ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವ ಇಲ್ಲದ ಮಳೆ

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮಳೆ ನಿಲ್ಲುವವರೆಗೆ
ನಿರ್ಮಾಪಕ, ನಿರ್ದೇಶಕ: ನಿರ್ದೇಶನ: ಎಸ್. ಮೋಹನ್
ತಾರಾಗಣ: ಮೋಹನ್, ದತ್ತಣ್ಣ, ಶರತ್ ಲೋಹಿತಾಶ್ವ, ಶ್ರೀನಿವಾಸಪ್ರಭು, ಕರಿಸುಬ್ಬು, ಚಾಟಿ ಸುರೇಶ್, ಕವಿತಾ ಬೋರಾ ಇತರರು

ಬೆಟ್ಟದ ತುದಿಯಲ್ಲಿ ಮನೆ ಕಟ್ಟಿ ಮಳೆಗಾಗಿ ಎದುರು ನೋಡುವ ಐವರು. ಮಳೆ ಶುರುವಾದರೆ ತಮ್ಮ ‘ನ್ಯಾಯ ತೀರ್ಮಾನದ ಆಟ’ ಶುರು ಎಂಬ ಖುಷಿ ಇವರಿಗೆ. ಇನ್ನೊಂದು ಕಡೆ ನಗರ ದಲ್ಲಿ ದೊಡ್ಡ ವ್ಯವಹಾರ ಮಾಡಿಕೊಂಡು ತನ್ನ ಪ್ರೇಯಸಿಯೊಂದಿಗೆ ಸುಖವಾಗಿ ಕಾಲ ಕಳೆಯುತ್ತಿರುವ ಉದ್ಯಮಿ. ಒಂದು ದಿನ ಬೆಳ್ಳಂಬೆಳಿಗ್ಗೆ ಈತನಿಗೆ ಬೀಳುವ ಒಂದು ಕೆಟ್ಟ ಕನಸು ಆತನನ್ನು ಭ್ರಮೆಯಂತೆ ಕಾಡಲು ಶುರುವಾಗುತ್ತದೆ! ಆ ಕನಸಿನಲ್ಲಿ ಬೆಟ್ಟದ ಮನೆಯ ಐವರೂ ಒಂದಲ್ಲ ಒಂದು ರೀತಿ ಕಾಡುತ್ತಾರೆ. ದೂರ ಓಡಿದಷ್ಟೂ ಬೆನ್ನೇರಿ ಬಂದು ನಿಧಾನಕ್ಕೆ ಆತನನ್ನು ಬೆಟ್ಟದ ಮನೆಗೇ ಎಳೆದು ತರುವ ಕನಸು!

1950ರ ದಶಕದಲ್ಲಿ ಪ್ರದರ್ಶನ ಗೊಂಡಿದ್ದ ಜನಪ್ರಿಯ ‘ಡೆಡ್ಲಿಗೇಮ್’ ನಾಟಕವನ್ನು ‘ಮಳೆ ನಿಲ್ಲುವವರೆಗೆ’ ಹೆಸರಿನಲ್ಲಿ ಚಿತ್ರದ ಚೌಕಟ್ಟಿಗಿಳಿಸಿದ್ದಾರೆ ಮೋಹನ್. ಆ ಬೆಟ್ಟದ ಮನೆಯಲ್ಲಿ ವಾಸವಾಗಿರುವ ಐದು ಮಂದಿ ಎಂದರೆ ನಿವೃತ್ತರಾದ ನಾಯಾಧೀಶ, ಸರ್ಕಾರಿ ವಕೀಲ, ಖಾಸಗಿ ವಕೀಲ, ಅಪ ರಾಧಿ ಗಳನ್ನು ನೇಣುಕುಣಿಕೆಗೆ ಹಾಕು ತ್ತಿದ್ದವ ಮತ್ತು ಶಿಕ್ಷೆಯಿಂದ ಪಾರಾದವನು.    ಮಳೆಯಲ್ಲಿ ದಾರಿ ತಪ್ಪಿ ತಮ್ಮಲ್ಲಿಗೆ ಆಶ್ರಯಕ್ಕೆ ಬಂದವರಿಗೆ ಆತಿಥ್ಯ ನೀಡಿ ‘ಆಟ’ಕ್ಕೂ ಆಹ್ವಾನಿಸುವುದು ಇವರ ಅಭ್ಯಾಸ. 

ಪ್ರೇಯಸಿಯನ್ನು ಸೇರುವ ಉತ್ಸಾಹದಲ್ಲಿ ಮಳೆ ಹೊಯ್ಯುವಾಗಲೇ ಮನೆಯಿಂದ ಹೊರಟು, ಕಚ್ಚಾದಾರಿಯೇ ಹೆಚ್ಚು ಮಜವೆಂದು ಕಾಡಿನ ದಾರಿಯಲ್ಲಿ ಸಾಗುವ ಉದ್ಯಮಿ ಬೆಟ್ಟದ ಮನೆ ಸೇರುತ್ತಾನೆ. ‘ನ್ಯಾಯತೀರ್ಮಾನದ ಆಟ’ದ ಅತಿಥಿಯಾಗುತ್ತಾನೆ. ವ್ಯತ್ಯಾಸ ವಿಷ್ಟೇ, ಆಟದಲ್ಲಿ ಆತನದು ಆರೋಪಿಯ ಸ್ಥಾನ. ಅಲ್ಲಿಂದ ಆಟ ಶುರು. ಆ ಆಟಕ್ಕೂ, ನ್ಯಾಯಾಧೀಶರಿಗೂ ಹಾಗೂ ಆರೋ ಪಿಗೂ ಇರುವ ಸಂಬಂಧವೇನೆಂಬುದೇ ಕ್ಲೈಮ್ಯಾಕ್ಸ್. ಹೀಗೆ ಐವರ ಜತೆ ಮತ್ತೊಬ್ಬನ ಆಟ–ಸೆಣಸಾಟದ ಸಾರವೇ ‘ಮಳೆ ನಿಲ್ಲುವವರೆಗೆ’. ಈ ತರ್ಕವೇ ಚಿತ್ರದ ಆಳ–ಜೀವಾಳ.

ದ್ವಿತೀಯಾರ್ಧದಲ್ಲಿ ಕಥೆ ಒಂದು ಮನೆಯಲ್ಲಿ ಸಾಗುತ್ತದೆ. ಇದು ಮಿತಿ ಯಾಗಿದ್ದರೂ ಈ ಏಕತಾನತೆಯನ್ನು ದಾಟಿಸುವುದು ‘ಫ್ಲಾಷ್‌ಬ್ಯಾಕ್’. ಉದ್ಯ ಮಿಯ ಪಾತ್ರದಲ್ಲಿರುವ ಮೋಹನ್ ಅವರು ಸಂಭಾಷಣೆ ಮೂಲಕ ಪ್ರೇಕ್ಷಕನ ಜತೆ ಚಿತ್ರದುದ್ದಕ್ಕೂ ಸಾಗುತ್ತಾರೆ. ದತ್ತಾತ್ರೇಯ, ಶರತ್ ಲೋಹಿತಾಶ್ವ, ಶ್ರೀನಿವಾಸಪ್ರಭು ತಮ್ಮ ಪಾತ್ರಗಳಿಗೆ ಉತ್ತಮವಾಗಿ ಒಗ್ಗಿಕೊಂಡಿದ್ದಾರೆ. ಹೆಚ್ಚಿನ ಸಂಭಾಷಣೆಗಳಿಲ್ಲವಾದರೂ ಕರಿಸುಬ್ಬು ವಿಶಿಷ್ಟ ಅಭಿನಯದಿಂದ ಗಮನ ಸೆಳೆಯುತ್ತಾರೆ.

ಇಲ್ಲಿನ ಮುಖ್ಯ ಪಾತ್ರಧಾರಿ ಎಂದರೆ ಮಳೆಯೇ! ಕೆಲವೆಡೆ ಧಾರಾಕಾರವಾಗಿ ಸುರಿವ ‘ಗ್ರಾಫಿಕ್ ಮಳೆ’ ನೋಡುಗರಿಗೆ ಕಿರಿಕಿರಿ ಉಂಟುಮಾಡುತ್ತದೆ. ನಾಯಕಿ ಕವಿತಾ ಬೋರಾ ಒಂದು ಹಾಡು, ಕೆಲ ದೃಶ್ಯಗಳಿಗಷ್ಟೇ ಸೀಮಿತ. ಅವರ ಪಾತ್ರ, ನಟನೆ ಎರಡರಲ್ಲೂ ಗಟ್ಟಿತನವಿಲ್ಲ. ‘ಮಳೆ...’ಯಲ್ಲಿ ಎರಡೇ ಹಾಡುಗಳಿದ್ದರೂ ಲಯೇಂದ್ರ ಸಂಗೀತ ಕಿವಿಗೆ ಇಂಪು ನೀಡುವುದಿಲ್ಲ. ಕಥೆ ದೆಸೆಯಿಂದ ಉತ್ತಮ ಚಿತ್ರವಾಗಬಹುದಾದ ಸಾಧ್ಯತೆ ಇದ್ದರೂ ಚಿತ್ರಕಥೆಯ ಜಾಳುತನದಿಂದ ಮಳೆ ಸೊರಗಿದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT