.ಗಣೇಶ್‌ ಬಗ್ಗೆ ಹೇಳಬೇಕೆಂದರೆ ಶ್ರೇಷ್ಠ ಹಾಕಿ ಆಟಗಾರರಾದ ಅವರು ಭಾರತ ಕ್ರೀಡಾ ಪ್ರಾಧಿಕಾರದ ಉನ್ನತ ಹುದ್ದೆಯಲ್ಲಿದ್ದರು. ನಾನು ಓಡುತ್ತಿದ್ದಾಗಿನ ದಿನಗಳಿಂದಲೇ ನನ್ನನ್ನು ಸಹೋದರನಂತೆ ಸ್ನೇಹದಿಂದ ಕಂಡವರು.

ವರ್ಷಗಳ ಹಿಂದೆ ನನಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಆಗ ಬೆಂಗಳೂರಿನ ವೈದ್ಯ ದೇವಿ ಶೆಟ್ಟಿಯವರು ನನ್ನ ಕ್ರೀಡಾಸಾಧನೆಯ ದಾಖಲೆ ಪತ್ರಗಳನ್ನು ನೋಡಿ ನಿಮ್ಮಂತಹ ದೊಡ್ಡ ಕ್ರೀಡಾಪಟುವಿನಿಂದ ಹಣ ತೆಗೆದುಕೊಂಡರೆ ದೇವರು ಮೆಚ್ಚುವುದಿಲ್ಲ ಎಂದಿದ್ದರು.  ಅವರು ನಡೆಸಿದ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ನಂತರ ಇವತ್ತಿಗೂ ಆರೋಗ್ಯದಿಂದಿದ್ದೇನೆ. ಅದೇನೋ ಎಂತೋ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡೆ. ಆಗ ವೈದ್ಯ ಭುಜಂಗ ಶೆಟ್ಟರು ಎರಡೂ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ನಿಮ್ಮಂತಹ ಸಾಧಕರಿಂದ ನಾನು ಹಣ ತೆಗೆದುಕೊಳ್ಳುವುದಿಲ್ಲ ಎಂದು ಬಿಟ್ಟರು. ಇವತ್ತು ನನ್ನ ಎರಡೂ ಕಣ್ಣುಗಳು ಚೆನ್ನಾಗಿ ಕಾಣಿಸುತ್ತಿವೆ.  1974ರಲ್ಲೇ ಕ್ಷಯ ರೋಗದಿಂದ ನನ್ನ ಪ್ರಾಣವೇ ಹೋಗುವಷ್ಟು ಜರ್ಜರಿತಗೊಂಡಿದ್ದೆ. ಆಗ  ರೈಲ್ವೆಯ ಹಿರಿಯ ಅಧಿಕಾರಿ ಶ್ರೀಧರನ್‌ ನೆರವಿಗೆ ಬಂದರು. ಮೈಸೂರಿನಲ್ಲಿ ಕ್ಷಯರೋಗ ಆಸ್ಪತ್ರೆಯಲ್ಲಿ ಹಲವು ತಿಂಗಳು ಚಿಕಿತ್ಸೆ ಪಡೆದು ಚೇತರಿಸಿಕೊಂಡೆ.

ನನಗೆ ಇವತ್ತು ರಾಜ್ಯೋತ್ಸವ ಪ್ರಶಸ್ತಿ ಬಂದಿರಲಿಕ್ಕಿಲ್ಲ ಅಥವಾ ಇನ್ನಾವುದೋ ಗೌರವ ಸಿಕ್ಕಿರಲಿಕ್ಕಿಲ್ಲ. ಆದರೆ ನಾನು ನನ್ನ ಬದುಕಲ್ಲಿ ಇಂತಹ ಹತ್ತಾರು ಹೃದಯವಂತರ ಸಾಮಿಪ್ಯ ಕಂಡಿದ್ದೇನೆ. ಇದು ಯಾವುದೇ ಪ್ರಶಸ್ತಿಗಿಂತಲೂ ದೊಡ್ಡದು.  ಅರ್ಧ ಶತಮಾನದ ಹಿಂದೆ ನನ್ನ ಕೈಹಿಡಿದು ಕರೆದೊಯ್ದು ಪೊಲೀಸ್‌ ಇಲಾಖೆಯಲ್ಲಿ  ಉದ್ಯೋಗಕ್ಕೆ ಸಂಬಂಧಿಸಿದ ಸಂದರ್ಶಕರ ಎದುರು ನಿಲ್ಲಿಸಿದ ಆ ಮೇಷ್ಟ್ರಿಗೆ ನಾನು ಯಾವತ್ತೂ ಋಣಿ. ಅಂತಹ ಸಜ್ಜನರು ಮತ್ತು ಹೃದಯವಂತರ ಪ್ರೀತಿಯ ಆಸರೆ ಈ ನಾಡಿನ ಎಲ್ಲಾ ಬಡವರಿಗೂ ಸಿಗಲಿ ಎಂಬುದೇ ನನ್ನ ಆಶಯ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT