ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜೂರಿನಲ್ಲಿ ಮುಗಿಯದ ಶೋಕಗೀತೆ

ಯೋಧ ನಾಗೇಶ್‌ ಅಂತ್ಯಕ್ರಿಯೆಗೆ ಪೂರ್ಣಗೊಂಡ ಸಿದ್ಧತೆ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಹಾಸನ: ನಗರದ ಪಕ್ಕದಲ್ಲಿರುವ ಪುಟ್ಟ ಹಳ್ಳಿ ತೇಜೂರು, ಇಲ್ಲಿನ ಗ್ರಾಮಸ್ಥರು ತಮ್ಮ ಊರಿನ ಹೆಮ್ಮೆಯ ಯೋಧನ ಮೃತದೇಹ ಯಾವಾಗ ಬರುವುದೆಂದು ಹತ್ತು ದಿನಗಳಿಂದ ಕಾದು ಕುಳಿತಿದ್ದಾರೆ.

ಸಿಯಾಚಿನ್‌ ಪ್ರದೇಶದಲ್ಲಿ ಹಿಮಪಾತದಡಿ ಸಿಕ್ಕು ಸಾವನ್ನಪ್ಪಿರುವ ಹತ್ತು ಯೋಧರ ತಂಡದ ನಾಯಕರಾಗಿದ್ದ ಸುಬೇದಾರ್‌ ಟಿ.ಟಿ. ನಾಗೇಶ್‌ ಹಾಸನ ತಾಲ್ಲೂಕು ತೇಜೂರು ಗ್ರಾಮದವರು.

ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಅವರ ಹೊಸ ಮನೆಯಲ್ಲಿ ಕಳೆದ ಕೆಲವು ದಿನಗಳಿಂದ ದುಃಖ, ಆತಂಕ ಮನೆ ಮಾಡಿದೆ. ತಂದೆಯ ಸಾವಿನ ಸುದ್ದಿ ತಿಳಿದ ದಿನದಿಂದ ಅವರ ಇಬ್ಬರು ಮಕ್ಕಳು ಶಾಲೆಗೆ ಹೋಗಿಲ್ಲ. ಪತ್ನಿ ಆಶಾ ಸರಿಯಾಗಿ ಅನ್ನ–ನೀರು ಸೇವಿಸಿಲ್ಲ. ಅತ್ತು ಅತ್ತು ಮಕ್ಕಳ ಕಣ್ಣೀರೂ ಬತ್ತಿಹೋಗಿದೆ. ಮನೆಯಲ್ಲಿ ಬಂಧುಗಳೆಲ್ಲ ಮೌನವಾಗಿಯೇ ಕಣ್ಣೀರಿಡುತ್ತಾರೆ. ನಾಗೇಶ್‌ ಅವರ ಸಾವಿನ ಸುದ್ದಿ ತಿಳಿದ ನಂತರ ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಪರಿಚಯ ಇಲ್ಲದವರೂ ಮನೆಗೆ ಬಂದು ಸಾಂತ್ವನ ಹೇಳುತ್ತಿದ್ದಾರೆ. ಅನೇಕ ಸಂದರ್ಭದಲ್ಲಿ ಹೀಗೆ ಸಾಂತ್ವನ ಹೇಳಲು ಬಂದವರೂ ಮಕ್ಕಳ ಮುಖ ನೋಡಿ ಕಣ್ಣೀರಿಡು ತ್ತಿದ್ದಾರೆ.

ನಮಗೆ ಹೆಮ್ಮೆ ಇದೆ:  ‘ನಮ್ಮ ಮಾವ ಕಷ್ಟಪಟ್ಟು ದುಡಿದವರು, ಎಲ್ಲರನ್ನೂ ತನ್ನ ಜೊತೆಯಲ್ಲೇ ಬೆಳೆಸಿದ್ದಾರೆ. ಅವರ ಸಾವು ನಮ್ಮಲ್ಲಿ ದುಃಖದ ಜೊತೆಗೆ ಹೆಮ್ಮೆಯನ್ನೂ ಮೂಡಿಸಿದೆ’ ಎಂದು ನಾಗೇಶ್‌ ಅವರ ಅಕ್ಕನ ಮಗಳು ಶ್ರುತಿ ಗದ್ಗದಿತರಾಗಿ ಹೇಳುತ್ತಾರೆ.

‘ನಾಗೇಶ್‌ ಅವರಿಗೆ ಆರು ಮಂದಿ ಅಕ್ಕಂದಿರು ಹಾಗೂ ಇಬ್ಬರು ಸಹೋದ ರರು ಇದ್ದಾರೆ. ಅಣ್ಣ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ತಮ್ಮ ಊರಿನಲ್ಲೇ ಇದ್ದಾರೆ. ಅಕ್ಕನ ಮಗಳನ್ನೇ ನಾಗೇಶ್‌ ವಿವಾಹವಾಗಿದ್ದರು.

‘ಮಾವ ತುಂಬ ಕಷ್ಟಪಟ್ಟಿದ್ದರು. ಅವರದು ಬಡ ಕುಟುಂಬ. ಮಗ ಓದಲಿ ಎಂದು ಉಳಿದವರೆಲ್ಲರೂ ಉಪವಾಸ ವಿದ್ದು, ಇವರಿಗೇ ಊಟ ಕೊಟ್ಟು ಶಾಲೆಗೆ ಕಳುಹಿಸುತ್ತಿದ್ದರು. ಶಾಲೆಗೆ ಹೋಗುವಾಗ ಇದ್ದುದು ಒಂದೇ ಸಮವಸ್ತ್ರ, ಅದನ್ನೇ ನಿತ್ಯ ಒಗೆದು ಮರುದಿನ ಮತ್ತೆ ಧರಿಸುತ್ತಿದ್ದರು. ಇಸ್ತ್ರಿ ಮಾಡದಿದ್ದರೆ ಬೇರೆಯವರೆದುರು ಚೆನ್ನಾಗಿ ಕಾಣಿಸಲ್ಲ ಎಂಬ ಕಾರಣಕ್ಕೆ ತಟ್ಟೆಯಲ್ಲಿ ಕೆಂಡ ಹಾಕಿ ಬಟ್ಟೆಗೆ ಇಸ್ತ್ರಿ ಮಾಡುತ್ತಿದ್ದರು. ಇಡೀ ಕುಟುಂಬದಲ್ಲಿ ಸ್ವಲ್ಪ ಮಟ್ಟಿಗೆ ಶಿಕ್ಷಣ ಪಡೆದವರು ಮಾವ ಒಬ್ಬರೇ. ತನ್ನ ಅಕ್ಕಂದಿರು ಮಾಡಿರುವ ತ್ಯಾಗವನ್ನು ಅವರು ಮರೆತಿರಲಿಲ್ಲ. ಎಲ್ಲರನ್ನೂ ಪ್ರೀತಿ ಯಿಂದ ನೋಡಿಕೊಂಡಿದ್ದರು’ ಎನ್ನುತ್ತಿ ದ್ದಂತೆ ಶ್ರುತಿ ಅವರ ಕಣ್ಣುಗಳು ಮಂಜಾದವು. 

ನಾಗೇಶ್‌ ಸಾವಿನಿಂದಾಗಿ ಇಡೀ ತೇಜೂರು ಗ್ರಾಮ ದುಃಖದಲ್ಲಿದೆ. ಗ್ರಾಮಸ್ಥರೆಲ್ಲರೂ ಸೇರಿ ತೇಜೂರು ಕೆರೆಯಿಂದ ಸ್ವಲ್ಪ ದೂರದಲ್ಲಿರುವ ಅವರ ಹೊಲದಲ್ಲಿ ಶವಸಂಸ್ಕಾರಕ್ಕೆ ಸಿದ್ಧತೆಗಳನ್ನು ಮಾಡಿದ್ದಾರೆ. ಹಾಸನ ರಿಂಗ್‌ ರಸ್ತೆಯಿಂದ ತೇಜೂರಿಗೆ ಹೋಗುವ ರಸ್ತೆ ಆರಂಭವಾಗುವಲ್ಲೇ ನಾಗೇಶ್‌ ಭಾವಚಿತ್ರಸಹಿತ ಶ್ರದ್ಧಾಂಜಲಿ ಫಲಕ ಹಾಕಿದ್ದಾರೆ.

ಮಗ ಪ್ರೀತಮ್‌ ಜನ್ಮದಿನ: ಶುಕ್ರವಾರ (ಫೆ.12) ನಾಗೇಶ್‌ ಅವರ ಕಿರಿಯ ಪುತ್ರ ಪ್ರೀತಮ್‌ ಜನ್ಮದಿನವೂ ಆಗಿತ್ತು. ಐದು ತಿಂಗಳ ಹಿಂದೆ ಅಪ್ಪ ಬಂದು ಹೋದಾಗ ಜನ್ಮದಿನಕ್ಕೆ ಗಿಫ್ಟ್‌ ಕಳುಹಿಸುವುದಾಗಿ ಹೇಳಿ ಹೋಗಿದ್ದರು. ಈಗ ಮಕ್ಕಳು ಅಪ್ಪನ ಶವಕ್ಕಾಗಿ ಕಾಯುವಂತಾಗಿದೆ.

ಈ ವಿಚಾರ ಮಾಧ್ಯಮಗಳಿಂದ ಕೇಳಿ ತಿಳಿದಿದ್ದ ಹೊಳೆನರಸೀಪುರದ ಹಿರಿಯರೊಬ್ಬರು ಶುಕ್ರವಾರ ನಾಗೇಶ್‌ ಅವರ ಮನೆಗೆ ಬಂದಿದ್ದರು. ‘ಮಗನಿಗೆ ಸೈಕಲ್‌ ಕೊಡಿಸುವುದಾಗಿ ನಾಗೇಶ್‌ ಹೇಳಿದ್ದರು ಎಂದು ಮಾಧ್ಯಮಗಳಿಂದ ತಿಳಿದು, ನಿಮಗೆ ಸಾಂತ್ವನ ಹೇಳಲು ಬಂದಿದ್ದೇನೆ. ನಿಮ್ಮ ಮಗನಿಗೆ ಸೈಕಲ್‌ ಕೊಡಿಸಬೇಕೆಂಬ ಬಯಕೆ ಇದೆ. ಅದಕ್ಕೆ ಅವಕಾಶ ಮಾಡಿಕೊಡಬೇಕು, ಅದನ್ನು ಸ್ವೀಕರಿಸಬೇಕು’ ಎಂದು ಹೇಳುತ್ತಲೇ ಕಣ್ಣೀರಿಟ್ಟರು. ನಂತರ ಸುಧಾರಿಸಿಕೊಂಡು ಮನೆಯವರಿಗೆ ಸಾಂತ್ವನ ಹೇಳಿದರು.

ಸರಿಯಾದ ಮಾಹಿತಿ ನೀಡಲು ಒತ್ತಾಯ
ಹಾಸನ:
‘ಸಿಯಾಚಿನ್‌ನಲ್ಲಿ ಮಡಿದ ತೇಜೂರಿನ ಯೋಧ ಟಿ.ಟಿ. ನಾಗೇಶ್‌ ಬಗ್ಗೆ ನಮಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ, ಅವರ ಶವವನ್ನು ತರುವ ಪ್ರಯತ್ನಗಳು ಆಗುತ್ತಿಲ್ಲ’ ಎಂಬ ಭಾವನೆಯಲ್ಲಿದ್ದ ಕೆಲವು ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಲು ಬಂದಿದ್ದರು.

ನಾಗೇಶ್‌ ಅವರ ದೊಡ್ಡ  ಭಾವಚಿತ್ರದೊಂದಿಗೆ ಬಂದಿದ್ದ ಗ್ರಾಮಸ್ಥರಲ್ಲಿ ಕೆಲವರು ಜಿಲ್ಲಾಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಯೋಧ ಸತ್ತ ಮಾಹಿತಿ ಬಂದು ಕೆಲವು ದಿನಗಳಾದ ಮೇಲೆ ಜಿಲ್ಲಾಧಿಕಾರಿ ಉಮೇಶ್‌ ಕುಸುಗಲ್‌ ಮತ್ತು ತಹಶೀಲ್ದಾರ್‌ ಮಂಜುನಾಥ್‌ ಅವರು ಮನೆಗೆ ಬಂದಿದ್ದಾರೆ. ಬಂದವರೂ ಸರಿಯಾಗಿ ಸಾಂತ್ವನ ಹೇಳಿಲ್ಲ. ಕುಟುಂಬಕ್ಕೆ ಭರವಸೆಯನ್ನು ಕೊಡುವ ಕೆಲಸ ಮಾಡಿಲ್ಲ’ ಎಂದು ಆರೋಪಿಸಿದರು.

ಶುಕ್ರವಾರ ಗ್ರಾಮಸ್ಥರು ಬಂದಾಗ ಜಿಲ್ಲಾಧಿಕಾರಿ ಇನ್ನೂ ಕಚೇರಿಗೆ ಬಂದಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಶಾಸಕ ಎಚ್‌.ಎಸ್‌. ಪ್ರಕಾಶ್‌ ಅಲ್ಲಿಗೆ ಬಂದರು.

ಗ್ರಾಮಸ್ಥರ ಜೊತೆ ಮಾತ ನಾಡಿದ ಬಳಿಕ ಅವರೇ ಜಿಲ್ಲಾಧಿ ಕಾರಿಗೆ ಕರೆ ಮಾಡಿ ಕಚೇರಿಗೆ ಬರು ವಂತೆ ಒತ್ತಾಯಿಸಿದರು. ಮಧ್ಯಾಹ್ನ 12.15ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಆ ಸಂದರ್ಭ ದಲ್ಲಿ ಗ್ರಾಮಸ್ಥರು ಸೈನಿಕನಿಗೆ ಜೈಕಾರ ಹಾಕುತ್ತಿದ್ದರು. ಜಿಲ್ಲಾಧಿಕಾರಿ ಬಂದ ಕೂಡಲೇ ‘ನಮಗೆ ಜಿಲ್ಲಾಡಳಿತ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ’ ಎಂಬ ಆರೋಪ ಮಾಡಿದರು.

ಅವರ ಮಾತನ್ನು ಆಲಿಸಿದ ಜಿಲ್ಲಾಧಿಕಾರಿ, ‘ನಾವು ನಿರಂತರ ವಾಗಿ ಸಂಪರ್ಕದಲ್ಲಿದ್ದೇವೆ. ಅಲ್ಲಿನ ಪರಿಸ್ಥಿತಿ ಏನಿದೆ ಎಂಬ ಬಗ್ಗೆ ನಿಮಗೆ ಮಾಹಿತಿ ಇಲ್ಲ. ನಾನು 22 ವರ್ಷ ಸೈನ್ಯದಲ್ಲಿದ್ದು ಬಂದವನು. ಸಿಯಾಚಿನ್‌ನಿಂದ ಶವ ಎತ್ತಿದ ಕೂಡಲೇ ನಮಗೆ ಮಾಹಿತಿ ನೀಡುತ್ತಾರೆ ಎಂದರು.

* ಪ್ರತಿಕೂಲ ಹವಾಮಾನ ಇರುವುದರಿಂದ ಶವಗಳನ್ನು ಸಿಯಾಚಿನ್‌ನಿಂದ ತರಲು ಆಗುತ್ತಿಲ್ಲ ಎಂದು ಸೇನೆಯಿಂದ ಮಾಹಿತಿ ಬಂದಿದೆ
-ಅಣ್ಣಪ್ಪ, ನಾಗೇಶ್‌ ಅವರ ಭಾವ

ಮುಖ್ಯಾಂಶಗಳು
* ನೋವಿನ ನಡುವೆಯೂ ಹೆಮ್ಮೆ ಪಡುತ್ತಿರುವ ಕುಟುಂಬ

* ಮಗನ ಜನ್ಮದಿನಕ್ಕೆ ಸೈಕಲ್‌ ನೀಡಲು ಮುಂದಾದ ಹಿರಿಯ ಜೀವ
* ಹತ್ತು ದಿನಗಳಾದರೂ ಮುಗಿಯದ ಕಾಯುವಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT