ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಹಗುರ ಮಾಡಿಕೊಳ್ಳಲು ಹಲವು ದಾರಿ

Last Updated 27 ಜನವರಿ 2015, 19:30 IST
ಅಕ್ಷರ ಗಾತ್ರ

ಹಣಕಾಸು ವರ್ಷ 2014–15, ಅಸೆಸ್‌ಮೆಂಟ್‌ ಇಯರ್‌ (ತೆರಿಗೆ ಲೆಕ್ಕಾಚಾರದ ವರ್ಷ) 2015–16 ಕೊನೆಗೊಳ್ಳುವ ಸಮಯ ಸಮೀಪಿಸು ತ್ತಿದೆ. ಆದಾಯ ತೆರಿಗೆಗೆ ಒಳಪಡುವವರು, ಅದರ ಲ್ಲಿಯೂ ಮುಖ್ಯವಾಗಿ ನೌಕರ ವರ್ಗದ ಬಹುಪಾಲು ಜನರು ಪ್ರತಿ ವರ್ಷ ಜನವರಿ, ಫೆಬ್ರುವರಿ, ಮಾರ್ಚ್‌ ತಿಂಗಳುಗಳಲ್ಲಿ ತಮ್ಮ ಸಂಬಳದ ಸಿಂಹಪಾಲು ಆದಾಯವನ್ನು ತೆರಿಗೆ ಕಡಿತಕ್ಕಾಗಿಯೇ ಮುಡುಪಾಗಿ ಡಬೇಕಾದಂತಹ ಸಂದರ್ಭಗಳಿಗೆ ಸಿಕ್ಕಿಬೀಳುವು ದನ್ನು ಬಹಳಷ್ಟು ಬಾರಿ ಕಾಣುತ್ತಲೇ ಇರುತ್ತೇವೆ.

ತೆರಿಗೆ ಹೊರೆ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಹಣಕಾಸು ವರ್ಷದ ಆರಂಭದ ದಿನಗಳಲ್ಲಿಯೇ ಸೂಕ್ತ ರೀತಿಯಲ್ಲಿ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸುವ ಕುರಿತು ಕ್ರಮ ಕೈಗೊಳ್ಳದೇ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.
ಪ್ರತಿವರ್ಷದ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಮುಂಗಡಪತ್ರದಲ್ಲಿ ಆದಾಯ ತೆರಿಗೆ ಮಿತಿಯ ಪ್ರಮಾಣವನ್ನು ನಿಗದಿಪಡಿಸುತ್ತದೆ. ಆಗ ನೌಕರರಿಗೆ ತಾವು ಎಷ್ಟು ಆದಾಯಕ್ಕೆ ತೆರಿಗೆ ಪಾವತಿಸ ಬೇಕಾಗುತ್ತದೆ ಎಂಬ ವಿಚಾರ ಖಚಿತವಾಗಿ ತಿಳಿಯುತ್ತದೆ. ಹಾಗಾಗಿ, ಸರಿಯಾದ ರೀತಿಯ ಉಳಿತಾಯ ಮತ್ತು ಹೂಡಿಕೆ ಯೋಜನೆಗಳನ್ನು ರೂಪಿಸಿಕೊಂಡು ಪ್ರತೀ ವರ್ಷ ಏಪ್ರಿಲ್‌ನಿಂದಲೇ ಸಂಬಳದಲ್ಲಿ ಆದಾಯ ತೆರಿಗೆ ಕಡಿತ ಮಾಡುವಂತೆ ಉದ್ಯೋಗದಾತರಿಗೆ (ಕೆಲಸ ಮಾಡುವ ಸಂಸ್ಥೆಯ ಹಣಕಾಸು ವಿಭಾಗಕ್ಕೆ) ತಿಳಿಸುವುದು ಕಷ್ಟವೇನಲ್ಲ. ಆದರೆ, ಈ ವಿಚಾರವಾಗಿ ಮುಂಚಿತವಾಗಿಯೇ ಆಲೋಚಿಸ ಕ್ರಮ ಜರುಗಿಸುವವರ ಸಂಖ್ಯೆ ಕಡಿಮೆ. ಇದರಿಂದಾಗಿ ಕೊನೆಗಳಿಗೆಯಲ್ಲಿ ಪೇಚಾಡುವಂತಾಗುತ್ತದೆ.

‘ತೆರಿಗೆ’ ಪದಕ್ಕೆ ಕರ, ಸುಂಕ, ಹಂಗಿಸು ಆರೋಪಿಸು, ಪೀಡಿಸು ಎನ್ನುವ ಹಲವು ಅರ್ಥಗಳು ಇವೆ. ತೆರಿಗೆ ಪಾವತಿಸುವುದು ಮನುಷ್ಯನ ಕೊನೆಯ ಆದ್ಯತೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತೆ ಇಲ್ಲ. ಇಂತಹ ಸಂದಿಗ್ದ ಸಂದರ್ಭದಿಂದ ಪಾರಾಗಲು ಕಾನೂನಿನನ್ವಯ ತೆರಿಗೆಯಲ್ಲಿ ಎಷ್ಟಾದರಷ್ಟು ವಿನಾಯಿತಿ ಪಡೆಯುವುದು ತೆರಿಗೆ ಉಳಿಸುವ ಪರ್ಯಾಯ ಮಾರ್ಗ ಹಾಗೂ ಜಾಣರ ಲಕ್ಷಣ ಕೂಡಾ.
ತೆರಿಗೆ ಉಳಿಸಲು ಹಲವಾರು ಅವಕಾಶಗಳಿವೆ. ಮುಖ್ಯವಾಗಿ ಆದಾಯ ತೆರಿಗೆ ಸೆಕ್ಷನ್‌ 80 ಸಿ, 80 ಸಿಸಿಇ, 80 ಸಿಸಿಡಿ ಆಧಾರದ ಮೇಲೆ ಈ ಆರ್ಥಿಕ ವರ್ಷದಿಂದ ವಾರ್ಷಿಕವಾಗಿ ಗರಿಷ್ಠ ರೂ. 1.50 ಲಕ್ಷ ಹಣ ಹೂಡಿಕೆ ಮಾಡಿ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದಾಗಿದೆ. ಒಬ್ಬ ವ್ಯಕ್ತಿಯ ವಯಸ್ಸು, ಅವಶ್ಯಕತೆ, ಪರಿಸರ, ವಾರ್ಷಿಕ ಆದಾಯ ಹಾಗೂ ಉಳಿತಾಯದ ಸಾಮರ್ಥ್ಯಕ್ಕೆ ಅನುಗುಣ ವಾಗಿ ಉಳಿತಾಯದ ಅವಕಾಶಗಳನ್ನು ಆರಿಸಿಕೊಳ್ಳ ಬೇಕು. ಸೆಕ್ಷನ್‌ 80 ಸಿ, 80 ಸಿಸಿಸಿ, 80 ಸಿಸಿಡಿಗಳಲ್ಲಿ ದೊರೆಯುವ ಉಳಿತಾಯದ ಅವಕಾಶಗಳಲ್ಲಿ ವಿವರಣೆ ಈ ಕೆಳಗಿನಂತಿವೆ.

ಸೆಕ್ಷನ್‌ 80 ಸಿ: *ಜೀವ ವಿಮಾ ಕಂತು, * ಪಿ.ಎಫ್‌, *ಪಿ.ಪಿ.ಎಫ್‌, ಎನ್‌.ಎಸ್‌.ಸಿ, ಇ.ಎಲ್‌.ಎಸ್‌.ಎಸ್‌, ಮ್ಯೂಚುವಲ್‌ ಫಂಡ್‌ ಯೂನಿಟ್ಟುಗಳು, *ಟ್ಯುಶನ್‌ ಫೀ (ಎರಡು ಮಕ್ಕಳ ತನಕ), *ಗೃಹಸಾಲದ ಕಂತಗಳು, *ಬ್ಯಾಂಕ್‌ ಠೇವಣಿ – ಐದು ವರ್ಷಗಳ ಅವಧಿಗೆ, *ನಬಾರ್ಡ್‌ ಬಾಂಡುಗಳು, *ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್ ಸ್ಕೀಮ್‌ ಅಂಚೆ ಕಚೇರಿ, *5 ವರ್ಷಗಳ ಅವಧಿ ಠೇವಣಿ ಅಂಚೆ ಕಚೇರಿಯಲ್ಲಿ.

ಜೀವ ವಿಮಾ ಕಂತು: ಕೆ.ಜಿ.ಐ.ಡಿ, ಪಿ.ಎಲ್‌.ಐ, ಎಲ್‌.ಐ.ಸಿ ಹಾಗೂ ಖಾಸಗಿ ವಿಮಾ ಕಂಪೆನಿಗಳು ಜೀವ ವಿಮೆ ವ್ಯವಹಾರ ಮಾಡುತ್ತವೆ.

ಇವುಗಳಲ್ಲಿ ಯಾವುದೇ ಕಂಪೆನಿಯಲ್ಲಿ ವಿಮೆ ಇಳಿಸಿದರೂ, ತೆರಿಗೆ ವಿನಾಯಿತಿ ಪಡೆಯಬಹುದು. ಕಂಟಕ ಬಂದಾಗ ವೆಂಕಟರಮಣ ಎಂಬ ಮಾತಿನಂತೆ ಜೀವ ವಿಮೆ ಪ್ರತಿ ವ್ಯಕ್ತಿಗೂ ಅವಶ್ಯವಿರುತ್ತದೆ. ಆದರೆ ವ್ಯಕ್ತಿಯ ಒಟ್ಟು ಆದಾಯದ ಶೇ 10ಕ್ಕಿಂತ ಹೆಚ್ಚಿನ ಮೊತ್ತ ವಿಮೆಗೆ ತೆಗೆದಿಡುವುದು ಹೂಡಿಕೆ ದೃಷ್ಟಿಯಿಂದ (Economically Not Viable) ಲಾಭದಾಯಕ ವಲ್ಲ. ಇಲ್ಲಿ ಕಂಟಕ ಎದುರಿಸಲು ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಸಾಮಾನ್ಯವಾಗಿ ವಿಮಾ ಪಾಲಿಸಿ ಅವಧಿ ಮುಗಿಯುವಾಗ ಗರಿಷ್ಠ ಶೇ 5ರಿಂದ ಶೇ 5.50ವರೆಗೆ ವರಮಾನ ಪಡೆಯಬಹುದು ಹಾಗೂ ಅವಶ್ಯವಿದ್ದಾಗ ಸಾಲ ಕೂಡಾ ಪಡೆಯಬಹುದು.

ಪಿ.ಎಫ್‌, ಪಿ.ಪಿ.ಎಫ್‌: ನೌಕರಿಯಲ್ಲಿ ಪಿ.ಎಫ್‌. ಸವಲತ್ತು ಇದ್ದಲ್ಲಿ ನೌಕರರು ವಾರ್ಷಿಕವಾಗಿ ಕಟ್ಟುವ ಪಿ.ಎಫ್‌ ಮೊತ್ತ ತೆರಿಗೆ ವಿನಾಯ್ತಿಗೆ ಒಳಪಡುತ್ತದೆ. ಕೆಲವರು ಪಿ.ಎಫ್‌ಗೆನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತ ಪ್ರತೀ ತಿಂಗಳು ಕಟ್ಟುತ್ತಾರೆ. ಇದು ಕಡ್ಡಾಯ ಉಳಿತಾಯವಾಗಿ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವಾಗಿ ಕೈ ಸೇರುತ್ತದೆ. ಜೊತೆಗೆ ಇದರಿಂದ ಪ್ರತೀ ವರ್ಷ ತೆರಿಗೆ ವಿನಾಯ್ತಿ ಕೂಡಾ ಪಡೆಯಬಹುದು. ಪಿ.ಎಫ್‌.ನಿಂದ ಪಡೆಯುವ ಬಡ್ಡಿ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯ್ತಿ ಪಡೆದಿದೆ.

ಪಿ.ಪಿ.ಎಫ್‌: ಅಂಚೆ ಕಚೇರಿಯವರು ಸಾದರ ಪಡಿಸಿದ 15 ವರ್ಷಗಳ ಠೇವಣಿ. ಇಲ್ಲಿ ಕನಿಷ್ಠ ರೂ. 500, ಗರಿಷ್ಠ ರೂ. 1.50 ಲಕ್ಷವನ್ನು ವಾರ್ಷಿಕವಾಗಿ ಠೇವಣಿ ಮಾಡಬಹುದು. ಪಿ.ಎಫ್‌ನಂತೆಯೇ ಇಲ್ಲಿ ಪಡೆಯುವ ವಾರ್ಷಿಕ ಬಡ್ಡಿ ಆದಾಯ ತೆರಿಗೆಯಲ್ಲಿ ವಿನಾಯ್ತಿ ಪಡೆದಿದೆ ಹಾಗೂ ವಾರ್ಷಿಕವಾಗಿ ಕಟ್ಟಿದ ಹಣ ಒಟ್ಟು ಆದಾಯದಿಂದ ಕಳೆದು ಉಳಿಕೆ ಮೊತ್ತಕ್ಕೆ ಮಾತ್ರವೇ ತೆರಿಗೆ ಪಾವತಿಸಬೇಕಿದೆ. ವಾರ್ಷಿಕ ಬಡ್ಡಿ ದರ ಶೇ 8.7ರಷ್ಟಿದ್ದು, ಮೂರನೇ ಹಣಕಾಸು ವರ್ಷ ದಿಂದ, ಜಮಾ ಆಗಿರುವ ಮೊತ್ತಕ್ಕೆ ಅನುಸಾರವಾಗಿ ಸಾಲವನ್ನೂ ಪಡೆಯಬಹುದು.

7ನೇ ಹಣಕಾಸು ವರ್ಷದಿಂದ ಕಟ್ಟಿದ ಹಣದ ಒಂದು ಭಾಗ ವಾಪಸ್ ಪಡೆಯಬಹುದು. ಪಿ.ಪಿ.ಎಫ್‌ ಖಾತೆ, ಪಿ.ಎಫ್‌. ಸೌಲಭ್ಯವಿಲ್ಲದ ಎಲ್ಲಾ ವರ್ಗದವರಿಗೂ ಒಂದು ವರದಾನದಂತಿದೆ. ಶೇ 20–30 ಆದಾಯ ತೆರಿಗೆ ಕೊಡುವ ವ್ಯಕ್ತಿಗಳಿಗೆ, ಐದು ವರ್ಷಗಳ ಬ್ಯಾಂಕ್‌ ಠೇವಣಿಗಿಂತ ಪಿ.ಪಿ.ಎಫ್‌ ತುಂಬಾ ಲಾಭದಾಯಕ. ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್‌ ಠೇವಣಿಗಿಂತ ಪಿ.ಪಿ.ಎಫ್‌ ಬಡ್ಡಿ ದರ ಹೆಚ್ಚಿಗೆ ಇದ್ದು, ಇಲ್ಲಿ ಬರುವ ಬಡ್ಡಿ ಕೂಡಾ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯತಿ ಪಡೆದಿದೆ. ಬ್ಯಾಂಕ್‌ ಠೇವಣಿಯ ಮೇಲಿನ ಬಡ್ಡಿಯಲ್ಲಿ ಟಿ.ಡಿ.ಎಸ್‌ ಇರುತ್ತದೆ. ಜೊತೆಗೆ ಬಡ್ಡಿ ಮೇಲೆ ಕೂಡಾ ತೆರಿಗೆ ವಿಧಿಸುತ್ತಾರೆ.

ಮ್ಯುಚುವಲ್‌ ಫಂಡ್‌ ಯೂನಿಟ್‌: ಷೇರು ಪೇಟೆ ಸಂವೇದಿ ಸೂಚ್ಯಂಕ ಏರಿಕೆ ಕಾಣುತ್ತಿರುವುದ ರಿಂದ ಈ ಹೂಡಿಕೆ ಕೂಡಾ ಆಕರ್ಷಕ. ಜೊತೆಗೆ ಸೆಕ್ಷನ್‌ 10 (35) ಆಧಾರದ ಮೇಲೆ ಇಲ್ಲಿ ಪಡೆಯುವ ಲಾಭಾಂಶ ಕೂಡಾ ತೆರಿಗೆ ಮುಕ್ತವಾಗಿದೆ.

ಟ್ಯೂಶನ್‌ ಫೀ‌: ಶಾಲಾ – ಕಾಲೇಜಿಗೆ ಪಾವತಿಸಿದ ವ್ಯಾಸಂಗ ಶುಲ್ಕವನ್ನು (ಗರಿಷ್ಠ ಎರಡು ಮಕ್ಕಳಿಗೆ) ನಿಮ್ಮ ವಾರ್ಷಿಕ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು. ಸಮವಸ್ತ್ರ, ವಾಹನ ಖರ್ಚು, ಡೊನೇಶನ್‌ ತೆರಿಗೆ ವಿನಾಯ್ತಿಗೆ ಒಳಪಡುವುದಿಲ್ಲ.

ಗೃಹಸಾಲ ಕಂತು: ಗೃಹ ಸಾಲದ ಕಂತಿನಲ್ಲಿ ಅಸಲು ಮೊತ್ತ 80ಸಿ ಅನ್ವಯ ಆದಾಯ ತೆರಿಗೆ ವಿನಾಯ್ತಿಗೆ ಒಳಪಡುತ್ತದೆ.
ಬ್ಯಾಂಕ್‌ ಠೇವಣಿ: ಠೇವಣಿ ಕನಿಷ್ಠ ಐದು ವರ್ಷ ಗಳ ಅವಧಿ. ಇಲ್ಲಿ ಬರುವ ಬಡ್ಡಿಗೆ ತೆರಿಗೆ ಇರುತ್ತದೆ. ಬಡ್ಡಿ ಮೂರ ತಿಂಗಳಿಗೊಮ್ಮೆ ಪಡೆಯಬಹುದು. ಬಡ್ಡಿ ದರ ಶೇ 8.75 ರಿಂದ 8.90ವರೆಗೂ ಇರುತ್ತದೆ.

ನಬಾರ್ಡ್‌ ಬ್ಯಾಂಕುಗಳು: ಆರ್‌.ಬಿ.ಐನಂತೆ ನಬಾರ್ಡ್‌ ಸಹ ಇತರೆ ಬ್ಯಾಂಕ್‌ಗಳಿಗೆ ಕೃಷಿ ಆಧಾರಿತ ಸಾಲಗಳ ಮೇಲೆ ಮರು ಸಾಲ ನೀಡುತ್ತದೆ. ಇದರ ಆಧಾರದ ಮೇಲೆ ಬಾಂಡ್‌ಗಳನ್ನು ಬಿಡುಗಡೆ ಮಾಡು ತ್ತದೆ. ಈ ಬಾಂಡ್‌ಗಳ ಮೇಲೆ ಹಣ ಹೂಡಿದರೆ ಅದೂ ಸಹ ತೆರಿಗೆ ಮುಕ್ತವಾಗಿರುತ್ತದೆ.

*ಸೀನಿಯರ್‌ ಸಿಟಿಜನ್‌ ಸೇವಿಂಗ್‌ ಸ್ಕೀಮ್‌: ಆದಾಯ ತೆರಿಗೆಗೆ ಒಳಗಾಗುವ 60 ವರ್ಷ ದಾಟಿದ ವ್ಯಕ್ತಿಗೆ, ಈ ಠೇವಣಿ ತುಂಬಾ ಲಾಭ ದಾಯಕ.  ಇಲ್ಲಿ ಹೂಡಿಕೆ ಮಾಡಿದ ಹಣಕ್ಕೆ ತೆರಿಗೆ ವಿನಾಯ್ತಿ ಇದೆ. ಇದು ಐದು ವರ್ಷಗಳ ಠೇವಣಿ. ಹಾಗೂ ಬಡ್ಡಿ ದರ ಶೇ 9.2ರಷ್ಟಿದೆ. ಆದರೆ ಬಡ್ಡಿ ತೆರಿಗೆಯಿಂದ ವಿನಾಯ್ತಿ ಪಡೆದಿಲ್ಲ. ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯಬಹುದು. ಆದಾಯ ತೆರಿಗೆಗೆ ಒಳಗಾಗದ ಹಿರಿಯ ನಾಗರಿಕರಿಗೆ ಈ ಠೇವಣಿ ಬ್ಯಾಂಕ್‌ ಠೇವಣಿಗಿಂತ ಲಾಭದಾಯಕ.

*ಅಂಚೆ ಕಚೇರಿ 5 ವರ್ಷಗಳ ಠೇವಣಿ: ಎಲ್ಲಾ ವರ್ಗ ದವರೂ ಆದಾಯ ತೆರಿಗೆ ಉಳಿಸಲು ಈ ಠೇವಣಿ ಮಾಡಬಹುದು. ಬಡ್ಡಿ ಶೇ 8.50. ಬಡ್ಡಿಯನ್ನು ಆರು ತಿಂಗಳಿಗೊಮ್ಮ ಅಸಲಿಗೆ ಸೇರಿಸುತ್ತಾರೆ. ಬಡ್ಡಿ ಹಣವನ್ನು ವಾರ್ಷಿಕವಾಗಿ ಪಡೆಯಬಹುದು. ಇಲ್ಲಿ ಬರುವ ಬಡ್ಡಿಗೆ ಆದಾಯ ತೆರಿಗೆ ಇರುತ್ತದೆ.

*ಎನ್‌.ಎಸ್‌.ಸಿ: ಇದು ಕೂಡಾ ಐದು ವರ್ಷಗಳ ಅಂಚೆ ಕಚೇರಿ ಠೇವಣಿ. ಬಡ್ಡಿ ದರ ಶೇ 8.50. ಬಡ್ಡಿ ಹಣವನ್ನು ಆರು ತಿಂಗಳಿಗೊಮ್ಮೆ ಅಸಲಿಗೆ ಸೇರಿಸುತ್ತಾರೆ. ಅಸಲು ಬಡ್ಡಿ ಅವಧಿ ಮುಗಿದ ನಂತರವೇ ಪಡೆಯಬೇಕು. (ಅಂಚೆ ಕಚೇರಿ ಐದು ವರ್ಷಗಳ ಠೇವಣಿಯಲ್ಲಿ ಬಡ್ಡಿಯನ್ನು ವಾರ್ಷಿಕ ವಾಗಿ ಪಡೆಯಬಹುದು). ಆದಾಯ ತೆರಿಗೆ  ಪಾವ ತಿಸುವ ಎಲ್ಲ ವರ್ಗದವರೂ ಈ ಠೇವಣಿಯಲ್ಲಿ ಹಣ ಇರಿಸಬಹುದಾಗಿದೆ.

*ಇ.ಎಲ್‌.ಎಸ್‌.ಎಸ್‌(ಈಕ್ವಿಟಿ ಲಿಂಕ್ಡ್‌ ಸೇವಿಂಗ್ಸ್‌ ಸ್ಕೀಂ): ಇಲ್ಲಿ ಬರುವ ವರಮಾನ, ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್‌) ಮೇಲೆ ಅವಲಂಭಿಸಿದೆ. ವರಮಾನ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯ್ತಿ ಪಡೆದಿದೆ. ಇಲ್ಲಿ ಮೂರು ವರ್ಷಗಳ ಅವಧಿಗೆ (ಲಾಕ್‌ ಇನ್‌ ಪೀರಿಯಡ್‌) ಹೂಡಿಕೆ ಮಾಡ ಬಹುದು. ಆದಾಯ ತೆರಿಗೆ ಉಳಿಸಲು ಅವಕಾಶ ಮಾಡಿಕೊಡುವ ಉಳಿದೆಲ್ಲ ಯೋಜನೆಗಳಲ್ಲಿ ಇದು ಅತೀ ಕಡಿಮೆ ಅವಧಿಯದ್ದಾಗಿದೆ. ಕೆಲವು ಮ್ಯೂಚುವಲ್‌ ಫಂಡ್‌ಗಳು ಕಳೆದ ಮೂರು ವರ್ಷಗಳಲ್ಲಿ ಶೇ 25ರಷ್ಟು ಲಾಭಾಂಶ ಹಂಚಿರುತ್ತವೆ.

*ಯು.ಎಲ್‌.ಐ.ಪಿ (ಯೂನಿಟ್‌ ಲಿಂಕ್ಡ್‌ ಇನ್ಷೂರೆನ್ಸ್‌ ಪ್ಲಾನ್‌): ನೀವು ಹೂಡಿರುವ ಹಣದ ಒಂದು ಭಾಗ ವಿಮೆಗೆ ಮೀಸಲಾಗಿದ್ದು, ಉಳಿದ ಹಣ ಮ್ಯೂಚುವಲ್‌ ಫಂಡ್‌ ಯುನಿಟ್‌ಗಳಲ್ಲಿ ತೊಡಗಿಸ ಲಾಗುವುದು. ಯು.ಎಲ್‌.ಐ.ಪಿ. ಅವಧಿಯಲ್ಲಿ ಹೂಡಿಕೆದಾರನಿಗೆ ವಿಮೆ ಸವಲತ್ತು ದೊರೆಯು ತ್ತದೆ. ಜೊತೆಗೆ ಯುನಿಟ್‌ಗಳಿಂದ ಲಾಭ ಕೂಡಾ ಸಿಗುತ್ತದೆ. ಯುನಿಟ್‌ಗಳ ಆದಾಯ ಷೇರು ಪೇಟೆಯ ಸಂವೇದಿ ಸೂಚ್ಯಂಕಕ್ಕೆ ಅನುಗುಣವಾಗಿ ಇರುತ್ತದೆ. ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಶೇ 7, ಗರಿಷ್ಠ ಶೇ 8.50ರವರೆಗೂ ಆದಾಯ ಬಂದಿರುವುದು ತಿಳಿದು ಬಂದಿದೆ.

*ಸೆಕ್ಷನ್‌ 80 ಸಿ (ಮೇಲೆ ವಿವರಿಸಿದಂತೆ) ಹೊರತು ಪಡಿಸಿ ಸೆಕ್ಷನ್‌ 80 ಸಿಸಿಸಿನಲ್ಲಿ ಅಧಿಕೃತ ಪಿಂಚಣಿ ಫಂಡ್‌ ಹಾಗೂ ಸೆಕ್ಷನ್‌ 80 ಸಿಸಿಡಿ ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಲ್ಲಿ  ಕೂಡಾ ಹಣ ಹೂಡಬಹುದು. ಆದರೆ ಸೆಕ್ಷನ್‌ 80ಸಿ, 80 ಸಿಸಿಸಿ ಮತ್ತು 80 ಸಿಸಿಡಿ, ಇಲ್ಲಿ ತೊಡಗಿಸಿದ ಎಲ್ಲಾ ಹೂಡಿಕೆ ಅಥವಾ ಠೇವಣಿಯ ಗರಿಷ್ಠ ರೂ. 1.50 ಲಕ್ಷ ಮಾತ್ರ. ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದಾಗಿದೆ.

*ಆದಾಯ ತೆರಿಗೆ ಉಳಿಸಲು ಸೆಕ್ಷನ್‌ 80 ಸಿ, 80 ಸಿಸಿಸಿ, 80ಸಿಸಿಡಿ ಎಲ್ಲಾ ವರ್ಗದ ಜನರಿಗೆ ತುಂಬಾ ಅನುಕೂಲವಾಗಿದೆ. ಈ ಮೂರು ಸೆಕ್ಷನ್‌ ಹೊರತು ಪಡಿಸಿ ಇನ್ನೂ ಕೆಲವು ಸೆಕ್ಷನ್‌ಗಳ ಆಧಾರದ ಮೇಲೆ ಕೆಲವು ವರ್ಗದ ಜನರು ಈ ಕೆಳಗಿನಂತೆ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ.

*ಸೆಕ್ಷನ್‌ 24 (ಎ) ಬಾಡಿಗೆಗೆ ಕೊಟ್ಟ ಮನೆಯಿಂದ ಬರುವ ಬಾಡಿಗೆಯಲ್ಲಿ ಶೇ 30 ರಷ್ಟು ಕಳೆದು ತೆರಿಗೆ ಸಲ್ಲಿಸಬಹುದು, * ಸೆಕ್ಷನ್‌ 24 (ಬಿ) ಗೃಹ ಸಾಲದ ಮೇಲೆ ಕೊಟ್ಟಿರುವ ಬಡ್ಡಿ ರೂ. 2 ಲಕ್ಷಗಳ ತನಕ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದಾಗಿದೆ. * ಸೆಕ್ಷನ್‌ 80 ಡಿ ಆರೋಗ್ಯ ವಿಮೆ ಕಂತು ರೂ. 15 ಸಾವಿರ ಹಾಗೂ ತಂದೆ ತಾಯಿಗಳಿಗೆ ಆರೋಗ್ಯ ವಿಮೆ ಮಾಡಿಸಿದಲ್ಲಿ ರೂ. 20 ಸಾವಿರವನ್ನು (ಸ್ವಂತಕ್ಕೆ ಹಾಗೂ ಪೋಷಕರಿಗೆ ಆರೋಗ್ಯ ವಿಮಾ ಕಂತು ಗರಿಷ್ಠ ರೂ. 35ಸಾವಿರ) ಒಟ್ಟು ಆದಾಯದಿಂದ  ಕಳೆದು ತೆರಿಗೆ ಸಲ್ಲಿಸ ಬಹುದು. * ಶಿಕ್ಷಣ ಸಾಲಕ್ಕೆ ಕಟ್ಟಿದ ಬಡ್ಡಿಯನ್ನೂ ಆದಾಯದಿಂದ ಕಳೆದು ಸೆಕ್ಷನ್‌ 80ಇ ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದು.

ಜೀವನದ ಸಂಜೆ ಸುಖಮಯ
ಆರ್ಥಿಕ ಭದ್ರತೆಯಿಂದ ಜೀವನದ ಸಂಜೆ ಸುಖಮಯ ವಾಗುತ್ತದೆ. ದುಡಿಯುವ ಸಾಮರ್ಥ್ಯ ಕುಂದುವ ವೇಳೆಯಲ್ಲಿ ಯೌವ್ವನದಲ್ಲಿ ದುಡಿದು ಕೂಡಿಟ್ಟ ಹಣ ಆಪತ್‌ ಬಾಂಧವನಂತೆ ಸದಾ ರಕ್ಷಿಸುತ್ತಿರುತ್ತದೆ. ಹಣವನ್ನು ರಕ್ಷಿಸಿದರೆ ಅದು ಕಷ್ಟ ಕಾಲದಲ್ಲಿ ನಿಮ್ಮನ್ನು ರಕ್ಷಿಸುತ್ತದೆ.

ಕಾಲಕಾಲಕ್ಕೆ ಹೂಡಿಕೆ ಮಾಡುವುದ ರಿಂದ ಕೊಡುವ ಆದಾಯ ತೆರಿಗೆ ಕೂಡಾ ಕಡಿಮೆಯಾಗು ತ್ತದೆ. ಜೊತೆಗೆ ಈ ಕಡ್ಡಾಯ ಹೂಡಿಕೆ ನಿಮ್ಮ ಉಳಿ ತಾಯವನ್ನು ವೃದ್ಧಿಸುತ್ತಿರುತ್ತದೆ. ತಿಂಗಳ ಆದಾಯ ದಲ್ಲಿ ಮಾಡತಕ್ಕ ಉಳಿತಾಯವನ್ನು ಕಳೆದು ಉಳಿದ ಹಣ ಮಾತ್ರ ಖರ್ಚು ಮಾಡಿರಿ. ಉಳಿತಾಯ ಜೀವನದ ಅವಿಭಾಜ್ಯ ಅಂಗವಾಗಿ, ನಿವೃತ್ತ ಜೀವನವನ್ನು ಹಾಲು ಜೇನಿನಂತೆ ಪರಿವರ್ತಿಸುತ್ತದೆ.

*ರೂ. 1 ಲಕ್ಷವನ್ನು ಪ್ರತೀ ವರ್ಷ ಮರು ಹೂಡಿಕೆಯ ಠೇವಣಿಯಲ್ಲಿ 35 ವರ್ಷ ಇರಿಸುತ್ತಾ ಬಂದಲ್ಲಿ, 35 ವರ್ಷದ ಅಂತ್ಯಕ್ಕೆ ರೂ. 2.53 ಕೋಟಿಗೆ ಒಡೆಯ ರಾಗುತ್ತೀರಿ. ಎಂದರೆ ಯಾರು ತಾನೆ ನಂಬುತ್ತಾರೆ. ಈ ಕೆಳಗಿನ ಕೋಷ್ಠಕ ನೋಡಿರಿ. ಒಬ್ಬ ವ್ಯಕ್ತಿ ರೂ. 1 ಲಕ್ಷ ಶೇ 9 ಬಡ್ಡಿ ದರದಲ್ಲಿ ಠೇವಣಿ ಬ್ಯಾಂಕಿನಲ್ಲಿ ಇರಿಸಿದರೆ, ತ್ರೈಮಾಸಿಕ ಬಡ್ಡಿ ಆಕರಣೆಯಿಂದಾಗಿ ವರ್ಷಾಂತ್ಯಕ್ಕೆ ಬಡ್ಡಿ ಸೇರಿಸಿ ರೂ. 1,09,308 ಪಡೆ ಯುತ್ತಾನೆ. ಎರಡನೇ ವರ್ಷ ಪುನಃ ರೂ. 1 ಲಕ್ಷ ಠೇವಣಿ ಮಾಡಿದಲ್ಲಿ, ಹಿಂದಿನ ವರ್ಷದ ಅಸಲು ಬಡ್ಡಿ ಸೇರಿಸಿ ರೂ. 2,09,308 ಮೊತ್ತವಾಗುತ್ತದೆ.

(ಪಕ್ಕದಲ್ಲಿರುವ ಕೋಷ್ಟಕ ಗಮನಿಸಿ)
ಸತತ 35 ವರ್ಷಗಳ ಕಾಲ ಈ ಉಳಿತಾಯ ಪ್ರಕ್ರಿಯೆ ಮುಂದುವರಿಸಿದಲ್ಲಿ ಮೇಲಿನ ಕೋಷ್ಠಕದಲ್ಲಿ ವಿವರಿಸಿ ದಂತೆ ನೀವು ರೂ. 2.53 ಕೋಟಿ ಪಡೆಯುತ್ತೀರಿ. ರೂ. 2.53 ಕೋಟಿ ಬ್ಯಾಂಕಿನಲ್ಲಿ ಠೇವಣಿ ಇರಿಸಿದರೆ ಶೇ 9 ಬಡ್ಡಿ ದರದಲ್ಲಿ ರೂ. 2.11 ಲಕ್ಷ ಬಡ್ಡಿ ಪ್ರತೀ ತಿಂಗಳು ಪಿಂಚಣಿ ರೂಪದಲ್ಲಿ ಪಡೆಯುವಿರಿ.

ಈ ಯೋಜನೆ 25 ವರ್ಷದವರಿಗೆ ರೂಪಿಸಿದ್ದರೂ, ಉಳಿದವರೂ ಇದೇ ಮಾದರಿಯಲ್ಲಿ ಕಡಿಮೆ ಅವಧಿ ಆರಿಸಿಕೊಂಡು ಅವಧಿಗೆ ಅನುಗುಣವಾಗಿ ಪ್ರತಿಫಲ ಪಡೆಯಬಹುದು.

ರೂ. 1 ಲಕ್ಷ ಠೇವಣಿ ಇರಿಸಲು ಒಂದು ವರ್ಷದ ಆರ್‌.ಡಿ ರೂ. 8 ಸಾವಿರದಂತೆ ಮಾಡಿರಿ. ಯಾವುದೇ ವ್ಯಕ್ತಿಯ ತಿಂಗಳ ಸಂಬಳ/ಆದಾಯ ರೂ. 30 ಸಾವಿರ ಇದ್ದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಬಹುದು. ರೂ. 30ಸಾವಿರಕ್ಕೂ ಕಡಿಮೆ ಅಥವಾ ಹೆಚ್ಚಿನ ಆದಾಯವಿರುವಲ್ಲಿ, ಅವರ ಅನುಕೂಲಕ್ಕೆ ತಕ್ಕಂತೆ ಉಳಿತಾಯ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.

ಈ ಕೆಳಗಿನ ಆದಾಯವು ತೆರಿಗೆಯಿಂದ ಸಂಪೂರ್ಣ ವಿನಾಯತಿ ಹೊಂದಿದೆ.

ತೆರಿಗೆ ಸೆಕ್ಷನ್‌   ವಿನಾಯ್ತಿ ಇರುವ ವರ್ಗ
10(1)   ಕೃಷಿ ಉತ್ಪನ್ನ
10(2)   ಅವಿಭಕ್ತ ಕುಟುಂಬದಿಂದ ಬಂದ ಆದಾಯ
10(2 ಎ)  ಪಾರ್ಟ್‌ನರ್‌ಶಿಪ್‌ನಿಂದ ಹೆತ್ತವರ ಲಾಭದ ಭಾಗ
10(10 ಎ ಎ)  ರಜಾ ಸಂಬಳ, ನಿವೃತ್ತಿಯಿಂದ ಪಡೆದಾಗ (ಗರಿಷ್ಠ ರೂ. 3 ಲಕ್ಷ)
10(16)  ವಿದ್ಯೆಗೋಸ್ಕರ ಪಡೆದ ಸ್ಕಾಲರ್‌ಶಿಪ್‌
10(18)   ಶೌರ್ಯದಿಂದ ಪಡೆದಿರುವ ಪಿಂಚಣಿ – ಪ್ಯಾಮಿಲಿ ಪಿಂಚಣಿ
10(32)   ಅಪ್ರಾಪ್ತ ವಯಸ್ಸಿನ ಮಕ್ಕಳ ವಾರ್ಷಿಕ ಆದಾಯ  ರೂ. 1500
10(34)  ಕಂಪೆನಿ ಷೇರುಗಳಿಂದ ಬರುವ ಡಿವಿಡೆಂಡ್‌
10(35)  ಮ್ಯೂಚುವಲ್‌ ಫಂಡುಗಳಿಂದ ಬರುವ ಡಿವಿಡೆಂಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT