ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಳ್ಳಗಾಗಲು ಕೊಬ್ಬು ಸೇವಿಸಿ

Last Updated 5 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಲೋ ಫ್ಯಾಟ್‌ ಡಯಟ್‌ನಿಂದೇನೂ ತೆಳ್ಳಗಾಗಲು ಸಾಧ್ಯವಿಲ್ಲ. ನಾವು ಕೊಬ್ಬು ಕರಗಿಸುವ ಉತ್ಸಾಹದಲ್ಲಿದ್ದರೂ ಡಯಟ್‌ ಪ್ರಜ್ಞೆಯಲ್ಲಿರುವವರಾದರೆ ಆರಿಸಿಕೊಳ್ಳಬೇಕಾಗಿರುವುದು ಕಡಿಮೆ ಕೊಬ್ಬು ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳಿರುವ ಆಹಾರವನ್ನಲ್ಲ; ಉತ್ತಮ ಕೊಬ್ಬು ಇರುವ ಆಹಾರವನ್ನು.

ಪೂರ್ತಿಯಾಗಿ ಕೊಬ್ಬುರಹಿತ ಆಹಾರವನ್ನಷ್ಟೇ ಸೇವಿಸುತ್ತ ಇದ್ದುಬಿಡುವುದು ಆರೋಗ್ಯಕರ ಮತ್ತು ಜಾಣತನದ ನಿರ್ಧಾರವಲ್ಲ. ಕೊಬ್ಬು ಕಡಿಮೆಯಾದರೂ ದೇಹದಲ್ಲಿ ಹಾರ್ಮೋನುಗಳ ಏರುಪೇರು ಉಂಟಾಗಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಡಾ. ಕಿರಣ ಕುಲಕರ್ಣಿ ಹೇಳುತ್ತಾರೆ.

ಎಣ್ಣೆಯಲ್ಲಿ ಎಸೆನ್ಶಿಯಲ್‌ ಫ್ಯಾಟಿ ಆಸಿಡ್‌ (ಇಎಫ್‌ಎ)ಗಳು ಇರುತ್ತವೆ. ಅವೂ ವಿಟಮಿನ್‌ಗಳಂತೆಯೇ. ಆದರೆ ಅವುಗಳ ಮೊಲೆಕ್ಯುಲರ್‌ ರಚನೆ ಮತ್ತು ಕಾರ್ಯವಿಧಾನ ಮಾತ್ರ ಬೇರೆ. ಇವು ನಮ್ಮ ಹಾರ್ಮೋನುಗಳು ಸಹಜವಾಗಿ ಕೆಲಸ ಮಾಡುವಂತೆ ಮಾಡುತ್ತವೆ. ನಮ್ಮ ದೇಹದೊಳಗಿನ ಅಂಗಗಳು ಜೀವಕೋಶ ಪದರಿನಿಂದ ಆವರಿಸಿರುವಂತೆ ನೋಡಿಕೊಳ್ಳುತ್ತವೆ. ದೇಹದಲ್ಲಿ ವಿಟಮಿನ್‌ ‘ಎ’, ’ಡಿ’, ‘ಇ’ ಮತ್ತು ‘ಕೆ’ಗಳು ಹೀರಲ್ಪಡುವಂತೆ ಮಾಡುತ್ತವೆ.

ತ್ವಚೆ ಮಿರುಗಲು, ಕೂದಲು ಬೆಳೆಯಲು ದೇಹದಲ್ಲಿ ತಕ್ಕ ಮಟ್ಟಿನ ಕೊಬ್ಬು ಇರುವುದು ಅಗತ್ಯ. ಕೊಬ್ಬಿನಿಂದ ಚೆನ್ನಾಗಿ ಕಾಣುತ್ತೀರಿ! ಹಾಗಂತ ಯಾವ್ಯಾವುದೊ ಕೊಬ್ಬು ಬೆಳೆಸಿದರೆ ಚೆನ್ನಾಗಿ ಕಾಣುವುದಿಲ್ಲ. ಆರಾಮಾಗಿ ಇರಬೇಕೆಂದರೆ ಒಳ್ಳೆಯವ್ರನ್ನ ಮಾತ್ರ ಹತ್ರ ಸೇರಿಸಬೇಕು. ಸುಮ್ಮನೇ ಕೊಬ್ಬು ರಹಿತ ಮತ್ತು ಕಡಿಮೆ ಕೊಬ್ಬಿನಂಶದ ಡಯಟ್‌ ಅನುಸರಿಸಿದರೆ ಆರೋಗ್ಯ ದಕ್ಕಿಬಿಡುವುದಿಲ್ಲ. ಅದು ಉತ್ತಮ ಕೊಬ್ಬು ಆಗಿರಬೇಕು.

ಬರೀ ಒಳ್ಳೆಯದು: ಒಳ್ಳೆಯ ಕೊಬ್ಬು ಅಂದರೆ ಅದರಲ್ಲಿ ಇಎಫ್‌ಎ ಒಳಗೊಂಡಿರುವುದು. ಅಂದರೆ ನಾವು ಅಂದಗಾಣಲು ನೆರವಾಗುವ ಒಳ್ಳೆಯ ಕೊಬ್ಬಿನ ಹೆಸರೇನು? ಒಮೆಗಾ 3 ಫ್ಯಾಟಿ ಆಸಿಡ್‌ಗಳು, ಒಮೆಗಾ 6 ಫ್ಯಾಟಿ ಆಸಿಡ್‌ಗಳು, ಅಲ್ಫಾ ಲಿನೊಲೆನಿಕ್‌ ಆಸಿಡ್‌ ಇತ್ಯಾದಿಗಳು. ಕೆಲವು ಇಎಫ್‌ಎಗಳು ಒಮೆಗಾ 3, ಒಮೆಗಾ 6 ಇತರರರಿಗಿಂತ ಒಳ್ಳೆಯವರು.

ಕೆಟ್ಟ ಕೊಬ್ಬು: ಟ್ರಾನ್ಸ್‌ಫ್ಯಾಟ್‌ಗಳೆಂದರೆ ಅವು ಎಷ್ಟರಮಟ್ಟಿಗೆ ಸಂಸ್ಕರಿತ ಮತ್ತು ರಿಫೈನ್ಡ್‌ ಎಂದರೆ ಅವು ತಮ್ಮ ಎಲ್ಲ ಮೌಲ್ಯವನ್ನು ಕಳೆದುಕೊಂಡಿರುತ್ತವೆ! ಉದಾ: ಪೇಟೆಯಲ್ಲಿ ಸಿಗುವ ಬೆಣ್ಣೆ, ಸಂಸ್ಕರಿತ ಚೀಸ್‌, ಹೈಡ್ರೋಜನೇಟೆಡ್‌ ಎಣ್ಣೆಗಳೆಲ್ಲ ನಮ್ಮ ಅಂದಗೆಡಿಸುತ್ತವೆ. ಅನಾರೋಗ್ಯಕ್ಕೂ ಈಡುಮಾಡುತ್ತವೆ.
ಎಷ್ಟು ರಿಫೈನ್ಡ್‌ ಮತ್ತು ಸಮೂಹ ತಯಾರಿ ಉತ್ಪನ್ನಗಳಿಗೆ ಮಾರುಹೋದಷ್ಟು ಅನಾರೋಗ್ಯದೆಡೆಗೆ ಸಾಗ್ತೇವೆ.

ಸಾಮಾನ್ಯವಾಗಿ ಇಂಥ ಸಮೂಹ ತಯಾರಿ ಉತ್ಪನ್ನಗಳು ಪ್ಯಾಕೇಜ್ಡ್‌ ಕುಕೀಸ್‌, ಚಿಪ್ಸ್‌ ಅಥವಾ ಬಿಸ್ಕಿಟ್‌ಗಳಿಗೆ ಎಣ್ಣೆ ಬಳಸುವಾಗ ಅವುಗಳ ಮೂಲಕ ಹೈಡ್ರೋ­ಜನ್‌ ಹಾಯಿಸಿ ಸಂಸ್ಕರಿಸುತ್ತಾರೆ. ಆ ಮೂಲಕ ಅದನ್ನು ಸ್ಯಾಚುರೇಟೆಡ್‌ ಕೊಬ್ಬನ್ನಾಗಿ ಮಾಡುತ್ತಾರೆ. ಅಂದರೆ ಅದರಲ್ಲಿ ವಿಷಕಾರಿ ಅಂಶ (ಟಾಕ್ಸಿಕ್‌) ಸೇರಿತೆಂದೇ ಲೆಕ್ಕ. ಆದ್ದರಿಂದ ನೈಸರ್ಗಿಕ ಎಣ್ಣೆಗಳನ್ನು ಬಳಸುವುದು ಮೇಲು.

ಇಂಥ ಎಣ್ಣೆಗಳಲ್ಲಿ ನಾವು ಆರೋಗ್ಯವಾಗಿರಲು ಅಗತ್ಯವಾಗಿರುವ ಎಲ್ಲ ಅಂಶಗಳೂ ಇರುತ್ತವೆ. ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ನಮ್ಮನ್ನು ತೆಳ್ಳಗಾಗೇ ಇರಿಸುತ್ತವೆ.  ಸಾಸಿವೆ ಎಣ್ಣೆ, ಆಲಿವ್‌ ಎಣ್ಣೆ, ಶೇಂಗಾ ಎಣ್ಣೆ, ಗೋವಿನಜೋಳದ ಎಣ್ಣೆ, safflower ಎಣ್ಣೆ ಇತ್ಯಾದಿ.

ಅನಾರೋಗ್ಯಕರ ಎಣ್ಣೆಗಳು: ಇವರು ಖಳರು. ಪ್ರಾಣಿಜನ್ಯ ಕೊಬ್ಬಿನಲ್ಲಿ lurking, ಬೆಣ್ಣೆ, lard, ಮಾಂಸ ಇತ್ಯಾದಿ. ಕೊಬ್ಬರಿ ಎಣ್ಣೆ, ಪಾಮ್‌ ಎಣ್ಣೆಯಂತಹ ಕೆಲವು ಸಸ್ಯಜನ್ಯ ಎಣ್ಣೆಗಳೂ ಖಳರೇ. ಎಣ್ಣೆ ಒಳ್ಳೆಯದೊ ಕೆಟ್ಟದ್ದೊ ಎಂದು ತಿಳಿಯಲು, ವಾತಾವರಣದ ಸಾಮಾನ್ಯ ಉಷ್ಣತೆಯಲ್ಲಿ ಅದು ಹೆರೆತಿರಬಾರದು. ಹಾಗಾದಲ್ಲಿ ಅದನ್ನು ಸೇವಿಸಬಾರದು.

ತೂಕ ಇಳಿಸಿಕೊಳ್ಳಲು: ಒಮೆಗಾ 3 ಫ್ಯಾಟಿ ಆಸಿಡ್‌ಗಳ ಕುರಿತ ಅಧ್ಯಯನಗಳಿಂದ ತಿಳಿದು ಬರುವುದೇನೆಂದರೆ ಅನ್‌ಸ್ಯಾಚುರೇಟೆಡ್‌ ಎಣ್ಣೆಗಳಲ್ಲಿ ಇರುವ ಒಮೆಗಾ 3 ಫ್ಯಾಟಿ ಆಸಿಡ್‌ಗಳಿಂದ ತೂಕ ಇಳಿಸಲು ಸಹಾಯವಾಗುತ್ತದೆ.

ದೇಹದಲ್ಲಿನ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರಿಂದ ಹಸಿವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ದೀರ್ಘಾವಧಿಯಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ ಧಾರಾಳವಾಗಿರುವ ಆಹಾರಕ್ರಮ ಅನುಸರಿಸುತ್ತಿದ್ದರೆ ಸಕ್ಕರೆ ಕಾಯಿಲೆ ಮತ್ತು ಬೊಜ್ಜನ್ನು  ದೂರವಿಡಬಹುದು.

ಒಮೆಗಾ 3 ಫ್ಯಾಟಿ ಆಸಿಡ್‌ಗಳು ನಮ್ಮ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುವುದರಿಂದ ಹೆಚ್ಚು ಕ್ಯಾಲೊರಿಗಳು ಖರ್ಚಾಗುವಂತೆ ನೋಡಿಕೊಳ್ಳುತ್ತವೆ. ಎಲ್ಲ ಕೊಬ್ಬುಗಳು ಕ್ಯಾಲೊರಿ ಸಾಂದ್ರಿತ (ಒಂದು ಗ್ರಾಮ್‌ಗೆ 9 ಕ್ಯಾಲೊರಿಗಳು!) ಆದ್ದರಿಂದ ಕ್ಯಾಲೊರಿ ಎಣಿಕೆ ನಿರ್ಧರಿಸುವ ಅಂಶವಲ್ಲ.

ಎಷ್ಟು ಸುಲಭವಾಗಿ ಕ್ಯಾಲೊರಿಗಳು ಖರ್ಚಾಗಬಲ್ಲವು ಎಂಬುದು ಹೆಚ್ಚು ಸಂದಿಗ್ಧಕ್ಕೆ ದೂಡಬಲ್ಲ ಅಂಶ. ಇದರ ಮೆಲೆ ಬೆಳಕು ಚೆಲ್ಲುವಂತಹ ಇನ್ನೂ ಅನೇಕ ಅಧ್ಯಯನಗಳು ನಡೆಯಬೇಕಿದೆ. ಆದರೆ ನಮ್ಮ ಆಹಾರ ಕ್ರಮದಲ್ಲಿ ನಿಯಮಿತವಾಗಿ ಒಮೆಗಾ 3 ಸೇವನೆಯಿಂದ ಅನೇಕ ಆರೋಗ್ಯ ಲಾಭಗಳಿವೆ; ಅನಾನುಕೂಲಗಳಿಲ್ಲ.

ಒಮೆಗಾ 3 ಮೂಲಗಳು: ಅಚ್ಚ ಹಸುರಾದ ತರಕಾರಿಗಳು, ಸೀವೀಡ್‌, ಬ್ರಾಕೊಲಿ, ಪಾಲಕ್‌ ಮತ್ತು kaleಗಳನ್ನು ನಿಯಮಿತವಾಗಿ ಸೇವಿಸಿದಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳು ಸಿಗುತ್ತವೆ. ಇತರ ಹಸಿರು ತರಕಾರಿಗಳು, ದಟ್ಟ ಬಣ್ಣದ ಸಲಾಡ್‌ಗೆ ಬಳಸುವ ಸೊಪ್ಪುಗಳು, ಕ್ಯಾಬೇಜ್‌, ಬ್ರಸೆಲ್ಸ್‌, ಮೊಳಕೆಕಾಳು ಮತ್ತು  ಪಾಸ್ಲೆಗಳು ಸಾಕಷ್ಟು ಒಮೆಗಾ 3 ಫ್ಯಾಟಿ ಆಸಿಡ್‌ಗಳಿರುವ ಆಹಾರ ಎನ್ನುತ್ತಾರೆ ಡಾ. ನಿರ್ಮಲಾ ಏಣಗಿ.

ಲೋಫ್ಯಾಟ್‌ ಅಥವಾ ಬೇಕ್ಡ್‌ ಚಿಪ್ಸ್‌ ತಿನ್ನುವಾಗ ನಾವೇನೋ ನಮ್ಮ ದೇಹಕ್ಕೆ ದೊಡ್ಡ ಉಪಕಾರ ಮಾಡಿದಂತೆ ಬೀಗುತ್ತೇವೆ. ಎಣ್ಣೆಯಲ್ಲಿ ಚೆನ್ನಾಗಿ ಕರಿದ ಒಂದು ಪ್ಲೇಟ್‌ ಫಿಂಗರ್‌ ಚಿಪ್ಸ್‌ಗಳಿಗಿಂತ ಉತ್ತಮ ಎನ್ನಬಹುದು ಅಷ್ಟೆ.  ಅದು ಸಂಸ್ಕರಿತ ಆಹಾರ ಎನ್ನುವುದು ಮತ್ತು  ಕರಿದ ತಿನಿಸು ಅದನ್ನು ಅನಾರೋಗ್ಯಕರ ಆಹಾರಕ್ಕೆ ಸೇರಿಸಿರುತ್ತದೆ!

ಲೋಫ್ಯಾಟ್‌ ಚಿಪ್ಸ್‌ ಮತ್ತು ಕುಕೀಸ್‌ ಕೂಡ ಸಂಸ್ಕರಿತ ಆಹಾರವೇ. ಎಷ್ಟೆಂದರೂ ಹೈಡ್ರೋಜನೇಟೆಡ್‌ ಎಣ್ಣೆ ವಿಷಕಾರಿ. ಆಹಾರೋದ್ಯಮ ಲೋಫ್ಯಾಟ್‌ಗಿಂತ ಗುಡ್‌­ಫ್ಯಾಟ್‌ಗೆ ಒತ್ತು ನೀಡಲು ಯತ್ನಿಸುತ್ತಿದೆ. ಉದಾ: ಟ್ರಾನ್ಸ್‌­ಫ್ಯಾಟ್‌ ಎಂಬ ಲೇಬಲ್ಲಿಗೆ ಹೆಚ್ಚು ಒತ್ತು ನೀಡುತ್ತಿವೆ ಕಂಪೆನಿ­ಗಳು. ವಿಜ್ಞಾನಿಗಳು ಮತ್ತು ಆಹಾರ­ತಜ್ಞರು ಅತ್ಯಂತ ಕೆಟ್ಟ ಕೊಬ್ಬು ಎಂದು ಕರೆದಿರುವುದು. ಕೆನೊಲಾ ಮತ್ತು ಸೋಯಾಬೀನ್‌ ಎಣ್ಣೆಯನ್ನು ಬಳಸತೊಡಗಿವೆ. ಇವು ಕೊಲೆಸ್ಟ್ರಾಲ್‌ ವಿಷಯದಲ್ಲಿ ಲಾಭಕರ.

ಸೂಕ್ತ ಪ್ರಮಾಣದಲ್ಲಿ ಸೇವಿಸಿ
ಉತ್ತಮ ಕೊಬ್ಬು ಆದರೂ ಮಿತಿಮೀರಿ ಸೇವಿಸುತ್ತಿದ್ದರೆ ದೇಹತೂಕ ಹೆಚ್ಚುತ್ತದೆ. ಇತರ ಆರೋಗ್ಯ ಸಮಸ್ಯೆಗಳೂ ತಲೆದೋರುತ್ತವೆ. ಏನು ತಿನ್ನುತ್ತಿದ್ದೇವೆ, ಎಷ್ಟು ತಿನ್ನುತ್ತೇವೆ ಎಂಬುದರತ್ತ ಗಮನ ಇರಬೇಕು. ಆರೋಗ್ಯಕರ ವ್ಯಕ್ತಿ ದಿನಕ್ಕೆ 4–5 ಟೀ ಸ್ಪೂನ್‌್ ಎಣ್ಣೆ ಸೇವಿಸಬಹುದು. ಆದರೆ ತೂಕ ಇಳಿಸುವ ಯೋಚನೆಯಲ್ಲಿದ್ದರೆ 1–2 ಟೀ ಸ್ಪೂನ್‌ ಮಾತ್ರ ತೆಗೆದುಕೊಳ್ಳಿ. ದಿನಕ್ಕೆ 2 ಬಾರಿ ಊಟ ಮಾಡುವ­ವರಾದರೆ ಒಂದೇ ಪದಾರ್ಥ ಮಾತ್ರ ಎಣ್ಣೆಯಲ್ಲಿ ಬೇಯಿಸಿದ್ದಿರಲಿ.

ಆರೋಗ್ಯಕರ ಆಲಿವ್‌ ಎಣ್ಣೆಯನ್ನಾದರೂ ಬಳಸಿ, ಸಾಸಿವೆ ಎಣ್ಣೆಯನ್ನಾದರೂ ಬಳಸಿ ದಿನಕ್ಕೆ ಎಷ್ಟು ಚಮಚ ಎಣ್ಣೆ ಬಳಸುತ್ತೀರಿ ಎಂದು ನೋಡಿಕೊಳ್ಳಬೇಕು.  ಒಟ್ಟಾರೆ ಕೊಬ್ಬು ಅಥವಾ ಎಣ್ಣೆ ಸೇವನೆಯನ್ನು ಶೇ 25ರಿಂದ 30ರಷ್ಟು ಕ್ಯಾಲೊರಿಗಳಿಗೆ  ಇಳಿಸುವುದು ಬಹಳ ಒಳ್ಳೆಯದು.

ಹಾಗೆ ನೋಡಿದರೆ ವಿಶ್ವದ ಕೊಬ್ಬು ತಜ್ಞ ಉಡೊ ಎರಾಸ್ಮಸ್‌ ಶೇ 15–20 ಕ್ಯಾಲೊರಿಯನ್ನು ಪ್ರತಿಪಾದಿಸುತ್ತಾರೆ. ಅಲ್ಲದೆ ಸ್ಯಾಚುರೇಟೆಡ್‌ ಕೊಬ್ಬು (ಕುರಿ, ಬೆಣ್ಣೆ, ಚೀಸ್‌ ಇತ್ಯಾದಿ)ಗಳನ್ನೂ ಅತ್ಯಂತ ಕನಿಷ್ಠ ಪ್ರಮಾಣಕ್ಕೆ (ಶೇ 5ರಿಂದ 10 ಕ್ಯಾಲೊರಿ ಮೀರದಂತೆ) ಕಡಿವಾಣ ಹಾಕಿಕೊಳ್ಳಿ. ಈಗ ಪ್ರಮಾಣದಲ್ಲಿ ಮಿತಿ ತಂದ ನಂತರ ಎಣ್ಣೆಗಳ ಕಾಂಬಿನೇಷನ್‌ ಕೂಡ ಇರುವಂತೆ ನೋಡಿಕೊಳ್ಳಿ.

ಆಲಿವ್‌ ಎಣ್ಣೆ, ಸಾಸಿವೆ ಎಣ್ಣೆ, ಅಕ್ಕಿ ತೌಡಿನ ಎಣ್ಣೆ, ಎಳ್ಳೆಣ್ಣೆ ಮತ್ತು safflower ಎಣ್ಣೆಗಳ ಮಿಶ್ರಣದಿಂದ ದೇಹದ ಉತ್ತಮ ತೈಲದಾಹ ಹಿಂಗುತ್ತದೆ. ಪ್ರತಿ ಎಣ್ಣೆಯಲ್ಲೂ ಅದರದೇ ಆದ ವಿಶೇಷ ಅಂಶಗಳು ಅಡಕವಾಗಿರುವು­ದರಿಂದ ಮತ್ತು ಅವೆಲ್ಲವೂ ನಮ್ಮ ದೇಹಕ್ಕೆ ಅವಶ್ಯವಾಗಿರುವ ಕಾರಣ ಇದು ಬಹಳ ಮುಖ್ಯವಾಗುತ್ತದೆ.

ನಮ್ಮ ದೇಹದಲ್ಲಿ ಸಾಕಷ್ಟು ಉತ್ತಮ ಎಣ್ಣೆಯಂಶ ಇದ್ದರೆ ಸುಮ್‌ಸುಮ್ನೆ ಹಸಿವಾಗುವುದು ತಪ್ಪುತ್ತದೆ. ಇದಕ್ಕಾಗಿ ಬಹಳ ಕಷ್ಟಪಡಬೇಕಿಲ್ಲ. ತರಕಾರಿಯಲ್ಲಿ ಎಣ್ಣೆ/ ಕೊಬ್ಬು ಇರುವುದಿಲ್ಲ. ಆದರೆ ಅದನ್ನು ಬೇಯಿಸಿ ತಿನ್ನುವಾಗ ಎಣ್ಣೆ ಬಳಕೆ ಹೆಚ್ಚು ಅಭ್ಯಾಸವಾಗಿಬಿಟ್ಟಿದೆ. ತರಕಾರಿಯ ಬಣ್ಣ, ಸತ್ವ ಕಳೆದುಹೋಗುವಷ್ಟು ಬೇಯಿಸಿ ತಿನ್ನುವುದು ರೂಢಿ.

ಮಾಂಸಾಹಾರ ಆದರೆ ಮಟನ್‌ಗಿಂತ ಮೀನು ಆಯ್ದುಕೊಳ್ಳಿ. ಸಾಲ್ಮನ್‌ ಮೀನಿನಲ್ಲಿ ಸಿಗುವ ಮೀನಿನೆಣ್ಣೆ ಮತ್ತು ಇತರ ಸಮುದ್ರ ಮೀನುಗಳಲ್ಲಿ ಸಾಮಾನ್ಯ ಮನುಷ್ಯರಿಗೆ ಬೇಕಾದ ಎಲ್ಲ ಇಎಫ್‌ಎಗಳ ಪೋಷಕಾಂಶಗಳೂ ಇವೆ. ಕೋಳಿಮಾಂಸ ಕೂಡ ಉತ್ತಮ. ಆದರೆ ಅದು ಎಣ್ಣೆಯಲ್ಲಿ ಕರಿದಿರಬಾರದು. 
ವಾಲ್‌ನಟ್‌, ಗೋಡಂಬಿ, ಬಾದಾಮಿ, ಶೇಂಗಾ ಸೇವನೆ ಉತ್ತಮ. ಅವೂ ಎಣ್ಣೆಯುಕ್ತ. ಆದರೆ ಆರೋಗ್ಯಕರ. ಯಾವಾಗಲಾದರೊಮ್ಮೆ ತಿನ್ನಬೇಕೆನಿಸಿದರೂ ತಪ್ಪೇನಿಲ್ಲ, ಮಿತಿ ಅರಿತಿದ್ದರೆ ಸಾಕು. 

 *
ಡಿಎಚ್‌ಎ ಸೇವನೆ ಮುಖ್ಯ
ಗರ್ಭಾವಸ್ಥೆಯಲ್ಲಿ ಸಹ ಜೀವಸತ್ವಗಳು ಮತ್ತು ಲವಣಾಂಶಗಳ ಜತೆ ಕೆಲವು ಮುಖ್ಯ ಅಗತ್ಯ ಫ್ಯಾಟಿ ಆಸಿಡ್‌ಗಳ ಸೇವನೆಯೂ ಅತ್ಯವಶ್ಯ. ಇಪಿಎ (Eicosa Pentanoic Acid)ಗಳ ಜತೆ  ಡಿಎಚ್‌ಎ (Docosa Hexanoic Acid)ದಂತಹ ಒಮೆಗಾ–3 ಫ್ಯಾಟಿ ಆಸಿಡ್‌ಗಳು ಬಹಳ ಅಗತ್ಯವಾದ EFAಗಳನ್ನು ಗರ್ಭಿಣಿಯರು ಸೇವಿಸಬೇಕು.

ಇಲ್ಲವಾದರೆ ಕಡಿಮೆ ತೂಕದ ಮಗು ಜನಿಸುವ ಅಪಾಯವಿರುತ್ತದೆ. ಬರೀ ಕಬ್ಬಿಣಾಂಶದ ಮಾತ್ರೆ, ವಿಟಮಿನ್‌ ಮಾತ್ರೆಗಳಿಂದ ಪ್ರಯೋಜನವಿಲ್ಲ. ದಿನವೂ ಸೂಕ್ತ ಪ್ರಮಾಣದಲ್ಲಿ ಡಿಎಚ್‌ಎ ಸೇವಿಸಬೇಕಾಗುತ್ತದೆ. ಇದರಿಂದ ಗರ್ಭಿಣಿ ಆರೋಗ್ಯ ಉತ್ತಮವಾಗಿದ್ದು, ಭ್ರೂಣಕ್ಕೂ ಸಮೃದ್ಧ ಪೋಷಕಾಂಶಗಳ ಪೂರೈಕೆ ಆಗುತ್ತದೆ.

ಹುಟ್ಟಲಿರುವ ಮಗುವಿನ ಐಕ್ಯೂ, ದೃಷ್ಟಿ ಹಾಗೂ ಶೈಕ್ಷಣಿಕ ಪ್ರಗತಿ ಮತ್ತು ವೃತ್ತಿ ಉತ್ತಮವಾಗಿರಲಿ ಎಂಬ ಆಶಯ ಭಾವೀ ತಾಯಂದಿರದ್ದಾದರೆ ಮೊದಲು ಗರ್ಭಾವಸ್ಥೆಯಲ್ಲೇ ಡಿಎಚ್‌ಎ ಅವರ ಆಹಾರಕ್ರಮದ ಭಾಗವಾಗಿರುವಂತೆ ನೋಡಿಕೊಳ್ಳಬೇಕು. ಗರ್ಭಾವಸ್ಥೆಯ ಮೂರನೇ ತಿಂಗಳಿನಿಂದ ಮಗುವಿನ ಮೆದುಳು ಬೆಳೆಯಲು ಆರಂಭವಾಗುವ ಕಾರಣ ಆಗ ಡಿಎಚ್‌ಎ ಸೇವನೆ ಅತ್ಯವಶ್ಯ. ಆದರೆ ಇದನ್ನು ಕೇವಲ ಪ್ರಸೂತಿತಜ್ಞರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ಡಾ. ಸುಮನ್‌.

ಡಿಎಚ್‌ಎ ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವನ್ನೂ ತಗ್ಗಿಸುತ್ತದೆ. ಮೆದುಳು, ರೆಟಿನಾ, ಮತ್ತು ನರವ್ಯೂಹದ ಕಾರ್ಯವನ್ನು ಸುಧಾರಿಸುತ್ತದೆ. ಹಾಗಾಗೇ ಮಗುವಿಗೆ ಎದೆಹಾಲುಣಿಸುವ ದಿನಗಳಲ್ಲೂ ಡಿಎಚ್‌ಎ ಸೇವನೆ ತುಂಬ ಮುಖ್ಯ. ಎದೆಹಾಲಿನ ಮೂಲಕ ಮಗುವಿಗೆ ಡಿಎಚ್‌ಎ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT