ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗದ ಪ್ರಶ್ನೆಯೇಕೆ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಯುವಕರಷ್ಟೇ ತ್ಯಾಗ ಮಾಡಬೇಕೇ?. ಈ ಪ್ರಶ್ನೆ ಬಗ್ಗೆ ಯೋಚಿಸಿದರೆ ತ್ಯಾಗ ಎಂಬ ಪದದ ಬಳಕೆ ಸರಿಯೇ ಎಂದೆನಿಸುತ್ತದೆ. ನಮ್ಮ ದೇಶ, ರಾಷ್ಟ್ರ, ಜಗತ್ತನ್ನು ಭ್ರಷ್ಟಾಚಾರ, ಪರಿಸರ ವಿನಾಶ, ಜಾತಿ, ಧರ್ಮ, ವರ್ಗ ವೈಷಮ್ಯಗಳಿಂದ ರಕ್ಷಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಇಲ್ಲಿ ತ್ಯಾಗದ ಪ್ರಶ್ನೆಯೇ ಬರುವುದಿಲ್ಲ. ಅದೇನೇ ಇರಲಿ, ಅದೆಷ್ಟೊ ಯುವಕರ ಪಾಲಿಗೆ ಕರ್ತವ್ಯಗಳು ತ್ಯಾಗಗಳಂತೆ ಕಾಣಿಸುತ್ತದೆ.

ನಮ್ಮ ದೇಶವನ್ನು ರಕ್ಷಿಸುವ ಕರ್ತವ್ಯ ಅಥವಾ ದೇಶಕ್ಕಾಗಿ ಮಾಡಬೇಕಾದ ತ್ಯಾಗ ಯುವಕರಿಗಷ್ಟೇ ಮೀಸಲಲ್ಲ. ಅಲ್ಲದೆ ಇಂತಹ ಕರ್ತವ್ಯಗಳಲ್ಲಿ ಯುವಕರ ಪಾತ್ರ ವಿರಳವೆನ್ನಬಹುದು. ಇದುವರೆಗೂ ದೇಶದ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದು ಹಿರಿಯರೇ ಇರಬಹುದು, ಆದರೆ ಅಂತಹ ಹಿರಿಯರನ್ನು ಆಯ್ಕೆ ಮಾಡುವಲ್ಲಿ ಯುವಕರದ್ದೂ ಬಹುಪಾಲು ಇರುತ್ತದೆ. ಎಷ್ಟು ಜನ ಯುವಕರು ಮತದಾನ ಮಾಡುತ್ತಾರೆ? ಆದರೆ ದಿನಪತ್ರಿಕೆಯಲ್ಲಿ ಬರುವ ಅತ್ಯಾಚಾರ, ಕಳ್ಳತನ, ದರೋಡೆ ಇತ್ಯಾದಿಗಳ ಆರೋಪಗಳಲ್ಲಿ ಯುವಕರದ್ದೇ ಮೇಲುಗೈ. ಇಂತಹ ಯುವಕರು ದೇಶವನ್ನು ರಕ್ಷಿಸುತ್ತಾರೆಯೇ?

ಕೆಲವು ಹಿರಿಯರು ನೀವು ಹೇಳಿದ ಹಾಗೆ ಭ್ರಷ್ಟಾಚಾರ, ಪರಿಸರ ವಿನಾಶ ಜಾತಿ, ಧರ್ಮ, ವರ್ಗ ವೈಷಮ್ಯಗಳಿಗೆ ಭೂಮಿಕೆಯನ್ನು ಸೃಷ್ಟಿಸಿರಬಹುದು. ಅಂದ ಮಾತ್ರಕ್ಕೆ ಯುವಕರು ಇಂತಹ ಸಮಸ್ಯೆಗಳನ್ನು ಹೋಗಲಾಡಿಸುತ್ತಾರೆಂದು ಪರಿಗಣಿಸುವುದು ಅಸಾಧ್ಯ. ಬಹಳಷ್ಟು ಯುವಕರು ನಮ್ಮ ಸಮಾಜದಲ್ಲಿ ಬೆಳೆದು, ಓದಿ ವಿದ್ಯಾವಂತರಾಗಿ ಐಷಾರಾಮಿ ಜೀವನದ ಬೆನ್ನಟ್ಟಿ ದೇಶವಿದೇಶಗಳಿಗೆ ತೆರಳಿ, ತಾವು ಕಳೆಯುವ ಪ್ರತಿ ನಿಮಿಷವನ್ನು ಹಣದೊಟ್ಟಿಗೆ ತೂಗಿ ಲೆಕ್ಕ ಹಾಕುತ್ತಾರೆ. ಈ ಯುವಕರು ದೇಶಕ್ಕಾಗಿ ಏನು ತ್ಯಾಗ ಮಾಡುತ್ತಾರೆ? ದೇಶಕ್ಕಾಗಿ ಎಂದರೆ ನಮ್ಮ ನಿರೀಕ್ಷೆ ಬಹಳವೆನಿಸುತ್ತದೆ. ಅಷ್ಟು ಬೇಡ, ತಮ್ಮ ತಂದೆ ತಾಯಿಗೆ ಏನು ತ್ಯಾಗ ಮಾಡುತ್ತಾರೆ?

ದೂರದ ದೇಶದಲ್ಲಿ ಕುಳಿತು ದಿನಕ್ಕೊಮ್ಮೆ  ಅಪ್ಪ ಅಮ್ಮ ಬದುಕಿದ್ದಾರೆಯೇ  ಎಂಬುದಕ್ಕೊಂದು ಫೋನ್‌ ಮಾಡಿದರೆ ಅವರ ಹೆತ್ತವರ ಪಾಲಿಗೆ ಅದೇ ದೊಡ್ಡದು. ಇಂಥ ಯುವಕರು ತಮ್ಮ ಕುಟುಂಬದ ಪರಿಪೂರ್ಣ ಜವಾಬ್ದಾರಿ ಹೊರಲು ವಿಫಲರೆನಿಸಿರುವಾಗ ನಮ್ಮ ದೇಶದ ಜವಾಬ್ದಾರಿಯನ್ನು ಅವರ ಹೆಗಲ ಮೇಲೆ ಹೊರಿಸುವುದು ಎಷ್ಟು ಸರಿ? ದೇಶದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಅವರು ಸಫಲರೇ?
ಯೌವನ ಕೇವಲ ದೇಹಕ್ಕೆ ಅಥವಾ ವಯಸ್ಸಿಗೆ ಸಂಬಂಧಿಸಿಲ್ಲ. ಭ್ರಷ್ಟಾಚಾರ, ಅನ್ಯಾಯ, ಪರಿಸರ ವಿನಾಶ, ಜಾತಿ, ಧರ್ಮ, ವರ್ಗ ವೈಷಮ್ಯಗಳ ವಿರುದ್ಧ ಹೋರಾಡುವವರು, ಹೋರಾಡುವ ಮನಸ್ಸಿರುವವರೆಲ್ಲರೂ ಯುವಕರೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT